ಮರು ಮೌಲ್ಯಮಾಪನ: ಪ್ರತಿಭಾನ್ವಿತರಿಗೆ ಅಡ್ಡಿ

7

ಮರು ಮೌಲ್ಯಮಾಪನ: ಪ್ರತಿಭಾನ್ವಿತರಿಗೆ ಅಡ್ಡಿ

Published:
Updated:

ಬೆಳಗಾವಿ: ಪದವಿ ಪೂರ್ವ ಶಿಕ್ಷಣ ಇಲಾಖೆ ಮರು ಮೌಲ್ಯಮಾಪನಕ್ಕೆ ಜಾರಿಗೊಳಿಸಿರುವ ಅವೈಜ್ಞಾನಿಕ ನಿಯಮದಿಂದಾಗಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ನಿರೀಕ್ಷಿಸಿದ್ದ ಹಲವು ಪ್ರತಿಭಾವಂತ ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಅವಕಾಶದಿಂದ ವಂಚಿತರಾಗುತ್ತಿದ್ದಾರೆ.ಇಲಾಖೆಯ ನಿಯಮದ ಪ್ರಕಾರ ಯಾವುದೇ ವಿಷಯದಲ್ಲಿ ಮರು ಮೌಲ್ಯಮಾಪನ ನಡೆಸಿದಾಗ, ಈ ಹಿಂದೆ ಪಡೆದ ಅಂಕಕ್ಕಿಂತ 6 ಹಾಗೂ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದರೆ ಮಾತ್ರ ಅದನ್ನು ಪರಿಗಣಿಸಲಾಗುತ್ತದೆ. ಮರು ಮೌಲ್ಯಮಾಪನದಲ್ಲಿ 5 ಹಾಗೂ ಅದಕ್ಕಿಂತ ಕಡಿಮೆ ಅಂಕ ಪಡೆದರೆ, ಅದನ್ನು ಪರಿಗಣಿಸದೆ ಈ ಹಿಂದೆ ಪಡೆದ ಅಂಕವನ್ನೇ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.ಇಲಾಖೆಯ ಈ ನಿಮಯದಿಂದಾಗಿ ಪರೀಕ್ಷೆಯ ಮೂಲ ಮೌಲ್ಯಮಾಪನದಲ್ಲಿ 95 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ವಿಜ್ಞಾನ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ನಿರೀಕ್ಷಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲಾಗದೇ ಹತಾಶರಾಗುತ್ತಿದ್ದಾರೆ.`ದ್ವಿತೀಯ ಪಿಯುಸಿ ಪರೀಕ್ಷೆಯ ರಸಾಯನಶಾಸ್ತ್ರ ವಿಷಯದಲ್ಲಿ 100 (ಪಡೆದದ್ದು 93) ಹಾಗೂ ಗಣಿತದಲ್ಲಿ 100 (99 ಅಂಕ) ಬರಬೇಕಿತ್ತು. ಮರು ಮೌಲ್ಯಮಾಪನ ನಡೆಸುವ ಸಂದರ್ಭದಲ್ಲಿ ಮೌಲ್ಯಮಾಪಕರು 6 ಅಂಕಕ್ಕಿಂತ ಕಡಿಮೆ ಅಂಕವನ್ನು ಹಾಕಿದರೆ ಅದನ್ನು ಪರಿಗಣಿಸುವುದಿಲ್ಲ ಎಂಬ ಕಾರಣಕ್ಕೆ ಮರು ಮೌಲ್ಯಮಾಪನಕ್ಕೆ ಹಾಕಲಿಲ್ಲ ಎನ್ನುತ್ತಾರೆ ಬೆಳಗಾವಿಯ ಜೈನ ಕಾಲೇಜಿನ ವಿದ್ಯಾರ್ಥಿ ವೈಭವ ಪಾಟೀಲ.`ಗಣಿತ ವಿಷಯದಲ್ಲಿ 99 (ಪಡೆದದ್ದು 94) ಹಾಗೂ ರಸಾಯನಶಾಸ್ತ್ರದಲ್ಲಿ 99 (ಪಡೆದದ್ದು 93) ಅಂಕಗಳನ್ನು ನಿರೀಕ್ಷಿಸಿದ್ದೆ. ಅಲ್ಲದೇ ಮರು ಮೌಲ್ಯಮಾಪನದ ಒಂದು ವಿಷಯಕ್ಕೆ ರೂ  1050 ಶುಲ್ಕ ವಿಧಿಸಲಾಗುತ್ತಿದೆ. ಹಣವೂ ವಾಪಸ್ ಸಿಗುವುದಿಲ್ಲ. ಹೀಗಾಗಿ 97 ಅಂಕ ನಿರೀಕ್ಷಿಸಿದ್ದ ಜೀವಶಾಸ್ತ್ರ (86) ವಿಷಯವನ್ನು ಮಾತ್ರ ಮರು ಮೌಲ್ಯಮಾಪನಕ್ಕೆ ಹಾಕಿದ್ದೇನೆ~ ಎಂದು ವಿದ್ಯಾರ್ಥಿ ಶುಭಂ ಆರ್. ಪಾಟೀಲ `ಪ್ರಜಾವಾಣಿ~ ಬಳಿ ಅಳಲು ತೋಡಿಕೊಂಡರು.`ವಿಜ್ಞಾನ ವಿದ್ಯಾರ್ಥಿಗಳಿಗೆ ಒಂದೆರಡು ವಿಷಯಗಳಲ್ಲಿ ಮೂರು- ನಾಲ್ಕು ಅಂಕಗಳು ಹೆಚ್ಚಿದರೂ, ಸಿಇಟಿ ರ‌್ಯಾಂಕಿಂಗ್‌ನಲ್ಲಿ 100ರಿಂದ 150ರಷ್ಟು ವ್ಯತ್ಯಾಸವಾಗುತ್ತದೆ. ಕಡಿಮೆ ರ‌್ಯಾಂಕಿಂಗ್ ಪಡೆಯುವುದರಿಂದ ಪ್ರತಿಭಾವಂತ ವಿದ್ಯಾರ್ಥಿಗಳು ತಾವು ಸೇರಬೇಕೆಂದುಕೊಂಡಿದ್ದ ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳಿಂದ ವಂಚಿತರಾಗುತ್ತಿದ್ದಾರೆ.

 

ಹೀಗಾಗಿ ಎಸ್ಸೆಸ್ಸೆಲ್ಸಿ ಮರು ಮೌಲ್ಯಮಾಪನದಲ್ಲಿ ಹೇಗೆ ಒಂದು ಅಂಕ ಹೆಚ್ಚಿಗೆ ಪಡೆದರೂ ಪರಿಗಣಿಸಲಾಗುತ್ತದೆಯೋ, ಅದೇ ರೀತಿ ಪಿಯುಸಿಯಲ್ಲೂ ಪರಿಗಣಿಸಬೇಕು~ ಎಂದು ಪಾಲಕರಾದ ಅನೇಕಾಂತ ಪಾಟೀಲ ಒತ್ತಾಯಿಸುತ್ತಾರೆ. 95ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಮರು ಮೌಲ್ಯಮಾಪನಕ್ಕೆ ಅವಕಾಶ ಇಲ್ಲದಿರುವುದರಿಂದ ಅವರು ಇನ್ನೂ ಹೆಚ್ಚಿನ ಅಂಕ ನಿರೀಕ್ಷಿಸಿದ್ದರೆ, ಮರು ಎಣಿಕೆಗೆ ಹಾಕಬಹುದು. ಯಾವುದಾದರು ಪ್ರಶ್ನೆಯ ಉತ್ತರಕ್ಕೆ ಅಂಕವನ್ನು ನೀಡದೇ ಇರುವುದು ಈ ಸಂದರ್ಭದಲ್ಲಿ ಕಂಡು ಬಂದರೆ, ಮರು ಎಣಿಕೆಯಲ್ಲಿ ಅದರ ಅಂಕವನ್ನೂ ಸೇರಿಸಿಕೊಂಡು ಫಲಿತಾಂಶವನ್ನು ನೀಡಲಾಗುವುದು” ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಆಯುಕ್ತೆ ವಿ. ರಶ್ಮಿ `ಪ್ರಜಾವಾಣಿ~ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry