ಬುಧವಾರ, ಏಪ್ರಿಲ್ 14, 2021
31 °C

ಮಲತಂದೆ ಪರ್ವೇಜ್ ತಕ್ ತಪ್ಪೊಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ/ಐಎಎನ್‌ಎಸ್):ಪಾಕಿಸ್ತಾನ ಮೂಲದ ಬಾಲಿವುಡ್ ನಟಿ ಲೈಲಾ ಖಾನ್, ಅವಳ ತಾಯಿ ಮತ್ತು ಕುಟುಂಬದ ಇತರ ಮೂವರು ಸದಸ್ಯರನ್ನು ಆಸ್ತಿಗಾಗಿ ತಾನೇ ಕೊಲೆ ಮಾಡಿರುವುದಾಗಿ ನಟಿಯ ಮಲತಂದೆ ಪರ್ವೇಜ್ ತಕ್ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.ಲೈಲಾ ಖಾನ್ ತಾಯಿ ಸಲೀನಾ ಬೇಗಂ ತನ್ನ ಎರಡನೇ ಪತಿ ಆಶಿಫ್ ಶೇಖ್‌ನಿಗೆ ಇತ್ತೀಚೆಗೆ ತೀರಾ ಹತ್ತಿರವಾಗತೊಡಗಿದ್ದು ಮತ್ತು ನಾಸಿಕ್ ಜಿಲ್ಲೆಯ ಇಗಾತ್‌ಪುರಿ ತೋಟದ ಮನೆಯ ಉಸ್ತುವಾರಿ ಅಧಿಕಾರವನ್ನು ಅವನಿಗೆ ನೀಡಿದ್ದನ್ನು ಸಹಿಸಿಕೊಳ್ಳಲಾಗದೆ ಕೊಲೆ ಮಾಡಿರುವುದಾಗಿ ತಕ್ ಮುಂಬೈ ಅಪರಾಧ ವಿಭಾಗದ ಪೊಲೀಸರಿಗೆ ತಿಳಿಸಿದ್ದಾನೆ. ವೃತ್ತಿಯಿಂದ ಕಟ್ಟಡ ನಿರ್ಮಾಣ ಮತ್ತು ಅರಣ್ಯ ಗುತ್ತಿಗೆದಾರನಾಗಿರುವ ತಕ್, ಮೂಲತಃ ಜಮ್ಮು ಮತ್ತು ಕಾಶ್ಮೀರದವನಾಗಿದ್ದು ಲಷ್ಕರ್-ಎ-ತೊಯ್ಬಾ ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.ಇದೇ ಫೆಬ್ರುವರಿಯಿಂದ ಕಾಣೆಯಾಗಿದ್ದ ಲೈಲಾ, ತಾಯಿ ಸಲೀನಾಬೇಗಂ ಮತ್ತು ಅವರ ಕುಟುಂಬದ ಸದಸ್ಯರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ವಿಭಾಗದ ಪೊಲೀಸರು ತಕ್‌ನ ವಿಚಾರಣೆ ನಡೆಸುತ್ತಿದ್ದಾರೆ. ಸಲೀನಾ ಕೊಲೆಯನ್ನು ಕಣ್ಣಾರೆ ಕಂಡ ಕಾರಣ ಲೈಲಾ ಸೇರಿದಂತೆ ಉಳಿದವರನ್ನೂ ಹತ್ಯೆ ನಡೆಸಿರುವುದಾಗಿ ತಕ್ ತಿಳಿಸಿದ್ದಾನೆಂದು ಮೂಲಗಳು ತಿಳಿಸಿವೆ.ನಕಲಿ ಸಹಿ, ದಾಖಲೆ ಸೃಷ್ಟಿ ಆರೋಪದ ಮೇಲೆ ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಕ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಈ ನಡುವೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಜುಲೈ 19ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಆರು ಅಸ್ಥಿಪಂಜರ ಪತ್ತೆ

ಇಗಾತ್‌ಪುರಿ ತೋಟದಮನೆಯಲ್ಲಿ ಎರಡನೇ ದಿನವಾದ ಬುಧವಾರವೂ ಪೊಲೀಸರ ಶೋಧನಾ ಕಾರ್ಯ ಭರದಿಂದ ಮುಂದುವರೆದಿದ್ದು ಆರು ಅಸ್ಥಿಪಂಜರಗಳು ದೊರೆತಿವೆ. ಆ ಪೈಕಿ ಐದು ಮಹಿಳೆಯರದಾಗಿದ್ದು, 1 ಪುರುಷನ ಅಸ್ಥಿ ಪಂಜರವಾಗಿದೆ.ಎಲ್ಲ ಅಸ್ಥಿಪಂಜರಗಳನ್ನು ಹೆಚ್ಚಿನ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು ವರದಿ ಬಂದ ನಂತರವೇ ಈ ಬಗ್ಗೆ ಅಧಿಕೃತವಾಗಿ ಹೇಳಬಹುದು ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ತಕ್‌ನನ್ನು ಪೊಲೀಸರು ಬುಧವಾರ ಇಗಾತ್‌ಪುರ್ ತೋಟದ ಮನೆಗೆ ಕರೆತಂದಿದ್ದಾರೆ. ಅವನು ತೋರಿಸಿದ ಸ್ಥಳದಲ್ಲಿ ಅಗೆದಾಗ ಲೈಲಾ ಮತ್ತು ಅವರ ಕುಟುಂಬದ ಸದಸ್ಯರ ಅಸ್ಥಿಪಂಜರ, ಬಟ್ಟೆಗಳನ್ನು ತುಂಬಿದ ಚೀಲ ಹಾಗೂ ಇನ್ನಿತರ ವಸ್ತುಗಳು ದೊರೆತಿವೆ.ಇದೇ ಫೆಬ್ರುವರಿಯಿಂದ ಲೈಲಾ, ಅವಳ ತಾಯಿ ಸಲೀನಾ ಮತ್ತು ಇತರ ಕುಟುಂಬದ ಸದಸ್ಯರು ಕಾಣೆಯಾಗಿದ್ದರು. ಈ ಬಗ್ಗೆ ಲೈಲಾ ತಂದೆ ನಾದಿರ್ ಪಟೇಲ್ ಅವರು ಮುಂಬೈ ಠಾಣೆಯಲ್ಲಿ ದೂರು ನೀಡಿದ್ದರು. ಮೂಲತಃ ಪಾಕಿಸ್ತಾನದವಳಾದ ಲೈಲಾ ಕುಟುಂಬ ದುಬೈ, ಮುಂಬೈ ವಿವಿಧೆಡೆ ಅಪಾರ ಮೌಲ್ಯದ ಆಸ್ತಿಯನ್ನು ಹೊಂದಿತ್ತು. ರಾಜೇಶ್ ಖನ್ನಾ ಜತೆ 2008ರಲ್ಲಿ `ವಫಾ~ ಚಿತ್ರದಲ್ಲಿ ನಟಿಸಿದ್ದ ರೇಷ್ಮಾ ಪಟೇಲ್ ಹೆಸರನ್ನು ಚಿತ್ರಕ್ಕಾಗಿಯೇ ಲೈಲಾ ಎಂದು ಮರು ನಾಮಕರಣ ಮಾಡಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.