ಮರುಳಸಿದ್ದೇಶ್ವರ ಸ್ವಾಮಿಯ ಕಾರ್ತಿಕೋತ್ಸವ

7

ಮರುಳಸಿದ್ದೇಶ್ವರ ಸ್ವಾಮಿಯ ಕಾರ್ತಿಕೋತ್ಸವ

Published:
Updated:

ಕಡೂರು: ತಾಲ್ಲೂಕಿನ ಜಿ.ಮಾದಾಪುರದಲ್ಲಿ ನೆಲೆಸಿರುವ ಪವಾಡ ಪುರುಷ ಮರುಳಸಿದ್ದೇಶ್ವರ ಸ್ವಾಮಿಗೆ ಬುಧವಾರ ರಾತ್ರಿ ಕಾತೀಕೋತ್ಸವ, ಕದಲಿಪೂಜೆ, ಗುಗ್ಗಳೋತ್ಸವ, ಕಳಸೋತ್ಸವ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಲಿವೆ

ಇತಿಹಾಸ: ಗುರು ಮರುಳಸಿದ್ದೇಶ್ವರ ಸ್ವಾಮಿಯ ಕ್ಷೇತ್ರವು ಪವಿತ್ರ ವೇದಾವತಿ ನದಿಯ ತಟದಲ್ಲಿದ್ದು, ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಪ್ರಾಚೀನ ಕಾಲದ ಮಠವಾಗಿ, ನಂಬಿರುವ ಭಕ್ತರ ಕಷ್ಟ ಕಾರ್ಪಣ್ಯ, ಸಂಕಷ್ಟಗಳನ್ನು ಪರಿಹರಿಸುತ್ತಾ ಮರುಳಸಿದ್ದರು ಭಕ್ತರ ಮನದಲ್ಲಿ ನೆಲೆಸಿದ್ದಾರೆ.ಮೂಲತಃ ಗುರುಮರುಳಸಿದ್ದರು ಆಂಧ್ರಪ್ರದೇಶದ ಕೊಲ್ಲಿಪಾಕಿಯಿಂದ ಸಂಚರಿಸುತ್ತ ಧರ್ಮಬೋಧನೆ ಮತ್ತು ಪ್ರಚಾರ ಮಾಡುತ್ತ ಅನೇಕ ಪವಾಡಗಳನ್ನು ನಡೆಸಿ ಸಾಮಾನ್ಯ ಜನರ ಕಷ್ಟ,ಕಾರ್ಪಣ್ಯಗಳನ್ನು ದೂರಮಾಡಿ, ತರೀಕೆರೆ ತಾಲ್ಲೂಕಿನ ಬುಕ್ಕಾಂಬೂದಿ ಗ್ರಾಮದ ಸಿದ್ದೇಶ್ವರ ಬೆಟ್ಟದಲ್ಲಿ ಕೆಲಕಾಲ ತಂಗಿದ್ದರು. ನಂತರ ನಾರಾಯಣಪುರದ ಭಕ್ತರ ಮನದಲ್ಲಿ ನೆಲೆಸಿ, ತಾಲ್ಲೂಕಿನ ತುರುವನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಗುರು ನಿರ್ವಾಣಸ್ವಾಮಿಯ ಶಿಷ್ಯರಾಗಿ ಸೇರಿಕೊಂಡು.ನಿರ್ವಾಣ ಸ್ವಾಮಿಗಳ ಪೂಜೆಗೆ ಹೂವು ತರಲು ತೆರಳಿದ ಮರುಳಸಿದ್ದರು, ಪೂಜೆ ಸಮಯ ಮೀರಿದರೂ ಮರಳಿ ಬರದಿರುವುದನ್ನು ಕಂಡ ನಿರ್ವಾಣ ಸ್ವಾಮಿಗಳು ಶಿಷ್ಯ ಮರುಳಸಿದ್ದನನ್ನು ಹುಡುಕುತ್ತ ನಡೆದಾಗ ಸುತ್ತಲೂ ಬೆಂಕಿಹುರಿಯುತ್ತಿದ್ದು ಮಧ್ಯೆ ಧ್ಯಾನಾಸಕ್ತರಾಗಿರುವ ಮರುಳಸಿದ್ದರನ್ನು, ಎದುರಿಗೆ ಹುಲಿಯೊಂದು ಪೂಜೆಯನ್ನು ವೀಕ್ಷಿಸುತ್ತಿರುವ ದೃಶ್ಯವನ್ನು ಕಂಡ ನಿರ್ವಾಣ ಸ್ವಾಮಿಗಳು ನನಗಿಂತ ಮರುಳುಸಿದ್ದರೆ ದೊಡ್ಡವರು ಎಂದು ಬಾಗಿ ಕೈಮುಗಿದು ಶರಣಾದರು.ನಂತರ ಮರುಳಸಿದ್ದರು ವಪ್ಪುಣುಸೆ ಗ್ರಾಮದಲ್ಲಿ ಕೆಲಕಾಲ ತಂಗ್ದ್ದಿದ ಸಮಯದಲ್ಲಿ ತೆಂಗಿನ ತೋಟದಲ್ಲಿ ವಿಶ್ರಮಿಸುತ್ತಿದ್ದಾಗ ತೆಂಗಿನ ಮರವೇ ಬಾಗಿ ಎಳನೀರನ್ನು ನೀಡಿ ಗುರುಮರುಳಸಿದ್ದರ ಬಾಯಾರಿಕೆಯನ್ನು ನೀಗಿಸಿತು ಎಂಬ ದಂತ ಕಥೆ ಗ್ರಾಮದಲ್ಲಿ ಈಗಲೂ ಪ್ರಚಾರದಲ್ಲಿದೆ. ಅಲ್ಲಿಯೂ ಒಂದು ಸಣ್ಣ ಮಠವನ್ನು ನಿರ್ಮಿಸಿದ ಮರುಳಸಿದ್ದರು ವೇದಾನದಿಯ ದಂಡೆಯಲ್ಲಿರುವ ಜಿ.ಮಾದಾಪುರ ಗ್ರಾಮದ ಸಮೀಪ ನೆಲೆಸಿ ಅನೇಕ ಪವಾಡಗಳನ್ನು ನಡೆಸುತ್ತಾ ಭಕ್ತರೋದ್ಧಾರಕರಾಗಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.ಮಾದಾಪುರದ ಮಲ್ಲೇಗೌಡರ ವಂಶಸ್ಥರು, ಸುತ್ತ ಮುತ್ತಲಿನ ಗ್ರಾಮಸ್ಥರು ಪವಾಡಗಳನ್ನು ಕಂಡು, ಮರುಳ ಸಿದ್ದರನ್ನು ಇಲ್ಲಿಯೇ ನೆಲೆಸಿ ನಮಗೆ ಮಾರ್ಗದರ್ಶ ಕರಾಗಿರಬೇಕೆಂದು ಕೇಳಿಕೊಂಡಾಗ ಅದರಂತೆ ಶ್ರೀಗಳು ನೆಲೆಸಿ ಲೋಕಕಲ್ಯಾಣ ಮಾಡಿದರು ಎಂಬ ಪ್ರತೀತಿ ಇದೆ.ಮಾದಾಪುರ ಸಮೀಪದಲ್ಲಿ ಸ್ವಾಮಿಯ ಗದ್ದುಗೆ ನಿರ್ಮಿಸಿ ಪೂಜೆ ಸಲ್ಲಿಸುತ್ತಾ ಬಂದಿದ್ದು, ನಂಬಿದ ಭಕ್ತರನ್ನು ಮರುಳಸಿದ್ದರು ಎಂದಿಗೂ ಕೈ ಬಿಡುವುದಿಲ್ಲ ಎಂಬ ಅಚಲ ನಂಬಿಕೆ ಇಲ್ಲಿನ ಭಕ್ತರದ್ದು ಎಂದು ದೊಡ್ಡ ಪಟ್ಟಣಗೆರೆ ಗ್ರಾಮದ ಜಂಗಮ ಮಠದ ಪಿ.ಕೆ.ರೇವಣಯ್ಯ ಮರುಳಸಿದ್ದರ ಕಥೆಯನ್ನು ವಿವರಿಸಿದರು.ಸುತ್ತಮುತ್ತಲಿನ ನೂರಾರು ಗ್ರಾಮದ ಗ್ರಾಮಸ್ಥರು ತಮ್ಮ ಮನೆಯಲ್ಲಿ ಯಾವುದೇ ಶುಭ ಕೆಲಸಗಳನ್ನು ಮಾಡಬೇಕಾದರೆ ಮರುಳಸಿದ್ದೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಅಪ್ಪಣೆ ಪಡೆದು ಮುಂದುವರೆಯುವ ವಾಡಿಕೆ ಇಂದಿಗೂ ನಡೆದುಕೊಂಡು ಬಂದಿದೆ. ನಿತ್ಯ ರುದ್ರಾಭಿಷೇಕ, ಅಮವಾಸ್ಯೆಯಂದು ವಿಶೇಷ ಪೂಜೆ ಕಾರ್ತೀಕ ಮಾಸದಲ್ಲಿ ದೀಪಾಲಂಕಾರ, ಗುಗ್ಗುಳೋತ್ಸವ ನಡೆಯುತ್ತಿದ್ದು, ಯುವತಿಯರು ಗುಗ್ಗಳ ಸೇವೆ ನೆರವೇರಿಸಿದರೆ ಕಂಕಣ ಬಲ ಕೂಡಿಬರುತ್ತದೆ ಎಂಬ ನಂಬಿಕೆ ಬಲವಾಗಿ ಬೇರೂರಿದೆ. ಅನ್ನ ಸಂತರ್ಪಣೆ ಕಾರ್ಯಗಳು ನಡೆಯುತ್ತಾ ಧಾರ್ಮಿಕ ಕ್ಷೇತ್ರವಾಗಿ ಬೆಳೆದು ಸಾವಿರಾರು ಭಕ್ತರ ಮನದಲ್ಲಿ ಮರುಳಸಿದ್ದರು ನೆಲೆಸಿರುವುದು ಕಾಣಬಹುದಾಗಿದೆ.   

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry