ಗುರುವಾರ , ಮಾರ್ಚ್ 30, 2023
24 °C

ಮರೆಯಲಾಗದ ಅನುಭವಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ನನ್ನ ಸಂಶೋಧನ ಜೀವನದ ‘ಪಾಂಡಿತ್ಯರಸ’ದ ಕೆಲವು ಹನಿಗಳನ್ನು ಈಗಾಗಲೇ ದಾಖಲಿಸಿದ್ದೇನೆ. ಅಧ್ಯಾಪಕ ಜೀವನದಲ್ಲಿಯೂ ಅಂತಹ ಅನುಭವಗಳಾಗಿವೆ. ಈ ಪ್ರಬಂಧದಲ್ಲಿ ಆರಿಸಿದ ಹತ್ತು ಅನುಭವಗಳನ್ನು ಅವು ಹೊರಬರಲು ಚಡಪಡಿಸುತ್ತಿವೆಯಾದ್ದರಿಂದ ದಾಖಲಿಸುತ್ತಿದ್ದೇನೆ.‘ರಾಗಿ ಮುದ್ದೆ ಮೇಲೆ ನಿಂಬೆ ಹಣ್ಣು’

ನನ್ನ ಹುಟ್ಟಿದ ಹಳ್ಳಿ ಚನ್ನಗಿರಿ ತಾಲೂಕಿನ ಹಿರೇಕೋಗಲೂರಿನಲ್ಲಿದ್ದ ಬಸಜ್ಜ ಎಂಬ ಬಡಗಿ (ಬಸವರಾಜ್ ಹೆಸರು) ಬಾಲಕರಾಗಿದ್ದ ನಮಗೆ ಚಿಣ್ಣಿ, ದಾಂಡು, ಬುಗುರಿ ಕೆತ್ತಿ ಕೊಟ್ಟು ಆತ್ಮೀಯನಾಗಿದ್ದ. ತೆಳ್ಳನೆಯ ಕಪ್ಪು ದೇಹದ ಅವನ ತೋಳುಗಳ ಮಾಂಸಖಂಡಗಳು ಉಬ್ಬಿದ್ದು ಬಾಚಿಯಿಂದ ಅವನು ಮರ ಕೆತ್ತುವಾಗ ಅವು ಚೆಂಡಿನಂತೆ ಮೇಲೆ ಕೆಳಗೆ ಸರಿಯುತ್ತಿದ್ದುವು. ಭಾರಿ ಚಮತ್ಕಾರದ ಮಾತಿನ ಅವನು ತನ್ನ ಮನೆ ಮುಂದಿನ ಬೇವಿನ ಕಟ್ಟೆ ಮೇಲೆ ಕುಳಿತಿದ್ದ ಜನರ ಜೊತೆ ತಾನು ಮರ ಕೆತ್ತುತ್ತಿದ್ದಂತೆಯೇ ಮಾತಾಡುತ್ತ ನಗಿಸುತ್ತಿದ್ದ. ಅವನ ದೊಡ್ಡ ಮಗ ಅವನಿಗಿಂತ ಅಪ್ಪಟ ಕಪ್ಪು. ಆ ಮಗನ ಮದುವೆಯಾಗಿ ಸೊಸೆ ಅವನ ಮನೆಗೂ ಬಂದಿದ್ದಳು. ಒಂದು ದಿನ ತಿಮ್ಮಜ್ಜ ಎಂಬ ವಯಸ್ಕ ಹಿರಿಯ ಬೇವಿನ ಕಟ್ಟೆ ಮೇಲೆ ಕುಳಿತು ‘ಏ ಆಚಾರಿ, ನಿನ್ನ ಹಿರೇ ಮಗನ್ನ ಮದುವೆ ಮಾಡ್ಬಿಟ್ಟೆ’ ಎಂದು ಹೇಳುತ್ತಿದ್ದಂತೆ ಈಶ್ವರಾಚಾರ್ ತಟಕ್ಕನೆ ಉತ್ತರ ಕೊಟ್ಟಿದ್ದು- ‘ಹೌದಜ್ಜ, ರಾಗಿ ಮುದ್ದೆ ಮೇಲೆ ನಿಂಬೆ ಹಣ್ಣು ಇಟ್ಟಂಗಾತು’. ನಾವು ಪುಟ್ಟ ಹುಡುಗರೂ ಸೇರಿದಂತೆ ಇಡೀ ಅಲ್ಲಿದ್ದ ಜನ ಗೊಳ್ಳೆಂದು ನಕ್ಕರು. ಅವನ ಸೊಸೆ ಬೆಳ್ಳಗೆ ಸುಂದರವಾಗಿದ್ದಳು. ಅವನ ಮಗ ನಿಜವಾಗಿಯೂ ರಾಗಿಮುದ್ದೆಯೇ ಆಗಿದ್ದ. ಎಂತಹ ಸುಂದರ ಉಪಮೆ! ಹಳ್ಳಿಯ ಅಪ್ಪಟ ಅನಕ್ಷರಸ್ಥರಲ್ಲೂ ರಸಿಕರಿದ್ದಾರೆ, ಕವಿ ಹೃದಯಿಗಳಿದ್ದಾರೆ ಎಂಬುದಕ್ಕೆ ಅದೊಂದು ಜೀವಂತ ಸಾಕ್ಷಿ. ಸಾಹಿತ್ಯ ವಿದ್ಯಾರ್ಥಿಯಾಗಿದ್ದ ನಾನು ಬಡಗಿ ಈಶ್ವರಾಚಾರಿಯ ಮಾತನ್ನು ಮರೆತಿಲ್ಲ.ಕಣ್ಣ ಮುಂದೆ ಹಾಡು ಹಗಲೇ ಭೀಕರ ಕೊಲೆ

ಅದೇ ನನ್ನ ಹಳ್ಳಿಯಲ್ಲಿ ಆಗ ನಾನು ಹನ್ನೊಂದು ವರ್ಷದ ಪ್ರಾಥಮಿಕ ಆರನೇ ತರಗತಿ ವಿದ್ಯಾರ್ಥಿ. ನನ್ನ ಪಕ್ಕದ ಪಕ್ಕದ ಮನೆಯ ಬಡ ರೈತನಿಗೂ ಶ್ರೀಮಂತ ಜಮೀನುದಾರನೊಬ್ಬನಿಗೂ ಯಾವುದೋ ಜಮೀನು ಬಗ್ಗೆ ಜಗಳ. ಆ ಬಡ ರೈತ ಆಗಾಗ್ಗೆ ಕೂಗಾಡುತ್ತಿದ್ದ, ಬೈಯುತ್ತಿದ್ದ; ಜಮೀನುದಾರನ ಮನೆಯವರೂ ಸುಮ್ಮನಿರುತ್ತಿರಲಿಲ್ಲ. ಆಗಾಗ್ಗೆ ಕೈ ಕೈ ಮಿಲಾಯಿಸಿದ್ದುಂಟು. ಒಂದು ದಿನ ಆ ಬಡವ ಬೆಳಗಿನ ಜಾವದಿಂದಲೇ ಕೂಗಿ ಕೂಗಿ ಸವಾಲು ಹಾಕುತ್ತಿದ್ದ; ಬಹು ಅಶ್ಲೀಲ ಪದಗಳನ್ನು ಬಳಸುತ್ತಿದ್ದ- ‘ಸೂಳೇ ಮಕ್ಳಾ’, ‘ತಾಯಿಗ್ಗಂಡ್ರಾ’ ಇತ್ಯಾದಿ. ಅವನು ಆ ದಿನ ಕುಡಿದಿದ್ದನೋ ಏನೋ ತಿಳೀಯದು. ಆ ದಿನ ಅವನು ಜಮೀನ್ದಾರನಿಗೆ ಅಂತಿಮ ಸವಾಲು ಹಾಕಿ ಎಚ್ಚರಿಕೆ ಕೊಟ್ಟಿದ್ದನೋ ಏನೋ? ಅಂದು ಬೆಳಿಗ್ಗೆ ಹತ್ತರ ಹೊತ್ತಿಗೆ ಅವನು ಮಸೆದ ಎರಡು ದೊಡ್ಡ ಕುಡುಗೋಲುಗಳನ್ನು ಪರಸ್ಪರ ತಾಕಿಸುತ್ತ ಒಬ್ಬ ಬಂಧುವಿನ ಜೊತೆ ನನ್ನ ಮನೆಯ ಇನ್ನೊಂದು ಬದಿಯ ಊರ ಪ್ರವೇಶ ದ್ವಾರಕ್ಕೆ ಹೊರಟರೆ ಅಲ್ಲಿ ಕನಿಷ್ಠ ಇಪ್ಪತ್ತು ಮೂವತ್ತು ರೈತರು ಕೈಲಿ ದೊಡ್ಡ ಬಡಗೆಗಳನ್ನು ಹಿಡಿದು ಅವರೂ ಸವಾಲು ಹಾಕುತ್ತಿದ್ದರು. ನಾನು ಇತರರ ಜೊತೆ ನನ್ನ ಮನೆ ಮುಂದೆ ನಿಂತು ನೋಡುತ್ತಿದ್ದರೆ ರೈತ ಮತ್ತು ಅವನ ಜೊತೆಗಾರ ಇಬ್ಬರೂ ಮಸೆದ ಕುಡುಗೋಲುಗಳನ್ನು ಹಿಡಿದು ಜನರ ಮೇಲೆ ಬೀಳುತ್ತಿದ್ದಂತೆ ಆ ಜನ ಅವರನ್ನು ಬಡಿದರು. ಐದು ನಿಮಿಷಗಳಲ್ಲಿ ಹೊಡೆದವರೆಲ್ಲ ಊರು ಬಿಟ್ಟು ಓಡಿ ಹೋದರು. ಅವನ ಮನೆಯವರು ಆ ರೈತನನ್ನು ಎತ್ತಿ ತಂದು ಅಲ್ಲೇ ಇದ್ದ ವೀರಭದ್ರನ ಗುಡಿ ಮುಂದೆ ಮಲಗಿಸಿದರು. ಅವನಿಗೆ ಮಾರಣಾಂತಿಕ ಗಾಯಗಳಾಗಿ ಮೈಯಿಂದ ಸಿಕ್ಕಾಪಟ್ಟೆ ರಕ್ತ ಸೋರುತ್ತಿತ್ತು. ಅವನ ಜೊತೆಗಾರನಿಗೂ ಪೆಟ್ಟುಗಳು ಬಿದ್ದಿದ್ದುವು. ಆ ತೀವ್ರ ಗಾಯಗೊಂಡವನಿಗೆ ಯಾವುದೇ ಉಪಚಾರವೂ ನಡೆಯಲಿಲ್ಲ. ಅವನ ಇಬ್ಬರು ಚಿಕ್ಕ ಮಕ್ಕಳು, ಹೆಂಡತಿ ಬಂದು ಏನೋ ಔಷಧ ಹಾಕಿದರೆಂದು ಕಾಣುತ್ತದೆ. (ಅದು ಹಳ್ಳಿ ಔಷಧಿ ಅಥವಾ ಮದ್ದು), ಅವನು ಆ ದೇವಸ್ಥಾನದ ಮುಂದೆ ಒಂದು ವಾರ ಇಪ್ಪತ್ತನಾಲ್ಕು ಗಂಟೆಯೂ ನರಳಿ ಕೂಗಿ ಕರೆದು ಸತ್ತ. ಆಗ ‘ಇಂಗ್ಲಿಷ್ ಔಸ್ತಿ’ ಜನಗಳಿಗೆ ಗೊತ್ತೇ ಇರಲಿಲ್ಲ. ಅವನನ್ನು ಬಡಿದು ಕೊಂದವರು ಒಂದು ತಿಂಗಳ ಬಳಿಕ ವಾಪಸ್ ಮನೆಗಳಿಗೆ ಬಂದರು. ಯಾವುದೇ ಮೊಕದ್ದಮೆಯೂ ದಾಖಲಾಗಲಿಲ್ಲ. ಅಂದು ನನ್ನ ಸಹಾನುಭೂತಿ ರೈತನ ಪರವಾಗಿತ್ತು.

ಬಾಲಕನ ದೇಹ - ಸರ್ಪಕ್ಕೆ ಸಿಂಹಾಸನ

ಸುಮಾರು 1959-60ರಲ್ಲಿ ನಾನು ಮೈಸೂರಿನ ಯುವರಾಜಾ ಕಾಲೇಜಿನಲ್ಲಿ ಅಧ್ಯಾಪಕನಾಗಿದ್ದಾಗ ಒಂದು ದಿನ ಮಧ್ಯಾಹ್ನ ಕುಕ್ಕನಹಳ್ಳಿಯ ಕೆರೆಯ ಹಿಂಭಾಗದಲ್ಲಿರುವ ಸರಸ್ವತಿಪುರಕ್ಕೆ ಹೋಗುತ್ತಿದ್ದೆ. ಕೆರೆ ಆರಂಭದಲ್ಲೇ ರೈಲ್ವೆ ಹಳಿ ಪಕ್ಕ ಒಂದು ವಿದ್ಯಾರ್ಥಿನಿಲಯ. ಅಲ್ಲಿದ್ದ ಕಾವಲುಗಾರ ಧಡಧಡ ಓಡಿ ಬಂದು ಗಾಬರಿಯಿಂದ ನನಗೆ ಹೇಳಿದ್ದು. ಅಂದು ಅವನು ಮಗನ ಜೊತೆ ಊಟ ಮಾಡಿ ಅಲ್ಲೇ ಅಂಗಳದಲ್ಲಿ ಮಲಗಿದ್ದ. ಅವನು ನಿದ್ದೆ ಮಧ್ಯೆ ಎಚ್ಚರಗೊಂಡು ಹೊರಬಂದು ಹಾಸ್ಟಲ್ ಒಳಕ್ಕೆ ಹೋಗುತ್ತಿದ್ದಂತೆ ತಲೆ ಮೇಲು ಮಾಡಿಕೊಂಡು ಅಂಗಾತ ಮಲಗಿದ್ದ ಹುಡುಗನ ದೇಹದ ಮೇಲೆ ಇಡೀ ಕಾಲಿನಿಂದ ಎದೆಯವರೆಗೆ ಒಂದು ನಾಗರಹಾವು ಮಲಗಿ ತನ್ನ ಹೆಡೆಯನ್ನು ಅವನ ತಲೆ ಮೇಲೆ ಎತ್ತಿತ್ತು. ಅದನ್ನು ನೋಡುತ್ತಿದ್ದಂತೆ ಅವನು ಸ್ತಬ್ಧನಾಗಿ ನಿಂತುಬಿಟ್ಟ. ಓಡಿಸಿದರೆ ಅದು ಹುಡುಗನನ್ನು ಕಚ್ಚಬಹುದು. ಸುಮ್ಮನಿದ್ದರೂ ಕಚ್ಚಬಹುದು. ಅಷ್ಟರಲ್ಲಿ ಯಾರೋ ಬಂದಂತಾಗಿ ಹಾವು ತಾನೇ ಹೆಡೆ ಮಡಿಚಿ ಹೋಯ್ತು.ಒಳಗೆ ಬಂದವನಿಗೆ ಆ ಕಾವಲುಗಾರ ಈ ಘಟನೆಯನ್ನು ಹೆದರಿ ಹೆದರಿ ಹೇಳುತ್ತಿದ್ದರೆ, ‘ನಿನ್ನ ಮಗ ಮುಂದೆ ದೊಡ್ಡವನಾಗುತ್ತಾನೆ’ ಎಂದು ಸಮಾಧಾನ ಪಡಿಸಿದ. ಈ ಘಟನೆ ನಡೆದ ಹತ್ತು ನಿಮಿಷಗಳಲ್ಲಿ ಹೋದ ನನಗೆ ಅವನು ಹೇಳಿದ್ದು- ‘ಹಾವು ಹೋದ ಮೇಲೆ ಹುಡುಗನನ್ನು ಎತ್ತಿ ಬಾಚಿ ತಬ್ಬಿಕೊಂಡೆ, ಮುಖವೆಲ್ಲ ಬೆವರಿತ್ತು. ನನ್ನ ಹುಡುಗ ಮುಂದೆ ದೊಡ್ಡ ಮನುಷ್ಯ ಆಗುತ್ತಾನೋ ಇಲ್ಲವೋ ಅವನು ಬದುಕಿದನಲ್ಲ, ಅಷ್ಟೇ ಸಾಕು’ ಇಂತಹ ಘಟನೆಯನ್ನು ನಾನು ಇನ್ನೊಂದನ್ನು ಕೇಳಿಯೇ ಇಲ್ಲ.ಸರ್ಪ ದರ್ಶನ

ಹಳ್ಳಿಯಲ್ಲಿ (ಚನ್ನಗಿರಿ ತಾಲೂಕು ನೀತಿಗೆರೆ) ನನ್ನ ತಂದೆ ಯಾರದೋ ಮನೆಯಲ್ಲಿ ಸಂಸಾರ ಸಮೇತ ವಾಸವಾಗಿದ್ದರು.ಆಗ ಎಂಟನೇ ವಯಸ್ಸಿನ ನಾನು ಪ್ರಾಥಮಿಕ ಶಾಲೆ ಎರಡನೇ ತರಗತಿ ವಿದ್ಯಾರ್ಥಿ. ಆ ಪುಟ್ಟ ಕರಿಯ ಹೆಂಚಿನ ಮನೆಯ ಹಿಂದೆ ಹಿತ್ತಲು- ಅದಕ್ಕೊಂದು ಬೇಲಿ. ಒಂದು ದಿನ ಬೆಳಿಗ್ಗೆ ನಾವು ಹಿತ್ತಲಿನ ಬಾಗಿಲನ್ನು ತೆರೆದು ನೋಡುತ್ತಿದ್ದಂತೆ ಅಲ್ಲೊಂದು ದೊಡ್ಡ ನಾಗರ ಹಾವು ತನ್ನ ಹೆಡೆ ಎತ್ತಿ ನಿಂತಿತ್ತು. ಆಗ ನಾನೂ ಸೇರಿದಂತೆ ನನ್ನ ತಂದೆ, ತಾಯಿ, ಅಕ್ಕ ಎಲ್ಲರೂ ಅದಕ್ಕೆ ಹತ್ತಡಿ ದೂರದಲ್ಲಿ ನಿಂತು ಕೈಮುಗಿದು ನೋಡುತ್ತಿದ್ದೆವು. ಯಾರಿಗೂ ಭಯವಿರಲಿಲ್ಲ. ಕೆಲವು ನಿಮಿಷಗಳಾದ ಮೇಲೆ ಅದು ಹೊರಟೇ ಹೋಯಿತು. ಅದರ ಹೆಡೆಯ ರೇಖಾಚಿತ್ರಗಳು ಮಿಟುಕಿಸುತ್ತಿದ್ದ ಕಣ್ಣುಗಳು, ಚಾಚುತ್ತಿದ್ದ ನಾಲಗೆ ಇವೆಲ್ಲ ಕಣ್ಣಿಗೆ ಕಟ್ಟಿದಂತಿದೆ. ಹಳ್ಳಿಗಳಲ್ಲಿ ನಾನು ನಿಜವಾದ ನಾಗರಹಾವು, ಕೇರೆ ಹಾವು, ಚೇಳುಗಳನ್ನು ನೋಡಿದ್ದು ನೂರಾರು. ಆದರೆ ಮೈಸೂರಿನಲ್ಲಿ ನನಗೆ ಆದ ಇನ್ನೊಂದು ಅನುಭವ ತೀರ ವಿಶೇಷವಾದದ್ದು. 1961-62ರ ಕಾಲ ಅದು. ನಾನು ಆಗ ಜೀವನದುದ್ದಕ್ಕೂ ಬ್ರಹ್ಮಚಾರಿಯಾಗಿಯೇ ಉಳಿದು ವಿನೋಬಾ ಭಾವೆಯವರಂತೆ ‘ಭೂದಾನ ಚಳವಳಿ’ಗೆ ತೊಡಗಿಸಿಕೊಳ್ಳುವ ಸಂಕಲ್ಪ ಮಾಡಿದ್ದೆ. ಅವರನ್ನು ನಾನು ಹುಣಸೂರು- ಮೈಸೂರು ರಸ್ತೆಯಲ್ಲಿ ಭೇಟಿ ಮಾಡಿ ಅವರ ಒಪ್ಪಿಗೆ ಪಡೆದಿದ್ದೆ. ಮದುವೆ ವಯಸ್ಸಾಗಿದ್ದ ನನಗೆ ಮದುವೆ ಮಾಡಬೇಕೆಂಬ ಬಯಕೆ ನನ್ನ ತಂದೆ ತಾಯ್ಗಳದ್ದು. ಎಲ್ಲರಿಂದಲೂ ನನಗೆ ಬುದ್ಧಿವಾದ ಹೇಳಿಸಿದ್ದರು. ಆಗಲೇ ನನಗೆ ಬ್ರಹ್ಮಚಾರಿಯಾಗಿ, ಉದ್ದಕ್ಕೂ ನಿಜವಾದ ಬ್ರಹ್ಮಚಾರಿಯಾಗಿರುವುದು ಕಷ್ಟವೆಂದು ಅನ್ನಿಸಿತ್ತು. ಆ ತುಯ್ದಾಟದಿಂದ ನಾನು ಹೊರಬಂದು ಒಂದು ದಿನ ದೃಢ ಸಂಕಲ್ಪ ಮಾಡಿ ಸರಸ್ವತೀಪುರದಲ್ಲಿದ್ದ ಡಾ. ಜಿ.ಎಸ್. ಶಿವರುದ್ರಪ್ಪ ಮತ್ತು ಶ್ರೀಮತಿ ರುದ್ರಾಣಿಯವರಿಗೆ ತಿಳಿಸಿದಾಗ ಅವರು ಬಹು ಸಂತೋಷಪಟ್ಟರು. ಅವರ ಮನೆಯಿಂದ ರಾತ್ರಿ ಹತ್ತು ಗಂಟೆಗೆ ಸಮೀಪದ ನನ್ನ ಮನೆಗೆ ಬಂದು ಬಾಗಿಲು ತಟ್ಟಿದೆ. ನನ್ನ ತಂಗಿ ಅಂಗಳದ ದೀಪ ಹಾಕುತ್ತಿದ್ದಂತೆ ನೋಡುತ್ತೇವೆ- ನನಗೂ ಮುಂದಿನ ಬಾಗಿಲಿಗೂ ಮಧ್ಯೆ ಒಂದು ಸರ್ಪ ಹೆಡೆ ಎತ್ತಿ ನಿಂತಿದ್ದು ಹಾಗೇ ಹೋಯ್ತು. ನನ್ನ ಮದುವೆ ನಿರ್ಧಾರ ನನ್ನ ಅವ್ವ, ಅಯ್ಯರನ್ನು ಆನಂದಪರವಶರನ್ನಾಗಿಸಿತು. ಆ ದಿನ ವಯಸ್ಕರಾಗಿದ್ದ ಅವರು ಚೆನ್ನಾಗಿ ನಿದ್ದೆ ಮಾಡಿರಬೇಕು. ಆದಷ್ಟು ಬೇಗ ಮದುವೆ ಆಗಲಿ ಎಂದು ರಾತ್ರಿಯೆಲ್ಲ ನಾನು ಚಡಪಡಿಸಿರಬೇಕು.‘ಸಿರುಗ್ಲ’

ದಾವಣಗೆರೆಯ ಪ್ರೌಢ ಶಾಲಾ ಸಹ ವಿದ್ಯಾರ್ಥಿ, ಅಲ್ಲಿಯ ಜಯದೇವ ಉಚಿತ ವಿದ್ಯಾರ್ಥಿ ನಿಲಯದಲ್ಲಿ ಸಹವಾಸಿ ಗೆಳೆಯ ಕರಿಸಿದ್ದಪ್ಪ ಎಂಬಾತ ಬಹಳ ತಮಾಷೆಗಾರ. ಒಂದು ದಿನ ಅವನು ಇದ್ದಕ್ಕಿದ್ದಂತೆ ‘ಸಿರುಗ್ಲ’ ಎಂಬ ನಗೆ ಬಾಂಬ್ ಆಸ್ಫೋಟಿಸಿದ. ಆ ಪದಕ್ಕೆ ಅರ್ಥವಿಲ್ಲದಿದ್ದರೂ ಅವನು ಅದನ್ನು ಉಚ್ಚರಿಸಿದ ರೀತಿ ಅತ್ಯಂತ ವಿಚಿತ್ರವಾಗಿತ್ತು. ನಾವೆಲ್ಲ ಅದನ್ನು ಕೇಳಿ ಬಿದ್ದು ಬಿದ್ದು ನಕ್ಕಿದ್ದೆವು, ನಕ್ಕು ನಕ್ಕು ಬಿದ್ದಿದ್ದೆವು. ಬೇರೆ ಯಾರೂ ‘ಸಿರುಗ್ಲ’ ಎಂದರೆ ನಗು ಬರುತ್ತಿರಲಿಲ್ಲ - ಅವನು ಅದನ್ನು ಹೇಳಿದ ಕೂಡಲೆ ಎಲ್ಲರೂ ಗೊಳ್ಳೆಂದು ನಗುತ್ತಿದ್ದರು. ಅವನ ಆ ಪದದ ಉಚ್ಚಾರ ಮಾತ್ರ ಅನನುಕರಣೀಯ. ಆ ವಿದ್ಯಾರ್ಥಿನಿಲಯದಲ್ಲಿ ರಾತ್ರಿ ಎಲ್ಲರೂ ಊಟಕ್ಕೆ ಕುಳಿತಿರುವಾಗ ಜೋಳದ ಮುದ್ದೆ, ಸಾರು ಬಡಿಸುವವರೆಗೆ ವಿದ್ಯಾರ್ಥಿಗಳು ಒಂದೊಂದು ವಚನ ಹೇಳುತ್ತಿರಬೇಕಾಗಿತ್ತು. ನಮಗೆ ‘ಬಾಯ್ ಹರ್ಟ್’ (by heart) ಆಗಿದ್ದ ‘ಅಯ್ಯಾ ಎಂದೊಡೆ ಸ್ವರ್ಗ ಎಲವೋ ಎಂದೊಡೆ ನರಕ’ ಎಂಬ ವಚನವನ್ನು ನಾನು ಹೇಳುವಾಗ ಆ ದಿನ ಜಗಳ ಮಾಡಿದ್ದವನನ್ನು ನೋಡುತ್ತ ಅವನೆಡೆ ಕೈಚಾಚುತ್ತ ‘ಎಲವೋ ಎಂದೆಡೆ ನರಕ’ ಎಂದು ಹೇಳಿ, ತಕ್ಷಣ ಇನ್ನೊಬ್ಬನನ್ನು ನೋಡುತ್ತ ‘ಅಯ್ಯಾ ಎಂದಡೆ ಸ್ವರ್ಗ’ ಎಂದು ಹೇಳಿ ಮುಂದುವರಿಸುತ್ತಿದ್ದೆ. ‘ಎಲವೋ’ ಎನ್ನಿಸಿಕೊಂಡವನಿಗೂ ಖುಷಿ- ಸಂಜೆ ಸ್ವಲ್ಪ ಮಂಕಾಗಿದ್ದ ನಮ್ಮಿಬ್ಬರ ಗೆಳೆತನ ಮತ್ತೆ ಹಿಂದಿನಂತೆ ಹೊಳೆಯಲಾರಂಭವಾಗುತ್ತಿತ್ತು.ಕತ್ತೆಗಳಿಗೆ ಚಪ್ಪಲಿ ಏಟು

ಮೇಲೆ ಹೇಳಿದ ಹಾಸ್ಟಲ್ 1947-48ರಲ್ಲಿ ನಗರದ ಹೊರಗಿತ್ತು- ಅದು ಹಿಂದೆ ಸ್ಮಶಾನವಾಗಿತ್ತೆಂದೂ ರಾತ್ರಿ ಅದರ ಮೈದಾನದಲ್ಲಿ ದೆವ್ವಗಳು ಬಂದು ಅಡ್ಡಾಡುತ್ತವೆಂದೂ ವದಂತಿ ಇತ್ತು. ರಾತ್ರಿ ಸಿನಿಮಾದ ಮೊದಲ ಷೋ ನೋಡಿಕೊಂಡು ಕತ್ತಲಲ್ಲಿ ಬರುತ್ತಿರುವಾಗ ನಾವು ಕೈಯಲ್ಲಿ ಚಪ್ಪಲಿ ಹಿಡಿದು ಎದೆ ಡವ ಡವ ಹೊಡೆಯುತ್ತ ಬರುತ್ತಿದ್ದೆವು. ಒಂದು ದಿನ ರಾತ್ರಿ ಚಪ್ಪಲಿ ಹಿಡಿದು ಬರುತ್ತಿರುವಾಗ ಒಂದು ಮೂಲೆಯಲ್ಲಿ ಕತ್ತೆಗಳು ನಿಂತಿರುವ ಸೂಚನೆ ಕಾಣಿಸಿತು. ಹಾಸ್ಟಲಿಗೆ ಬಂದ ಸ್ವಲ್ಪ ಹೊತ್ತಿನಲ್ಲೇ ಅವುಗಳಲ್ಲಿ ಒಂದು ಕಿರುಚಿತು.‘ದೆವ್ವ ಕಿರುಚ್ತಿದೆ ಬನ್ರೋ’ ಎಂದು ಒಬ್ಬ ಗೆಳೆಯ ಚಪ್ಪಲಿ ಹಿಡಿದು ನಿಲ್ಲುತ್ತಿದ್ದಂತೆ ಆರೆಂಟು ಧೈರ್ಯಶಾಲಿಗಳು ಅವನ ಜೊತೆ ಹೊರಟರು. ಅವರಲ್ಲಿ ನಾನೂ ಒಬ್ಬ ಅಲ್ಲ. ಅವರು ಹೋಗಿ ಅವುಗಳನ್ನು ಹುಡುಕಿ ಚೆನ್ನಾಗಿ ಹೊಡೆದು ಓಡಾಡಿಸಿ ಸುಸ್ತಾಗಿ ವಾಪಸ್ ಬಂದು ಊಟ ಮಾಡಿ ಮಲಗಿದರು. ಬೆಳಿಗ್ಗೆ ಎದ್ದು ಹೋಗಿ ನೋಡಿದರೆ ಅದೇ ಕತ್ತೆಗಳು ಒಂದು ಮೂಲೆಯಲ್ಲಿ ಏನೋ ತಿನ್ನುತ್ತ ನಿಂತಿದ್ದವು. ದೆವ್ವಗಳು ಹಾಸ್ಟಲ್ ಮೈದಾನದಿಂದ ಓಡಿ ಹೋಗಿರಲಿಲ್ಲ- ನಮಗೆಲ್ಲ ನಿರಾಸೆಯಾಯಿತಾದರೂ ಹೊಡೆದು ಬಂದವರಿಗೆ ಹೊಡೆದ ಖುಷಿ ಮಾಯವಾಗಿರಲಿಲ್ಲ. ತಮ್ಮ ಸಾಹಸದ ಬಗ್ಗೆ ಅವರು ಬಹಳ ‘ಝಂಭ’ ಕೊಚ್ಚಿಕೊಳ್ಳುತ್ತಿದ್ದರು.ಪಾದ ಕಮಲಗಳಿಗೆ ಸಿಗರೇಟು ಅಭಿಷೇಕ

ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರು ನಡೆಸುತ್ತಿದ್ದ ಮೈಸೂರು ಸುತ್ತೂರು ಹಾಸ್ಟಲಿಗೆ 1950ರಲ್ಲಿ ನಾನು ಅರ್ಜಿ ಹಾಕಿದ್ದೆ. ಆ ಕಾಲಕ್ಕೆ ಉಚ್ಚ ಶಿಕ್ಷಣ ಎಂದೊಡನೆ ಮೈಸೂರು, ಉಚಿತ ವಿದ್ಯಾರ್ಥಿ ನಿಲಯ ಎಂದೊಡನೆ ಸುತ್ತೂರು ಹಾಸ್ಟಲ್ ನೆನಪಿಗೆ ಬರುತ್ತಿದ್ದವು. ಆ ಹಾಸ್ಟಲಿಗೆ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಪ್ರವೇಶವಿದ್ದಿತಾದರೂ ಸುಳ್ಳು ಹೇಳಿ ಶ್ರೀಮಂತ ಹುಡುಗರೂ ಸೇರಿಕೊಳ್ಳುತ್ತಿದ್ದರು. ಅರ್ಜಿ ಹಾಕಿದವರು ಶ್ರೀಮಂತರಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಸ್ವಾಮೀಜಿಯವರು ಬಳಸುತ್ತಿದ್ದ ತಂತ್ರ ಇದು. ಅರ್ಜಿ ಹಾಕಿದವರು ಒಂದೆರಡು ತಿಂಗಳು ಕಾಯಬೇಕಿತ್ತು. ಅವರು ಪ್ರತಿವಾರ ಒಮ್ಮೆ ಅಥವಾ ಎರಡು ಬಾರಿ ಹೋಗಿ ಸ್ವಾಮೀಜಿಯವರನ್ನು ಕೇಳಿಕೊಂಡರೂ ಅವರು ಸೀಟು ಕೊಡುತ್ತಿರಲಿಲ್ಲ. ಶ್ರೀಮಂತ ಹುಡುಗರು ಬೇಸರಪಟ್ಟುಕೊಂಡು ಅವರ ಬಳಿ ಹೋಗುವುದು ಬಿಟ್ಟು ಊಟ ವಸತಿಗಳಿಗೆ ಹಣ ಪಡೆಯುತ್ತಿದ್ದ ಕಾಲೇಜ್ ಹಾಸ್ಟಲ್ ಸೇರುತ್ತಿದ್ದರು.ನನ್ನ ಜೊತೆ ಅರ್ಜಿ ಹಾಕಿದ್ದ ಒಬ್ಬ ವಿದ್ಯಾರ್ಥಿ ಅರ್ಜಿ ಹಾಕಿದ್ದ ಎರಡು ಮೂರು ವಾರಗಳಲ್ಲಿ ಮೂರು ನಾಲ್ಕು ಬಾರಿ ಭೇಟಿ ಮಾಡಿದ್ದ. ಒಂದು ದಿನ ಅವನು ಸ್ವಾಮಿಗಳನ್ನು ಕಂಡು ಅವರ ಪಾದಗಳಿಗೆ ಶಿರಸಾಷ್ಟಾಂಗ ಮಾಡಲು ಅಥವಾ ‘ಅಡ್ಡ ಬೀಳಲು’ ಬಾಗಿದಾಗ ಅವನ ಜೇಬಿನಲ್ಲಿದ್ದ ಸಿಗರೇಟುಗಳು ಸ್ವಾಮೀಜಿಯವರ ಪಾದಗಳ ಮೇಲೆ ಅಥವಾ ನೆಲದ ಮೇಲೆ ಬಿದ್ದುವು. ಅವರು ನೋಡಿಯೂ ನೋಡದವರಂತೆ ಭಾವಿಸಿ ಅವನು ಮುಂದಿನವಾರ ಹೋದಾಗ ಅವನಿಗೆ ಸೀಟು ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ನನಗೆ ಸೀಟು ದೊರೆತು ಮೂರು ವರ್ಷ ಆ ವಿದ್ಯಾರ್ಥಿ ನಿಲಯದಲ್ಲಿ ಉಚಿತ ಊಟ ಮಾಡುತ್ತ ಸಮೀಪದ ಮನೆಯೊಂದರಲ್ಲಿ ಬಾಡಿಗೆ ರೂಮಿನಲ್ಲಿದ್ದು ಅಧ್ಯಯನ ಮುಗಿಸಿದೆ. ಹೇಗಿದೆ ಶ್ರೀ ಪೂಜ್ಯರ ಪಾದಕಮಲಗಳಿಗೆ ಶಿಷ್ಯನ ಸಿಗರೇಟು ಅಭ್ಯಂಜನ ಅಥವಾ ಅಭಿಷೇಕ! (ಆ ವಿದ್ಯಾರ್ಥಿ ಶ್ರೀಮಂತ ಕುಟುಂಬದವನು).ಕೊಂಡು ಸೆರೆಮನೆಯಲ್ಲಿಟ್ಟಿದ್ದ ಕಿಟಲ್ ನಿಘಂಟು

ನಾನು ಬಿ.ಎ. ಆನರ್ಸ್ ಮುಗಿಸಿ ಕನ್ನಡ ಅಧ್ಯಾಪಕನಾದ ಆರಂಭದ ದಿನಗಳು (1953). ತುಮಕೂರಿನ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ನಾಗಪ್ಪನವರು ಅಲ್ಲಿನ ಗ್ರಂಥಾಲಯದ ಮುಂಭಾಗದಲ್ಲಿ ಒಂದು ಕೋಣೆಯಲ್ಲಿ ವಾಸವಾಗಿದ್ದು ಅಲ್ಲಿ ನನಗೆ ವಾಸಕ್ಕೆ ಅವಕಾಶ ಮಾಡಿಕೊಟ್ಟರು. ಊಟ ತಿಂಡಿ ಎಲ್ಲ ಹೋಟೆಲ್‌ನಲ್ಲಿ. ಅವರಿಗೆ ನನ್ನನ್ನು ಕಂಡರೆ ವಾತ್ಸಲ್ಯ- ಚಿಕ್ಕವಯಸ್ಸಲ್ಲದೆ ನಾನು ವೀರಶೈವ ಎಂಬುದೂ ಕಾರಣ: ಅದನ್ನು ನನಗೆ ನೇರವಾಗಿ ಹೇಳಿದ್ದರು. ಒಂದು ಬೆಳಗಿನ ಜಾವ ಅವರು ಎದ್ದಾಗ ನಾನು ತಲೆಗೆ ಕಂಬಳಿ ಮುಚ್ಚಿಕೊಂಡು ಮಲಗಿ ನಿದ್ದೆ ಮಾಡುತ್ತಿದ್ದೆ. ದೀಪದ ಬೆಳಕಿನಿಂದ ಆಕರ್ಷಿತವಾದ ಒಂದು ರೆಕ್ಕೆಯ ಹುಳ- ದಪ್ಪನೆಯ ದೀಪದ ಚಿಟ್ಟೆ ನನ್ನ ಕಂಬಳಿ ಮೇಲೆ ಕುಳಿತಿದ್ದುದನ್ನು ಕಂಡು ಅದು ನನ್ನನ್ನು ಕಚ್ಚಬಹುದೆಂದು ತಮ್ಮ ದೊಡ್ಡ ಟವಲ್ ಮಡಿಸಿ ಅದಕ್ಕೆ ಹೊಡೆದಾಗ ನನಗೆ ಏಟು ಬಿದ್ದು ಎಚ್ಚರಗೊಂಡು ಎದ್ದೆ- ಪ್ರಿನ್ಸಿಪಾಲರು ನನ್ನನ್ನು ಟವಲ್‌ನಿಂದ ಹೊಡೆದುದು ಕಂಡು ಭಯವಾಯ್ತು.

ಅವರು ‘ಮೂರ್ತಿ, ಸಾರಿ, ನಿನ್ನನ್ನು ಹುಳ ಕಚ್ಚೀತೆಂದು ಹೊಡೆದೆ, ಮಲಗಿಕೋ’ ಎಂದು ಹೇಳಿ ಒದ್ದಾಡುತ್ತಿದ್ದ ಆ ಹುಳವನ್ನು ಬೂಟಿನಿಂದ ತುಳಿದು ಹೊರಹೋದರು. ನಾನೆಲ್ಲಿ ಅವರನ್ನು ಕನಸಲ್ಲಿ ಬಯ್ದಿದ್ದೆನೋ ಎಂಬ ಭಯ ಕಾಡಿ ಮರೆಯಾಯ್ತು. ಒಬ್ಬ ಅಧ್ಯಾಪಕ ಪ್ರಿನ್ಸಿಪಾಲರಿಂದ ಬೈಸಿಕೊಂಡಿರಬಹುದು; ಆದರೆ ಹೊಡೆಸಿಕೊಂಡದ್ದು ಅದೇ ಮೊದಲು! ನಾನಂತೂ ಕೇಳಿಲ್ಲ. ಅದೇ ಕೊಠಡಿಯಲ್ಲಿದ್ದಾಗ ಒಂದು ಭಾನುವಾರ- ಆ ದಿನ ಪ್ರೊ. ನಾಗಪ್ಪನವರು ಸಾಮಾನ್ಯವಾಗಿ ಬೆಂಗಳೂರಿಗೆ ಹೋಗುತ್ತಿದ್ದರು- ಒಬ್ಬ ಪರಿಚಿತ ಚಿಕ್ಕ ಪುಸ್ತಕ ವ್ಯಾಪಾರಿ ಬಂದು ಗುಟ್ಟಾಗಿ ತಾವು ದೊಡ್ಡ ಚೀಲದಲ್ಲಿ ತಂದಿದ್ದ ಕಿಟಲ್ ನಿಘಂಟನ್ನು ತೋರಿಸಿ ಅದನ್ನು ಇಷ್ಟಪಟ್ಟರೆ ಹದಿನೈದು ರೂಪಾಯಿಗೆ ಕೊಡುವುದಾಗಿ ತಿಳಿಸಿದರು. ಬೃಹತ್ ಕಿಟಲ್ ನಿಘಂಟು ಆ ಕಾಲಕ್ಕೆ ಅಲಭ್ಯವಾಗಿತ್ತು. ಅದು ಅಂದಿನ ಏಕೈಕ ಅಧಿಕೃತ ಕನ್ನಡ ನಿಘಂಟು. ನಾನು ತಕ್ಷಣ ಹಣ ಕೊಡುತ್ತಿದ್ದಂತೆ, ನಿಘಂಟನ್ನು ತಾವು ಕೊಟ್ಟುದನ್ನು ಯಾರಿಗೂ ಹೇಳಬಾರದೆಂದೂ ಯಾರಿಗೂ ತಿಳಿಸಬಾರದೆಂದೂ ಕರಾರು ಹಾಕಿದರು.ತುಮಕೂರಿನಲ್ಲಿರುವವರೆಗೆ ಅದನ್ನು ಯಾರೂ ಇಲ್ಲದಾಗ ತೆಗೆದು ನೋಡುತ್ತಿದ್ದೆ; ಸದಾ ಪೆಟ್ಟಗೆಯಲ್ಲಿಟ್ಟು ಬೀಗ ಹಾಕುತ್ತಿದ್ದೆ.ತುಮಕೂರಿನಿಂದ ಬೇಸಿಗೆ ರಜದಲ್ಲಿ ಅದನ್ನು ನನ್ನ ಹಳ್ಳಿಗೆ ತಂದು ತೋರಿಸಿದಾಗ ಅಲ್ಲಿನ ಜನ ಅದನ್ನು ಕೈಯಿಂದ ಎತ್ತಿ ಮುಟ್ಟಿ ಸವರಿ ಅಚ್ಚರಿಪಟ್ಟರು. ಅದರ ಗಾತ್ರವೇ ಅವರಿಗೊಂದು ವಿಸ್ಮಯ. ತುಮಕೂರಿನಿಂದ ವರ್ಗವಾಗಿ ಕೋಲಾರಕ್ಕೆ ಹೋದ ಮೇಲೆಯೇ ಅದು ಜನರ ಕಣ್ಣಿಗೆ ಬಿದ್ದುದು. ಈಗಲೂ ಅದು ನನ್ನ ವಶದಲ್ಲಿದೆ. ಕಿಟಲ್ ನಿಘಂಟು ನಾಲ್ಕು ತಿಂಗಳು ಸೆರೆಯಲ್ಲಿತ್ತು. ಆ ವ್ಯಾಪಾರಿಯ ಕೈಗೆ ಆ ನಿಘಂಟು ಹೇಗೆ ಬಂತೋ ತಿಳಿಯದು. ಯಾರೋ ಕದ್ದು ತಂದು ಅದನ್ನು ಐದಾರು ರೂಪಾಯಿಗೆ ಕೊಟ್ಟಿರಬೇಕು. ಆಗಿನ ಐದು ರೂಪಾಯಿ ಈಗಿನ ಸಾವಿರ ರೂಪಾಯಿಗೆ ಸಮಾನ. ಆಗ ನನ್ನ ಮಾಸಿಕ ಸಂಬಳ ತಿಂಗಳಿಗೆ ನೂರು ರೂಪಾಯಿ; ಅದು ಆಗ ದೊಡ್ಡ ಮೊತ್ತ.Strict Non- Vegetarian ಆಗಿದ್ದ ಕಾಶ್ಮೀರಿ ಬ್ರಾಹ್ಮಣ!

1980ರಲ್ಲಿ ನಾನು ಅಮೆರಿಕದ ಇಲಿನಾಯ್, ವಿಶ್ವವಿದ್ಯಾಲಯದಲ್ಲಿ ನಡೆದ ಅಂತರರಾಷ್ಟ್ರೀಯ ಐತಿಹಾಸಿಕ ಭಾಷಾವಿಜ್ಞಾನದ ವಿಭಾಗೀಯ ಗೋಷ್ಠಿಯ ಅಧ್ಯಕ್ಷನಾಗಿ ಆಹ್ವಾನಿತನಾಗಿ ಹೋದಾಗ ಅಲ್ಲಿ ಕೆಲಸ ಮಾಡುತ್ತಿದ್ದ ಡಾ. ಬಿ.ಬಿ. ಖಚ್ರು ಎಂಬುವರು ನನ್ನನ್ನು ರಾತ್ರಿ ಭೋಜನಕ್ಕೆ ಆಹ್ವಾನಿಸಿದರು. ಅವರು 1955ರಲ್ಲಿ ಪುಣೆಯ ಬೇಸಿಗೆ ಭಾಷಾವಿಜ್ಞಾನದ ಶಿಬಿರದಲ್ಲಿ ನನ್ನಂತೆ ಭಾಗಿಯಾಗಿದ್ದರು (ಆಗ ನಾನು ಕೋಲಾರದಲ್ಲಿ ಕನ್ನಡ ಅಧ್ಯಾಪಕ). ಅವರು ತಮ್ಮ ಸಹಶಿಬಿರಾರ್ಥಿ ಯಮುನಾ ಕೇಳ್ಕರ್ ಎಂಬ ಮರಾಠಿ ಯುವತಿಯನ್ನು ಮದುವೆಯಾಗಿ ಅಮೆರಿಕದಲ್ಲಿ ನೆಲೆಸಿದ್ದರು. ರಾತ್ರಿ ಯಥಾಪ್ರಕಾರ ಹರಟೆ ಆದ ಮೇಲೆ ಊಟಕ್ಕೆ ಮುನ್ನ ಡಾ. ಖಚ್ರು ಕೇಳಿದರು. Dr. Murthy, are you a vegetarian? ನಾನು ಹೇಳಿದೆ Yes, Dr. Kachru, how about you? ಅವರು ಹೇಳಿದ ಉತ್ತರ ಇದು- You see Dr. Murthy, I am a Kashmiri Brahmin. Iam a strict non vegetarian. ನನಗೆ ನಗು ತಡೆಯಲಾಗಲಿಲ್ಲ. ತಕ್ಷಣ ಕೇಳಿದೆ  - How about beef eating? ತಕ್ಷಣ ಆತ ಹೇಳಿದ್ದು  Indian Cow is sacred, but not the American Cow?  ಖುಷಿಯಿಂದ ಅವರ ಮನೆಯಲ್ಲಿ ಸಸ್ಯಾಹಾರ ಊಟ ಮಾಡಿದೆ.ನಾನು Strict Vegetarian ಎಂಬ ಮಾತು ಕೇಳಿದ್ದೆ; Strict Not Vegetarian ಮಾತು ಕೇಳಿಯೇ ಇರಲಿಲ್ಲ. ಕಾಶ್ಮೀರಿ ಬ್ರಾಹ್ಮಣರು ಮಾಂಸಾಹಾರಿಗಳು; ಬಂಗಾಳದ ಬ್ರಾಹ್ಮಣರು ಮಾಂಸಾಹಾರಿಗಳಲ್ಲ; ಮೀನನ್ನು ಮಾತ್ರ ತಿನ್ನುತ್ತಾರೆ. ಇಬ್ಬರಿಗೂ ಗೋಮಾಂಸ ಭಕ್ಷಣೆ ತ್ಯಾಜ್ಯ.ನನ್ನ ಬಾಯಿಂದ ಹೆಂಡತಿ ಹೆಸರು ಹೇಳಿಸಿದ್ದು

1964ರಲ್ಲಿ ನನ್ನ ಮದುವೆ ನಡೆದುದು ಅದೇ ನನ್ನ ಹುಟ್ಟೂರು ಹಿರೇ ಕೋಗಲೂರಿನಲ್ಲಿ, (ಆಗ ನನ್ನ ವಯಸ್ಸು 33 ವರ್ಷ). ನನ್ನ ಹೆಂಡತಿ ದಾವಣಗೆರೆ ನಗರದವಳು, ಬಿ.ಎ. ಪದವೀಧರೆ. ಹಳ್ಳಿಯಲ್ಲಿ ಸರಳ ರೀತಿಯಲ್ಲಿ ಮದುವೆ ನಡೆಯಿತು. ಆ ಮದುವೆಗೆ ಇಡೀ ಊರಿನ ಜನ ಸಂಭ್ರಮದಿಂದ ಬಂದಿದ್ದರು- ತಮ್ಮ ಊರಿನ ಪದವೀಧರ, ಮೈಸೂರು ನಗರದ ಕಾಲೇಜು ಮೇಷ್ಟ್ರು ಎಂಬ ಭಾವನೆ ಅವರದು.ಧಾರಾಮುಹೂರ್ತದಲ್ಲಿ ನಾನು ಇನ್ನೇನು ತಾಳಿ ಕಟ್ಟಬೇಕು- ಅಲ್ಲಿದ್ದ ಹೆಂಗಸರು ‘ಮೂರ್ತ್ಯಪ್ಪ ನಿನ್ನೆಣ್ತಿ ಎಸರೇಳು’ ಎಂದರು.ಆ ಕಾಲಕ್ಕೆ ಗಂಡು ಹೆಣ್ಣಿನ, ಹೆಣ್ಣು ಗಂಡಿನ ಹೆಸರನ್ನು ಹೇಳಲು ಬಹಳ ನಾಚಿಕೆಪಟ್ಟುಕೊಳ್ಳುತ್ತಿದ್ದರು. ಒತ್ತಾಯ ಮಾಡಿ ಹೆಸರು ಹೇಳಿಸುವಲ್ಲಿ ವಿಶೇಷವಾಗಿ ಹೆಂಗಸರಿಗೆ ಬಹು ಸಂತೋಷ. ನಾನು ಏನೇ ಮಾಡಿದರೂ ಹೆಸರು ಹೇಳದೆ ‘ಗೊತ್ತಿಲ್ಲವ್ವಾ’, ‘ಗೊತ್ತಿಲ್ಲವ್ವಾ’ ಎಂದೆ. ಒಬ್ಬ ಹೆಣ್ಣು ಮಗಳು ‘ಮೂರ್ತ್ಯಪ್ಪ ಪ್ಯಾಟೆ ಹುಡುಗ. ಅವನು ಬೇಕೆಂದೇ ತಮಾಸೆ ಮಾಡ್ತಿದಾನೆ’ ಎಂದಳು. ಅಂತೂ ಕೊನೆಗೂ ಹೆಸರು ಹೇಳಿ ತಾಳಿ ಕಟ್ಟಿದೆ. ಮದುವೆ ಆದಮೇಲೆ ಮಾವನ ಮನೆಗೆ ದಾವಣಗೆರೆಗೆ ಹೋದೆ. ಅಲ್ಲಿ ನನ್ನ ಮಾವನ ಸಮೀಪದ ಬಂಧುಗಳು ನಮ್ಮಿಬ್ಬರನ್ನೂ ಔಪಚಾರಿಕವಾಗಿ ಮನೆಗೆ ಆಹ್ವಾನಿಸಿದಾಗ ನಾವು ಹೋದೆವು. ಅಲ್ಲಿದ್ದ ನಾಲ್ಕಾರು ಹೆಂಗಸರು ಹೆಂಡತಿ ಹೆಸರನ್ನು ಹೇಳಲು ನನ್ನನ್ನು ಕೇಳಿದರು. ಆಗ ನಾನು ಅವರನ್ನು ಹೆಚ್ಚು ಹೊತ್ತು ಕಾಯಿಸದೆ ‘ವಿಶಾಲಾ...’ ಎಂದು ಹೇಳಿ ‘ಕ್ಸೀ’ ಎಂದು ಸೀನಿದೆ.ಅವರಿಗೆ ಬಹು ಖುಷಿಯಾಯ್ತು. ನನ್ನ ಹೆಂಡತಿಗೂ ಖುಷಿಯಾಗಿರಬೇಕು; ಖುಷಿಯಾಗಿರುತ್ತದೆ. ಅವಳಿಂದಲೂ ಒತ್ತಾಯ ಮಾಡಿ ಹೆಸರು ಹೇಳಿಸಿದ ಮೇಲೆ ಅವಳಿಗೆ ಕುಂಕುಮ ಇಟ್ಟು, ತೆಂಗಿನಕಾಯಿ, ಬಾಳೆ ಹಣ್ಣು, ಎಲೆ ಅಡಿಕೆ, ಜಾಕೆಟ್ ಬಟ್ಟೆ ಕೊಟ್ಟು ಕಳುಹಿಸಿದರು.ಇವು ಕೆಲವು ನನ್ನ ಮರೆಯಾಗದ ನೆನಪುಗಳು. ಒಂದೊಂದು ನೆನಪಿನ ಬಗ್ಗೆಯೂ ಚಿಕ್ಕ ಚಿಕ್ಕ ಪ್ರಬಂಧವನ್ನೇ ಬರೆಯಬಹುದು.ಇಲ್ಲಿ ಸಂಕ್ಷಿಪ್ತವಾಗಿ ಅವುಗಳನ್ನು ಓದುಗರ ಗಮನಕ್ಕೆ ತರುತ್ತಿದ್ದೇನೆ. ಅವರೂ ತಮ್ಮ ಹಿಂದಿನ ನೆನಪಿನ ರಸಗಳಿಗೆಗಳನ್ನು ನೆನಪಿಸಿಕೊಂಡು ಆನಂದಿಸಲಿ ಎಂದು ಹಾರೈಸುತ್ತೇನೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.