ಮರು ಮದುವೆಗೆ ಸಿದ್ಧ ವರಿಸುವ ವರನಾರು?

7

ಮರು ಮದುವೆಗೆ ಸಿದ್ಧ ವರಿಸುವ ವರನಾರು?

Published:
Updated:

ಮಂಗಳೂರಿನ ಪೊಲೀಸರು ಮೊನ್ನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ವಂಚಕನೊಬ್ಬನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಈತ ಮಾಡಿದ ವಂಚನೆಯಾದರೂ ಏನು?ಅದೊಂದು ಮನಕಲಕುವ ಕಥೆ. ವಂಚಕ ರಾಮಕೃಷ್ಣ ಅಲಿಯಾಸ್ ರಮೇಶ್ 30ಕ್ಕೂ ಅಧಿಕ ವಿಧವೆಯರನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದ. ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಲಪಟಾಯಿಸಿದ್ದ. ಐದು ವರ್ಷದ ಎಲ್‌ಎಲ್‌ಬಿ ಕೋರ್ಸ್‌ಗೆ ಸೇರಿದ್ದ ಈತ ಮೂರು ವರ್ಷಕ್ಕೇ ಕಾನೂನು ವ್ಯಾಸಂಗ ಕೊನೆಗೊಳಿಸಿ ಖಾಸಗಿ ಸಂಸ್ಥೆಯಲ್ಲಿ ಗುಮಾಸ್ತನಾಗಿದ್ದಾನೆ. ಈತನಿಗೆ ಅಧಿಕೃತ ಪತ್ನಿ- ಮಕ್ಕಳೂ ಇದ್ದಾರೆ. ಆದರೆ, ವಿಧವಾ ವಿವಾಹ ಎಂಬ ಹೆಸರಿನಡಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ವಂಚಿಸುವುದನ್ನೇ ವೃತ್ತಿಯಾಗಿಸಿಕೊಂಡಿದ್ದ.ಪತಿಯ ಆಕಸ್ಮಿಕ ನಿಧನದಿಂದಾಗಿ ಕತ್ತಲೆಯ ಕೂಪದಲ್ಲಿ ಕಳೆದುಹೋಗಿದ್ದ ಬದುಕನ್ನು ಮತ್ತೊಮ್ಮೆ ಕಟ್ಟಿಕೊಳ್ಳಲು ಬಯಸ್ದ್ದಿದ, ಗಂಡ, ಮನೆ, ಮಕ್ಕಳು, ಸಂಸಾರ ಎಂದು ಹೊಸ ಬದುಕಿನ ಕನಸು ಕಂಡಿದ್ದ, ಉಳಿದ ದಿನಗಳನ್ನಾದರೂ ನೆಮ್ಮದಿಯಿಂದ ಕಳೆಯಬಹುದು ಎಂದು ಅಪಾರ ಆಸೆ-ಆಕಾಂಕ್ಷೆಗಳನ್ನು ಹೊಂದಿದ್ದ ಮಹಿಳೆಯರನ್ನು ಬಹಳ ಅಮಾನವೀಯವಾಗಿ ಮೋಸಗೊಳಿಸ್ದ್ದಿದ.ಆಕಸ್ಮಿಕದಲ್ಲೊ, ಅಪಘಾತದಲ್ಲೊ, ಅನಾರೋಗ್ಯದ ಕಾರಣದಿಂದಾಗಿಯೋ ಪತಿಯನ್ನು ಕಳೆದುಕೊಂಡು ವೈಧವ್ಯದ ಕರಾಳ ಬದುಕು ಅನುಭವಿಸುತ್ತಿದ್ದ, `ಇವಳು ಕಾಲಿಟ್ಟ ಘಳಿಗೆ ಸರಿಯಿಲ್ಲ. ಮಗನನ್ನೇ ಕಳೆದುಕೊಳ್ಳಬೇಕಾಯಿತು~ ಎಂದು ಮಾವ-ಅತ್ತೆಯ, ಮದುವೆಯಾಗಿ ಸೇರಿದ ಮನೆಯವರ ಕೊಂಕು ಮಾತುಗಳನ್ನು ಕೇಳುತ್ತಾ ಬದುಕಿನ ಉಳಿದ ಹತ್ತಾರು ವರ್ಷಗಳನ್ನು ಕಳೆಯಬೇಕಿದ್ದ, ಇತ್ತ ತವರಿನವರಿಗೂ ಬೇಡದ ಅತಿಥಿಯಾಗಿ ಬದುಕೇ ಬೇಡ ಎಂಬಂತೆ ಮೂಲೆಯಲ್ಲಿ ಕತ್ತಲಲ್ಲಿ ಕುಳಿತು ಮೌನವಾಗಿ ರೋದಿಸುತ್ತಿದ್ದವರಿಗೆ ಪತ್ರಿಕೆಯಲ್ಲಿ ಕಂಡ `ನನ್ನದು ಆದರ್ಶಮಯ ಜೀವನ. ವಿಧವೆಯರನ್ನು ವಿವಾಹವಾಗಲು ಸಿದ್ಧನಿದ್ದೇನೆ. ಆಸಕ್ತರು ಸಂಪರ್ಕಿಸಿ~ ಎಂಬ ಮೊಬೈಲ್ ಫೋನ್ ಸಂಖ್ಯೆಯೊಂದಿಗೆ ಪ್ರಕಟವಾಗಿದ್ದ ಜಾಹೀರಾತು ಕರಾಳ ಬದುಕಿನಲ್ಲಿ ಕಂಡ ಆಶಾಕಿರಣದಂತೆ, ಮಿಂಚಿನ ಬೆಳಕಿನಂತೆ ಹಲವರಿಗೆ ಗೋಚರಿಸಿತ್ತು. ಆಗಾಗ್ಗೆ ಬೇರೆ ಬೇರೆ ಹೆಸರಿನಲ್ಲಿ ಪ್ರಕಟವಾಗುತ್ತಿದ್ದ ಈ ಜಾಹೀರಾತನ್ನೇ ನಂಬಿದ ಈ 30 (ಸದ್ಯಕ್ಕೆ ಖಚಿತವಾಗಿರುವುದು) ಮಂದಿ ವಿಧವೆಯರೂ ಈ ದುರುಳನ ಜಾಲದಲ್ಲಿ ಸಿಲುಕಿ ವಂಚನೆಗೊಳಗಾದರು. ಮಂಗಳೂರಿನ ಮಹಿಳೆಯೊಬ್ಬರು ಧೈರ್ಯ ಮಾಡಿ ಪೊಲೀಸರಿಗೆ ದೂರು ನೀಡದೇ ಇದ್ದರೆ ಈ ವಂಚಕನ ಬಂಧನವೂ ಆಗುತ್ತಿರಲಿಲ್ಲ.`ಈಗಾಗಲೇ ವಂಚನೆಗೊಳಗಾಗಿದ್ದೇವೆ. ಪೊಲೀಸರಿಗೆ ದೂರು ನೀಡಿ ಅದನ್ನೂ ಜಗಜ್ಜಾಹೀರುಗೊಳಿಸಿ `ಮನೆತನದ ಮರ್ಯಾದೆ~ ಕಳೆಯುವುದು ಬೇಡ ಎಂದೋ, ನಮ್ಮ ಮೂರ್ಖತನದ ನಿರ್ಧಾರದ ಕಥೆ ಮೂರು ಹಾಸಿಗೆ ಹರಾಜಾಗುವುದೂ ಬೇಡ~ ಎಂದೋ ಸುಮ್ಮನಾಗಿದ್ದ ಉಳಿದ 29 ವನಿತೆಯರಂತೆಯೇ ಮಂಗಳೂರಿನ ಮಹಿಳೆಯೂ ಮೌನ ತಾಳಿ ಮನೆಯ ಮೂಲೆ ಸೇರಿದ್ದರೆ ಈ ನಯವಂಚಕ ಮತ್ತೆ ಮತ್ತೆ ಆದರ್ಶದ ಮುಖವಾಡ ತೊಟ್ಟು, ಸಮಾಜ ಸುಧಾರಣೆಯ ಮಾತನಾಡುತ್ತಾ ಇನ್ನೆಷ್ಟು ವಿಧವೆಯರ ಬಾಳನ್ನು ಮತ್ತಷ್ಟು ಕುಗ್ಗಿಸಿಬಿಡುತ್ತಿದ್ದನೋ ಏನೊ?