ಮರೆಯಲಾಗದ ಮಾಸ್ತರ ಎ.ಎಸ್.ಹಿಪ್ಪರಗಿ

7

ಮರೆಯಲಾಗದ ಮಾಸ್ತರ ಎ.ಎಸ್.ಹಿಪ್ಪರಗಿ

Published:
Updated:

ಅವರ ಮಾತೇ ಹಾಗೆ. ಮುತ್ತಿನ ಹಾರದಂತೆ.. ಸ್ಫಟಿಕದ ಶಲಾಕೆಯಂತೆ.. ಮಾಣಿಕ್ಯದ ದೀಪ್ತಿಯಂತೆ. ಅವರ ಮಾತು ಕೇಳಿದ ಜನ ನಿಸ್ಸಂಶಯವಾಗಿ ಮೆಚ್ಚಿ ಮಾತನಾಡುತ್ತಿದ್ದರು. ಅವರ ಮಾತುಗಳಲ್ಲಿ ಜೀವನಾನುಭವ ಇರುತ್ತಿತ್ತು. ಬಂಡಾಯದ ಬಿಸಿಯೊಂದಿಗೆ ಆಳವಾದ ಅಧ್ಯಯನ, ವೈಚಾರಿಕತೆಯ ನೆಲೆಗಟ್ಟು ಸೇರಿರುತ್ತಿತ್ತು. ಜೊತೆಗೆ ಎಲ್ಲರಿಗೂ ಅರ್ಥವಾಗುವಂತೆ ಸ್ಪಷ್ಟವಾಗಿ -ಸರಳವಾಗಿ -ರೋಚಕವಾಗಿ ಮಾತನಾಡುವ ಕಲೆ ಅವರಿಗೆ ಕರಗತವಾಗಿತ್ತು. ಅದಕ್ಕೆಂದೇ ಅವರ ಮಾತು ಕೇಳಲು ಜನ ಧಾವಿಸಿ ಬರುತ್ತಿದ್ದರು. ಇದು ವಿಜಾಪುರದ ಪ್ರೊಫೆಸರ್ ಎ.ಎಸ್. ಹಿಪ್ಪರಗಿ ಅವರ ಸ್ಥೂಲ ಪರಿಚಯ.ಅವರ ಮಾತಿನಲ್ಲಿ ಅಂತಹುದೇನಿತ್ತು ಎಂದು ಕೆಲವರು ಕೇಳಬಹುದು. ಅವರ ಮಾತಿನಲ್ಲಿ ಆಡಂಬರ ಇರಲಿಲ್ಲ, ನಾಟಕೀಯತೆ ಇರಲಿಲ್ಲ; ಇವೆಲ್ಲವನ್ನು ಖಡಾಖಂಡಿತವಾಗಿ ಖಂಡಿಸುವ ಬಂಡಾಯ ಇತ್ತು. ಅಲ್ಲಿ ಜಾನಪದ ಸೊಗಡಿತ್ತು. ವಿಶಾಲ ಓದಿನ ವಿದ್ವತ್ತು-ಅದನ್ನು ವಿಮರ್ಶೆಯ ಒರೆಗೆ ಹಚ್ಚುವ ತಾಕತ್ತು... ಹೀಗೆ ಏನೆಲ್ಲ ಇರುತ್ತಿತ್ತು.ಅಪರೂಪಕ್ಕೊಬ್ಬರು ಜೀವನವಿಡೀ ಓದುತ್ತಲೇ ಇರುತ್ತಾರೆ. ಅಂಥವರಲ್ಲಿ  ಪ್ರೊ.ಹಿಪ್ಪರಗಿ ಅವರೂ ಒಬ್ಬರು. ನನಗೆ ಓದುವುದು ಹಾಗೂ ಪಾಠ ಮಾಡುವುದು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಅದಕ್ಕಾಗಿ ಶಕ್ತಿ ಇರುವ ತನಕ ನಾನು ಅದನ್ನೇ ಮಾಡುತ್ತೇನೆ ಎಂಬ ವಿನಯ ಅವರದು. ಅದರಂತೆ ಅವರು ಜೀವನದ ಕೊನೆಯ ಗಳಿಗೆಯವರೆಗೆ ನಡೆದುಕೊಂಡರೂ ಕೂಡ.ಹಿಪ್ಪರಗಿ ಅವರದ್ದು ಬಹು ದೊಡ್ಡ ಮೌಖಿಕ ಪರಂಪರೆ. ಮಾತಿಗಿರುವ ಪ್ರತಿಕ್ಷಣದ ಸ್ಪಂದನ ಬರಹಕ್ಕಿಲ್ಲ ಎನ್ನುತ್ತಿದ್ದರವರು. ಬರಹ ಓದುಗರನ್ನು ತಲುಪಲು ಒಂದಷ್ಟು ಸಮಯಬೇಕು.  ಕೆಲವೊಮ್ಮೆ ಹೆಚ್ಚು ಸಮಯ ತೆಗೆದುಕೊಂಡಾಗ ಅದು ಹಳತಾಗುವುದೂ ಉಂಟು. ಮಾತು ಹಾಗಲ್ಲ. ಅದು ತಕ್ಷಣ ಕೇಳುಗರನ್ನು ತಲುಪುತ್ತದೆ. ತಕ್ಷಣವೇ ಪ್ರತಿಸ್ಪಂದನವನ್ನು ಪಡೆಯಬಹುದು. ಹೀಗಾಗಿ ಹಿಪ್ಪರಗಿಯವರಿಗೆ ಬರಹಕ್ಕಿಂತ ಮಾತೇ ಮೆಚ್ಚು! ಹಾಗೆಂದು ಬರೆದೇ ಇಲ್ಲ ಎಂದು ಹೇಳುವಂತಿಲ್ಲ.ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದಾಗ ಅವರು ಸಮಾಜವನ್ನು ತಿದ್ದಲು ಹಲವು ನಾಟಕಗಳನ್ನು ಬರೆದದ್ದುಂಟು. ಅದೂ ಬರೆಯಬೇಕೆಂದು ಬರೆದದ್ದಲ್ಲ. ನಾಟಕ ಆಡಿಸಬೇಕು ಎಂದು ಬರೆದದ್ದು. ಅವು ಸಮಾಜದಲ್ಲಿ  ಸಕಾಲಿಕ ಹಾಗೂ ಸಕಾರಾತ್ಮಕ ಪರಿವರ್ತನೆಯನ್ನು ತಂದದ್ದುಂಟು.ಕೆಲವು ವರ್ಷಗಳ ಹಿಂದೆ, ವಿಜಾಪುರ ಜಿಲ್ಲಾ ಪ್ರೌಢ ಶಾಲಾ ಕನ್ನಡ ವಿಷಯ ಬೋಧಕರು, ಹಿಪ್ಪರಗಿಯವರಿಂದ ಒತ್ತಾಯಪೂರ್ವಕವಾಗಿ ಎರಡು ಪುಸ್ತಕಗಳನ್ನು ಬರೆಯಿಸಿ ಪ್ರಕಟಿಸಿದ್ದಾರೆ. `ಕನ್ನಡ ಪ್ರೌಢ ವ್ಯಾಕರಣ' ಹಾಗೂ `ಛಂದೋವಾಹಿನಿ' ಎಂಬ ಈ ಪುಸ್ತಕಗಳು ವ್ಯಾಕರಣ ಅಭ್ಯಾಸಿಗಳಿಗೆ ಕೈದೀವಿಗೆ.ಅವರು ಡಿಸೆಂಬರ್ 15ರಂದು ನಿಧನರಾದರು. ಅದಕ್ಕೂ ಆರು ದಿನ ಮೊದಲು ವಿಜಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕವಿ ಮುದ್ದಣನ ಸಾಹಿತ್ಯದ ಕುರಿತಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಧುರ ಮಾತುಗಳನ್ನು ಆಡಿದ್ದರು. ಅದೇ ಅವರ ಕೊನೆಯ ಕಾರ್ಯಕ್ರಮ ಆಗುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಅಂದಿನ ಅವರ ಉತ್ಸಾಹಪೂರಿತ ಮಾತುಗಳನ್ನು ಕೇಳಿದವರು ಪ್ರೊ.ಹಿಪ್ಪರಗಿಯವರು ಶತಾಯುಷಿಗಳಾಗುತ್ತಾರೆ ಎಂದು ಕೊಂಡಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು.ಅಮೀನಪ್ಪ ಸಂಗನಬಸಪ್ಪ ಹಿಪ್ಪರಗಿ ಹುಟ್ಟಿದ್ದು ವಿಜಾಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಸಣ್ಣ ಗ್ರಾಮ ಕಪನೂರಿನಲ್ಲಿ. 1927ರ ಏಪ್ರಿಲ್ 20ರಂದು. 

1941ರಲ್ಲಿ ಆ ಊರಿನ ಜನಸಂಖ್ಯೆ 148. 14 ವರ್ಷದ ಬಾಲಕನಾದ ಅಮೀನಪ್ಪನಿಗೆ ಆಗಲೇ ಆ ಊರೆಲ್ಲ ಪರಿಚಿತ. ಜನಗಣತಿಗೆ ಬಂದ ಶಿಕ್ಷಕರಿಗೆ ಈ ಬಾಲಕನೇ ಊರಿನ ಎಲ್ಲ ಮಾಹಿತಿಯನ್ನೂ ನೀಡಿಬಿಟ್ಟ. ಊರಲ್ಲಿ 73 ಜನ ಗಂಡಸರು 75 ಜನ ಹೆಂಗಸರು ಇದ್ದಾರೆ ಎಂದು ಹೇಳಿ ಅವರ ಹೆಸರು, ವಯಸ್ಸು ಮುಂತಾದ ವಿವರಗಳನ್ನೆಲ್ಲ ಅಮೀನಪ್ಪನೇ ಹೇಳಿ ಬರೆಯಿಸಿದ. ಆ ಶಿಕ್ಷಕರಿಗೆ ಪ್ರತಿ ಮನೆಗೂ ಹೋಗಿ ಮಾಹಿತಿ ಸಂಗ್ರಹಿಸುವ ತಾಪತ್ರಯವೇ ಇರಲಿಲ್ಲ. ಚಿಕ್ಕ ವಯಸ್ಸಿನಲ್ಲೆಯೇ ಅಮೀನಪ್ಪನಿಗೆ ಅಷ್ಟೊಂದು ಸಾಮರ್ಥ್ಯ ಹೇಗೆ ಬಂದಿತ್ತೋ ಗೊತ್ತಿಲ್ಲ!  ಕ್ಷಣಾರ್ಧದಲ್ಲಿ ಆತ ದಿನನಿತ್ಯದ ವ್ಯವಹಾರಗಳ ಲೆಕ್ಕವನ್ನು ಹೇಳಿಬಿಡುತ್ತಿದ್ದ.ಸಾಹಿತ್ಯ ವಲಯದಲ್ಲಿ ಹಿಪ್ಪರಗಿಯವರನ್ನು ಬಂಡಾಯ ಸಾಹಿತಿ ಎಂದೇ ಗುರುತಿಸುತ್ತಾರೆ. ಈ ಬಂಡಾಯ ಮನೋಭಾವ ಅವರಲ್ಲಿ ಬಂದುದು ಅವರ ತಂದೆಯಿಂದ. ಬಲದಿನ್ನಿ ನಾಡಗೌಡರ ಜಮೀನನ್ನು ಉಳುಮೆ ಮಾಡುತ್ತಿದ್ದ ಅವರ ತಂದೆ ಸಂಗನಬಸಪ್ಪ, ನಾಡಗೌಡರಿಗೇ ಎದುರಾಗಿ ನಿಂತವನು. ಉಳುಮೆ ಮಾಡುತ್ತಿರುವ ಜಮೀನಿಗೆ ಬದಲಾಗಿ, ಅದಕ್ಕಿಂತ ದೊಡ್ಡ ಜಮೀನನ್ನು ಬೇರೆ ಕಡೆಗೆ ಕೊಡುತ್ತೇವೆ ಎಂಬ ಮಾಲೀಕರ ಪ್ರಸ್ತಾವ ತಳ್ಳಿಹಾಕಿ, ಪಡಬಾರದ ಪಾಡು ಪಟ್ಟವನು. ಧಣಿಗಳೆಂದರೆ ಉಳಿದ ರೈತರೆಲ್ಲ ದನಿಯನ್ನೇ ಎತ್ತದಿರುವ ಕಾಲದಲ್ಲಿ, ಅವರೆದರು ಸಂಗನಬಸಪ್ಪ ಎದೆ ಸೆಟಿಸಿ ಮಾತನಾಡುತ್ತಿದ್ದ. ಅದರಿಂದ ರೈತನಾದ ಆತ ಕೂಲಿಕಾರನಾಗಬೇಕಾಯಿತು. ಆದರೆ ಆತ ಅದಕ್ಕೆ ಹೆದರಿ ಎಂದೂ ತನ್ನ ಸ್ವಾಭಿಮಾನವನ್ನು ಒತ್ತೆ ಇಟ್ಟವನಲ್ಲ.ಅಮೀನಪ್ಪ 4ನೇ ತರಗತಿ ಪಾಸಾಗುವ ವೇಳೆಗೆ ತನ್ನ ತಂದೆಯನ್ನು ಕಳೆದುಕೊಂಡ. ಮುಂದಿನ ಶಿಕ್ಷಣಕ್ಕೆ ತಡೆಯುಂಟಾದಾಗ ಇವನ ಪ್ರತಿಭೆಯನ್ನು ಗುರುತಿಸಿದ ಸೋಮಪ್ಪ ಎಂಬುವರು ಮುಂದೆ ಓದಲು ಸಹಾಯ ಮಾಡಿದರು. 7ನೇ ತರಗತಿಯಲ್ಲಿ ಅಮೀನಪ್ಪ ಮುದ್ದೇಬಿಹಾಳ ಕೇಂದ್ರಕ್ಕೇ ಮೊದಲಿಗನಾಗಿ ಪಾಸಾದ. ಆಮೇಲೆ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿ ವೃತ್ತಿ ಜೀವನವನ್ನು ಆರಂಭಮಾಡಿದ.  ಕಲಿಸುವುದರೊಂದಿಗೆ ಕಲಿಯುವಿಕೆಯೂ ಮುಂದುವರೆಯಿತು.  ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ, ಆಗಿನ ಮುಂಬಯಿ ರಾಜ್ಯಕ್ಕೇ ಮೊದಲಿಗನಾಗಿ ಉತ್ತೀರ್ಣನಾದ.ಆ ನಂತರ ಆತ ಹಿಂತಿರುಗಿ ನೋಡಿದ್ದೇ ಇಲ್ಲ. ಬಿ.ಎ. ಹಾಗೂ ಎಂ.ಎ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ. ಎಂ.ಎ. ಪ್ರಥಮ ದರ್ಜೆಯಲ್ಲಿ ಪಾಸಾದ ಹಿಪ್ಪರಗಿಯವರಿಗೆ ದೊಡ್ಡ ಕಾಲೇಜೊಂದರಲ್ಲಿ ಉಪನ್ಯಾಸಕನಾಗುವ ಅವಕಾಶಗಳು ಇದ್ದರೂ, ಢವಳಗಿಯಂಥ ಸಣ್ಣ ಊರಲ್ಲಿ 1965ರಲ್ಲಿ `ಶ್ರೀ ಮಡಿವಾಳೇಶ್ವರ ವಿದ್ಯಾವರ್ಧಕ ಸಂಘ' ಹೆಸರಿನ ಪ್ರೌಢ ಶಾಲೆ ಆರಂಭಿಸಿ ಅದರ ಮುಖ್ಯೋಪಾಧ್ಯಾಯರಾದರು. ಆ ಶಾಲೆಯ 100 ಜನ ಬಡ ಮಕ್ಕಳಿಗೆ `ಮಡಿವಾಳೇಶ್ವರ ಉಚಿತ ಪ್ರಸಾದ ನಿಲಯ' ಪ್ರಾರಂಭಿಸಿದರು.ಮುಂದೆ ಅವರು ವಿಜಾಪುರದ ಶ್ರಿ ಸಂಗನಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕರಾಗಿ ನಿವೃತ್ತರಾಗುವವರೆಗೂ ಸೇವೆ ಸಲ್ಲಿಸಿದರು. ಕೊನೆಯವರೆಗೂ, ಅವರು ಸೇವೆ ಸಲ್ಲಿಸಿದ ಇಂಗಳಗೇರಿ, ಢವಳಗಿ, ಮಡಿಕೇಶ್ವರ ಮುಂತಾದ ಊರುಗಳನ್ನು ಅವರೂ ಮರೆತಿರಲಿಲ್ಲ. ಆ ಊರುಗಳ ಜನರೂ ಹಿಪ್ಪರಗಿಯವರನ್ನು ಮರೆತಿರಲಿಲ್ಲ. ಪ್ರತಿ ಊರಿನ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಗಳ ಅಭಿವೃದ್ಧಿಗೆ ಅವರು ಪ್ರಾಮಾಣಿಕವಾಗಿ ದುಡಿದಿದ್ದರು.ಅವರ ಹುಟ್ಟೂರು ಮುದ್ದೇಬಿಹಾಳ ತಾಲೂಕಿನ ಕಪನೂರ. ಅವರು ಬಹಳ ಕಾಲ ಸೇವೆ ಮಾಡಿದ್ದು ವಿಜಾಪುರದಲ್ಲಿ. ವಿಚಿತ್ರವೆಂದರೆ ಈ ಎರಡೂ ಊರಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿಲ್ಲ. ಅದು ನೆರವೇರಿದ್ದು ಅವರೇ ಸ್ಥಾಪಿಸಿದ ಢವಳಗಿ ಪ್ರೌಢ ಶಾಲೆಯ ಆವರಣದಲ್ಲಿ.ವಿಜಾಪುರದಲ್ಲಿ ನಡೆದ ರಾಜ್ಯ ಮಟ್ಟದ ಎರಡನೆಯ ಬಂಡಾಯ ಸಾಹಿತ್ಯ ಸಮ್ಮೇಳನದ ರೂವಾರಿ ಪ್ರೊ. ಹಿಪ್ಪರಗಿ. ಬಂಡಾಯದ ಬಾವುಟ ಹಾರಿಸಿದ ಬಸವಣ್ಣನವರ ಭೂಮಿಯಲ್ಲವೇ ಇದು?  ಜಾತ್ಯತೀತ ಮೆರೆದ ಸೂಫಿಗಳ ನಾಡಲ್ಲವೇ ಇದು? ಅದಕ್ಕೇ ಇಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ ಭಾರಿ ಯಶಸ್ವಿಯಾಯಿತು ಎಂದಿದ್ದರು ಹಿಪ್ಪರಗಿಯವರು.ಎಂ.ಎ. ಪ್ರಥಮ ದರ್ಜೆಯಲ್ಲಿ ಪಾಸಾದ ನಂತರ ಅವರನ್ನು ಧಾರವಾಡದಲ್ಲೇ ಉಳಿಸಿಕೊಳ್ಳಬೇಕೆಂಬ ಇಚ್ಛೆ ಡಾ.ಆರ್.ಸಿ. ಹಿರೇಮಠರಿಗಿತ್ತು. ಹಾಗೆಂದು ಅವರು ಹಿಪ್ಪರಗಿ ಅವರಿಗೆ ಆಹ್ವಾನವನ್ನೂ ನೀಡಿದ್ದರು. ಗ್ರಾಮೀಣ ಸಂಸ್ಕೃತಿಗೆ ಒಗ್ಗಿಕೊಂಡ ಹಿಪ್ಪರಗಿ ಅವರಿಗೆ ಧಾರವಾಡ ಪಟ್ಟಣದ ಸಂಸ್ಕೃತಿ ಹಿಡಿಸಲಿಲ್ಲ. ಎಂ.ಎ. ಮುಗಿಸಲು ಅಲ್ಲಿ ಕಳೆದ ಸಮಯವೇ ಅವರಿಗೆ ಹೆಚ್ಚೆನಿಸಿತ್ತು.ಮತ್ತೆ ಹಳ್ಳಿಗೆ ಮರಳಲು ಮನಸ್ಸು ಚಡಪಡಿಸುತ್ತಿತ್ತು. ಧಾರವಾಡದಲ್ಲಿಯೇ ಅವರು ಉಳಿದಿದ್ದರೆ; ಬಹಳ ಅವಕಾಶಗಳು ಅವರಿಗೆ ಲಭಿಸುತ್ತಿದ್ದವು. ಅವಕಾಶಗಳಿಗಾಗಿ-ಪ್ರಶಸ್ತಿಗಳಿಗಾಗಿ ಅವರೆಂದೂ ರಾಜಿಮಾಡಿಕೊಂಡವರಲ್ಲ. ಅವರು ವಿಜಾಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು.ಅವರಿಗೆ ಆರು ಜನ ಮಕ್ಕಳು; ಮೂರು ಗಂಡು, ಮೂರು ಹೆಣ್ಣು. ಹೀಗೆ ಯಾರಾದರೂ ಹೇಳಿದರೆ ಅವರು ಒಪ್ಪುತ್ತಿರಲಿಲ್ಲ. ಏಕೆಂದರೆ ಅವರು ತಮ್ಮ ಅಪಾರ ಶಿಷ್ಯಂದಿರನ್ನು ತಮ್ಮ ಮಕ್ಕಳಂತೆಯೇ ಪಾಲಿಸಿ-ಪೋಷಿಸಿದವರು. ತಮ್ಮ ಬಡ ಶಿಷ್ಯರಿಗೆ ಅವರು ವಿದ್ಯೆಯ ಜೊತೆಗೆ, ಹಣಕಾಸು ಸಹಿತ ಅನೇಕ ನೆರವು ನೀಡಿದ ಸಾಕಷ್ಟು ಉದಾಹರಣೆಗಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry