ಮರೆಯಾಗುತ್ತಿರುವ ಗಾಂಧಿವಾದ

ಮಂಗಳವಾರ, ಜೂಲೈ 16, 2019
24 °C
ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಕಳವಳ

ಮರೆಯಾಗುತ್ತಿರುವ ಗಾಂಧಿವಾದ

Published:
Updated:

ಬೆಂಗಳೂರು: `ಬುದ್ಧನಿಗೆ ಜ್ಞಾನೋದಯವಾದ ಸ್ಥಳದಲ್ಲೇ ಬಾಂಬ್ ಸ್ಫೋಟ ನಡೆಯುತ್ತಿದೆ. ದೇಶದಲ್ಲಿ ಆಂತರಿಕ ಹಿಂಸಾಚಾರ ಹೆಚ್ಚಾಗುತ್ತಿದೆ. ಗಾಂಧಿವಾದ ಮರೆಯಾಗುತ್ತಿರುವುದರ ಫಲ ಇದು' ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕಳವಳ ವ್ಯಕ್ತಪಡಿಸಿದರು.ಸರ್ವೋದಯ ಇಂಟರ್‌ನ್ಯಾಷನಲ್ ಟ್ರಸ್ಟ್ ರಾಜಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಸ್ಕಲ್ ಅಲೆನ್ ನಜರತ್ ಅವರ `ಗಾಂಧೀಸ್ ಔಟ್‌ಸ್ಟ್ಯಾಂಡಿಂಗ್ ಲೀಡರ್‌ಶಿಪ್' ಇಂಗ್ಲಿಷ್ ಕೃತಿಯ ಕನ್ನಡ ಅನುವಾದ `ಅಮೋಘ ನಾಯಕ ಗಾಂಧಿ' ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.`ಜಾತ್ಯತೀತ ರಾಷ್ಟ್ರವಾದ ಭಾರತದಲ್ಲಿ ಹಿಂದಿನಿಂದಲೂ ಸತ್ಯ, ಅಹಿಂಸೆಗಳನ್ನು ಪಾಲಿಸಿಕೊಂಡು ಬರಲಾಗುತ್ತಿತ್ತು. ಆದರೆ, ಇತ್ತೀಚೆಗೆ ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಗಾಂಧೀಜಿಯ ತತ್ವಗಳನ್ನು ಯುವ ಜನರು ಅನುಸರಿಸುತ್ತಿಲ್ಲ' ಎಂದು ಅವರು ವಿಷಾದಿಸಿರು.

`ಉಪನಿಷತ್ ಚಿಂತನೆಗಳು ಗಾಂಧೀಜಿ ಅವರ ತತ್ವಗಳಲ್ಲಿ ಅಂತರ್ಗತವಾಗಿವೆ.

ಕ್ರೈಸ್ತನಂತೆ ಬದುಕಿದ ಗಾಂಧೀಜಿ ಅವರ ಬದುಕೇ ಸಂದೇಶವಿದ್ದಂತೆ. ದೇಶದ ಉದ್ದಗಲಕ್ಕೂ ಸಂಚರಿಸಿ ಸ್ವಾತಂತ್ರ ಚಳವಳಿಗೆ ಬಲತುಂಬಿದ ಸಂತ ಗಾಂಧೀಜಿ' ಎಂದು ಅವರು ನುಡಿದರು.`ಭಾರತದಲ್ಲಿ ಮೊಘಲರ ಆಳ್ವಿಕೆಯ ನಂತರದಲ್ಲಿ ಇಂಡೊ- ಪರ್ಶಿಯನ್ ಸಂಸ್ಕೃತಿ ಬೆಳೆಯುತ್ತಾ ಬಂದಿದೆ. ಅಕ್ಬರ್ ರಜಪೂತರ ರಾಜಕುಮಾರಿಯನ್ನು ವಿವಾಹವಾಗಿದ್ದ. ಆಗಿನಿಂದ ದೇಶದಲ್ಲಿ ಹಿಂದು ಹಾಗೂ ಮುಸ್ಲಿಂ ಧರ್ಮಗಳು ಸಮನ್ವಯ ಸಾಧಿಸುತ್ತಲೇ ಬೆಳೆದು ಬಂದಿವೆ. ಆದರೆ, ನಂತರದ ದಿನಗಳಲ್ಲಿ ಕೆಲವು ಧರ್ಮಾಂಧರು ಈ ಸಾಮರಸ್ಯವನ್ನು ಕದಡುತ್ತಿದ್ದಾರೆ' ಎಂದು ಅವರು ಕಿಡಿಕಾರಿದರು.`ರಾಜ್ಯದಲ್ಲಿ ಹೊಸ ಸರ್ಕಾರ ಆಡಳಿತಕ್ಕೆ ಬಂದಿದೆ. ಜನರ ಆಶೋತ್ತರಗಳಿಗೆ ಅನುಗುಣವಾಗಿ ಸಚಿವರು ಆಡಳಿತ ನಡೆಸಬೇಕು. ಜನರ ವಿಶ್ವಾಸ ಉಳಿಸಿಕೊಂಡು ಆಡಳಿತ ನಡೆಸಬೇಕಾದ ಜವಾಬ್ದಾರಿ ಹೊಸ ಸರ್ಕಾರದ ಮೇಲಿದೆ' ಎಂದರು.ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್. ಕೆ.ಪಾಟೀಲ್ ಮಾತನಾಡಿ, `ಗ್ರಾಮೀಣ ಜನರು ಆಧುನಿಕ ಶೌಚಾಲಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಆದರೆ, ಸದ್ಯ ದೇಶದ ಬಹುಪಾಲು ಹಳ್ಳಿಗಳಲ್ಲಿ ಶೌಚಾಲಯ ವ್ಯವಸ್ಥೆಯೇ ಇಲ್ಲ. ಗ್ರಾಮೀಣ ಜನರು ಶೌಚಕ್ಕೆ ಇಂದಿಗೂ ಬಯಲಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ರಾಜ್ಯದ ಎಲ್ಲ ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸಲು ಸರ್ಕಾರ ಬದ್ಧವಿದೆ' ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್ ಮಾತನಾಡಿ, `ನಕ್ಸಲ್ ಸಮಸ್ಯೆ, ಭಯೋತ್ಪಾದನೆಯ ಸಮಸ್ಯೆ ದೇಶವನ್ನು ಕಾಡುತ್ತಿದೆ. ದೇಶದ ಸದ್ಯದ ಸಮಸ್ಯೆಗಳಿಗೆ ಗಾಂಧಿ ತತ್ವದಲ್ಲಿ ಪರಿಹಾರವಿದೆ. ಹೀಗಾಗಿ ಗಾಂಧಿ ತತ್ವಗಳ ಪ್ರಚಾರ ಹೆಚ್ಚಾಗಬೇಕಿದೆ' ಎಂದರು.ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, `ದೇಶದಲ್ಲಿ ವಿದೇಶಿ ವಸ್ತುಗಳ ಬಳಕೆ ಹೆಚ್ಚಾಗಿದೆ. ಜನತೆ ದಿನದಿಂದ ದಿನಕ್ಕೆ ವಿದೇಶಿ ಕಂಪೆನಿಗಳ ದಾಸರಾಗುತ್ತಿದ್ದಾರೆ. ಇತ್ತೀಚೆಗೆ ಸಾವಿರಾರು ವಿದೇಶಿ ಕಂಪೆನಿಗಳಿಗೆ ಸರ್ಕಾರವೇ ರತ್ನ ಗಂಬಳಿ ಹಾಸಿ ಸ್ವಾಗತ ಕೋರುತ್ತಿದೆ. ಇದು ಹೀಗೇ ಮುಂದುವರಿದರೆ ದೇಶವು ಆರ್ಥಿಕ ಗುಲಾಮಗಿರಿಗೆ ಒಳಗಾಗುತ್ತದೆ. ಸ್ವಾವಲಂಬಿಗಳಾಗಿ ಬದುಕುವುದನ್ನು ಯುವ ಜನರಿಗೆ ಕಲಿಸಬೇಕಿದೆ' ಎಂದರು.ಪಾಸ್ಕಲ್ ಅಲೆನ್ ನಜರತ್ ಮಾತನಾಡಿ, `ಗಾಂಧಿ ತತ್ವಗಳನ್ನು ತಿಳಿದುಕೊಳ್ಳುವ ಹಂಬಲ ಜಗತ್ತಿಗಿದೆ. ಹೀಗಾಗಿ ಗಾಂಧೀಜಿಯ ಬಗ್ಗೆ ಇಂಗ್ಲಿಷ್‌ನಲ್ಲಿ ಬರುವ ಪುಸ್ತಕಗಳು ಪ್ರಪಂಚದ ವಿವಿಧ ಭಾಷೆಗಳಿಗೆ ಅನುವಾದಗೊಳ್ಳುತ್ತಿವೆ. `ಗಾಂಧೀಸ್ ಔಟ್‌ಸ್ಟ್ಯಾಂಡಿಂಗ್ ಲೀಡರ್‌ಶಿಪ್' ಕೃತಿ ಚೀನಾ, ಕೊರಿಯಾ, ಪೋರ್ಚುಗೀಸ್ ಸೇರಿದಂತೆ ಅನೇಕ ಭಾಷೆಗಳಿಗೆ ಅನುವಾದಗೊಂಡಿದೆ' ಎಂದರು.`ದೇಶದ 200 ಜಿಲ್ಲೆಗಳಲ್ಲಿ ನಕ್ಸಲ್ ಸಮಸ್ಯೆ ಇದೆ. ಅಸಮಾನತೆ ಹೆಚ್ಚಾಗುತ್ತಿರುವ ಕಾರಣ ಹಿಂಸಾಚಾರ ಉಲ್ಬಣವಾಗುತ್ತಿದೆ. ದೇಶದ ಸಮಸ್ಯೆಗಳ ಪರಿಹಾರಕ್ಕೆ ಗಾಂಧಿ ತತ್ವಗಳನ್ನು ಅಳವಡಿಸಿಕೊಳ್ಳಬೇಕು' ಎಂದು ಅವರು ಹೇಳಿದರು.ನೀಲತ್ತಹಳ್ಳಿ ಕಸ್ತೂರಿ ಅವರು 2007ರಲ್ಲಿ ಅನುವಾದಿಸಿರುವ ಪುಸ್ತಕದ ಪರಿಷ್ಕೃತ ಆವೃತ್ತಿಯನ್ನು ವಾಸನ್ ಪಬ್ಲಿಕೇಷನ್ಸ್ ಹೊರತಂದಿದೆ. ಪುಸ್ತಕದ ಬೆಲೆ ರೂ 160.

ಸರ್ಕಾರದ ವಿಳಂಬ

ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹಂಸರಾಜ್ ಭಾರದ್ವಾಜ್, `ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಸೂಕ್ತ ವ್ಯಕ್ತಿಯನ್ನು ನೇಮಿಸಲು ಸರ್ಕಾರ ಶೋಧನಾ ಸಮಿತಿಯನ್ನು ರಚಿಸಲು ವಿಳಂಬ ಮಾಡಿತ್ತು.ಹೀಗಾಗಿ ಡಾ.ಮಹೇಶ್ವರಪ್ಪ ಅವರನ್ನೇ ಕುಲಪತಿ ಹುದ್ದೆಯಲ್ಲಿ ಮುಂದುವರಿಸಲಾಗುತ್ತಿದೆ. ವಿಶ್ವವಿದ್ಯಾಲಯಗಳ ವಿಚಾರದಲ್ಲಿ ಉನ್ನತ ಶಿಕ್ಷಣ ಸಚಿವರು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ' ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry