ಬುಧವಾರ, ಸೆಪ್ಟೆಂಬರ್ 18, 2019
25 °C

ಮಲಗಿರುವ ಮಾಹಿತಿ ಕೇಂದ್ರ

Published:
Updated:
ಮಲಗಿರುವ ಮಾಹಿತಿ ಕೇಂದ್ರ

ಬೆಂಗಳೂರು: ರಾಜ್ಯದ ಪ್ರಮುಖ ಕವಿಗಳು, ಲೇಖಕರ ಅಪರೂಪದ ಕಾವ್ಯ, ಲೇಖನಗಳ ಹಸ್ತಪ್ರತಿ, ಅವರಿಗೆ ಸಂಬಂಧಿಸಿದ ವಸ್ತುಗಳು ಮತ್ತು ನೂರಾರು ಸಾಹಿತಿಗಳ ಸಂಕ್ಷಿಪ್ತ ವಿವರಗಳನ್ನು ಒಳಗೊಂಡಿರುವ `ಮಾಹಿತಿ ಕೇಂದ್ರ~ವು ಇದೀಗ ಕನ್ನಡ ಭವನದ ಅಂಗಳದಲ್ಲಿ ಸದ್ದಿಲ್ಲದೇ ಮಲಗಿದೆ.ಸಾಹಿತಿ, ಚಲನಚಿತ್ರ ನಿರ್ದೇಶಕ ಡಾ.ಬರಗೂರು ರಾಮಚಂದ್ರಪ್ಪ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧಕ್ಷರಾಗಿದ್ದ ಅವಧಿಯಲ್ಲಿ (1992-95) ಈ ಮಾಹಿತಿ ಕೇಂದ್ರವನ್ನು ಆರಂಭಿಸಲಾಗಿತ್ತು. ಅಂದು ನೃಪತುಂಗ ರಸ್ತೆಯಲ್ಲಿದ್ದ ಅಕಾಡೆಮಿಯ ಕಚೇರಿಯ ಬಳಿಯೇ ಗೋದಾಮೊಂದರಲ್ಲಿ ಈ ಕೇಂದ್ರ ಆರಂಭಿಸಿದ್ದ ಅಕಾಡೆಮಿ ಕಾಲಾಂತರದಲ್ಲಿ ಈ ಕೇಂದ್ರದ ನಿರ್ವಹಣೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಸ್ತಾಂತರಿಸಬೇಕಾಯಿತು. ಆಗಿನಿಂದಲೂ ಇದರ ದುರ್ಗತಿ ಆರಂಭವಾಗಿ ಇಲ್ಲಿಯವರೆಗೂ ಮುಂದುವರೆದಿದೆ.1994ರಲ್ಲಿ ಆರಂಭವಾದ ಈ ಕೇಂದ್ರವನ್ನು ಬರಗೂರರ ಮನವಿಯ ಮೇರೆಗೆ ಅಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಎಚ್. ವಿಶ್ವನಾಥ್ ಅವರು ನೃಪತುಂಗ ರಸ್ತೆಯ ಕಟ್ಟಡವೊಂದರಲ್ಲಿ ಆರಂಭಿಸಲು ಅನುಮತಿ ನೀಡಿದರು. ನಂತರ ಇಡೀ ಇಲಾಖೆಯ ಕಟ್ಟಡಗಳನ್ನು ಜೆ.ಸಿ.ರಸ್ತೆಯ ಇಂದಿನ ಕನ್ನಡ ಭವನಕ್ಕೆ ವರ್ಗಾಯಿಸಲಾಯಿತು. ಸಹಜವಾಗಿ ಅಕಾಡೆಮಿ ಕಟ್ಟಡವೂ ಇಲ್ಲಿಗೆ ಸ್ಥಳಾಂತರಗೊಂಡಿತು. ಆಗ ಅಕಾಡೆಮಿಯ ಸುಪರ್ದಿಯಲ್ಲಿದ್ದ ಈ ಮಾಹಿತಿ ಕೇಂದ್ರವನ್ನು ಇಲಾಖೆ ತಾನೇ ನಿರ್ವಹಿಸುವುದಾಗಿ ಭರವಸೆ ನೀಡಿ ಎಲ್ಲ ವಸ್ತುಗಳನ್ನು ಪಡೆಯಿತು. 1997-98ರಲ್ಲಿ ಇಲಾಖೆಯ ಅಧೀನಕ್ಕೆ ಬಂದ ಕೇಂದ್ರವನ್ನು ಬರಗೂರು ಅವರೇ ಉದ್ಘಾಟಿಸಿದರು. ಆದರೆ, ಅದು ಇನ್ನಷ್ಟು ಸಾಹಿತ್ಯಾಸಕ್ತರಿಗೆ ಹತ್ತಿರವಾಗುವ ಬದಲು ದೂರವಾಗುತ್ತಾ ಸಾಗಿತು.ಅಕಾಡೆಮಿಯ ಸದಸ್ಯರು, ರಾಜ್ಯದ ಎಲ್ಲ ಜಿಲ್ಲೆಗಳ ಸಾಹಿತಿಗಳು, ಸಾಹಿತ್ಯ ಪತ್ರಗಳು, ಹಸ್ತಪ್ರತಿಗಳು, ಅವರಿಗೆ ಸಂಬಂಧಪಟ್ಟ ವಸ್ತುಗಳನ್ನು ಸಂಗ್ರಹಿಸಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಮುಂದಿನ ಜನಾಂಗಕ್ಕೆ ಹಿಂದಿನ ಇತಿಹಾಸ, ಪರಂಪರೆ ತಿಳಿಯಲಿ ಎಂಬ ಉದ್ದೇಶದಿಂದ ಮಾಡಿದ ಈ ಕೇಂದ್ರ ಸ್ಥಾಪನೆಯ ಉದ್ದೇಶವೇ ಇದೀಗ ನಿಷ್ಫಲವಾಗಿದೆ ಎಂದು ಇಲಾಖೆಯ ವಿವಿಧ ವಿಭಾಗಗಳಲ್ಲಿ ಕೆಲಸ ನಿರ್ವಹಿಸಿರುವ ಅಧಿಕಾರಿಯೊಬ್ಬರು ವಿಷಾದ ಹಾಗೂ ಅಸಮಾಧಾನದಿಂದ ನುಡಿದರು.ಏನೇನಿದೆ?: ಮಾಹಿತಿ ಕೇಂದ್ರ ಸ್ಥಾಪನೆಯ ಆರಂಭದಲ್ಲಿ ಹಲವಾರು ಅಪರೂಪದ ವಸ್ತುಗಳನ್ನು ಸಂಗ್ರಹಿಸಲಾಗಿತ್ತು. ಯಾವುದೇ ಸಾಹಿತಿಯ ವಿವರಗಳು ಮಾಧ್ಯಮಗಳು ಅಥವಾ ಆಸಕ್ತರಿಗೆ ಬೇಕೆಂದಾಗ ತಕ್ಷಣ ಒದಗಿಸಲು ಅವರ ಜೀವನ, ಸಾಧನೆಗಳ ಕುರಿತ ಚಿಕ್ಕ ಟಿಪ್ಪಣೆಗಳನ್ನು ಸಂಗ್ರಹಿಸಲಾಗಿತ್ತು. ಇಂಥ 125ಕ್ಕೂ ಅಧಿಕ ಸಾಹಿತಿಗಳ ಬಗ್ಗೆ ಮಾಹಿತಿಗಳಿವೆ.ಖ್ಯಾತ ನಾಟಕಕಾರ ಟಿ.ಪಿ.ಕೈಲಾಸಂ ಅವರು ಬಳಸುತ್ತಿದ್ದ ಟೈಪ್‌ರೈಟರ್, ಶ್ಯಾಂ ಹುದ್ದಾರ್ ಎಂಬುವರು ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಡಾ.ಎಂ.ಗೋಪಾಲಕೃಷ್ಣ ಅಡಿಗರು ಸೇರಿದಂತೆ ಹಲವರಿಂದ ಬರೆಸಿದ್ದ `ನನ್ನ ದೃಷ್ಟಿಯಲ್ಲಿ ಬದುಕು~ ಎಂಬ ವಿಷಯ ಕುರಿತಾದ ಪತ್ರಗಳು, `ಪ್ರಗತಿಶೀಲ ಬರಹಗಳು ಹೊಂದಿರಬಹುದಾದ ಮಾನದಂಡ~ಗಳ ಬಗ್ಗೆ ಅ.ನ.ಕೃಷ್ಣರಾಯರು ಮತ್ತು ನಿರಂಜನರ ಮಧ್ಯೆ ನಡೆದ ಸಾಹಿತ್ಯಿಕ ವಾಗ್ವಾದಗಳ ಪತ್ರಗಳು ಈ ಕೇಂದ್ರದಲ್ಲಿ ಸೇರಿವೆ.

`ವೀಕ್ಷಣೆಗೆ ಅವಕಾಶ~

ಮಾಹಿತಿ ಕೇಂದ್ರ ನಿರ್ವಹಣೆಗೆಂದೇ ಇಲಾಖೆ ಈ ಬಾರಿ 9 ಲಕ್ಷ ರೂಪಾಯಿಗಳನ್ನು ತೆಗೆದಿರಿಸಿದೆ. ಕೇಂದ್ರಕ್ಕೆ ಒಬ್ಬ ಮಾಹಿತಿ ಅಧಿಕಾರಿಯನ್ನು ನಿಯೋಜಿಸಲಾಗುವುದು. ಪ್ರತ್ಯೇಕ ಕೊಠಡಿಯನ್ನು ಇದಕ್ಕಾಗಿ ಮೀಸಲಿಟ್ಟು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಲಾಗುವುದು. ಈ ಪ್ರಕ್ರಿಯೆ ಡಿಸೆಂಬರ್ ಒಳಗೆ ಪೂರ್ಣಗೊಳ್ಳಲಿದೆ.

 -ಕಾ.ತ.ಚಿಕ್ಕಣ್ಣ, ಜಂಟಿ ನಿರ್ದೇಶಕ,

 ಕನ್ನಡ ಮತ್ತು ಸಂಸ್ಕೃತಿ ಇಲಾಖೆ

`ವಿಷಾದನೀಯ~

ಅಕಾಡೆಮಿಗೆ ವಾರ್ಷಿಕವಾಗಿ ಬರುತ್ತಿದ್ದ ರೂ 8.50 ಲಕ್ಷ ರೂಪಾಯಿಗಳಲ್ಲೇ ಸ್ವಲ್ಪ ಭಾಗವನ್ನು ಇದಕ್ಕಾಗಿ ಮೀಸಲಿಟ್ಟು ಕೇಂದ್ರಕ್ಕೆ ಚಾಲನೆ ನೀಡಲಾಗಿತ್ತು. ಆದರೆ ಇದೀಗ ಇಡೀ ಇಲಾಖೆಗೆ 200 ಕೋಟಿ ರೂಪಾಯಿ ಬರುತ್ತಿದೆ. ಆದರೂ ಇಲಾಖೆ ಈ ಬಗ್ಗೆ ಗಮನಹರಿಸದಿರುವುದು ವಿಷಾದನೀಯ. ಇದರಿಂದ ರಾಜ್ಯದ ಸಾಹಿತ್ಯಾಸಕ್ತರಿಗೆ ನಮ್ಮ ಪರಂಪರೆ ತಿಳಿಯುವ ಅವಕಾಶ ಇಲ್ಲದಂತಾಗುತ್ತಿದೆ.

 -ಪ್ರೊ.ಬರಗೂರು ರಾಮಚಂದ್ರಪ್ಪ,

 ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ

Post Comments (+)