ಮರ ಬಿದ್ದು ವ್ಯಕ್ತಿ ಸಾವು -ನಾಲ್ವರಿಗೆ ಗಾಯ

7

ಮರ ಬಿದ್ದು ವ್ಯಕ್ತಿ ಸಾವು -ನಾಲ್ವರಿಗೆ ಗಾಯ

Published:
Updated:

ಬೆಂಗಳೂರು: ಅರಳಿ ಮರ ಉರುಳಿ ವಾಹನಗಳ ಮೇಲೆ ಬಿದ್ದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟು ನಾಲ್ಕು ಮಂದಿ ಗಾಯಗೊಂಡಿರುವ ಘಟನೆ ಸಂಜಯನಗರದ ನಾಗಶೆಟ್ಟಿಹಳ್ಳಿ ಬಸ್ ನಿಲ್ದಾಣದ ಬಳಿ ಶನಿವಾರ ನಡೆದಿದೆ.ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ ರವಿ (45) ಮೃತಪಟ್ಟವರು. ಅವರು ಭದ್ರಪ್ಪ ಲೇಔಟ್ ನಿವಾಸಿಯಾಗಿದ್ದರು. ಮತ್ತೀಕೆರೆಯ ಸುಂದರ್, ಲೊಟ್ಟೆಗೊಲ್ಲಹಳ್ಳಿಯ ರಾಜು, ಭದ್ರಪ್ಪಲೇಔಟ್‌ನ ಗೋವರ್ಧನ್ ಮತ್ತು ಸುಜಾತ ಗಾಯಗೊಂಡವರು. ಘಟನೆಯಲ್ಲಿ ಕಾರು, ಮೂರು ಆಟೊ ರಿಕ್ಷಾಗಳು ಮತ್ತು ಎರಡು ದ್ವಿಚಕ್ರ ವಾಹನಗಳು ನಜ್ಜುಗುಜ್ಜಾಗಿವೆ.ನಾಗಶೆಟ್ಟಿಹಳ್ಳಿ ಬಸ್ ನಿಲ್ದಾಣ ಬಳಿ ಭಾರಿ ಗಾತ್ರದ ಆಲದ ಮರ ಇತ್ತು. ಮಧ್ಯಾಹ್ನ 3.15ರ ಸುಮಾರಿಗೆ ಈ ಮರ ಉರುಳಿ ವಾಹನಗಳ ಮೇಲೆ ಬಿತ್ತು. ಮರದ ದೊಡ್ಡ ಗಾತ್ರದ ಕೊಂಬೆಗಳು ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬವೂ ತುಂಡಾಗಿ ಬಿತ್ತು. ಮರ ಬಿದ್ದ ರಭಸಕ್ಕೆ ದ್ವಿಚಕ್ರ ವಾಹನ ಸವಾರ ರವಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ತಲೆ, ಭುಜಕ್ಕೆ ಗಂಭೀರ ಗಾಯಗಳಾಗಿದ್ದವು.ಆಟೊದಲ್ಲಿ ಪ್ರಯಾಣಿಸುತ್ತಿದ್ದ ಗೋವರ್ಧನ್ ಮತ್ತು ರಾಜು ಎಂಬುವರಿಗೆ ತೀವ್ರ ಪೆಟ್ಟಾಗಿದೆ. ಗೋವರ್ಧನ್ ಅವರ ಬಲಗಾಲಿಗೆ ಗಂಭೀರ ಗಾಯವಾಗಿದೆ. ಬಸ್ ನಿಲ್ದಾಣದ ಸಮೀಪ ಹೂ ಮಾರುತ್ತಿದ್ದ ಸುಜಾತಮ್ಮ ಮತ್ತು ಸುಂದರ್ ಎಂಬುವರಿಗೂ ಗಾಯಗಳಾಗಿವೆ. ಕಾರು ಚಾಲಕ ರವಿಕುಮಾರ್ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಅವರ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಆದರೆ ಅವರಿಗೆ ಏನೂ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಾಹನ ಸಂಚಾರಕ್ಕೂ ಅಡಚಣೆ ಆಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸ್ ಮತ್ತು ಬಿಬಿಎಂಪಿ ಸಿಬ್ಬಂದಿ ಮರವನ್ನು ತುಂಡರಿಸಿ ಅದರ ಮಧ್ಯೆ ಸಿಲುಕಿದ್ದ ರವಿ ಅವರ ಶವವನ್ನು ಹೊರ ತೆಗೆದರು.`ಮಧ್ಯಾಹ್ನ ಮೂರು ಗಂಟೆ ಸಮಯ ಆಗಿದ್ದರಿಂದ ಹೆಚ್ಚಿನ ಸಂಚಾರ ದಟ್ಟಣೆ ಇರಲಿಲ್ಲ. ಸಂಜೆ ಅಥವಾ ಬೆಳಿಗ್ಗೆ ಈ ದುರ್ಘಟನೆ ಸಂಭವಿಸಿದ್ದರೆ ವಾಹನ ದಟ್ಟಣೆ ಹೆಚ್ಚಿರುತ್ತಿತ್ತು ಮತ್ತು ಸಾವು- ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇತ್ತು. ಉರುಳಿ ಬಿದ್ದಿರುವ ಮರ ನೂರು ವರ್ಷಕ್ಕೂ ಹಳೆಯದು~ ಎಂದು ನಾಗಶೆಟ್ಟಿಹಳ್ಳಿ ನಿವಾಸಿಗಳು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry