ಶನಿವಾರ, ಏಪ್ರಿಲ್ 17, 2021
33 °C

ಮರ ಬೆಳೆಸದಿದ್ದರೆ ಜೀವಸಂಕುಲವೇ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಜಾಗತಿಕ ಮಟ್ಟದಲ್ಲಿ ತಾಪಮಾನ ಹೆಚ್ಚಳದಿಂದ ಜೀವಸಂಕುಲವೇ ವಿನಾಶವಾಗುವ ಹಂತ ಬಂದಿದ್ದು, ಮರ ಬೆಳೆಸುವುದು, ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿವಹಿಸಿದರೇ ಮಾತ್ರ ಬ್ಲ್ಯೂ ಪ್ಲಾನೆಟ್ ಎಂದು ಕರೆಯಲ್ಪಡುವ ಭೂಮಿ ಸಂರಕ್ಷಣೆಯಾಗಲು ಸಾಧ್ಯ ಎಂದು ಎಲ್‌ವಿಡಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಕೆ. ಕೃಷ್ಣಮೂರ್ತಿ ಹೇಳಿದರು.ಇಲ್ಲಿನ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ, ಸೈನ್ಸ್ ಎಜ್ಯುಕೇಶನ್ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ, ಅಂತರರಾಷ್ಟ್ರೀಯ ರಸಾಯನ ವಿಜ್ಞಾನ ವರ್ಷಾಚರಣೆ ಹಾಗೂ ಅಂತರರಾಷ್ಟ್ರೀಯ ಅರಣ್ಯಗಳ ವರ್ಷಾಚರಣೆ-2011 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಈಗ್ಗೆ ಕೆಲ ದಶಕಗಳ ಹಿಂದೆ ಭೂಮಿ ನೀಲಿ ರೂಪದಲ್ಲಿ ಕಾಣುತ್ತಿತ್ತು. ಅದಕ್ಕಾಗಿಯೇ ಬ್ಲ್ಯೂ ಪ್ಲಾನೆಟ್ ಎಂದು ಕರೆಯಲಾಗುತ್ತಿತ್ತು. ಈಚೆಗೆ ವಿಜ್ಞಾನಿಗಳ ಸಂಶೋಧನೆ ಮಾಹಿತಿ ಪ್ರಕಾರ ಭೂಮಿಯು ಈಗ ಉರಿಯುವ ಚೆಂಡಿನಂತೆ ಕಾಣುತ್ತಿದೆಯಂತೆ. ಇದು ಮನುಷ್ಯ ಭೂಮಿಗೆ ಕೊಟ್ಟ ಕೊಡುಗೆ ಎಂದು ವಿಷಾದಿಸಿದರು.ಸ್ವಾಥಕ್ಕಾಗಿ ಮನುಷ್ಯ ಅರಣ್ಯ ನಾಶ, ಪರಿಸರ ನಾಶ ಮಾಡುವ ಪ್ರವೃತ್ತಿ ಬದಲಾಗಬೇಕು. ಸರ್ಕಾರದಲ್ಲಿ ಮಟ್ಟದಲ್ಲಿ ಏನೆಲ್ಲ ಜನಜಾಗೃತಿ ಕಾರ್ಯಕ್ರಮಗಳು ನಡೆಯಬಹುದು. ಆದರೆ ಜನತೆಯ ಜವಾಬ್ದಾರಿಯೂ ಇದೆ. ವಿಶೇಷವಾಗಿ ಯುವ ಪೀಳಿಗೆ, ಶಾಲಾ ಮಕ್ಕಳು ಸ್ವಯಂ ಪ್ರೇರಣೆಯಿಂದ ಈ ಪರಿಸರ ಸಂರಕ್ಷಣೆ, ಮರಗಳನ್ನು ಕಾಳಜಿಯಿಂದ ಬೆಳೆಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ನುಡಿದರು.ಈ ಜಿಲ್ಲೆಯಲ್ಲಿ 34,453 ಹೆಕ್ಟೇರ್ ಅರಣ್ಯ ಪ್ರದೇಶವಿದೆ. 8,38000 ಹೆಕ್ಟೇರ್ ಒಟ್ಟು ಪ್ರದೇಶವಿದೆ. ತಾಪಮಾನ, ಗಿಡಮರ ಸಂರಕ್ಷಣೆಗೆ ಆದ್ಯತೆ ಕೊಡದೇ ಇರುವುದು, ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಮರ ಬೆಳೆಸುವ ಮನೋಭಾವ ಎಲ್ಲರಲ್ಲೂ ಬಂದು ಸಂರಕ್ಷಣೆ ಮಾಡಿದರೆ ಈ ಜಿಲ್ಲೆ ಮಲೆನಾಡು ಪ್ರದೇಶವಾಗಲಿದೆ ಎಂದು  ಅರಣ್ಯಾಧಿಕಾರಿ ಮಂಜುನಾಥ  ತಿಳಿಸಿದರು.ಒಂದು ಆಲದ ಮರ ವರ್ಷಕ್ಕೆ 1 ಕೋಟಿ ರೂ ಮೊತ್ತದ ಪ್ರಾಣವಾಯುವನ್ನು ನಿಸ್ವಾರ್ಥವಾಗಿ ಕೊಡುತ್ತದೆ. ಆದರೆ ಸ್ವಾರ್ಥಿ ಮನುಷ್ಯ 8 ಕೋಟಿ ಮೊತ್ತದ ಇಂಗಾಲದ ಡೈ ಆಕ್ಸೈಡ್ ಕೊಡುಗೆಯಾಗಿ ಕೊಡುತ್ತಿದ್ದಾನೆ ಎಂದ ಆತಂಕ ವ್ಯಕ್ತಪಡಿಸಿದ ಅವರು, ಗಿಡಮರಗಳ ಮಹತ್ವ ವಿವರಿಸಿದರು.ಅಧ್ಯಕ್ಷತೆವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಮೃತ ಬೆಟ್ಟದ ಅವರು ಮಾತನಾಡಿ, ಪರಿಸರ ಸಂರಕ್ಷಣೆ ಎಂಬುದು ಇಂದಿನಿಂದಲೇ ಆರಂಭಗೊಳ್ಳಬೇಕು. ಒಂದು ಶಾಲೆಯಲ್ಲಿ 10 ಮಕ್ಕಳು 1 ಮರ ಬೆಳೆಸಿದರೆ ಪ್ರತಿ ವರ್ಷ ಲಕ್ಷಾಂತರ ಮರ ಬೆಳೆಸಲು ಸಾಧ್ಯವಾಗುತ್ತದೆ. ಶಾಲಾ ಮಕ್ಕಳು ಮರಗಳನ್ನು ನೆಡುವುದರ ಜೊತೆಗೆ ಅವುಗಳ ಪರಿಪೂರ್ಣ ಸಂರಕ್ಷಣೆ ಜವಾಬ್ದಾರಿ ತಮ್ಮದೇ ಎಂದು ಭಾವಿಸಬೇಕು ಎಂದು ತಿಳಿಸಿದರು.ಬೆಂಗಳೂರಿನ ಅಸೋಸಿಯೇಶನ್ ಫಾರ್ ಸೈನ್ಸ್ ಎಜ್ಯುಕೇಶನ್ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ವಾಯ್ ತುಳಜಪ್ಪ ಅವರು ವಿಶೇಷ ಉಪನ್ಯಾಸ ನೀಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ವಿಜ್ಞಾನ ಕೇಂದ್ರದ ಗೌರವ ಕಾರ್ಯದರ್ಶಿ ಪ್ರೊ ಸಿ.ಡಿ ಪಾಟೀಲ ಅವರು ವಿಜ್ಞಾನ ದಿನಾಚರಣೆ, ರಸಾಯನ ವಿಜ್ಞಾನ ವರ್ಷಾಚರಣೆ, ಅರಣ್ಯ ವರ್ಷಾಚರಣೆ ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.