ಮರು ಅವಲೋಕನದ ಅಗತ್ಯ

7

ಮರು ಅವಲೋಕನದ ಅಗತ್ಯ

Published:
Updated:

`ನ್ಯಾಯಾಂಗ ನಿಂದನೆ' ಕಾಯ್ದೆಯ ಮರುಪರಿಶೀಲನೆ ಅಗತ್ಯ ಇದೆಯೇ, ಇಲ್ಲವೇ ಎನ್ನುವುದಕ್ಕೂ ಮುನ್ನ ಈ ಕಾನೂನಿನ ದುರ್ಬಳಕೆ ಹೇಗೆ ಆಗುತ್ತಿದೆ, ಇದರ ಬಗ್ಗೆ ಯಾವ ರೀತಿಯಲ್ಲಿ ಟೀಕೆ ಬರುತ್ತಿದೆ ಎನ್ನುವುದನ್ನು ಮೊದಲು ಪರಾಮರ್ಶಿಸುವ ಅಗತ್ಯ ಇದೆ.ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ನ್ಯಾಯಾಧೀಶರು ಕೂಡ ದೋಷಾತೀತರಲ್ಲ. ಅವರು ನೀಡುವ ಆದೇಶಗಳು, ತೀರ್ಪುಗಳೂ ದೋಷದಿಂದ ಕೂಡಿರುವ ಸಾಧ್ಯತೆ ಇವೆ. ಈ ದೋಷದ ಬಗ್ಗೆ ತಿಳಿದಿದ್ದರೂ ಅದನ್ನು ಬಹಿರಂಗವಾಗಿ ಟೀಕಿಸುವ ಹಕ್ಕು ಸಾರ್ವಜನಿಕರಾಗಲೀ, ಮಾಧ್ಯಮದವರಾಗಲೀ ಇಲ್ಲದ ಪರಿಸ್ಥಿತಿ ಇಂದಿನದ್ದು. ಉದಾಹರಣೆಗೆ ಹೇಳಬೇಕಾದರೆ, ಯಾವುದೇ ಪ್ರಕರಣಗಳ ವಿಚಾರಣೆ ಮುಗಿದ ಮೇಲೆ ತೀರ್ಪು ಕಾಯ್ದಿರಿಸಿದ ನಂತರ ಇಂತಿಷ್ಟೇ ದಿನಗಳಲ್ಲಿ ತೀರ್ಪು ಪ್ರಕಟಿಸಬೇಕು ಎನ್ನುವುದು ಕಾನೂನು. ಆದರೆ ಇಂದು ಎಷ್ಟೋ ಪ್ರಕರಣಗಳಲ್ಲಿ ನ್ಯಾಯಾಧೀಶರು ತಿಂಗಳುಗಟ್ಟಲೆಯಾದರೂ ತೀರ್ಪು ಪ್ರಕಟ ಮಾಡುವುದಿಲ್ಲ.ಹಲವು ಸಂದರ್ಭದಲ್ಲಿ ತೀರ್ಪು ಪ್ರಕಟ ವಿಳಂಬಕ್ಕೆ ಸೂಕ್ತ ಕಾರಣಗಳು ಇರಬಹುದು. ಆದರೆ ಕೆಲವು ಸಂದರ್ಭಗಳಲ್ಲಿ ತೀರ್ಪು ಕಾಯ್ದಿರಿಸಿರುವ ಹಾಗೂ ಅದನ್ನು ಪ್ರಕಟ ಮಾಡುವ ನಡುವಿನ ಅಂತರದಲ್ಲಿ ನ್ಯಾಯಾಧೀಶರು `ಕರ್ತವ್ಯಲೋಪ' ಎಸಗುವುದು ಬಹಿರಂಗವಾಗಿ ಕಾಣಿಸುತ್ತದೆ.  ಇದನ್ನು ಟೀಕಿಸುವ ಹಕ್ಕು ಸಾರ್ವಜನಿಕರಿಗಾಗಲೀ, ಮಾಧ್ಯಮದವರಿಗಾಗಲೀ ಇಲ್ಲದೇ ಇರುವುದು ಮಾತ್ರ ದುರದೃಷ್ಟಕರ.