ಸೋಮವಾರ, ಜೂನ್ 14, 2021
26 °C

ಮರುಡೇಶ್ವರ ಸ್ವಾಮಿ: ಸಂಭ್ರಮದ ಕೊಂಡೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿ.ನರಸೀಪುರ: ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿ ಮರುಡೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಕೊಂಡೋತ್ಸವ ಜರುಗಿತು.ತಲಕಾಡು ಮುಖ್ಯರಸ್ತೆಯಲ್ಲಿರುವ ಈ ದೇವಾಲಯದಲ್ಲಿ  ಪ್ರತಿ ವರ್ಷ ಮರುಡೇಶ್ವರ ಜಾತ್ರಾ ಮಹೋತ್ಸವ ಜರುಗುತ್ತಿದೆ. ಭಾನುವಾರ ರಾತ್ರಿ ಗ್ರಾಮ ದೇವತೆ ಮಾರಮ್ಮ ನವರಿಗೆ  ತಂಪು ಹಾಗೂ ಖೇಲು ತಂದು ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಾನಪದ ನೃತ್ಯಗಳೊಂದಿಗೆ ರಂಗ ಪ್ರವೇಶ ಕಾರ್ಯಕ್ರಮ ನಡೆಯಿತು. ಸೋಮವಾರದಂದು ಗ್ರಾಮದ ಮರುಡೇಶ್ವರ, ಮಹದೇಶ್ವರ, ಕಾಳಿಕಾಂಬ, ಲಕ್ಷ್ಮೀದೇವಿ, ಸಿದ್ದಪ್ಪಾಜಿ, ಪಾತೇಶ್ವರ ಹಾಗೂ  ಮಾರಿಕಾಂಬ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಿದರು. ನಂತರ ಭಕ್ತರು ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸಿ ಮಧ್ಯಾಹ್ನದ ವೇಳೆಗೆ ಭಕ್ತಿ ಪೂರ್ವಕವಾಗಿ ಕೊಂಡ ಹಾಯ್ದರು. ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಭಕ್ತರು ಪಾಲ್ಗೊಂಡರು.ಮಾರ್ಚ್ 14 ರಂದು ಮರುಡೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಲಿದ್ದು, ಮಧ್ಯಾಹ್ನ 1 ಗಂಟೆ ವೇಳೆಗೆ ಗಣಪತಿ, ಸುಬ್ರಹಣ್ಯ ಹಾಗೂ  ಮರುಡೇಶ್ವರ ಸ್ವಾಮಿಯ ಬ್ರಹ್ಮ ರಥಗಳ ಉತ್ಸವ ನಡೆಯಲಿದೆ.ಮಾರ್ಚ್ 15 ರಂದು ಸಂಜೆ 5 ಗಂಟೆಗೆ ಮರುಡೇಶ್ವರ ಸ್ವಾಮಿಯ ತೆಪ್ಪೋತ್ಸವ ಹಾಗೂ ಮಾ. 16 ರ ಬೆಳಿಗ್ಗೆ ಗ್ರಾಮದಲ್ಲಿ ಕುರ್ಜಿನ ಮೆರವಣಿಗೆ ನಡೆಯಲಿದೆ. ಮರಡಿ ಗುಡ್ಡ ಎಂದೇ ಪ್ರಸಿದ್ಧವಾಗಿರುವ ಕ್ಷೇತ್ರದಲ್ಲಿ ಮತ್ತಿತಾಳೇಶ್ವರ ಗುಡಿಯಿದ್ದು ಚರ್ಮ ರೋಗದಿಂದ ಬಳಲುವವರು  ಗುರುವಾರ ಹಾಗೂ ಭಾನುವಾರಗಳಂದು ಇಲ್ಲಿ ಬಂದು ಸೇವೆ ಸಲ್ಲಿಸಿದರೆ ಚರ್ಮದ ತೊಂದರೆಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.ಮರುಡೇಶ್ವರ ಕ್ಷೇತ್ರವು ಹಲವಾರು ವೈಶಿಷ್ಟಗಳಿಂದ ಪ್ರಸಿದ್ಧವಾಗಿದೆ. ಪ್ರತಿ ವರ್ಷ ಯುಗಾದಿಯ ಹಿಂದಿನ ವಾರ ಜಾತ್ರಾ ಮಹೋತ್ಸವ ನಡೆಯುವುದು ವಾಡಿಕೆ. ಇದರಲ್ಲಿ ಜಾತಿ ಬೇಧ ಮರೆತು ಎಲ್ಲಾ ವರ್ಗದವರು ಪಾಲ್ಗೊಂಡು ಜಾತ್ರಾ ಮಹೋತ್ಸವ ವನ್ನು ಅದ್ದೂರಿಯಾಗಿ ಆಚರಿಸುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.