ಬಾಲ್ಯ ವಿವಾಹ, ವೈಧವ್ಯದ ಕರಾಳ ಬದುಕು, ಸತಿ ಪದ್ಧತಿ, ಮರ್ಯಾದಾ ಹತ್ಯೆ, ಮುಟ್ಟು-ಮೈಲಿಗೆ, ಬಾಣಂತನದ ಸೂತಕ...  ಎಂಬಂತಹ ಹಸೆರುಗಳಲ್ಲಿ ಭಾರತದಲ್ಲಿ ಈಗಲೂ ಬಹಳಷ್ಟು ಕಡೆ,  ಮಹಿಳೆ ಮೇಲಿನ ಕ್ರೌರ್ಯ ಮುಂದುವರಿದೇ ಇದೆ. ತನ್ನದೇ ಉತ್ಕೃಷ್ಟ ಧರ್ಮ, ಜೀವನಶೈಲಿ, ಆಲೋಚನೆ, ಆತ್ಮ, ಅಧ್ಯಾತ್ಮ ಎಂದೇ ನಂಬಿಕೆ ಇರುವ ನಾಡಿನಲ್ಲಿ  ಸ್ತ್ರೀ ಸಮುದಾಯವನ್ನು ತುಳಿದು ಶೋಷಿಸುವ ನಡವಳಿಕೆ, ಮೂಢನಂಬಿಕೆ ಪೂರ್ಣವಾಗಿ ಈಗಲೂ ತೊಲಗಿಲ್ಲ. ನಗರ, ಪಟ್ಟಣ, ಗ್ರಾಮೀಣ ಭಾಗ ಎಂದೇನೂ ಭೇದವಿಲ್ಲ. ಪತಿ ಮರಣಾನಂತರ ಕೇಶ ಮುಂಡನ, ಮಾಂಗಲ್ಯ, ಕುಂಕುಮ, ಹೂವು ಸೇರಿದಂತೆ ಎಲ್ಲ ಶುಭ ಸೂಚಕ ಮಂಗಳ ದ್ರವ್ಯಗಳನ್ನೂ ತ್ಯಜಿಸುವುದು, ಶುಭ ಕಾರ್ಯಗಳಲ್ಲಿ ಭಾಗವಹಿಸಲು ನಿರಾಕರಣೆ ಈಗಲೂ ಮುಂದುವರಿದೇ ಇದೆ.ಇಂಥದೇ ಸಂದರ್ಭದಲ್ಲಿ ಹೊಸ ಬದುಕಿನ ನಿರೀಕ್ಷೆಯಲ್ಲಿದ್ದರಿಗೆ ವಂಚನೆಯ ಜಾಹೀರಾತುಗಳೂ ಆಶಾಕಿರಣವಾಗಿ ಕಾಣುತ್ತವೆ. ಬದುಕು ಅವರನ್ನು ಮತ್ತೆ ಮೋಸಗೊಳಿಸುತ್ತದೆ. ಇದು ನಾಗರಿಕ ಸಮಾಜದ ತಣ್ಣಗಿನ ಕ್ರೌರ್ಯವಲ್ಲದೆ ಮತ್ತೇನು? ಸಂಪೂರ್ಣ ಸಾಕ್ಷರತೆ, ಆಧುನಿಕ ಜೀವನಶೈಲಿ, 21ನೇ ಶತಮಾನ... ಎಲ್ಲವೂ ಈ ಮೌಢ್ಯವನ್ನು ಪೂರ್ಣವಾಗಿ ಒಡೆಯಲಾರದ ಶಕ್ತಿಹೀನ ಆಸ್ತ್ರಗಳೇ ಆಗಿವೆ. ಇದಕ್ಕೆ ಪರಿಹಾರವೇ ಇಲ್ಲವೇ?ಶತಮಾನಗಳ ಹಿಂದೆ, ರಾಜರಾಮ ಮೋಹನ ರಾಯರು ಕಂಡ ವಿಧವಾ ವಿವಾಹದ ಕನಸು, ಆರ್ಯ ಸಮಾಜ ಸ್ಥಾಪನೆ ಅವರ ಕಾಲಾನಂತರದಲ್ಲಿಯೇ ಮರೆಗೆ ಸರಿಯಿತು. ಅಪವಾದ ಎಂಬಂತೆ ಅಲ್ಲೊಂದು ಇಲ್ಲೊಂದು ವಿಧವಾ ವಿವಾಹ ಜರುಗುತ್ತಿವೆ. ಹಾಗಿದ್ದೂ ವಿಧವೆ ಪಟ್ಟ, ಕತ್ತಲೆಯ ಬದುಕು, ಸಮಾಜದ, ಮನೆ ಮಂದಿಯ ತಿರಸ್ಕಾರ ಈಗಲೂ ಮುಂದುವರಿದೇ ಇದೆ. ಮೀರಾ ನಾಯರ್ ಅವರ `ವಾಟರ್~  ಹಾಗೂ ಗಿರೀಶ್ ಕಾಸರವಳ್ಳಿ ಅವರ `ಘಟಶ್ರಾದ್ಧ~ ಸಿನೆಮಾ, ಎಂ.ಕೆ. ಇಂದಿರಾ ಅವರ `ಫಣಿಯಮ್ಮ~, `ಸದಾನಂದ~ ಕಾದಂಬರಿಗಳು - 20-21ನೇ ಶತಮಾನದಲ್ಲಿ ವಿಧವೆಯರ ಬದುಕು ಭಾರತದಂತಹ ದೇಶದಲ್ಲಿ ಹೇಗಿದೆ ಎಂಬುದಕ್ಕೆ ಸಾಕ್ಷಿಯಾಗಿವೆ.ಇಂಥ ನಿರಾಶಾದಾಯಕ ಹೊತ್ತಿನಲ್ಲಿಯೂ ಎಲ್ಲೋ ಒಂದೆಡೆ ಸಮಾಜ ಸುಧಾರಣೆಯ ಕನಸು, ಮೌಢ್ಯ ನಿವಾರಿಸಿ ಕಣ್ಣು ತೆರೆಸುವ ಯತ್ನ ನಡೆಯುತ್ತವೆ. ಮಂಗಳೂರಿನ ಕುದ್ರೋಳಿಯಲ್ಲಿನ ಗೋಕರ್ಣನಾಥೇಶ್ವರ ದೇಗುಲದಲ್ಲಿ ಈ ಬಾರಿ ನಿಜವಾಗಿಯೂ `ನವ ದುರ್ಗೆಯರ~ ಪೂಜೆ ಸಾರ್ಥಕ ಎಂಬಂತೆ ನಡೆದಿದೆ. ಕುಂಕುಮ, ಹೂವು, ಬಳೆ, ಬಣ್ಣದ ಬಟ್ಟೆ ಧರಿಸುವುದೇ ಅಸಾಧ್ಯವಾಗಿದ್ದ ಕರಾವಳಿಯ ಮಹಿಳೆಯರ ಬಾಳಿನಲ್ಲಿ ಹೊಸ ಹೆಜ್ಜೆ ಸಾಧ್ಯವಾಗಿದೆ. 2500ಕ್ಕೂ ಅಧಿಕ ವನಿತೆಯರು `ವೈಧವ್ಯ~-~ಅಶುಭ~ ಎಂಬ ಕಳಂಕ ತೊಳೆದುಕೊಳ್ಳುವ, ತಾವೂ ಇತರೆ ಮಹಿಳೆಯರಂತೆಯೇ ದೇವರು, ಪೂಜೆ, ರಥೋತ್ಸವ ಸೇರಿದಂತೆ ಸಕಲ ಶುಭ ಕಾರ್ಯಕ್ಕೂ ಅರ್ಹರು ಎಂಬ ಸಮಾಧಾನ ಕಂಡುಕೊಂಡಿದ್ದಾರೆ. ಗೋಕರ್ಣನಾಥೇಶ್ವರ ದೇವರ ಮೂರ್ತಿ ಎದುರಿನಲ್ಲಿಯೇ ಇವರೆಲ್ಲರೂ ಬಣ್ಣದ ಸೀರೆ-ರವಿಕೆ ಕಣ, ಕುಂಕುಮ, ಹೂವು-ಬಳೆಗಳನ್ನು ಸ್ವೀಕರಿಸಿ ಕಳಂಕ ಮುಕ್ತರಾಗಿದ್ದಾರೆ. ದೇವರ ರಥವನ್ನೂ ಎಳೆದಿದ್ದಾರೆ. ಇಂಥ ಸುಧಾರಣಾ ನಡೆಗೆ ಕುದ್ರೋಳಿ ಗೋಕರ್ಣನಾಥ ಸ್ವಾಮಿ ದೇಗುಲ ಸಮಿತಿ ಕಾರಣವಾಗಿದೆ.`ಮರುಮದುವೆಗೆ ಸಿದ್ಧ~

`ಪತಿ ಜತೆ 15 ವರ್ಷ ಸಂಸಾರ ನಡೆಸಿದ್ದೆ. ಕೂಲಿ ಕೆಲಸ ಮಾಡುತ್ತಿದ್ದ ಅವರಿಗೆ ಕುಡಿತದ ಚಟವಿತ್ತು. ವರ್ಷದ ಹಿಂದೆ ತೀರಿಹೋದರು. ನನಗೆ ಮಕ್ಕಳಾಗಿಲ್ಲ. ಸದ್ಯ ನನಗೆ ಯಾರೂ ಗತಿ ಇಲ್ಲ. ನನ್ನನ್ನು ವರಿಸಲು ಯಾರಾದರೂ ಇಷ್ಟಪಟ್ಟರೆ ಮರುಮದುವೆಗೆ ಸಿದ್ಧ~.

ಹರಿಣಾಕ್ಷಿ, ಬರ್ಕೆ`ಯಾರಿಗೂ ಈ ಕಷ್ಟ ಬೇಡ~

`ಗಂಡನನ್ನು ಕಳೆದುಕೊಂಡ ಮೇಲೆ ಎಂತಹ ಕಷ್ಟ ಬರುತ್ತದೆ ಎಂಬುದನ್ನು ಸ್ವತಃ ಅನುಭವಿಸಿದ್ದೇನೆ. ಯಾರಿಗೂ ಈ ಕಷ್ಟ ಬಾರದಿರಲಿ. ಒಂದು ವೇಳೆ ಬಂದರೂ ಅವರನ್ನು ಇನ್ನು ಮುಂದಾದರೂ ಸಮಾಜ ನೋಡುವ ದೃಷ್ಟಿ ಬದಲಾಗಲಿ~.

ಚಂದ್ರಾವತಿ, ವಾಮಂಜೂರು

`ಹೂ, ಬಳೆ ತೊಟ್ಟಿರಲಿಲ್ಲ~

`ರಿಕ್ಷಾ ಚಾಲಕರಾಗಿದ್ದ ಪತಿ ಮೃತಪಟ್ಟ ನಂತರ ನಾನು ಹೂ ಮುಡಿದೇ ಇರಲಿಲ್ಲ. ಗಾಜಿನ ಬಳೆ ತೊಟ್ಟಿರಲಿಲ್ಲ. ಈಗ ಇಲ್ಲಿ ಅರ್ಚಕರು ನೀಡಿದ ಹೂ, ಬಳೆ ಮುಡಿಯುತ್ತಿದ್ದೇನೆ. ನನ್ನ ಬಾಳಿನಲ್ಲಿ ಇದೊಂದು ಮರೆಯಲಾಗದ ದಿನ~.

ಮೋಹಿನಿ, ದೇರೆಬೈಲ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry