ಸೋಮವಾರ, ಮೇ 23, 2022
30 °C

ಮರು ಚುನಾವಣೆಗೆ ಉಪನಿಬಂಧಕರ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಟ್ಕಳ: ಇಲ್ಲಿನ ಪ್ರತಿಷ್ಠಿತ ಕೃಷಿ ಹಾಗೂ ಗ್ರಾಮೀಣ ಭೂ ಅಭಿವೃದ್ದಿ ಬ್ಯಾಂಕ್ (ಪಿ.ಎಲ್.ಡಿ.)ಗೆ 2008-09ರಲ್ಲಿ ಮುಂದಿನ ಐದು ಸಹಕಾರಿ ವರ್ಷಗಳ ಅವಧಿಯ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವಾರ್ಡ್ ನಂ.6ರಲ್ಲಿ ಸ್ಪರ್ಧಿಸಿ ವಿಜೇತರಾಗಿದ್ದ ಹೊನ್ನಮ್ಮ ರಾಮಚಂದ್ರ ನಾಯ್ಕ ಅವರ ಸದಸ್ಯತ್ವವನ್ನು ರದ್ದುಗೊಳಿಸಿ, ಮರು ಚುನಾವಣೆ ನಡೆಸುವಂತೆ ಸಹಕಾರಿ ಸಂಘಗಳ ಉಪನಿಬಂಧಕರು ಅದೇಶ ಹೊರಡಿಸಿದ್ದಾರೆ.ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತರಾಗಿದ್ದ ಲಕ್ಷ್ಮಿ ಮಂಜಪ್ಪ ನಾಯ್ಕ ಅವರು ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆ 1959ರ ಕಲಂ 70ರಂತೆ ಆಯ್ಕೆ ಬಗ್ಗೆ ತಕರಾರು ಅರ್ಜಿಯನ್ನು ಸಹಕಾರ ಸಂಘಗಳ ಉಪನಿಭಂದಕರು ಕಾರವಾರ ಇವರ ನ್ಯಾಯಾಲಯದಲ್ಲಿ ದಾಖಲಿಸಿದ್ದರು. ಚುನಾವಣೆಯಲ್ಲಿ ಆಯ್ಕೆಯಾಗಿರುವ ಹೊನ್ನಮ್ಮ ಅವರು ತಮ್ಮ ನಾಮಪತ್ರದಲ್ಲಿ ಮೃತ ವ್ಯಕ್ತಿಯನ್ನು ಸೂಚಕರಾಗಿ ನಮೂದಿಸಿದ್ದರು. ನಾಮಪತ್ರ ಪರಿಶೀಲನೆ ಕಾಲಕ್ಕೆ ಈ ಬಗ್ಗೆ ತಕರಾರು ತೆಗೆದರೂ ಅಂದಿನ ಚುನಾವಣಾಧಿಕಾರಿಗಳು ಸೂಚಕರ ಮರಣ ದಾಖಲೆ ಸಲ್ಲಿಸುವಂತೆ ಹೇಳಿ ನಾಮಪತ್ರವನ್ನು ತಿರಸ್ಕರಿಸದೇ ಸ್ವೀಕರಿಸಿದ್ದರು ಎಂದು ಲಕ್ಷ್ಮಿ ನಾಯ್ಕ ಅರ್ಜಿಯಲ್ಲಿ ದೂರಿದ್ದರು.ಅರ್ಜಿದಾರರ ವಾದವನ್ನು ಎತ್ತಿಹಿಡಿದ ಸಹಕಾರಿ ಸಂಘಗಳ ಉಪನಿಬಂಧಕರು, ಚುನಾವಣೆಯಲ್ಲಿ ವಿಜೇತರಾಗಿದ್ದ ಹೊನ್ನಮ್ಮ ನಾಯ್ಕರ ಸದಸ್ಯತ್ವವನ್ನು ರದ್ದುಗೊಳಿಸಿದ್ದಲ್ಲದೇ, ಸಹಕಾರಿ ಸಂಘಗಳ 1960ರ ನಿಯಮದಂತೆ ಎಲ್ಲಾ ಅರ್ಹ ಸದಸ್ಯರಿಗೆ ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ನೀಡಿ ತೆರವಾಗಿರುವ ಮಹಿಳಾ ಮೀಸಲು ವಾರ್ಡ್ ನಂ.6ರಲ್ಲಿ 60 ದಿನದೊಳಗೆ ಚುನಾವಣೆ ನಡೆಸಬೇಕೆಂದು ಸೂಚಿಸಿದರು.ಆಡಳಿತ ಮಂಡಳಿ ಆಕ್ಷೇಪ : ಬ್ಯಾಂಕಿನ ಆಡಳಿತ ಮಂಡಳಿಯ ಗಮನಕ್ಕೆ ತರದೇ ಸಹಕಾರಿ ಸಂಘಗಳ ಉಪನಿಬಂಧಕರು ಫೆ.20ಕ್ಕೆ ಚುನಾವಣೆ ನಡೆಸುವಂತೆ ದಿನಾಂಕ ನಿಗದಿಪಡಿಸಿ ಚುನಾವಣಾಧಿಕಾರಿ ನೇಮಿಸಿರುವುದಕ್ಕೆ ಬ್ಯಾಂಕಿನ ಆಡಳಿತ ಮಂಡಳಿ ತೀವ್ರವಾಗಿ ಆಕ್ಷೇಪಿಸಿದೆ.ಬ್ಯಾಂಕಿನ ಅಧ್ಯಕ್ಷ ಈಶ್ವರ ನಾಯ್ಕ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ತೀರ್ಪಿನ ಬಗ್ಗೆ ಚರ್ಚಿಸಿ ಈ ನಿರ್ಣಯವನ್ನು ಕೈಗೊಳ್ಳಲಾಯಿತು. ಫೆ.20ಕ್ಕೆ ಚುನಾವಣೆ ನಡೆಸುವುದು ಅಸಾಧ್ಯ. ಈ ಕುರಿತು ಸೂಕ್ತಕ್ರಮ ಜರುಗಿಸದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯ ಎಂದು ಆಡಳಿತ ಮಂಡಳಿ ಎಚ್ಚರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.