ಶುಕ್ರವಾರ, ಜನವರಿ 24, 2020
28 °C
ಕವಿತೆ

ಮರುಜೇವಣಿ ಮಂಡೇಲಾ...

-ಶಂಕರ ಕಟಗಿ Updated:

ಅಕ್ಷರ ಗಾತ್ರ : | |

ದುಡಿ ನುಡಿಸುತ

ಹಾಡತೊಡಗಿದ್ದಾರೆ ಕರಿಯ ಗಾಯಕರು–

ದಿಗುತಟದ ಬೆಳವಟ್ಟ ಬೆಳಗನು

ಹೊನಲ ಸಿರಿಮೆಯ್ ಹೊಳಪನು

ಈ ಮಣ್ಣ ಮಂದಿಯ ಕಪ್ಪು ಬಣ್ಣವನು

ಬದಲಾಯಿಸಲು ಬಿಡಲಾರೆವು ನಾವು

ಆ ಗಾಯಕ ಹಾಡಿನೊಳಗೆ–

ಬಿಳಿಯರು ಬಳಸಿದ ಕೋವಿಯ

ನಳಿಕೆಯಲಿ ಸಿಡಿಮದ್ದಿನ ಸದ್ದಿತ್ತು

ಹೊಟ್ಟೆ ಕಟ್ಟಿದ ಮಕ್ಕಳು ಇಕ್ಕಳದ ಹಾಗೆ

ರೊಟ್ಟಿಗಾಗಿ ಕೈಚಾಚಿದ ಚಿತ್ರಗಳಿದ್ದವು

ಕರಿತೊಗಲ ಸುಟ್ಟ ವಾಸನೆಯು

ಬೆಟ್ಟದಿರುಕಿನಲಿ ದಟ್ಟಯಿಸಿ ಅಮರುತಲಿತ್ತು

ನುಡಿವಕ್ಕಿ ನಾದದ ಬಿನದ ಗೂಡುಗಳಿದ್ದವು

ಆ ಗೂಡ ನಿನಾದ ಇಂತಪ್ಪ ಇತ್ತು–

ಮಂಡೇಲಾ ನೆಲ್ಸನ್‌ ಮಂಡೇಲಾ...

ತಿರೆಯ ತೆಂಕಕೆ ಉಂಕಿಯ ಹಾಸಿ

ನೆರೆಜರಿ ನೀರಿನ ಲಾಳಿಯ ಪೋಣಿಸಿ

ತಿಳಿವಿನ ನೂಲನು ನೇಯ್ದವನೆ

ಹಳಸಿದ ಗಾಳಿಯ ಒಳತಳ ತಾವಿಗೆ

ಮಧು ಮದರಂಗಿಯ ಗಿಡ ನೆಟ್ಟವನೆ

ಬಯಲಿಗೆ ಬಗೆ ಬಗೆ ಬಣ್ಣವ ಬರೆದೆ

ನವಿಲಿನ ಹಿಂಡಿಗೆ ಮಳೆಮೋಡವ ತಂದೆ

ಮಾಗಿದ ಮನಸಿಗೆ ತಾಗಿಸಿ ತಾಗಿಸಿ

ತೇಗದ ಎಲೆ ಗರಿ ಕಾಗದ ಓದಿದೆ...

ಆ ಕಾಗದದಲಿ–

ಸವೆದ ದಾರಿಯ ಬದಿಗೆ

ಜಾವಳಿಗನ ನೆತ್ತರದ ಹೆಜ್ಜೆ ಗುರುತುಗಳಿದ್ದವು

‘ಕುನು’ ಊರಿನ ಗೋರಿಯ ಮರೆಗೆ

ಕೊನರಿದ ಮರುಜೇವಣಿಯು ಕೊಸರುತಲಿತ್ತು

ರಾಗಿ ಕುದಿತದ ಬೋಗುಣಿ ಕಡೆಗೆ

ಉರಿ ಬೆಂಕಿ ಯೋಗಿಯ ನಡುಗಣ್ಣ ನೆದರಿತ್ತು...

ಪ್ರತಿಕ್ರಿಯಿಸಿ (+)