ಮರುಳು ಲಾರಿ ಮಾಲೀಕರ ಪ್ರತಿಭಟನೆ

ರಾಮನಗರ: ಮರಳು ಮಾಫಿಯಾ ತಡೆಯುವ ಸಂಬಂಧ ತಾಲ್ಲೂಕು ಟಾಸ್ಕ್‌ಫೋರ್ಸ್ ನಡೆಸುತ್ತಿರುವ ಕಾರ್ಯಾಚರಣೆ ವೇಳೆಯಲ್ಲಿ ಲಾರಿ, ಟ್ರ್ಯಾಕ್ಟರ್ ಮತ್ತಿತರ ವಾಹನಗಳಿಗೆ ಬೆಂಕಿ ಹಚ್ಚಿ ನಾಶಪಡಿಸಲಾಗುತ್ತಿದೆ ಎಂದು ಆರೋಪಿಸಿ ಮರುಳು ಲಾರಿ ಮಾಲೀಕರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ಶಾಸಕ ಕೆ.ರಾಜು ಅವರೂ ಈ ಪ್ರತಿಭಟನೆ ಬೆಂಬಲಿಸಿ, ಪ್ರತಿಭಟನಾಕಾರರ ಜತೆಗೂಡಿ ಕಿಡಿಕಾರಿದರು.
ನಗರದ ಐಜೂರು ವೃತ್ತದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕು ಮತ್ತು ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಕೆ. ರಾಜು, `ಕಾನೂನನ್ನು ಯಾರು ಕೈಗೆ ತೆಗೆದುಕೊಳ್ಳಬಾರದು. ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರ ಅಧಿಕಾರಿಗಳಿಗೆ ಇದೆ. ಆದರೆ ವಾಹನಗಳಿಗೆ ಬೆಂಕಿ ಹಚ್ಚಿ, ವಾಹನಗಳನ್ನೇ ನಾಶಪಡಿಸಿ ದೌರ್ಜನ್ಯ ನಡೆಸುವುದು ಖಂಡನೀಯ~ ಎಂದರು.
ಪ್ರತಿಭಟನೆಯಲ್ಲಿ ತಾಲ್ಲೂಕು ಪಂಚಾಯತಿ ಸದಸ್ಯ ಪ್ರಾಣೇಶ್, ನಗರಸಭಾ ಸದಸ್ಯ ಚಿಕ್ಕವೀರೇಗೌಡ, ಲಾರಿ ಮಾಲೀಕರುಗಳಾದ ರವಿಸುಗ್ಗನಹಳ್ಳಿ, ಶಿವಲಿಂಗಯ್ಯ, ನರೇಂದ್ರ, ಲೋಕೇಶ್, ಬಾಬು, ಶಿವಣ್ಣ, ರಾಜ, ಜಿ.ಎಂ.ಸುರೇಶ್, ಶಾಂತಪ್ಪ, ಹರೀಶ, ಅರುಣ್, ಗಾಂಧಿ, ಮಲ್ಲೇಶ್, ರವಿ, ಶಿವರಾಮ, ಸ್ವಾಮಿ, ವಿಜಿ ಇತರರು ಪಾಲ್ಗೊಂಡಿದ್ದರು. ಪ್ರತಿಭಟನಾಕಾರರು ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತಹಸೀಲ್ದಾರ್ ಪ್ರತಿಕ್ರಿಯೆ:
`ಕಾನೂನು ರೀತಿಯ ಕ್ರಮವನ್ನಷ್ಟೇ ನಾವು ತೆಗೆದುಕೊಳ್ಳುತ್ತೇವೆ. ಮರಳು ಮಾಫಿಯಾ ತಡೆಗೆ ತೆಗೆದುಕೊಂಡಿರುವ ಕಠಿಣ ಕ್ರಮಗಳಿಂದ ದಿಕ್ಕುತೋಚದಂತಾಗಿರುವ ಮರಳು ಕಳ್ಳರು ಸರ್ಕಾರಿ ಅಧಿಕಾರಿಗಳ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ.
ಕಠಿಣ ನಿಯಮಗಳಿಂದ ಮರಳು ಕಳ್ಳರಿಗೆ ಸಾಕಷ್ಟು ನಷ್ಟ ಸಂಭವಿಸಿದೆ. ಈ ನಿಯಮಗಳನ್ನು ಸಡಿಲಗೊಳಿಸುವಂತೆ ಒತ್ತಡ ಹೇರುವ ದುರುದ್ದೇಶದಿಂದ ಕೆಲವರು ತಾವೇ ತಮ್ಮ ವಾಹನಗಳಿಗೆ ಬೆಂಕಿ ಹಚ್ಚಿಕೊಂಡು, ಆರೋಪವನ್ನು ಅಧಿಕಾರಿಗಳ ಮೇಲೆ ಹೊರಿಸುತ್ತ್ದ್ದಿದಾರೆ~ ಎಂದು ತಹಸೀಲ್ದಾರ್ ಡಾ. ರವಿ ಎಂ.ತಿರ್ಲಾಪುರ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದರು.
`ಮರಳು ದಂಧೆ ತಡೆಯುವಲ್ಲಿ ಪಾಲ್ಗೊಳ್ಳುವ ಗ್ರಾಮ ಲೆಕ್ಕಿಗರು, ವಾಹನ ಚಾಲಕರ ವಿರುದ್ಧ ಕೆಲ ದುಷ್ಟರು ಜೀವ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ನನ್ನ ಬಳಿ ಸಾಕ್ಷಿ ಇದ್ದು, ಕ್ರಮ ಜರುಗಿಸುವಂತೆ ಪೊಲೀಸರಿಗೆ ದೂರು ನೀಡಿರುವುದಾಗಿ~ ಅವರು ತಿಳಿಸಿದರು.
`ಪ್ರತಿಭಟನಾಕಾರರಿಗೆ ಕ್ಷೇತ್ರದ ಶಾಸಕರು ಬೆಂಬಲ ನೀಡಿರುವುದು ಆಶ್ಚರ್ಯ ಮೂಡಿಸಿದೆ. ಕೆಲವರು ಶಾಸಕರಿಗೆ ತಪ್ಪು ಮಾಹಿತಿ ನೀಡಿದ್ದಾರೆ. `ಮರಳು ಮಾಫಿಯಾ ತಡೆಯುವ ಉದ್ದೇಶದಿಂದ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ನಡೆಸುತ್ತಿರುವ ಕಾರ್ಯಾಚರಣೆಗೆ ಬೆಂಬಲ ನೀಡಬೇಕಾದ ಸ್ಥಳೀಯ ಜನಪ್ರತಿನಿಧಿಗಳು ಮರಳು ಕಳ್ಳರ ಜತೆ ಕೈಜೋಡಿಸಿರುವುದು ಬೇಸರದ ಸಂಗತಿ~ ಎಂದು ಅವರು ಪ್ರತಿಕ್ರಿಯಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.