ಮಂಗಳವಾರ, ನವೆಂಬರ್ 19, 2019
28 °C

ಮರುಭೂಮಿಯ ನೀಲರತ್ನ

Published:
Updated:
ಮರುಭೂಮಿಯ ನೀಲರತ್ನ

ಥಾರ್ ಮರುಭೂಮಿಯ ಪೂರ್ವದ ತುದಿ. ಅಲ್ಲಿ, ಆಗಸದ ನೀಲಿ ಬಣ್ಣವನ್ನು ತನ್ನ ಮೇಲೆ ಸುರಿದುಕೊಂಡಂತೆ ಒಂದು ನಗರ ಕಾಣಿಸುತ್ತದೆ. `ನೀಲಿ ನಗರ' (ಬ್ಲೂ ಸಿಟಿ) ಎನ್ನುವುದು ಅದರ ವಿಶೇಷಣ. ಚಾಲ್ತಿಯಲ್ಲಿರುವ ಹೆಸರು ಜೋಧ್‌ಪುರ್. ಇಲ್ಲಿನ ಪ್ರಖ್ಯಾತ ಮತ್ತು ಸುಂದರ ಮೆಹ್ರಾನ್‌ಘರ್ ಕೋಟೆಯ ಮೇಲೆ ನಿಂತರೆ ನೀಲಿ ಬಣ್ಣದ ಮನೆಗಳು ಸುಂದರವಾಗಿ ಗೋಚರಿಸುತ್ತವೆ.ಹಿಂದೆ ಅರಸರ ಪೌರೋಹಿತ್ಯ ಮಾಡುತ್ತಿದ್ದ ಬ್ರಾಹ್ಮಣರು ಇತರರಿಗಿಂತ ಭಿನ್ನವಾಗಿರಲೆಂದು ತಮ್ಮ ಮನೆಗಳಿಗೆ ನೀಲಿ ಬಣ್ಣ ಬಳಿಸುತ್ತಿದ್ದರಂತೆ. ಈ ನೀಲಿ ಪ್ರೀತಿಯನ್ನು ಜನಸಾಮಾನ್ಯರೂ ಅನುಸರಿಸಿದ ಫಲ ಇಡೀ ನಗರವೇ ನೀಲಿಯಲ್ಲಿ ಅದ್ದಿದಂತೆ ಕಾಣಿಸುತ್ತದೆ. ವರ್ಣ ವ್ಯವಸ್ಥೆಯ ವಿರುದ್ಧ ಸೆಡ್ಡುಹೊಡೆದು ತನ್ನ ಮನೆಗೆ ನೀಲಿ ಬಣ್ಣ ಬಳಿದ ಮೊಟ್ಟಮೊದಲ ಬ್ರಾಹ್ಮಣೇತರ ವ್ಯಕ್ತಿ ಯಾರೆನ್ನುವುದು ಮಾತ್ರ ಕಾಲಗರ್ಭದಲ್ಲಿ ಗುಟ್ಟಾಗಿಯೇ ಉಳಿದಿದೆ.ನೀಲಿ ಮೋಹಕ್ಕೆ ಇನ್ನೊಂದು ಕಥೆಯೂ ಇದೆ. ಬಿಸಿಲಿನ ಝಳದಿಂದ ಮತ್ತು ಸೊಳ್ಳೆಗಳಿಂದ ರಕ್ಷಿಸಿಕೊಳ್ಳಲು ಮನೆಗಳಿಗೆ ನೀಲಿ ಬಣ್ಣ ಬಳಿಸುವುದಾಗಿ ಕೆಲವು ಸ್ಥಳೀಯರು ಹೇಳುತ್ತಾರೆ. ಬಣ್ಣದ ಹಿಂದಿನ ಕಣ್ಣು ಏನೇ ಇರಲಿ- ಸುತ್ತಣ ಮರುಭೂಮಿಯ ಕಂದು ಬಣ್ಣದ ನಡುವೆ ಈ ಜೋಧ್‌ಪುರ ನೀಲರತ್ನದಂತಿದೆ.ಕನೌಜ್ ಮೂಲದ ರಾತೋರ್ ವಂಶಸ್ಥ ರಾವ್ ಜೋಧಾ ಈ ನಗರದ ನಿರ್ಮಾತೃ. ಆ ಕಾರಣದಿಂದಲೇ ಊರಿಗೆ ಜೋಧ್‌ಪುರ್ ಎಂಬ ಹೆಸರು. ಜೋಧ್‌ಪುರ್ ಎನ್ನುವುದು ಪ್ಯಾಂಟ್ ರೀತಿಯ ಉಡುಪಿನ ಹೆಸರೂ ಹೌದು.ಮೊಣಕಾಲಿನವರೆಗೂ ದೊಗಲೆಯಾಗಿದ್ದು, ನಂತರ ಬಿಗಿಯಾಗಿರುವ ಉಡುಪನ್ನು ಜೋಧ್‌ಪುರ್ ಎನ್ನುತ್ತಾರೆ.ಜೋಧ್‌ಪುರದ ಮಹಾರಾಜ ಪ್ರತಾಪ್ ಸಿಂಗ್ ಕುದುರೆ ಓಡಿಸುವಾಗ, ಪೋಲೋ ಆಡುವಾಗ ಮತ್ತು ವಿದೇಶಕ್ಕೆ ಹೋದಾಗ ಈ ಉಡುಪನ್ನು ಧರಿಸಿ, ಅದನ್ನು ಫ್ಯಾಷನ್ ಲೋಕಕ್ಕೆ ಪರಿಚಯಿಸಿದ್ದರಿಂದಾಗಿ, ಈ ನಗರಕ್ಕೆ ಜೋಧ್‌ಪುರ್ ಎಂಬ ಹೆಸರು ಬಂತು ಎನ್ನುವ ಸ್ಥಳಪುರಾಣದ ಇನ್ನೊಂದು ಕವಲೂ ಇದೆ.ದೆಹಲಿ ಮತ್ತು ಗುಜರಾತ್ ನಡುವಿನ ವ್ಯಾಪಾರಿ ಮಾರ್ಗದಲ್ಲಿ ಇದ್ದುದರಿಂದಾಗಿ ಜೋಧ್‌ಪುರ್- ಅಫೀಮು, ಶ್ರೀಗಂಧ, ಖರ್ಜೂರ ಮುಂತಾದವುಗಳ ವಹಿವಾಟಿನ ಲಾಭದಿಂದ ಸಂಪತ್ಭರಿತವಾಯಿತು. ಈಗಲೂ ರಾಜಾಸ್ತಾನದ ಎರಡನೇ ಅತಿ ದೊಡ್ಡ ನಗರ ಎನ್ನುವುದು ಇದರ ಅಗ್ಗಳಿಕೆ. ಇಲ್ಲಿನ ಪ್ರಸಿದ್ಧ ಸಿಹಿ ಖಾದ್ಯಗಳಂತೆಯೇ ಎರಡು ರಾಜ ನಿರ್ಮಿತ ಬೃಹತ್ ಕಟ್ಟಡಗಳು ನಗರಕ್ಕೆ ಕಳೆ ತಂದಿವೆ.15ನೇ ಶತಮಾನದಲ್ಲಿ ನಿರ್ಮಿತವಾದ ಬೆಟ್ಟದ ಮೇಲಿನ ಮೆಹ್ರಾನ್‌ಘರ್ ಕೋಟೆ ಮತ್ತು 20ನೇ ಶತಮಾನದ ಉಮೇದ್ ಭವನ್ ಅರಮನೆ. ಭಾರತ ಸ್ವಾತಂತ್ರ್ಯ ಪಡೆಯುವ ಮುನ್ನವಷ್ಟೇ ಮಹಾರಾಜ ಉಮೇದ್ ಸಿಂಗ್ ಕಟ್ಟಿಸಿದ್ದ ಅದ್ಭುತವಾದ ಉಮೇದ್ ಭವನ್ ಅರಮನೆ ಭಾರತದ ಕಟ್ಟ ಕಡೆಯ ಅರಮನೆಯಾಗಿ ಇತಿಹಾಸದಲ್ಲಿ ದಾಖಲಾಗಿದೆ.`ಈ ಅದ್ಭುತ ಕೋಟೆಯನ್ನು ಕಟ್ಟಿರುವವರು ನಿಜಕ್ಕೂ ಪ್ರಚಂಡರೇ ಸರಿ. ಮುಂಜಾನೆಯ ಸೂರ್ಯನೇ ಇದಕ್ಕೆ ಬಣ್ಣ ಬಳಿದಿರಬೇಕು' ಎಂದು 1988ರಲ್ಲಿ ಮೆಹ್ರಾನ್‌ಘರ್ ಕೋಟೆಗೆ ಭೇಟಿ ನೀಡಿದ್ದ ಲೇಖಕ ರುಡ್ಯಾರ್ಡ್ ಕಿಪ್ಲಿಂಗ್ ಉದ್ಘರಿಸಿದ್ದ. ರಾತೋರ್ ವಂಶದ 17 ತಲೆಮಾರುಗಳು ಇದರಲ್ಲಿ ವಾಸ ಮಾಡಿದ್ದಾರೆ. ಪ್ರತಿಯೊಬ್ಬರೂ ಇದರ ಅಂದವನ್ನು ಹೆಚ್ಚಿಸಲು ತಮ್ಮ ಕಾಣಿಕೆ ನೀಡಿದ್ದಾರೆ. ಈಗಲೂ ಇದನ್ನು ರಾಜವಂಶಸ್ಥರೇ ನಿರ್ವಹಣೆ ಮಾಡುತ್ತಿದ್ದಾರೆ. ರಾಜ ವಂಶಸ್ಥರ ಸಕಲ ವಸ್ತುಗಳನ್ನೂ ಇಲ್ಲಿ ಪ್ರವಾಸಿಗರಿಗಾಗಿ ಪ್ರದರ್ಶಿಸಲಾಗಿದೆ.ಭಾರತದ ಅತ್ಯದ್ಭುತ ವಾಸ್ತುಶಿಲ್ಪಗಳಲ್ಲಿ ಒಂದಾದ ತಾಜ್‌ಮಹಲ್ ನಿರ್ಮಿಸಿದ ಷಹಜಹಾನನ ತಾಯಿ ಜೋಧ್‌ಪುರದ ಉದಯ್‌ಸಿಂಗ್ ಮಹಾರಾಜನ ಮಗಳು. ಕಲೆ, ಸಂಸ್ಕೃತಿ ಮತ್ತು ಕಲಾತ್ಮಕ ಅಭಿರುಚಿ ಈ ವಂಶವಾಹಿನಿಯಿಂದಲೇ ಹರಿದಿರಬೇಕು.

ಚಿತ್ರಗಳು ಲೇಖಕರವು

ಪ್ರತಿಕ್ರಿಯಿಸಿ (+)