ಸೋಮವಾರ, ಜನವರಿ 27, 2020
20 °C

ಮಲೆನಾಡಿನಲ್ಲಿ ಕಾರು ರ್‍ಯಾಲಿ ಕಲರವ

ಕೆ.ಎಂ.ಸಂತೋಷ್‌ ಕುಮಾರ್‌ Updated:

ಅಕ್ಷರ ಗಾತ್ರ : | |

ಮಲೆನಾಡಿನಲ್ಲಿ ಕಾರು ರ್‍ಯಾಲಿ ಕಲರವ

ಚಿಕ್ಕಮಗಳೂರಿನ  ಕಾಫಿ ಕಣಿವೆ­ಯಲ್ಲಿ ಪ್ರತಿ ವರ್ಷ ನಡೆಯುವ ಕಾರು ರ್‍ಯಾಲಿ ಯನ್ನು ನೋಡಿದವರಿಗೇ ಗೊತ್ತು ಅದರ ಗಮ್ಮತ್ತು. ರಾಷ್ಟ್ರಮಟ್ಟದಲ್ಲಿ ಮೋಟಾರ್‌ ರ್‍ಯಾಲಿಯ­ ‘ಹಾಟ್‌ ಸ್ಪಾಟ್‌’ ಆಗಿ ಗಮನ ಸೆಳೆಯುತ್ತಿರುವ ಮಲೆನಾಡು ಈಗ  2014ರ ಏಷ್ಯಾ ಕಪ್‌ಗೆ ಆತಿಥ್ಯ ವಹಿ ಸುವ ಸುವರ್ಣಾವಕಾಶ ಗಿಟ್ಟಿಸುವ ಹಂತದಲ್ಲಿದೆ. ಏಷ್ಯಾ ಕಪ್‌ ಆತಿಥ್ಯ ವಹಿಸುವ ಅವಕಾಶ ಭಾರತಕ್ಕೆ ಇದೇ ಮೊದಲ ಬಾರಿಗೆ ಸಿಗುವ ನಿರೀಕ್ಷೆ ಇದೆ.  ಅಂತರರಾಷ್ಟ್ರೀಯ ಮಟ್ಟದ ಮೋಟಾರ್‌ ರ್‍ಯಾಲಿಗೆ ಆತಿಥ್ಯ ವಹಿಸಿದ ನಗರ ಎನ್ನುವ ಕೀರ್ತಿಗೆ ಚಿಕ್ಕಮಗಳೂರು ಪಾತ್ರ­ ಆಗಲಿದೆ. ಕಾಫಿ ಕಣಿವೆಯಲ್ಲಿ ನಡೆಯುತ್ತಿರುವ ಪ್ರಸಕ್ತ ಸಾಲಿನ ಐಎನ್‌ಆರ್‌ಸಿಯ ಅಂತಿಮ ಸುತ್ತಿನ ರ್‍ಯಾಲಿ ಏಷ್ಯಾ ಕಪ್‌ಗೆ ಪೂರ್ವ ಸಿದ್ಧತೆಯ ರ್‍ಯಾಲಿ ಎಂದೇ ಪರಿಗಣಿಸಲ್ಪಟ್ಟಿದೆ. ಐಎನ್‌ಆರ್‌ಸಿಯ 5ನೇ ಹಾಗೂ ಕೊನೆ ಸುತ್ತಿನ ರ್‍ಯಾಲಿ ವೀಕ್ಷಣೆಗಾಗಿ ಅಂತರರಾಷ್ಟ್ರೀಯ ಮೋಟಾರ್‌ ಸ್ಪೋರ್ಟ್ಸ್ ಕ್ಲಬ್‌ ಫೆಡ ರೇಷನ್‌ ಕಡೆಯಿಂದ ವೀಕ್ಷಕರಾಗಿ ಮಲೇಷ್ಯಾದಿಂದ ನಂತನ್‌ ಮತ್ತು ನ್ಯೂಜಿಲೆಂಡ್‌ನಿಂದ ಮುರ್ರೆ ಬ್ರೌನ್‌ ಬಂದಿದ್ದು, ಜಿಲ್ಲೆಯಲ್ಲಿ ಬೀಡುಬಿಟ್ಟಿ ದ್ದಾರೆ. ರ್‍ಯಾಲಿಯಲ್ಲಿ ಎದುರಾಗುವ ತಪ್ಪು–ಒಪ್ಪುಗಳನ್ನು ಗಮನಿಸುತ್ತಿದ್ದು, ಅಂತರ ರಾಷ್ಟ್ರೀಯ ಮಟ್ಟದ ಸ್ಪರ್ಧೆ ಆಯೋಜಿಸಲು ಬೇಕಾದ ಪೂರ್ವ ಸಿದ್ಧತೆಗೆ ಸಲಹೆಗಳನ್ನು ನೀಡುತ್ತಿದ್ದಾರೆ.