ಕೆಲ ತಿಂಗಳ ಹಿಂದೆ ಮಂಗಳೂರಿನ `ಮಾರ್ನಿಂಗ್ ಮಿಸ್ಟ್ ಹೋಂಸ್ಟೇ' ಹೋಟೆಲ್‌ನಲ್ಲಿ ಯುವತಿಯರ ಮೇಲೆ ನಡೆದಿರುವ ದೌರ್ಜನ್ಯದ ಕುರಿತು ವರದಿ ಮಾಡಲು ಹೋಗಿದ್ದ ಟಿ.ವಿ ವಾಹಿನಿಯ ವರದಿಗಾರ ನವೀನ್ ಸೂರಿಂಜೆ ಅವರ ಬಂಧನ ಪ್ರಕರಣವನ್ನು ಇಲ್ಲಿ ಉದಾಹರಿಸುವುದು ಸೂಕ್ತ ಎನಿಸುತ್ತಿದೆ. ಪತ್ರಕರ್ತನ ಮೇಲೆ  ಸುಳ್ಳು ಆಪಾದನೆ ಹೊರಿಸಿ ಆರು ವಾರಗಳ ಕಾಲ ಜೈಲಿನಲ್ಲಿಯೇ ಇರುವಂತೆ ಮಾಡಲಾಗಿದೆ. ಆದರೆ ನವೀನ್ ಅವರಿಗೆ ಜಾಮೀನು ನೀಡುವ ವಿಷಯದಲ್ಲಿ ನ್ಯಾಯಾಲಯ ವಿನಾಕಾರಣ ವಿಳಂಬ ನೀತಿ ಅನುಸರಿಸುತ್ತಾ ಇದೆ. ಅವರ ಬಂಧನಕ್ಕೂ ಮುಂಚೆ ನಿರೀಕ್ಷಣಾ ಜಾಮೀನು ನೀಡುವ ವಿಚಾರದಲ್ಲಿಯೇ ಆಗಲಿ ಅಥವಾ, ಬಂಧನದ ನಂತರ ಜಾಮೀನು ನೀಡಿಕೆಯ ವಿಚಾರದಲ್ಲಿಯೇ ಆಗಲಿ ನ್ಯಾಯಾಲಯ ಮುಂದಾಗಲಿಲ್ಲ. ಪ್ರತಿಭಟನೆಯ ಹಕ್ಕು ಮೂಲಭೂತವಾದದ್ದು ಎಂದು ನ್ಯಾಯಾಧೀಶ ಲಾರ್ಡ್ ಡೆನಿಂಗ್ ಅವರು `ಲಂಡನ್ ಟೈಮ್ಸ' ಪ್ರಕರಣದಲ್ಲಿ ಹೇಳಿರುವ ಈ ಮಾತುಗಳು ಸಾರ್ವಕಾಲಿಕ. `ನ್ಯಾಯಾಧೀಶರು ದಂತಗೋಪುರಗಳಲ್ಲಿ ಇರಲಾಗದು. ಅವರು ಅತ್ಯಂತ ಗೌರವಾನ್ವಿತರು. ಆದರೆ ಕರ್ತವ್ಯಲೋಪ ಎಸಗಿದ್ದಾರೆ ಎಂಬುದು ತಿಳಿದುಬಂದಲ್ಲಿ ಅದನ್ನು ಟೀಕಿಸವ ಹಕ್ಕು ಜನತೆಗೆ ಇದೆ. ನ್ಯಾಯಯುತ ಟೀಕೆ ನಿಂದನೆಯಲ್ಲ. ಸಾರ್ವಜನಿಕ ಹಿತಾಸಕ್ತಿ ಹಾಗೂ ಕಕ್ಷಿದಾರರ ಹಕ್ಕು ಕಾಪಾಡಲು ಇದು ಅಗತ್ಯ. ವಾಸ್ತವಿಕವಾದ  ಹಾಗೂ ಪರಿಣಾಮಕಾರಿಯಾದ ನಿಯಂತ್ರಣಗಳಿಗೆ ಇದೊಂದೇ ದಾರಿ'.  ಬಾಯಿ ಮುಚ್ಚಿಸುವ ಅಸ್ತ್ರವಾಗಬಾರದು

ನ್ಯಾಯಾಂಗ ನಿಂದನೆ ಕಾಯ್ದೆಯನ್ನು ಮಾಧ್ಯಮದವರ ಬಾಯಿಮುಚ್ಚಿಸುವ ಅಸ್ತ್ರವನ್ನಾಗಿ ನ್ಯಾಯಾಧೀಶರು ಬಳಸಿಕೊಳ್ಳುವುದು ಸರಿಯಲ್ಲ. ತೀರ್ಪುಗಳ ಬಗ್ಗೆ ಅಭಿಪ್ರಾಯ ತಿಳಿಸುವ ಹಕ್ಕನ್ನು ಮಾಧ್ಯಮದವರಿಂದ ಕಸಿದುಕೊಳ್ಳುವುದು ಸರಿಯಲ್ಲ. ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಸಂದರ್ಭದಲ್ಲಿ ಸುಮಾರು 17 ಪ್ರಕರಣಗಳಲ್ಲಿ ಇದನ್ನೇ ನಾನು ತೀರ್ಪಿನಲ್ಲಿ ತಿಳಿಸಿದ್ದೇನೆ ಕೂಡ. ನ್ಯಾಯಾಂಗದ ವಿರುದ್ಧ ಟೀಕೆ ಮಾಡುವವರನ್ನು ಬೆದರಿಸುವುದಕ್ಕಾಗಿ ನ್ಯಾಯಾಂಗ ನಿಂದನೆ ಕಾಯ್ದೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ತಪ್ಪು ಆಗುತ್ತಿದೆ ಎಂದಾಗ ಅದರ ವಿರುದ್ಧ ದನಿ ಎತ್ತುವವರನ್ನು ಹಿಮ್ಮೆಟ್ಟಲು ಇದನ್ನು ಬಳಸಲಾಗುತ್ತಿದೆ. ಈ ಅಂಶದ ಬಗ್ಗೆ ಕಾಯ್ದೆಯ ಮರುಪರಿಶೀಲನೆ ಅಗತ್ಯ ಇದೆ. ಇಲ್ಲದೇ ಹೋದರೆ ತಪ್ಪಿತಸ್ಥ ನ್ಯಾಯಾಧೀಶರು ಸುಲಭದಲ್ಲಿ ತಪ್ಪಿಸಿಕೊಂಡು ಅನ್ಯಾಯದತ್ತ ಹೆಜ್ಜೆ ಹಾಕುವ ಸಾಧ್ಯತೆ ಇವೆ. ಇದು ಇಡೀ ನ್ಯಾಯಾಂಗ ವ್ಯವಸ್ಥೆಗೇ ಧಕ್ಕೆ ತರುವಂಥದ್ದು. ದುರುದ್ದೇಶಪೂರ್ವಕ ಮಾಡುವ ಟೀಕೆಗಳಿಗೆ ಕಡಿವಾಣ ಹಾಕಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನೂ ನಿರ್ದಾಕ್ಷಿಣ್ಯವಾಗಿಯೇ ಹೇಳುತ್ತೇನೆ. ಆದರೆ ಒಂದು ಮಾತು ಇಲ್ಲಿ ಹೇಳಲೇಬೇಕು. ಟೀಕೆ ಮಾಡುವಾಗ ಸಮಂಜಸ ಹಾಗೂ ಅಸಮಂಜಸ ಟೀಕೆಗಳ ನಡುವಿನ ವ್ಯತ್ಯಾಸದ ಬಗ್ಗೆ ಟೀಕೆ ಮಾಡುವವರು ತಿಳಿದುಕೊಳ್ಳಬೇಕು.ನ್ಯಾಯಾಂಗ ನಿಂದನೆ ನೋಟಿಸ್ ಬಗ್ಗೆಯೂ ಇಲ್ಲಿ ಹೇಳಬೇಕಾದ ಅಗತ್ಯ ಇದೆ. ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿದ ತಕ್ಷಣ, ಅವರು ಅದಕ್ಕೆ ಉತ್ತರ ನೀಡಲು ಸಾಕಷ್ಟು ಕಾಲಾವಕಾಶ ನೀಡಬೇಕಾದ ಅಗತ್ಯ ಇದೆ. ಆಪಾದಿತರು ಕೂಡಲೇ ಕ್ಷಮೆ ಕೋರದಿದ್ದರೆ ಶಿಕ್ಷೆಗೆ ಅವರನ್ನು ಗುರಿಪಡಿಸಲಾಗುವುದು ಎಂದು ಹೇಳಿ `ಬಂದೂಕನ್ನು ಅವರ ತಲೆಗೆ ಹಿಡಿದು ಹೆದರಿಸುವ' ಪ್ರಯತ್ನ ಆಗಬಾರದು. ತಮ್ಮಲ್ಲಿರುವ ಸಾಕ್ಷ್ಯಗಳನ್ನು ಹಾಜರು ಪಡಿಸಲು ಅವರಿಗೆ ಅನುಮತಿ ಜೊತೆಗೆ ಅವಕಾಶವೂ ನೀಡಬೇಕು.ನ್ಯಾಯಾಲಯಗಳು ಮುಕ್ತವಾದ, ನ್ಯಾಯಯುತವಾದ, ಆರೋಗ್ಯಕರವಾದ ಧೋರಣೆಗಳನ್ನು ಅಳವಡಿಸಿಕೊಳ್ಳಬೇಕು. ಅಲ್ಲಿ ಯಾವುದೇ ರೀತಿಯ `ಕರ್ತವ್ಯಲೋಪ'ಗಳಿಗೆ ಅವಕಾಶ ಆಗಬಾರದು. ಅದು ಒಳ್ಳೆಯ ರೀತಿಯಲ್ಲಿ ನಡೆದುಕೊಂಡು ಹೋಗಿದ್ದೇ ಆದಲ್ಲಿ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಜನರಲ್ಲಿ ನಂಬಿಕೆ ಉಳಿಯುತ್ತದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry