ಗುರುವಾರ , ನವೆಂಬರ್ 21, 2019
20 °C
ಅರ್ಕಾವತಿ ಒಡಲಾಳ 3

ಮರೆಯಾದ ಸೌಜನ್ಯ; ಮೆರೆಯುವ ಮಾಲಿನ್ಯ

Published:
Updated:

ಬೆಂಗಳೂರು: `ಆಗಿನ ದಿನಗಳಲ್ಲಿ ಬೇಸಿಗೆ ಬಂದಿತೆಂದರೆ ಸಾಕು, ನದಿ ದಂಡೆ ಮೇಲಿನ ಗ್ರಾಮಗಳ ಜನ ಸ್ವಯಂ ಪ್ರೇರಣೆಯಿಂದ ಕೆರೆ-ಕಾಲುವೆಗಳ ಹೂಳು ಎತ್ತುತ್ತಿದ್ದರು. ಮಳೆಗಾಲದಲ್ಲಿ ಮತ್ತೆ ಅವುಗಳೆಲ್ಲ ನೀರಿನಿಂದ ಮೈದುಂಬುವಂತೆ ಎಚ್ಚರ ವಹಿಸುತ್ತಿದ್ದರು. ಅದೊಂದು ಸಾಮಾಜಿಕ ಹೊಣೆಯಾಗಿತ್ತು. ಈಗ ಅದೇ ಜನ ಕೆರೆ-ಕಾಲುವೆಗಳಿಗೆ ಕಸ ತಂದು ಸುರಿಯುತ್ತಿದ್ದಾರೆ'-ಅರ್ಕಾವತಿ ನದಿ ಅಂಗಳದಲ್ಲಿಯೇ ಆಡಿ ಬೆಳೆದ ಸಿ.ನಾರಾಯಣಸ್ವಾಮಿ ಅತ್ಯಂತ ಬೇಸರದಿಂದ ಈ ಮಾತು ಹೇಳುತ್ತಾರೆ. `ನಮ್ಮನ್ನು ಕಾಪಾಡುವ ತಾಯಿಯನ್ನು ನಾವು ಸಂರಕ್ಷಿಸಬೇಕು ಎನ್ನುವ ಸೌಜನ್ಯ-ಕಾಳಜಿ ಮರೆಯಾಗಿದೆ. ಆದ್ದರಿಂದಲೇ ಎಲ್ಲೆಡೆ ಮಾಲಿನ್ಯ ತಾಂಡವವಾಡುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.ಗ್ರಾಮಸ್ಥರು ತಾವೇ ತಮ್ಮ ಕಾಲ ಮೇಲೆ ಕಲ್ಲು ಹಾಕಿಕೊಂಡ ಪ್ರಸಂಗ ಇದು. ಇಂತಹ ಬೇಕಾದಷ್ಟು ಉದಾಹರಣೆಗಳು ಅರ್ಕಾವತಿ ಪಾತ್ರದುದ್ದಕ್ಕೂ ಸಿಗುತ್ತವೆ. ಕೆರೆಗಳು ಮತ್ತು ಕಾಲುವೆಗಳಿಗೆ ತ್ಯಾಜ್ಯ ಸುರಿಯುವ ದೃಶ್ಯ ಎಲ್ಲೆಡೆ ಸಾಮಾನ್ಯ. ಅರ್ಕಾವತಿ ನದಿ ತನ್ನ ಮೊದಲ ಯಾತ್ರೆಯನ್ನು ಕಣಿವೆಪುರದಿಂದ ಆರಂಭಿಸುತ್ತಿತ್ತು. ಹೆಗಡೀಕೆರೆ, ಸೀಗೆಹಳ್ಳಿ, ಮೇಳೆಕೋಟೆ, ಬೀಡಿಗೆರೆ, ರಾಜಘಟ್ಟ, ತಿಪ್ಪಸಂದ್ರ, ಶಿವಾಪುರದ ಕೆರೆಗಳ ಮೂಲಕ ದೊಡ್ಡಬಳ್ಳಾಪುರದ ನಾಗರಕೆರೆ ಸೇರುತ್ತಿತ್ತು. ಆದರೆ, ಈ 15 ಕಿ.ಮೀ. ದಾರಿಯಲ್ಲಿ ನದಿ ಪಾತ್ರದಲ್ಲೂ ಉಳುಮೆ ಮಾಡಿದ್ದರಿಂದ ಅಲ್ಲಿ ಎಲ್ಲಿಯೂ ಅವಳ `ಹೆಜ್ಜೆ' ಗುರುತು ಕಾಣುವುದಿಲ್ಲ. ಈ ವಿಷಯವಾಗಿ ಗ್ರಾಮಸ್ಥರನ್ನು ಮಾತಿಗೆಳೆದರೆ `ಬೇಸಾಯದ ಜಮೀನಿನ ಮೇಲೆ ನದಿ ಹರಿದರೆ ರೈತರು ತಾನೇ ಏನು ಮಾಡಬೇಕು' ಎಂದು ಪ್ರಶ್ನಿಸುತ್ತಾರೆ.ಇತ್ತೀಚೆಗೆ ಸರ್ವೆ ಇಲಾಖೆ ನದಿ ಪಾತ್ರದ ಸಮೀಕ್ಷೆ ನಡೆಸಿದೆ. ಅದರ ವರದಿ ಬಂದ ಬಳಿಕ ನದಿ ಪಾತ್ರ ಎಲ್ಲೆಲ್ಲಿ ಒತ್ತುವರಿಯಾಗಿದೆ ಎನ್ನುವುದು ನಿಖರವಾಗಿ ಗೊತ್ತಾಗಲಿದೆ.ದೊಡ್ಡಬಳ್ಳಾಪುರದ ನಾಗರಕೆರೆ ಉದಾಹರಣೆಯನ್ನೇ ನೋಡುವುದಾದರೆ ಅದಕ್ಕೆ ನೀರು ತರುತ್ತಿದ್ದ ಕಾಲುವೆಗಳು ಒತ್ತುವರಿಯಾಗಿದ್ದು, ಅಲ್ಲೆಲ್ಲ ಕೈಗಾರಿಕೆಗಳ ಪಿಲ್ಲರ್‌ಗಳು ಮೇಲೆದ್ದಿವೆ. 25,000ಕ್ಕೂ ಅಧಿಕ ಸಂಖ್ಯೆಯಲ್ಲಿ ಇರುವ ಮಗ್ಗಗಳಿಗೆ ಹೇರಳವಾಗಿ ನೀರು ಬಳಸಲಾಗುತ್ತದೆ. ಆ ನೀರು ಸಹ ಈ ಕೆರೆಗೆ ಸೇರುವ ಪರಿಣಾಮ ಅದೊಂದು ತ್ಯಾಜ್ಯದ ಗುಂಡಿಯಾಗಿ ಪರಿಣಮಿಸಿದೆ. ಮಳೆನೀರು ಬಂದರೆ ಈ ಕೆರೆ ತನ್ನ ಒಡಲು ತುಂಬಿರುವ ತ್ಯಾಜ್ಯವನ್ನು ಹೆಸರುಘಟ್ಟದ ಕಡೆಗೆ ಹರಿಸುತ್ತದೆ. ಬೇಸಿಗೆಯಲ್ಲೂ ತಂಪಾದ ನೀರು ಕೊಡುತ್ತಿದ್ದ ಇಲ್ಲಿನ ಹದಿನಾರು ಕಣ್ಣಿನ ಅಂದದ ಬಾವಿ ಈಗ ಬತ್ತಿಹೋಗಿದೆ.ವೀರಾಪುರದ ಕೆರೆ ಬೇಸಿಗೆಯಲ್ಲೂ ನೀರಿನಿಂದ ಕೂಡಿರುತ್ತದೆ. ಹಾಗಂತ ಸಂತಸಪಡುವ ಸ್ಥಿತಿ ಅಲ್ಲಿಲ್ಲ. ಸಿದ್ಧ ಉಡುಪು ಘಟಕವೊಂದು ಕಳುಹಿಸುವ ಕೊಳಚೆ ನೀರಿನ ಸಂಗ್ರಹ ಅದಾಗಿದೆ. ಸಾಮಾಜಿಕ ಅರಣ್ಯ ಘಟಕ ಕೆರೆ ಒತ್ತುವರಿ ತಡೆಯಲು ಹೋಗಿ ಅವುಗಳ ಅಂಗಳದಲ್ಲಿಯೇ ಗಿಡ-ಮರ ಬೆಳೆಸುವ ಮೂಲಕ ಕೆರೆಗಳನ್ನೇ ಸಮಾಧಿ ಮಾಡಿದೆ.ಕಾವೇರಿ ನೀರಾವರಿ ನಿಗಮ ನದಿ ಪಾತ್ರದ ಕೆರೆಗಳನ್ನೂ ಪರಿವೀಕ್ಷಿಸಿದೆ. ಅದರ ಪ್ರಕಾರ ಬಹುತೇಕ ಕೆರೆ ಅಂಗಳಗಳು ಒತ್ತುವರಿಯಾಗಿವೆ. ಅರಳುಮಲ್ಲಿಗೆ, ದೊಡ್ಡ ತುಮಕೂರು, ಮಜರಾ ಹೊಸಹಳ್ಳಿ ಮತ್ತು ತಲಗವಾರ ಕೆರೆಗಳ ಅಂಗಳದಲ್ಲಿ ಅಂತರ್ಜಲ ಹೀರುವ ನೀಲಗಿರಿ, ಕ್ಯಾಸುರಿನಾದಂತಹ ಮರಗಳನ್ನು ಬೆಳೆಸಲಾಗಿದೆ. ರಾಮನಗರದಲ್ಲಿ ರೇಷ್ಮೆ ಕೈಗಾರಿಕಾ ಉದ್ಯಮಗಳು ರಾಸಾಯನಿಕ ತ್ಯಾಜ್ಯವನ್ನು ನದಿ ಪಾತ್ರಕ್ಕೆ ಹೊಂದಿಕೊಂಡ ಜಮೀನಿಗೇ ಹರಿಸುತ್ತಿವೆ. ಇದರಿಂದ ಅರ್ಕಾವತಿ ಕಾಲುವೆಗೂ ತ್ಯಾಜ್ಯ ಹರಿದು ಬರುತ್ತಿದೆ.ತ್ಯಾಜ್ಯ ಸೇರ್ಪಡೆಯಿಂದ ನೀರಿನಲ್ಲಿ ಗಡಸುತನ ಹೆಚ್ಚಾಗುತ್ತದೆ. ಈ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಮೇಲೆ ಪರಿಣಾಮ ಉಂಟಾಗಿ ಪಿತ್ತಜನಕಾಂಗ ತೊಂದರೆಗೆ ಒಳಗಾಗುತ್ತದೆ. ಕಿಡ್ನಿ ಸ್ಟೋನ್ ಸಮಸ್ಯೆ ಬಿಗಡಾಯಿಸಿದೆ. `ನಮ್ಮ ಆಸ್ಪತ್ರೆಗೆ ಬರುವ ಈ ಭಾಗದ ಜನರಲ್ಲಿ ಮೂತ್ರಕೋಶದಲ್ಲಿ ಹರಳು ಇರುವುದೇ ಪ್ರಮುಖ ಸಮಸ್ಯೆ ಆಗಿರುತ್ತದೆ' ಎನ್ನುತ್ತಾರೆ ವೀರಾಪುರದ ವೈದ್ಯ ಡಾ. ವಿಜಯಕುಮಾರ್. ಆದರೆ, ನದಿ ಪಾತ್ರದ ಮಿಕ್ಕ ಗ್ರಾಮಗಳ ಆರೋಗ್ಯ ಸಮಸ್ಯೆ ಕುರಿತು ಇಲ್ಲಿಯವರೆಗೂ ಯಾವುದೇ ಸಮರ್ಪಕವಾದ ಸಂಶೋಧನೆಗಳು, ಸಮೀಕ್ಷೆಗಳು ನಡೆದಿಲ್ಲ.ಬದಲಾದ ಕೃಷಿ ಚಟುವಟಿಕೆಗಳು ಭೂಗರ್ಭವನ್ನೇ ಖಾಲಿ ಮಾಡಿವೆ. ನದಿ ಸಮೃದ್ಧವಾಗಿ ಹರಿಯುತ್ತಿದ್ದಾಗ ಹೆಸರುಘಟ್ಟ ಭಾಗದಲ್ಲಿ ವೀಳ್ಯದೆಲೆ, ಅಡಿಕೆ, ತೆಂಗು ಕೃಷಿ ನಳನಳಿಸುತ್ತಿತ್ತು. ನದಿಯನ್ನು ಕಾಣೆಯಾಗಿಸಿದ ಮೇಲೆ ರೈತರು ಅನಿವಾರ್ಯವಾಗಿ ಕೊಳವೆ ಬಾವಿ ಮೊರೆ ಹೋದರು. ಅತಿ ನೀರು ಕೇಳುವ ಭತ್ತ, ಕಬ್ಬು, ಪುಷ್ಪ ಕೃಷಿ ಸಂಪ್ರದಾಯ ಹೆಚ್ಚಾಯಿತು. ಅಂತರ್ಜಲ ಮತ್ತಷ್ಟು ಪಾತಾಳಕ್ಕೆ ಇಳಿಯಿತು. ದೊಡ್ಡಬಳ್ಳಾಪುರ- ನೆಲಮಂಗಲದ ಆಸುಪಾಸಿನಲ್ಲಿ ಗುಲಾಬಿ `ಗುತ್ತಿಗೆ ಕೃಷಿ' ಆರಂಭವಾಯಿತು. ಇದರಿಂದ ಇದ್ದ-ಬಿದ್ದ ನೀರೆಲ್ಲ ಖಾಲಿಯಾಯಿತು. ಜೀವನ ಸಂಸ್ಕೃತಿಯಾಗಿದ್ದ ಕೃಷಿ, ವಾಣಿಜ್ಯ ಚಟುವಟಿಕೆಯಾಗಿ ಮಾರ್ಪಟ್ಟಿದ್ದರಿಂದ ಉಂಟಾದ ಕುಚೋದ್ಯ ಇದು.ನೆಲಮಂಗಲ - ತಾವರೆಕೆರೆ - ಮಾಗಡಿ ನಡುವಿನ ಸೊಂಡೆಕೊಪ್ಪ, ವರ್ತೂರು ಕೋಡಿ ಭಾಗದಲ್ಲಿ ಮರಳು ಗಣಿಗಾರಿಕೆ ವ್ಯಾಪಕವಾಗಿದೆ. ಮಂಚನಬೆಲೆ ಜಲಾಶಯದ 3-4 ಕಿ.ಮೀ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮರಳು ಗಣಿಗಾರಿಕೆ ನಡೆಯುತ್ತಿದೆ. ಆಗಲಹಳ್ಳಿ, ರಾಮಪುರ, ಲಿಂಗನೂರು, ಹಳೇಕೆಂಚನಹಳ್ಳಿಯಿಂದ ಶುರುವಾಗುವ ಮರಳುಗಾರಿಕೆ ಕಾವೇರಿ ಸಂಗಮದವರೆಗಿನ ನದಿ ಪಾತ್ರದ ಉದ್ದಕ್ಕೂ ನಡೆಯುತ್ತಿದೆ. ಇತ್ತೀಚೆಗೆ ಮಂಚನಬೆಲೆ ಜಲಾಶಯದ ಏರಿಯ ಪಕ್ಕದಿಂದಲೂ ಮರಳು ತೆಗೆಯಲಾಗುತ್ತಿದೆ.`ಹೀಗೇ ಮುಂದುವರಿದರೆ, ಭವಿಷ್ಯದಲ್ಲಿ ಜಲಾಶಯದ ಏರಿಯೂ ಸಡಿಲವಾಗಿ ಬಿರುಕು ಬಿಡುವ ಸಾಧ್ಯತೆ ಇದೆ' ಎನ್ನುತ್ತಾರೆ ನದಿ ಪಾತ್ರದ ಗದಗಯ್ಯನ ದೊಡ್ಡಿ ಕೃಷಿಕ ಶಿವರಾಜೇಗೌಡ.

(ನಾಳಿನ ಸಂಚಿಕೆ: ಬೈರಮಂಗಲ ಕೆರೆಯಲ್ಲಿ ರಾಸಾಯನಿಕ ತಾಂಡವ)

ಪ್ರತಿಕ್ರಿಯಿಸಿ (+)