ಗುರುವಾರ , ಜೂನ್ 24, 2021
23 °C
ನಗರ ಸಂಚಾರ

ಮರೆಗೆ ಸರಿಯುತ್ತಿದೆ ಟಾಂಗಾ

ಪ್ರಜಾವಾಣಿ ವಾರ್ತೆ/ಚಂದ್ರಶೇಖರ ಆರ್‌. Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಅಂದೊಂದು ಕಾಲ. ಗುಲ್ಬರ್ಗ ‘ನಗರ’ದ ತುಂಬೆಲ್ಲಾ ಜಟಕಾ ಬಂಡಿಗಳದ್ದೇ ಕಾರುಬಾರು. ಟಕ ಟಕ ಎಂದು ಸದ್ದು ಮಾಡುತ್ತಾ ರಸ್ತೆಯಲ್ಲಿ ಸಾಗುತ್ತಿದ್ದ ಜಟಕಾ ಬಂಡಿಯ ( ಟಾಂಗಾ) ಪಯಣ ಹಿರಿಯರಿಗಷ್ಟೇ ಅಲ್ಲ, ಮಕ್ಕಳಿಗೂ ಬಲು ಮೋಜು.ದಿನಿತ್ಯದ ಪ್ರಯಾಣಿಕರು, ದೂರದ ಊರು ಗಳಿಂದ ಬಂದ ಬಂಧುಗಳು, ಬಸ್‌ ನಿಲ್ದಾಣಕ್ಕೆ ಅಥವಾ ಸಮೀಪದ ಹಳ್ಳಿಗೆ ಸಾಗಲು ಆಯ್ಕೆ ಮಾಡಿಕೊಳ್ಳುತ್ತಿದ್ದುದು ಇದೇ ಟಾಂಗಾವನ್ನ!‘ಈಗ ಕಾಲ ಬದಲಾಗಿದೆ. ಗುಲ್ಬರ್ಗದ ತುಂಬೆಲ್ಲ  ಸಂಚರಿಸುತ್ತಿದ್ದ ಜಟಕಾ ಬಂಡಿ ದರ್ಗಾ ರಸ್ತೆ, ಸೂಪರ್‌ ಮಾರ್ಕೆಟ್‌, ಗಂಜ್‌ ಪ್ರದೇಶಕ್ಕಷ್ಟೇ ಸೀಮಿತಗೊಂಡಿವೆ.  ಟಾಂಗಾಗಳ ಜಾಗವನ್ನು ಟಂಟಂ, ಆಟೊ , ಸಿಟಿ ಬಸ್‌ಗಳು ಆಕ್ರಮಿಸಿವೆ’ ಎಂದು ಹಳೆ ನೆನಪಿಗೆ ಜಾರಿದರು ಫಾರುಕ್‌ಮಿಯ್ಯಾ. ಸುಮಾರು 40 ವರ್ಷದಿಂದ ಟಾಂಗಾ ಓಡಿಸುವ ಫಾರುಕ್‌ಮಿಯ್ಯಾಗೆ ಆಧುನಿಕ ಭರಾಟೆಯಲ್ಲಿ ಜಟಕಾ ಬಂಡಿ ಮರೆಯಾಗುತ್ತಿರುವ ಬಗ್ಗೆ ಬೇಸರವಿದೆ. ನಗರ ಸಂಸ್ಕೃತಿಯ ಬದಲಾವಣೆಯ ಗಾಳಿ ಬೀಸುತ್ತಿದೆ, ಇದಕ್ಕೆ ಜಟಕಾ ಬಂಡಿಯೂ ಹೊರತಲ್ಲ ಎಂದು  ಬೇಸರದಿಂದಲೇ ಹೇಳುತ್ತಾರೆ. ದರ್ಗಾ ಬಳಿ ಪ್ರಯಾಣಿಕರನ್ನು ಸಾಗಿಸುವ ಜಟಕಾ ಬಂಡಿ ಇದ್ದರೆ, ಮಾರ್ಕೆಟ್‌ ಬಳಿ ಲಗೇಜ್‌ ಟಾಂಗಾಗಳಿವೆ. 500ರಷ್ಟಿದ್ದ ಟಾಂಗಾಗಳು ಈಗ 50ಕ್ಕೆ ಇಳಿದಿವೆ.‘ಲಗೇಜ್‌ಗಿಂತ ಪ್ರಯಾಣಿಕರನ್ನು ಕರೆದೊಯ್ದರೆ ಕೊಂಚ ಲಾಭ. ಆದರೆ ಈಗಿನ ಟಂಟಂ, ಆಟೊ , ಬಸ್‌ಗಳಿಂದಾಗಿ ಪ್ರಯಾಣಿಕರು ಟಾಂಗಾ ಕಡೆ ಮುಖ ಮಾಡುವುದು ಕಡಿಮೆ. ಲಗೇಜ್‌ ಮತ್ತು ಪ್ರಯಾಣಿಕರನ್ನು ಒಯ್ಯುವ ಟಾಂಗಾಗಳಿಗೆ ಬಳಸುವ ಕುದುರೆಯಲ್ಲೂ ವ್ಯತ್ಯಾಸವಿದೆ. ಪ್ರಯಾಣಿಕರ ಜಟಕಾಗೆ ಹೈಬ್ರೀಡ್‌ ತಳಿಯ ಕುದುರೆ ಹಾಗೂ ಲಗೇಜ್‌ ಟಾಂಗೆಗೆ ದೇಸಿ ತಳಿಯ ಕುದುರೆ ಬಳಸಲಾಗುತ್ತದೆ. ಇವುಗಳ ದರದಲ್ಲೂ ವ್ಯತ್ಯಾಸ ಇದೆ’ ಎಂದು ಮುನೀರ್‌ ಹೇಳುತ್ತಾರೆ.‘ಬೆಳಿಗ್ಗೆ 7ಕ್ಕೆ ಬಂಡಿಯೊಂದಿಗೆ ಬಂದರೆ ರಾತ್ರಿ 7ಕ್ಕೆ ಮನೆ ಸೇರುವುದು. ದಿನದಲ್ಲಿ ₨100ರಿಂದ 200 ಗಳಿಸಬಹುದು. ಆದರೆ ಕುದುರೆಗೆ ದಿನ ವೊಂದಕ್ಕೆ ₨100ರಿಂದ ₨120 ಖರ್ಚು ತಗುಲು ತ್ತದೆ. ಮದುವೆ, ಇನ್ನಿತರ ಸಮಾರಂಭ ಗಳಿದ್ದರೆ ಲಾಭ ಹೆಚ್ಚು. ಪ್ರವಾಸಿಗರು ಬಂದರೆ ಜೇಬು ತುಂಬುತ್ತದೆ. ಹೈದರಾಬಾದ್‌, ಪೂನಾ, ಮುಂಬೈ ಪ್ರವಾಸಿಗರಿಗೆ ಟಾಂಗಾ ಸಂಚಾರ ಇಷ್ಟ’ ಎನ್ನು ತ್ತಾರೆ ಅಬ್ದುಲ್‌ ರಹಮಾನ್‌.

‘ಹೈಬ್ರಿಡ್‌ಗೆ ಹೆಚ್ಚು ಬೆಲೆ’

‘ಮಹಾರಾಷ್ಟ್ರದ ಫಂಡರಪುರ, ಸೊಲ್ಲಾಪುರಗಳಿಂದ ಕುದುರೆ ಖರೀದಿಸಲಾಗುತ್ತದೆ. ₨5 ಸಾವಿರದಿಂದ ₨1 ಲಕ್ಷದವರೆಗೂ ಕುದುರೆ ಬೆಲೆಯಿದೆ. ಹೈಬ್ರೀಡ್‌ ತಳಿಯ ಕುದುರೆಗೆ ಹೆಚ್ಚು ಬೆಲೆ. ದೇಸಿ ತಳಿಯ ಕುದುರೆ ದರ ಕಡಿಮೆ. ಖರೀದಿಸಿ ತಂದ ಕುದುರೆಯನ್ನು 1ರಿಂದ 2 ತಿಂಗಳುಗಳ ಕಾಲ ಪಳಗಿಸಬೇಕು. ಜನಜಂಗುಳಿ ಇರದ ಪ್ರದೇಶದಲ್ಲಿ ಓಡಾಡಲು ಪಳಗಿದ ಮೇಲೆ ಜನದಟ್ಟಣೆ ಇರುವ ಪ್ರದೇಶದಲ್ಲಿ ಪಳಗಿಸಬೇಕು. ಕೆಲವೊಮ್ಮೆ ಅಪಘಾತ ಸಂಭವಿಸುವ ಸಾಧ್ಯತೆಯೂ ಇರುತ್ತದೆ’.

–ಶಿವಲಿಂಗಪ್ಪ, ಟಾಂಗಾ ಮಾಲೀಕ

‘ಇತರ ಕೆಲಸ’

‘ಜಟಕಾ ಬಂಡಿ ರಿಪೇರಿಗೆ ₨1 ಸಾವಿರದಿಂದ ₨2 ಸಾವಿರ ಖರ್ಚು ತಗಲುತ್ತದೆ. ಖಾದ್ರಿ ಚೌಕ್‌, ಜಿಲ್ಲಾಸ್ಪತ್ರೆ ಬಳಿ ರಿಪೇರಿ ಮಾಡುವವರಿದ್ದಾರೆ. ಟಾಂಗಾ ನಂಬಿ ಜೀವನ ನಡೆಸುವುದು ಈಗ ಸಾಧ್ಯವಿಲ್ಲ. ಹೀಗಾಗಿ ಇತರೆ ಕೆಲಸಗಳನ್ನೂ ಮಾಡುತ್ತೇನೆ’.

–ವಜೀದ್‌, ಟಾಂಗಾ ಮಾಲೀಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.