ಮರೆಯಲಾಗದ ಶಿಕ್ಷಕರು

7

ಮರೆಯಲಾಗದ ಶಿಕ್ಷಕರು

Published:
Updated:

ತ್ತೊಂದು ಶಿಕ್ಷಕರ ದಿನಾಚರಣೆ ಬಂದಿದೆ. ಎಂಥವರಿಗಾದರೂ ಒಮ್ಮೆ ತಮ್ಮ ಬಾಲ್ಯದ ದಿನಗಳು, ಶಾಲೆ, ಟೀಚರುಗಳ ನೆನಪು ಒಮ್ಮೆ ಕಣ್ಮುಂದೆ ಹಾದು ಹೋಗದೇ ಇರದು. ಏನೂ ಅಲ್ಲದ ಮಕ್ಕಳು ಕ್ರಮೇಣ ಏನೇನೋ ಆಗಿ ಬೆಳೆದು ನಿಲ್ಲುತ್ತಾರೆ. ಆದರೆ ಭವಿಷ್ಯದ ಪ್ರಜೆಗಳನ್ನು ರೂಪಿಸುವ, ಒಬ್ಬ ಶಿಕ್ಷಕರು ಮಾತ್ರ ಶಿಕ್ಷಕರಾಗಿಯೇ ಉಳಿದಿರುತ್ತಾರೆ.

ಎಷ್ಟೋ ಜನ ವಿದ್ಯಾರ್ಥಿಗಳು ಶಿಕ್ಷಕರನ್ನು ಇನ್ನಿಲ್ಲದಂತೆ ಗೋಳು ಹೊಯ್ದುಕೊಂಡಿರುತ್ತಾರೆ. ಎಷ್ಟೋ ಸಲ ಶಿಕ್ಷಕರ ಕಣ್ಣಲ್ಲಿ ನೀರುಕ್ಕುವಂತೆ ನಡೆದುಕೊಂಡಿರುತ್ತಾರೆ. ಹಾಗೆ ಪಾಠ ಕಲಿಸುವ ಗುರುಗಳಿಗೇ ಕಾಟ ಕೊಟ್ಟ ಎಷ್ಟೋ ವಿದ್ಯಾರ್ಥಿಗಳು ಬೆಳೆಯುತ್ತಿದ್ದಂತೇ ಯಾರೂ ನಂಬದ ರೀತಿಯಲ್ಲಿ ದೊಡ್ಡ ಸ್ಥಾನಕ್ಕೇರಿದ, ಸಾಧನೆಗೈದ ಉದಾಹರಣೆಗಳಿವೆ.ಮಕ್ಕಳ ಮೇಲೆ ಹೆತ್ತವರಿಗೆ ಮಾತ್ರವಲ್ಲ ವರ್ಷಗಟ್ಟಲೆ ಅವರಿಗೆ ಬೋಧಿಸಿ, ಅವರ ವ್ಯಕ್ತಿತ್ವವನ್ನು ತಿದ್ದಿ ತೀಡುವ ಗುರುಗಳಿಗೂ ಒಂದು ತೆರೆನಾದ ಆಶಾಭಾವನೆಗಳಿರುತ್ತವೆ. ತುಂಬಾ ಚೆನ್ನಾಗಿ ಓದುತ್ತಿದ್ದ ಮಕ್ಕಳ ಬಗ್ಗೆ ಭವಿಷ್ಯದಲ್ಲಿ ಈತ ಒಳ್ಳೇ ಹೆಸರು ಮಾಡ್ತಾನೆ, ಮೇರುವ್ಯಕ್ತಿಯಾಗುತ್ತಾನೆ ಎಂಬ ವಿಶ್ವಾಸವಿರುತ್ತವೆ. ಅನೇಕ ಬಾರಿ ಅದು ನಿಜವಾದರೂ ಕೆಲವೊಮ್ಮೆ ಅವರ ನಿರೀಕ್ಷೆಗಳು ಹುಸಿಯಾದ ಪ್ರಸಂಗಗಳೂ ಜರುಗುತ್ತವೆ.

ಏನೇ ಆಗಲಿ ಶಿಕ್ಷಕರಿಗೆ ತಮ್ಮ ನೆಚ್ಚಿನ ಹಾಗೂ ತಮ್ಮನ್ನು ಕಾಡಿದ ವಿದ್ಯಾರ್ಥಿಗಳ ಬಗೆಗೆ ಕುತೂಹಲವಿದ್ದೇ ಇರುತ್ತದೆ. ಸಮಾಜದಲ್ಲಿ ಕೀರ್ತಿ ಸಂಪಾದಿಸಿದವರ ಬಗ್ಗೆ ‘ಇವನು ಅಥವಾ ಇವಳು ನನ್ನ ಸ್ಟೂಡೆಂಟ್’ ಎಂದು ಹೇಳಿಕೊಳ್ಳುವಾಗ ಶಿಕ್ಷಕರ ಮುಖದಲ್ಲಿ ಕಾಣುವ ಸಂತಸ, ಸಂಭ್ರಮಗಳಿರುತ್ತವಲ್ಲಾ... ಅದನ್ನು ವಿವರಿಸಲು ಅಸಾಧ್ಯ.

ಅಂತೆಯೇ ತಮಗೆ ವಿದ್ಯಾದಾನ ಮಾಡಿ, ಆ ಮೂಲಕ ಬದುಕು ರೂಪಿಸಿದ ಗುರುಗಳ ಬಗ್ಗೆ ಯಾರಿಗೇ ಆದರೂ ಕೃತಜ್ಞತಾಭಾವ ಮೂಡದೇ ಇರುವುದಿಲ್ಲ. ಹೀಗಿರುವಾಗ, ಪ್ರತ್ಯೇಕ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ, ಜನಪ್ರೀತಿ ಗಳಿಸಿರುವ ಸಾಧಕರು ತಮ್ಮ ಶಿಕ್ಷಣ-, ಶಿಕ್ಷಕರ ಬಗ್ಗೆ ಏನು ಹೇಳುತ್ತಾರೆ ಎಂಬುದರ ಝಲಕ್ ಇಲ್ಲಿದೆ...

ಪ್ರೀತಿ ಬದಲಿಗೆ ಮಾಹಿತಿ ಕೊಡುತ್ತಿದ್ದೇವೆ

ನಮ್ಮ ಕಾಲದಲ್ಲಿ ಅಭ್ಯಾಸ ಪಠ್ಯಕ್ಕಿಂತ ಮಾನವೀಯ ಸಂಬಂಧ ಮುಖ್ಯವಾಗಿತ್ತು. ಇಂದು ಗುರು ಎಂದರೆ ಮಾಹಿತಿ ಕೊಡುವ ವ್ಯವಸ್ಥೆ, ಶಿಷ್ಯ ಅಂದ್ರೆ ಮಾಹಿತಿ ಸಂಗ್ರಹಿಸುವ ವ್ಯವಸ್ಥೆ ಆಗಿದೆ. ಇವರಿಬ್ಬರಲ್ಲಿ ನಿಕಟವಾದ ಬಾಂಧವ್ಯ ಇಲ್ಲವಾಗಿದೆ. ಪ್ರೀತಿ ಇಲ್ಲ. ಎಲ್ಲಾ ಯಾಂತ್ರಿಕವಾಗುತ್ತಿದೆ ಎಂಬ ಆತಂಕ ನನ್ನದು.ಮಕ್ಕಳು ಏನು ಕೊಟ್ಟರೂ ತೆಗೆದುಕೊಳ್ಳುತ್ತಾರೆ. ಅವರು ಖಾಲಿಪಾತ್ರೆ ಇದ್ದಂತೆ. ನಾವು ಕೊಡುವವರು ಏನು ಕೊಡಬೇಕು, ಯಾರಿಗೆ ಕೊಡುತ್ತಿದ್ದೆವೆ ಎಂಬುದರ ಅರಿವಿರಬೇಕು. ಇಲ್ಲಿ ಮಕ್ಕಳದು ಯಾವುದೇ ತಪ್ಪಿಲ್ಲ. ನಮ್ಮ ಜವಾಬ್ದಾರಿ ಹೆಚ್ಚಿರಬೇಕು. ಶಾಲೆಗಳು ಉದ್ಯಮವಾಗಿವೆ. ಹಣ ಮಾಡುವ ವ್ಯವಸ್ಥೆಯಾಗಿದೆ. ಮಕ್ಕಳಿಗೆ ಶಿಕ್ಷಣ ಪ್ರದಾನ ಮಾಡುವ ಕಾಳಜಿ ಇಲ್ಲ ಅನ್ನಿಸುತ್ತದೆ.

ಅದಕ್ಕೆ ಮೂಲಭೂತವಾಗಿ ಅವುಗಳಲ್ಲಿರುವ ಕಲ್ಪನೆಯೇ ಕಾರಣ. ಮೊದಲೆಲ್ಲಾ ನಮ್ಮ ದೇಶದ ಬಗ್ಗೆ ಅಭಿಮಾನ, ಪ್ರೀತಿ ಮೂಡಿಸುತ್ತಿದ್ದ ಶಿಕ್ಷಣ ಪದ್ಧತಿ ಇತ್ತು. ಅದನ್ನು ದೇಶಿಯ, ರಾಷ್ಟ್ರೀಯ ಅಂತ ಹೆಸರಿಡುತ್ತಿದ್ದರು. ಈಗ ಅಂತರರಾಷ್ಟ್ರೀಯ, ಇಂಟರ್‌ನ್ಯಾಷನಲ್‌ ಎಂದೆಲ್ಲಾ ನಾಮಕರಣ ಮಾಡಿ ಅಲ್ಲಿ ಅಂತರರಾಷ್ಟ್ರೀಯ ಮಟ್ಟದ ವಿಷಯವನ್ನು ತುರುಕುತ್ತಿದ್ದಾರೆ. ಮೊದಲಿಗೆ ನಮ್ಮ ಹಳ್ಳಿಯ, ರಾಜ್ಯದ ವಿಷಯವನ್ನು ಬೋಧಿಸಬೇಕು.

ನಮ್ಮ ಭಾಷೆಯ ಬಗ್ಗೆ ಗೌರವ ಮೂಡದ ಹಾಗೆ ಜಗತ್ತಿನ ವಿಷಯ ಬೋಧಿಸಲಾಗುತ್ತಿದೆ. ಈಗ ಗ್ಲೋಬಲ್‌ ವಿಲೇಜ್‌ ಕಲ್ಪನೆ ಬಂದಿದೆ. ನಮ್ಮ ಹಳ್ಳಿ, ನಮ್ಮ ಕೇಂದ್ರ ಎಂಬುದು ಅವರಿಗೆ ಗೊತ್ತಾಗಬೇಕು. ಇಲ್ಲಿನ ಪರಿಸರ, ಸಮಸ್ಯೆ ಬಗ್ಗೆ ಅರಿವು ಉಂಟು ಮಾಡಬೇಕು. ಶಾಂತಿನಿಕೇತನ, ಕಾರಂತರ ಮಕ್ಕಳ ಶಾಲೆಯೂ ಅದನ್ನೇ ಮಾಡಲು ಹೊರಟಿದ್ದು. ನಾವು ಅದನ್ನೆಲ್ಲಾ ಮರೆತು ಅವರನ್ನು ದ್ವೀಪಕ್ಕೆ ಕರೆದುಕೊಂಡು ಹೋಗುತ್ತಿದ್ದೇವೆ.

ಇವತ್ತಿನ ಶಾಲೆಗಳಲ್ಲಿ ಎತ್ತರದ ಕಾಂಪೌಂಡ್‌ಗಳು ಕಾಣುತ್ತವೆ. ಹೊರ ಜಗತ್ತಿಗೂ, ಒಳ ಜಗತ್ತಿಗೂ ವ್ಯತ್ಯಾಸ ಇಲ್ಲದಂತೆ ನೋಡಿಕೊಳ್ಳುತ್ತೇವೆ. ನಾವೇ ಬೇರೆ ಎಂಬ ದ್ವೀಪ ಸಂಸ್ಕೃತಿ ಈಗ ಕಂಡು ಬರುತ್ತಿದೆ. ಬೋರ್ಡಿಂಗ್‌ ಶಾಲೆಗಳಂತೂ ಅಪ್ಪ ಅಮ್ಮ, ಅಜ್ಜ–ಅಜ್ಜಿಯಿಂದ ಮಕ್ಕಳನ್ನು ದೂರಮಾಡಿ, ಅವರನ್ನು ದ್ವೀಪದಲ್ಲಿ ಬೆಳಸುತ್ತಿವೆ ಎನಿಸುತ್ತದೆ.

ಮಕ್ಕಳಿಗೆ ಮುಖ್ಯವಾದದ್ದು ಪ್ರೀತಿ ವಾತ್ಸಲ್ಯ. ಅದನ್ನೇ ತಪ್ಪಿಸುತ್ತಿದ್ದೇವೆ. ನಮ್ಮ ಮಕ್ಕಳನ್ನು ಬೋರ್ಡಿಂಗ್‌ ಶಾಲೆಯಲ್ಲಿ ಓದಿಸುತ್ತಿದ್ದೇವೆ ಎಂಬುದೇ ಈಗ ಫ್ಯಾಷನ್‌ ಆಗಿದೆ. ಪ್ರೀತಿ ಬದಲಿಗೆ ಶಿಕ್ಷಣದ ಮಾಹಿತಿ ಕೊಡುತ್ತಿದ್ದೇವೆ. ಮಕ್ಕಳು ಬುದ್ಧಿವಂತರಾದರು ಎಂದು ಭ್ರಮಿಸುತ್ತಿದ್ದೇವೆ. ಅದು ಉತ್ತಮ ಶಿಕ್ಷಣವಲ್ಲ. ಮಕ್ಕಳನ್ನು ಪರಿಸರ, ಸಮಾಜದ ಮಧ್ಯೆ ಬೆಳಸಬೇಕು.ಪ್ರೌಢಶಾಲೆಯಲ್ಲಿ ನನಗೆ ಗಾಢವಾಗಿ ಪ್ರಭಾವ ಬೀರಿದ ಮೇಷ್ಟ್ರುಗಳಿದ್ದರು. ಅವರಲ್ಲಿ ಕನ್ನಡ ಕಲಿಸುತ್ತಿದ್ದ ನರಸಿಂಹಶಾಸ್ತ್ರಿ, ಗಣಿತದ ಮೇಷ್ಟ್ರು ಸಚ್ಚಿದಾನಂದ ಮೂರ್ತಿ ನೆನಪಿನಲ್ಲಿ ಉಳಿಯುತ್ತಾರೆ. ಮಕ್ಕಳ ಮೇಲೆ ಗಾಢವಾಗಿ ಪ್ರಭಾವ ಬೀರುವ ಹಂತ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ. ಆಗ ಉತ್ತಮ ಗುರುಗಳಿದ್ದರೆ ಮಕ್ಕಳ ಬದುಕು ಹಸನಾಗುತ್ತದೆ.

ನಾನು ಕಲಿತಿದ್ದ ಶಾಲೆಯಲ್ಲಿ ಮಕ್ಕಳನ್ನು ತುಂಬಾ ಹಚ್ಚಿಕೊಂಡಿದ್ದ, ತಾವು ಕಲಿಸುವ ವಿಷಯದ ಮೇಲಿನ ಪ್ರೀತಿ, ವೃತ್ತಿ ಗೌರವ ಇದ್ದ ಗುರುಗಳಿದ್ದರು. ಈ ಮೂರು ಗುಣಗಳು ಶಿಕ್ಷಕರಲ್ಲಿರಬೇಕು. ಅಂಥ ಗುರುಗಳೂ ಕೂಡ ಗಾಢವಾಗಿ ಪ್ರಭಾವ ಬೀರುತ್ತಾರೆ.

–ಎಚ್‌.ಎಸ್‌. ವೆಂಕಟೇಶಮೂರ್ತಿ, ಹಿರಿಯ ಸಾಹಿತಿ.

ಮಕ್ಕಳು ಬದಲಾಗಿದ್ದಾರೆ!

ಇಂದಿನ ಗುರು ಶಿಷ್ಯ ಪರಂಪರೆಯನ್ನು ನೆನಪಿಸಿಕೊಂಡರೆ ಭಯವಾಗುತ್ತದೆ. ಶಿಷ್ಯರನ್ನು ಬೆಂಬಲಿಸುವ ಮೂಲಕ ಆ ಕ್ಷೇತ್ರವನ್ನೇ ಒಂದು ಮಾಫಿಯಾ ಮಾಡಲು ಹೊರಟಿದ್ದಾರೆ. ಜಿ.ಪಿ. ರಾಜರತ್ನಂ, ಎ.ಆರ್‌. ಕೃಷ್ಣಶಾಸ್ತ್ರಿ ಅವರಂಥ ಒಳ್ಳೆ ಮೇಷ್ಟ್ರುಗಳಿದ್ದರು. ಈಗಲೂ ಇದ್ದಾರೆ. ಆದರೆ ಬೆರಳೆಣಿಕೆಷ್ಟು ಮಾತ್ರ. ಈಗ ಕಾಲ ಬದಲಾಗಿದೆ. ಗುರುಗಳೇ ಶಿಷ್ಯರಿಗೆ ‘ಬಿಲ್ಡ್ಅಪ್‌’ ಕೊಡುತ್ತಾರೆ. ಅದನ್ನು ದುರುಪಯೋಗಪಡಿಸಿಕೊಳ್ಳುವ ಮಕ್ಕಳು ಮಾಡಬಾರದ್ದನ್ನು ಮಾಡುತ್ತಾರೆ.ನನ್ನನ್ನು ಶ್ರೀನಿವಾಸರಾಜು ಅವರ ಶಿಷ್ಯ ಎಂದು ಗುರುತಿಸುತ್ತಾರೆ. ಅವರು ಸಾಹಿತ್ಯ ಪರಿಚಾರಿಕೆಯ ಕೊಂಡಿಯಾಗಿದ್ದವರು. ಆಡಂಬರ ಇಲ್ಲದೇ, ಪ್ರೀತಿಯಿಂದ ಕೆಲಸ ಮಾಡುತ್ತಿದ್ದರು. ಆಗಿನ ಕಾಲದ ಗುರುಗಳಿಗೆ ಇರುತ್ತಿದ್ದ ಬದ್ಧತೆ ಈಗಿನವರಲ್ಲಿ ಕಾಣುತ್ತಿಲ್ಲ. ನಿರೀಕ್ಷೆ ಇಲ್ಲದೆಯೇ ಕೆಲಸ ಮಾಡುವವರು ಕಡಿಮೆಯಾಗಿದ್ದಾರೆ. ಜಿ.ಎಸ್‌. ಶಿವರುದ್ರಪ್ಪ ಅವರಂಥ ಗುರುಗಳು ಸಾಹಿತ್ಯದ ಅಭಿರುಚಿ ಹೆಚ್ಚಿಸುವಲ್ಲಿ ಶ್ರಮವಹಿಸಿದ್ದನ್ನು ಇಂದಿಗೂ ನೆನಪಿಸಿಕೊಳ್ಳಬಹುದು.ನಾನೊಬ್ಬ ಮೇಷ್ಟ್ರು ಮಗನಾಗಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ಪ್ರಾಥಮಿಕ ಶಾಲೆ ಗುರುಗಳು ನಮಗೆ ಮುಗ್ಧತೆ, ನಿಷ್ಠುರವಾಗಿ ಕಲಿಸುತ್ತಿದ್ದರು. ಸಾಹಿತ್ಯದ ಅಭಿರುಚಿ ಹೆಚ್ಚಿಸುತ್ತಿದ್ದರು. ಆದರೆ ಈಗ ಸಾಹಿತ್ಯದತ್ತ ಒಲವು ಕಡಿಮೆಯಾಗಿದೆ. ಮಕ್ಕಳನ್ನು ಎಂಜಿನಿಯರ್‌, ವೈದ್ಯ ಹುದ್ದೆಗೆ ಕಳುಹಿಸಬೇಕೆಂಬ ತುಡಿತದಲ್ಲಿ ಸಾಹಿತ್ಯವನ್ನು ಕಡೆಗಣಿಸುತ್ತಿದ್ದಾರೆ.

ಇಂದು ಲೇಖಕನಾಗಲು ಬರುವವರಿಗೆ ಯಾರೂ ಮಾದರಿ ಇಲ್ಲ. ಸಾಹಿತ್ಯವನ್ನೇ ವೃತ್ತಿಯಾಗಿಸಿಕೊಂಡವರು ಕನ್ನಡದಲ್ಲಿ ಇಲ್ಲವೆಂದೇ ಹೇಳಬಹುದು. ನಗರದ ಶಾಲೆಗಳು ಅಕ್ಷರದ ಅಂಗಡಿಗಳಾಗಿವೆ. ಈಗಿನ ಶಾಲಾ ಕಟ್ಟಡ ಚೆನ್ನಾಗಿರುತ್ತವೆ ಆದರೆ ಆತ್ಮವೇ ಇರುವುದಿಲ್ಲ. ಬಹುತೇಕ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನವನ್ನೇ ಆಚರಿಸುವುದಿಲ್ಲ. ಆದರೆ ನಮ್ಮ ಕಾಲದಲ್ಲಿ ಸಾಹಿತ್ಯ ಪ್ರೀತಿ ಬೆಳೆಸಿದ ಬಹಳಷ್ಟು ಮೇಷ್ಟ್ರುಗಳು ಇಂದಿಗೂ ನೆನಪಿನಂಗಳದಲ್ಲಿ ಉಳಿದಿದ್ದಾರೆ.

–ಡಿ.ವಿ. ಪ್ರಹ್ಲಾದ್‌, ‘ಸಂಚಯ’ ಸಾಹಿತ್ಯ ಪತ್ರಿಕೆ ಸಂಪಾದಕ.

ಧೈರ್ಯ ತುಂಬಿದ ಮೇಡಂ

ಸ್ವರ್ಗದಲ್ಲಿ ಒಂದು ತಕ್ಕಡಿ ಇದೆ ಎಂದು ಭಾವಿಸೋಣ. ಅದರ ಒಂದು ಭಾಗಕ್ಕೆ ಜಗತ್ತಿನ ಎಲ್ಲಾ ಸೆಲಿಬ್ರಿಟಿಗಳನ್ನು, ಇನ್ನೊಂದು ಭಾಗಕ್ಕೆ ಪ್ರೈಮರಿ ಶಾಲೆಯ ಗುರುಗಳನ್ನು ಹಾಕಿದರೆ ತಕ್ಕಡಿ ಗುರುಗಳಿರುವ ಕಡೆಯೇ ಬಾಗುತ್ತದೆ. ಇದರರ್ಥ ಶಿಕ್ಷಕರ ಮೌಲ್ಯ ಎಂಬುದು ಜಗತ್ತಿನ ಎಲ್ಲಾ ಮೌಲ್ಯಗಳನ್ನೂ ಮೀರಿದ್ದು ಎಂದು.ನನ್ನ ಶಾಲಾ ದಿನಗಳು ಇಂದಿಗೂ ನನ್ನ ಮನಸ್ಸಿನಲ್ಲಿ ಹಚ್ಚಹಸಿರಾಗಿಯೇ ಉಳಿದಿವೆ. ನಾನು ಹೈಸ್ಕೂಲ್ ಓದಿದ್ದು ಬಸವನಗುಡಿಯ ನ್ಯಾಷನಲ್ ಹೈಸ್ಕೂಲಿನಲ್ಲಿ. ಅಲ್ಲಿದ್ದ ಮೀನಾಕ್ಷಿ ಮೇಡಂ ನನಗೆ ಬಲು ಇಷ್ಟವಾದ ಟೀಚರ್. ಇಂದಿಗೂ ಅವರು ಕಲಿಸಿದ ಪಾಠ ನನ್ನಲ್ಲಿ ಬೇರೂರಿದೆ. ಸಾವಿರಾರು ಜನರ ಸಮ್ಮುಖದಲ್ಲಿ ವೇದಿಕೆ ಮೇಲೆ ನಿಂತು ನಿರ್ಭಯವಾಗಿ ನಾನು ಮಾತನಾಡಲು ಸಾಧ್ಯವಾಗಿರೋದು ಅವರು ಅಂದು ನನಗೆ ತುಂಬಿದ್ದ ಧೈರ್ಯ ಮತ್ತು ಸ್ಫೂರ್ತಿಯಿಂದ.

ನಾಟಕಗಳಲ್ಲಿ ನನ್ನನ್ನು ಅಭಿನಯಿಸುವಂತೆ ಪ್ರೋತ್ಸಾಹಿಸಿ ನನ್ನಲ್ಲಿ ಹುದುಗಿದ್ದ ಕಲೆಯನ್ನು ಅನಾವರಣಗೊಳಿಸಿದವರು ಕೂಡ ಅವರೇ. ಹೀಗಾಗಿ ಪ್ರತಿದಿನ ನನ್ನ ನೆನಪಿನಂಗಳದಲ್ಲಿ ಅವರ ನೆನಪು ಹಸಿರು. ಚಲನಚಿತ್ರಗಳಲ್ಲಿ ನನಗೆ ಗುರುವಾಗಿ ನಿಲ್ಲುವವರು ಕೆ. ಬಾಲಚಂದರ್. ತಾಂತ್ರಿಕ ಕೌಶಲಗಳಿಗೆ ಸಂಬಂಧಿಸಿದಂತೆ ಕಮಲಹಾಸನ್ ನನ್ನ ಸ್ನೇಹವನ್ನೂ ಮೀರಿ ಗುರುವಾಗಿ ಗೋಚರಿಸುತ್ತಾರೆ.ಇಂದಿನ ಮಕ್ಕಳು ರಾ್ಯಂಕ್ ಪಡೆಯುವ ಹಂಬಲಕ್ಕೆ, ಒತ್ತಡಕ್ಕೆ ಬಿದ್ದು ಶಿಕ್ಷಕರೊಂದಿಗೆ ಬೆಳೆಸಿಕೊಳ್ಳಬೇಕಾದ ಭಾವನಾತ್ಮಕ ಸಂಬಂಧವನ್ನು ಕಳೆದುಕೊಳ್ಳುತ್ತಿದ್ದಾರೆ. ಸ್ಪರ್ಧಾತ್ಮಕ ಜಗತ್ತಿಗೆ ಬೇಕಾದ ಪಠ್ಯಕ್ರಮ ಇಂದು ಇಲ್ಲ. ಜತೆಗೆ ಮಕ್ಕಳಿಗೆ ಆಸಕ್ತಿದಾಯಕವಾಗಿ ಬೋಧಿಸುವ ವಿಧಾನ ಹೆಚ್ಚಾಗಿ ಜಾರಿಗೆ ಬಂದಿಲ್ಲ. ಇತ್ತೀಚೆಗೆ ಮಕ್ಕಳು ಶಿಕ್ಷಕರೊಂದಿಗೆ ಒಂದು ರೀತಿಯ ಯಾಂತ್ರಿಕ ಸಂಬಂಧವನ್ನಷ್ಟೇ ಹೊಂದುತ್ತಿರುವುದು ವಿಪರ್ಯಾಸ.

-ರಮೇಶ್ ಅರವಿಂದ್, ನಟ.

ದೇಶದ ಭವಿಷ್ಯ ರೂಪಿಸುವವರು...

ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು ಎಂಬ ಮಾತು ನೂರರಷ್ಟು ಸತ್ಯ. ಏಕೆಂದರೆ ನನ್ನ ಬದುಕಿನ ಮೊದಲ ಗುರುಗಳು ನನ್ನ ತಂದೆ-–ತಾಯಿ. ಕೇವಲ ಮನೆಯಲ್ಲಿ ಹೋಂವರ್ಕ್ ಮಾಡಿಸುವುದಷ್ಟೇ ಅಲ್ಲದೆ ಚಿಕ್ಕ ವಯಸ್ಸಿನಿಂದಲೇ ಬದುಕಿನ ನೀತಿ ನಿಯಮಗಳನ್ನು ಹೇಳಿಕೊಟ್ಟಿದ್ದಾರೆ. ಶಾಲಾ ದಿನಗಳಲ್ಲಿ ನನ್ನನ್ನು ಹೆಜ್ಜೆ ಹೆಜ್ಜೆಗೂ ತಿದ್ದಿತೀಡಿ, ಯಶಸ್ವಿ ಬದುಕನ್ನು ಕಟ್ಟಿಕೊಳ್ಳಲು ಸ್ಫೂರ್ತಿಯಾದವರು ಸಿಸ್ಟರ್ ಜೋನ್ ಮೇಡಂ.

ಇಂದು ಅವರು ಇಲ್ಲ. ಆದರೆ ಅವರು ನನಗೆ ಹೇಳಿಕೊಟ್ಟ ಪಾಠ ಮಾತ್ರ ಮರೆಯಲು ಸಾಧ್ಯವಿಲ್ಲ. ಯಾವತ್ತಿಗೂ ನನ್ನ ಬದುಕಿಗೆ ಅವರೇ ಮಾದರಿ ವ್ಯಕ್ತಿ. ಓದಿನ ಜೊತೆಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿ ನನ್ನಲ್ಲಿ ಗೆಲ್ಲಬೇಕೆಂಬ ಛಲ, ಸಾಧಿಸಬೇಕೆಂಬ ಹಟವನ್ನು ಮೂಡಿಸಿದರು. ಅದೇ ಇಂದು ನನ್ನ ಸಾಂಸಾರಿಕ ಹಾಗೂ ವೃತ್ತಿ ಬದುಕಿನ ಯಶಸ್ಸಿಗೆ ಕಾರಣ.ನನ್ನ ಮಗ ಬೆಳೆದು ದೊಡ್ಡವನಾದ ನಂತರ ನಾನು ಎಂಬಿಎ ಮಾಡಲು ಮುಂದಾದೆ. ಆಗ ನನಗೆ ಪ್ರೊಫೆಸರ್ ಕ್ಸೇವಿಯರ್ ಎಂಬ ಗುರು ಸಿಕ್ಕಿದರು. ಅವರು ವಯಸ್ಸಿನಲ್ಲಿ ನನಗಿಂತ ಚಿಕ್ಕವರಾಗಿದ್ದರೂ ಅವರಿಂದ ನಾನು ಬಹಳಷ್ಟು ಕಲಿತೆ. ಸಂಸಾರದ ಜವಾಬ್ದಾರಿಯ ನಡುವೆಯೂ ಓದನ್ನು ಮುಂದುವರಿಸಲು ಅವರು ನನಗೆ ಬೆಂಗಾವಲಾಗಿ ನಿಂತು, ಉತ್ತೇಜನ ನೀಡಿದರು.ಆದರೆ ಇತ್ತೀಚೆಗೆ ಮಾಧ್ಯಮಗಳಲ್ಲಿ ಕೆಲ ಶಿಕ್ಷಕರ ಅಸಭ್ಯ ವರ್ತನೆಗಳ ಬಗ್ಗೆ ವರದಿ ಬಂದಾಗ ಮನಸ್ಸಿಗೆ ತುಂಬಾ ಬೇಸರವಾಗುತ್ತದೆ. ದೇಶದ ಭವಿಷ್ಯವನ್ನು ರೂಪಿಸುವ ಹೊಣೆ ಹೊತ್ತವರೇ ಹೀಗಾದರಲ್ಲ ಎಂಬ ನೋವಿದೆ. ಹೀಗಾಗಿ ಶಾಲಾಕಾಲೇಜುಗಳಿಗೆ ಶಿಕ್ಷಕರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಬೇಕು ಎನಿಸುತ್ತದೆ. ಇಲ್ಲದಿದ್ದರೆ ನಮ್ಮ ಮಕ್ಕಳು ನಾವು ಕಂಡಂತಹ ಉತ್ತಮ ಶಿಕ್ಷಕರಿಂದ ವಂಚಿತರಾಗಬಹುದು. 

-ಸುಮಿತ್ರ ಅಯ್ಯಂಗಾರ್, ಮಹಿಳಾ ಉದ್ಯಮಿ ‘ಕಾರಂಜಿ’ ಸಂಸ್ಥೆ.ಚನ್ನಬಸಯ್ಯ ಮೇಷ್ಟ್ರು ಕಲಿಸಿದ ಶಿಸ್ತು...


ನನ್ನ ತಂದೆ, ತಾಯಿ ಇಬ್ಬರೂ ಶಿಕ್ಷಕ ವೃತ್ತಿಯಲ್ಲಿದ್ದವರು. ಅವರಿಗೆ ಮೇಲಿಂದ ಮೇಲೆ ಬೇರೆ ಬೇರೆ ಊರುಗಳಿಗೆ ವರ್ಗಾವಣೆಗಳಾಗುತ್ತಿದ್ದವು. ಈ ಕಾರಣಕ್ಕೇ ನಾನು ಬರೋಬ್ಬರಿ ಆರು ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಬೇಕಾಯಿತು. ಇಷ್ಟು ಶಾಲೆಗಳಲ್ಲಿ ನಾನು ಓದು ಕಲಿತರೂ ನನಗೆ  ನೆನಪಾಗುವುದು ಚೆನ್ನಬಸಯ್ಯ ಮೇಷ್ಟ್ರು.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಮೂಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಒಂದಷ್ಟು ವರ್ಷ ನನ್ನ ವಿದ್ಯಾಭ್ಯಾಸ ನಡೆಯಿತು. ಅಲ್ಲಿ ನಮಗೆ ಸಮಾಜ ವಿಜ್ಞಾನ ಕಲಿಸುತ್ತಿದ್ದ ಚೆನ್ನಬಸಯ್ಯ ಮೇಷ್ಟ್ರು ಸ್ವಚ್ಛತೆ, -ಶಿಸ್ತಿಗೆ ಹೆಸರಾಗಿದ್ದವರು. ಆ ಶಾಲೆಯಲ್ಲಿ ಪೀಠೋಪಕರಣಗಳ ವ್ಯವಸ್ಥೆ ಇರಲಿಲ್ಲವಾದ್ದರಿಂದ ಮಕ್ಕಳು ನೆಲದ ಮೇಲಯೇ ಕೂರಬೇಕಿತ್ತು.

ಹೀಗಾಗಿ ಚೆನ್ನಬಸಯ್ಯ ಮೇಷ್ಟ್ರು ಇರುವ ಮಕ್ಕಳಲ್ಲಿ ಐದೈದು ಜನರ ಗುಂಪು ಮಾಡಿ, ಪ್ರತಿ ವಾರ ಒಂದು ಗುಂಪಿಗೆ ಶಾಲೆಯ ನೆಲಕ್ಕೆ ಸಗಣಿ ಸಾರಿಸುವ ಜವಾಬ್ದಾರಿ ಹೊರಿಸುತ್ತಿದ್ದರು. ನನ್ನ ತಾಯಿ ಕೂಡ ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರೂ ಅವರು ನನಗೆ ಸಗಣಿ ಸಾರಿಸುವ ಕೆಲಸಕ್ಕೆ ವಿನಾಯತಿ ಕೊಟ್ಟಿರಲಿಲ್ಲ. ಈ ಕಾರಣಕ್ಕೇ ಚೆನ್ನಬಸಯ್ಯ ಮೇಷ್ಟ್ರು ನನಗೆ ಇವತ್ತಿಗೂ ಗ್ರೇಟ್ ಅನ್ನಿಸುವುದು.ಇನ್ನು ಸಾಹಿತ್ಯದ ವಿಚಾರಕ್ಕೆ ಬಂದರೆ ದೇವನೂರು ಮಹಾದೇವ, ರೋಮಿ ಮತ್ತು ಪಿ. ಲಂಕೇಶರನ್ನು ಗುರುಗಳೆಂದು ಭಾವಿಸುತ್ತೇನೆ. ಅವರ ಬರವಣಿಗೆಗಳೇ ನನ್ನ ಬರವಣಿಗೆಗಳಿಗೆ ಸ್ಫೂರ್ತಿ. ಸದ್ಯ ಹೊನ್ನಾವರದ ಕವಲಕ್ಕಿಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿರುವ ನಾನು ಎಂಬಿಬಿಎಸ್ ಓದಿದ್ದು ಬಳ್ಳಾರಿಯ ಮೆಡಿಕಲ್ ಕಾಲೇಜಿನಲ್ಲಿ. ಅಲ್ಲಿ ಪ್ರೊ. ರಂಗನಾಥಯ್ಯ ಅವರು ನನಗೆ ಗುರುವಾಗಿ ಮಾರ್ಗದರ್ಶನ ನೀಡಿದವರು.

ಒಬ್ಬ ರೋಗಿಯ ಹಾವ-ಭಾವ ಸೂಕ್ಷ್ಮತೆಗಳನ್ನು ಗಮನಿಸಿಯೇ ಅವನಿಗಿರುವ ರೋಗವನ್ನು ಪತ್ತೆ ಹಚ್ಚುವುದು ಹೇಗೆ ಎನ್ನುವುದನ್ನು ಹೇಳಿಕೊಟ್ಟವರು ಅವರು. ಹೀಗೆ ನನ್ನ ಬದುಕಿನ ಒಂದೊಂದು ಸ್ತರಗಳಲ್ಲಿ ಪ್ರತ್ಯೇಕ ಗುರುಗಳಾಗಿದ್ದಾರೆ. ನನ್ನ ಬದುಕಿಗೊಂದು ದಾರಿ ತೋರಿಸಿದ ಅವರೆಲ್ಲರಿಗೂ ನನ್ನ ಕೃತಜ್ಞತೆಗಳಿವೆ. 

-ಡಾ. ಎಚ್.ಎಸ್. ಅನುಪಮಾ, ಲೇಖಕಿ ಹಾಗೂ ವೈದ್ಯೆ.

ತಪ್ಪಿದ ಏಟು ಗುರುಗಳಿಗೇ ಬಿತ್ತು...

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಗ್ರಾಮವೊಂದರಲ್ಲಿ ಒಂದರಿಂದ ಏಳನೇ ತರಗತಿಯವರೆಗೆ ಓದಿದ ದಿನಗಳನ್ನು ಮರೆಯಲು ಸಾಧ್ಯವೇ ಇಲ್ಲ. ಎಚ್.ಇ.ತಿಪ್ಪೇಸ್ವಾಮಿ ಅಲ್ಲಿ ನನಗೆ ದೊರೆತ ನೆಚ್ಚಿನ ಗುರುಗಳು. ನಿನ್ನ ಹೆಸರಿನಲ್ಲಿಯೇ ಡಿ.ಸಿ ಇರುವುದರಿಂದ ನೀನೊಬ್ಬ ಜಿಲ್ಲಾಧಿಕಾರಿ ಆಗಲೇಬೇಕು ಎಂದು ಸದಾ ಹೇಳುತ್ತಿದ್ದರು.

ಇತಿಹಾಸದ ಅನೇಕ ವಿಚಾರಗಳನ್ನು ಇಂದಿನ ಸಮಾಜಕ್ಕೆ ಅನ್ವಯಿಸಿ ಪಾಠ ಮಾಡುತ್ತಿದ್ದರು. ಅದೇ ನನಗೆ ಇತಿಹಾಸದ ಮೇಲೆ ಪ್ರೀತಿ ಹುಟ್ಟಿಸಿ ಅದರಲ್ಲೆೀ ಪಿಎಚ್‌.ಡಿ. ಮಾಡಲು ಪ್ರೇರಣೆಯಾಯಿತು. ಸಾಹಿತಿಗಳಾದ ಎಚ್.ಎಸ್.ವೆಂಕಟೇಶ್‌ಮೂರ್ತಿ, ಯು.ಆರ್. ಅನಂತಮೂರ್ತಿ ಅವರ ಉಪನ್ಯಾಸ ಕೇಳುವ ಸೌಭಾಗ್ಯ ನನಗೆ ಕಾಲೇಜಿನಲ್ಲಿ ದೊರೆಯಿತು.

ಇಂದಿನ ನನ್ನ ಬೆಳವಣಿಗೆಗೆ ಅವರೆಲ್ಲರೂ ಸ್ಫೂರ್ತಿಯಾಗಿದ್ದಾರೆ. ಸ್ಕೂಲಿನಲ್ಲಿ ನಾಗೇಂದ್ರ ಎಂಬ ಗುರುಗಳು ಅತ್ಯಂತ ಶಿಸ್ತಿನಿಂದ ಡ್ರಿಲ್ ಮಾಡಿಸುತ್ತಿದ್ದರು. ನನಗೆ ಡ್ರಿಲ್ ಅಂದರೆ ಆಗುತ್ತಿರಲಿಲ್ಲ. ಜತೆಗೆ ಮಾಡಲು ಬರುತ್ತಿರಲಿಲ್ಲ. ಹಾಗಾಗಿ ಒಮ್ಮೆ ಹೊಡೆಯುತ್ತಾರೆಂಬ ಭೀತಿಯಿಂದ ಶಾಲೆಯಿಂದ ತಪ್ಪಿಸಿಕೊಂಡು ಓಡಿಹೋಗಿದ್ದೆ.

ಅವರ ಕೈಗೆ ಸಿಕ್ಕಿಹಾಕಿಕೊಂಡಾಗ ಕೋಲಿನಿಂದ ಹೊಡೆಯಲು ಮುಂದಾದರು. ಆಗ ನಾನು ಆ ಹೊಡೆತದಿಂದ ತಪ್ಪಿಸಿಕೊಳ್ಳಲು ಹೋಗಿ ಆ ಏಟು ಅವರ ಕಾಲಿಗೇ ಬಿದ್ದಿತ್ತು! ಅಂದು ಶಾಲೆಯ ಕಾಂಪೌಂಡ್ ಹಾರಿ ಹೋದ ನಾನು ಆ ಶಾಲೆ ಬಳಿ ಸುಳಿಯಲೇ ಇಲ್ಲ. ಆದರೆ ವಿಚಿತ್ರ ಎಂಬಂತೆ ಇಂದು ನಾನು ಅಷ್ಟೇ ಶಿಸ್ತುಬದ್ಧವಾದ ಪೊಲೀಸ್ ಅಧಿಕಾರಿಯ ಹುದ್ದೆಯಲ್ಲಿದ್ದೇನೆ. ಬಾಲ್ಯದ ಆ ನೆನಪುಗಳು, ಗುರುಗಳ ಬುದ್ಧಿಮಾತು ಇವಾಗಲೂ ಮನದ ಪುಟದಲ್ಲಿ ಸದಾ ಹಸಿರಾಗಿದೆ.

-ಡಾ. ಡಿ.ಸಿ. ರಾಜಪ್ಪ. ಡಿಸಿಪಿ ಬೆಂಗಳೂರು ದಕ್ಷಿಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry