ಗುರುವಾರ , ಜೂನ್ 17, 2021
22 °C

ಮರ್ಯಾದಾ ಹತ್ಯೆ ತಡೆಯಲು ಕಠಿಣ ಕಾನೂನು ಕ್ರಮ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: “ಮಹಿಳೆ ಮರ್ಯಾದಾ ಹತ್ಯೆ ಎನ್ನುವ ಕೆಟ್ಟ ಸಂಪ್ರದಾಯ ರಾಜ್ಯದಲ್ಲೂ ಪ್ರಾರಂಭವಾಗುವ ಲಕ್ಷಣಗಳು ಕಂಡು ಬರುತ್ತಿವೆ. ಇತ್ತೀಚೆಗೆ ರಾಮನಗರ, ಮಂಡ್ಯ ಹಾಗೂ ಮೈಸೂರಿನಲ್ಲಿ ನಡೆದ ಘಟನೆಗಳು ಪುಷ್ಟೀಕರಿಸುತ್ತಿದ್ದು, ಇದನ್ನು ತಡೆಯಲು ಕಠಿಣ ಕಾನೂನು ಜಾರಿಗೊಳಿಸಬೇಕು” ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ. ಮಂಜುಳಾ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.



`ಸ್ತ್ರೀಯರ ಉದ್ಯೋಗ ಕ್ಷಮತೆ ಹೆಚ್ಚುತ್ತಿರುವ ಸಂಭ್ರಮ ಇರಬೇಕಾದ ನಮ್ಮಲ್ಲಿ, ಯುವತಿಯರ ಮೇಲೆ ಆ್ಯಸಿಡ್ ದಾಳಿಗಳು ಆಗುತ್ತಲೆ ಇವೆ~ ಎಂದು ಕಳವಳ ವ್ಯಕ್ತಪಡಿಸಿದರು.`ಮಾಹಿತಿ ತಂತ್ರಜ್ಞಾನ ಹಾಗೂ ಬಯೋಟೆಕ್ನಾಲಜಿ ತಂತ್ರಜ್ಞಾನ ಉದ್ಯೋಗ ರಂಗಕ್ಕೆ 1946ರ ಔದ್ಯೋಗಿಕ ಕಾಯ್ದೆಯಲ್ಲಿ ಮಹಿಳೆಯರ ರಕ್ಷಣೆ ಕುರಿತ ನಿಯಮಗಳಿಂದ ವಿನಾಯಿತಿ ಇದ್ದುದರಿಂದ ಈ ವರೆಗೆ ಯಾವುದೇ ದೂರು ಬಂದಾಗ ಸಂಬಂಧಿತ ಅಧಿಕಾರಿಗಳು ಕ್ರಮ ಜರುಗಿಸಲು ಅವಕಾಶ ಇರಲಿಲ್ಲ.



ಈಗ ಈ ವಿನಾಯಿತಿಗಳನ್ನು ರದ್ದುಗೊಳಿಸಲಾಗಿದೆ~ ಎಂದರು.`ರಾತ್ರಿ ಅವಧಿಯಲ್ಲಿ ಕೆಲಸ ಮಾಡುವ ಮಹಿಳೆಯರ ಸಮಸ್ಯೆ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ತುಮಕೂರು ವಿಶ್ವವಿದ್ಯಾಲಯಕ್ಕೆ ಹಾಗೂ ಕಳೆದು ಹೋದ ಅಥವಾ ಕಾಣೆಯಾದ ಯುವತಿಯರ ಕುರಿತಂತೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಮೈಸೂರು ವಿಶ್ವವಿದ್ಯಾಲಯಗಳಿಗೆ ಸೂಚಿಸಲಾಗಿತ್ತು.

 

ಮೈಸೂರು ವಿವಿ ಮಧ್ಯಂತರ ವರದಿ ನೀಡಿದೆ. ಯುವತಿಯರು ಕಾಣೆಯಾಗಲು ಶೇ 38ರಷ್ಟು ಕೌಟುಂಬಿಕ ದೌರ್ಜನ್ಯ, ಶೇ 36 ರಷ್ಟು ಪ್ರೇಮ ಪ್ರಕರಣ, ಶಿಕ್ಷಣದ ಒತ್ತಡ ಹಾಗೂ ದೃಶ್ಯ ಮಾಧ್ಯಮ ಪ್ರೇರಿತವಾಗಿ ತಲಾ ಶೇ 5ರಷ್ಟು ಯುವತಿಯರು ಪ್ರಭಾವಿತರಾಗಿದ್ದಾರೆ ಎಂದು ಪ್ರಾಯೋಗಿಕ 506 ಪ್ರಕರಣಗಳ ಸಮೀಕ್ಷೆಯ ವರದಿ ತಿಳಿಸಿದೆ~ ಎಂದು ಹೇಳಿದರು.



`ಶೇ 80ರಷ್ಟು ಪ್ರಕರಣಗಳಲ್ಲಿ ಯುವತಿಯರು ವಾಪಸ್ಸು ಬಂದಿರುವುದು ಕಂಡು ಬಂದಿದೆ. ರಾಜ್ಯದಲ್ಲಿ ಕಾಣೆಯಾದ, ತಪ್ಪಿಸಿಕೊಂಡ ಯುವತಿ ಹಾಗೂ ಮಹಿಳಾ ಪ್ರಕರಣ ನಿಭಾಯಿಸಲು ಪ್ರತ್ಯೇಕ ವಿಭಾಗ ತೆರೆಯುವ ಅವಶ್ಯಕತೆ ಇದೆ. ಮಹಿಳೆಯರು ಪೊಲೀಸ್ ಠಾಣೆಗೆ ಹೋಗುವ ಬದಲಾಗಿ ಆಯೋಗದ ಬಳಿಗೆ ಬರುವಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಇದೆ~ ಎಂದು ಸಲಹೆ ನೀಡಿದರು.



`ಮೈಸೂರು ವಿವಿಯ ಪ್ರಕರಣದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಗಳ ಸಂಬಂಧಿತ ಕಾಯ್ದೆಗೆ ತಿದ್ದುಪಡಿ ತಂದು ಮಹಿಳೆಯರ ದೌರ್ಜನ್ಯ ಹಾಗೂ ಲೈಂಗಿಕ ಹಿಂಸೆಗೆ ಕಠಿಣ ಶಿಕ್ಷೆ ವಿಧಿಸುವ ಮತ್ತು ಅಗತ್ಯವಿದ್ದಲ್ಲಿ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಶಿಕ್ಷೆ ನೀಡಲು ಸಾಧ್ಯವಾಗುವ ಉಪಕ್ರಮ ಸೇರ್ಪಡೆಯಾಗಬೇಕು~ ಎಂದು ಅಭಿಪ್ರಾಯಪಟ್ಟರು.



`ಮಹಿಳಾ ಆಯೋಗವು ಮಹಿಳೆಯ ಸುರಕ್ಷತೆಯನ್ನು ಮುಖ್ಯ ಉದ್ದೇಶವನ್ನಾಗಿಟ್ಟುಕೊಂಡು, ಆ ಗುರಿ ಸಾಧನೆಯಲ್ಲಿ ಎಲ್ಲ ಇಲಾಖೆಗಳ ಸಹಕಾರ ಸೂಕ್ತವಾಗಿ ಸಿಗುತ್ತಿದೆ. ಸುಮಾರು 2 ಸಾವಿರ ಪ್ರಕರಣಗಳ ಪೈಕಿ ಶೇ  50ರಷ್ಟು ಪ್ರಕರಣಗಳನ್ನು ಆಯೋಗವು ಇತ್ಯರ್ಥಗೊಳಿಸಿದೆ~ ಎಂದು ತಿಳಿಸಿದರು.



ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಸರೋಜಿಣಿ ಕಡೇಮನಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.