ಮಲಬಾರ್ ದೊರೆ
ದಾಂಡೇಲಿ ಕಾಡಿನ ಮರಗಳಿಗೆ ಹಸಿರು ಬಳಿಯುವಂತೆ, ಮರಗಳ ಮೇಲಿನ ಮುಗಿಲಿಗೆ ನೀಲಿ ಬಳಿಯುವಂತೆ ಅಳಿಲುಗಳ ಚಿನ್ನಾಟ ರಂಗೇರಿತ್ತು. ನೋಡಿದರೆ ಮುದ್ದು ಉಕ್ಕಿಸುವ ಅಳಿಲುಗಳು. ಇವು `ಮಲಬಾರ್ ಅಳಿಲು~ಗಳು.
ಹೂಗಳ ಕೇಸರ ಶಲಾಕೆಗಳ ಗೊಂಚಲಂತೆ ಕಾಣಿಸುತ್ತಿತ್ತು ಬಾಲ. ರೇಷಿಮೆ ನುಣುಪಿನ ಚರ್ಮ. ದೊಡ್ಡದಾದ ಪಿಳಿಪಿಳಿ ಕಣ್ಣುಗಳು. ಈ ಅಳಿಲುಗಳಿಗೆ ದೃಷ್ಟಿ ವಿಪರೀತ ಚುರುಕು.
ಅಳಿಲುಗಳು ಸಾಮಾನ್ಯವಾಗಿ ಸಣ್ಣ ಪ್ರಾಣಿ. ಅತಿ ಕಡಿಮೆ ಉದ್ದದಿಂದ ಹಿಡಿದು ಉನ್ನತ ಪರ್ವತದ ಕಾಡಿನ ಮಲಬಾರ್ ಅಳಿಲು 14 ಸೆಂ.ಮೀನಿಂದ 36 ಸೆಂ.ಮೀ. ಉದ್ದವಿರುತ್ತದೆ.
ಬಾಲ ಸುಮಾರು 2 ಅಡಿಯಷ್ಟು ಉದ್ದವಿದ್ದು, ಸುಮಾರು 2 ಕೇಜಿ ತೂಕವಿರುತ್ತದೆ.
ಮಲಬಾರ್ ಅಳಿಲುಗಳಿಗೆ ಹಿಂಭಾಗದಲ್ಲಿರುವ ಕಾಲುಗಳು ಮುಂಭಾಗದ ಕಾಲುಗಳಿಗಿಂತ ಉದ್ದ. ಪ್ರತಿ ಪಾದದಲ್ಲಿ ನಾಲ್ಕು ಅಥವಾ ಐದು ಬೆರಳುಗಳಿರುತ್ತವೆ.
ಮುಂಭಾಗದ ಕಾಲಿನ ಪಾದದಲ್ಲಿ ಹೆಬ್ಬೆರಳಿದ್ದು, ಇದು ಕಡಿಮೆ ಬೆಳವಣಿಗೆ ಹೊಂದಿರುತ್ತದೆ, ಇದರ ಪಾದದ ಕೆಳಮೇಲ್ಮೈನಲ್ಲಿ ಮೆತ್ತನೆ ಪ್ಯಾಡ್ ಇರುತ್ತದೆ. ಕಾಲುಗಳಲ್ಲಿ ಗಟ್ಟಿಮುಟ್ಟಾದ ಉಗುರುಗಳು ಇರುವುದರಿಂದ ಮರ ಹತ್ತುವುದು ಅಳಿಲುಗಳಿಗೆ ಸಲೀಸು. ಇವುಗಳ ಬಾಚಿ ಹಲ್ಲುಗಳು ಜೀವನಪರ್ಯಂತ ಬೆಳೆಯುತ್ತಲೇ ಇರುತ್ತವಂತೆ.
ದಾಂಡೇಲಿಯ ಪರಿಸರದಲ್ಲಿ ಈಚೆಗೆ ಮಲಬಾರ್ ಅಳಿಲುಗಳ ಸಂತತಿ ಹೆಚ್ಚಾಗಿ ಕಂಡು ಬರುತ್ತಿದೆಯಂತೆ. ವರ್ಷಕ್ಕೊಮ್ಮೆ ಅಥವಾ ಎರಡು ಸಲ ಮರಿಹಾಕುವ ಇವುಗಳು, ಮರದ ರೆಂಬೆಗಳ ನಡುವೆ ಗೂಡು ಕಟ್ಟುತ್ತದೆ. ಶತ್ರುಗಳ ಕಾಟದಿಂದ ತಪ್ಪಿಸಿಕೊಳ್ಳಲು ಅನೇಕ ಮರಗಳ ಮೇಲೆ ಗೂಡು ನಿರ್ಮಿಸಿ ದಾರಿ ತಪ್ಪಿಸುವ ಜಾಣತನ ಮೆರೆಯುತ್ತವೆ.
ಮಲಬಾರ್ ಅಳಿಲುಗಳು ಮರದಿಂದ ಮರಕ್ಕೆ ಸುಮಾರು 20 ಅಡಿಗಳವರೆಗೆ ಹಾರುವ ದೃಶ್ಯ ರೋಮಾಂಚಕವಾದುದು. ಬೆಳಿಗ್ಗೆ ಮತ್ತು ಸಂಜೆ ಆಹಾರದ ಬೇಟೆಯಲ್ಲಿ ತೊಡಗುವ ಇವು, ಮಿಕ್ಕ ಸಮಯದಲ್ಲಿ ಮರಗಳ ಮರೆಯಲ್ಲಿ ಅವಿತು ವಿಶ್ರಮಿಸುತ್ತವೆ. ಅಂದಹಾಗೆ, ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುವ ಮಲಬಾರ್ ಅಳಿಲುಗಳು ಮಹಾರಾಷ್ಟ್ರದ ರಾಜ್ಯ ಪ್ರಾಣಿಯೂ ಹೌದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.