ಅಂತರರಾಷ್ಟ್ರೀಯ ಮಟ್ಟದ ರ್‍ಯಾಲಿಗೆ ಚಿಕ್ಕಮಗಳೂರು ಸನ್ನದ್ಧವಾಗಿದ್ದರೆ ಅದಕ್ಕೆ ಚಿಕ್ಕಮಗಳೂರು ಮೋಟಾರ್‌ ಸ್ಪೋರ್ಟ್ಸ್ ಕ್ಲಬ್‌ ಕೊಡುಗೆ ಅನನ್ಯವಾ ದುದು. ಸ್ಥಳೀಯವಾಗಿ ಪ್ರತಿಭೆಗಳನ್ನು ಗುರುತಿಸುವುದು ಮತ್ತು ಅವರನ್ನು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅಣಿಗೊಳಿಸಲು ವೇದಿಕೆ ಒದಗಿಸಿ ಮಾರ್ಗದರ್ಶನ ಮಾಡುತ್ತಿದೆ.ಸುಮಾರು ಮೂರು ದಶಕಗಳ ಹಿಂದೆ ಆರಂಭವಾದ ಚಿಕ್ಕಮಗಳೂರು ಮೋಟಾರ್‌ ಸ್ಪೋರ್ಟ್ಸ್‌ ಕ್ಲಬ್‌ ಹಲವು ಏಳುಬೀಳುಗಳನ್ನು ಕಂಡಿದೆ. ಪ್ರಾಯೋ ಜಕರ ಕೊರತೆಗಳ ನಡುವೆಯೂ ರ್‍ಯಾಲಿ ಆಕರ್ಷಣೆ ಕಳೆದುಕೊಳ್ಳದಂತೆ ಜನಮ ನದ ನಡುವೆ ಉಳಿಸಿಕೊಂಡು ನಡೆಸಿ ಕೊಂಡು ಬಂದಿರುವುದು ಕ್ಲಬ್‌ನ ಹೆಗ್ಗಳಿಕೆ.ನಡುವೆ ಪ್ರಾಯೋಜಕರಿಲ್ಲದೆ 6 ವರ್ಷಗಳ ಕಾಲ ರ್‍ಯಾಲಿಯನ್ನೇ ಸ್ಥಗಿತಗೊ ಳಿಸಲಾಗಿತ್ತು. ಈಗ ಪ್ರಾಯೋಜಕರು ಸಿಕ್ಕಿರುವ ಹಿನ್ನೆಲೆಯಲ್ಲಿ ಕಳೆದ 9 ವರ್ಷಗಳಿಂದ ಯಾವುದೇ ಅಡೆ ತಡೆ ಇಲ್ಲದೆ ಯಶಸ್ವಿಯಾಗಿ ನಡೆಸುತ್ತಿದೆ. ಈಗ ನಡೆಯುತ್ತಿರುವ ಐಎನ್‌ಆರ್‌ಸಿ ರ್‍ಯಾಲಿಯ ಕೊನೆ ಸುತ್ತಿಗೆ ಪ್ರೇಕ್ಷಕರಿಂದ ಸಿಗುತ್ತಿರುವ ಅದ್ಭುತ ಸ್ಪಂದನೆ ಮತ್ತು ಅಂತರರಾಷ್ಟ್ರೀಯ ಮಟ್ಟದ ಚಾಲಕರು ಪಾಲ್ಗೊಳ್ಳುತ್ತಿರುವುದು  ವರ್ಷದಿಂದ ವರ್ಷಕ್ಕೆ ರ್‍ಯಾಲಿಯ ಆಕರ್ಷಣೆ ಹೆಚ್ಚು ತ್ತಿರುವುದನ್ನು ಸಾಬೀತು ಪಡಿಸುತ್ತದೆ.ಸಿಎಂಎಸ್‌ಸಿ ಅಧ್ಯಕ್ಷ ಜಯಂತ್‌ ಪೈ ಇಲ್ಲಿನ ರ್‍ಯಾಲಿ ಚಟುವಟಿಕೆ ಬಗ್ಗೆ ಸಾಕಷ್ಟು ವಿಷಯವನ್ನು ಹಂಚಿಕೊಂ ಡರು. ‘1980ರ ಅವಧಿಯಲ್ಲಿ ಚಿಕ್ಕಮಗಳೂರು ಮೋಟಾರ್‌ ಸ್ಪೋರ್ಟ್ಸ್‌ ಕ್ಲಬ್‌  ಸ್ಥಾಪಿಸಲ್ಪಟ್ಟು, 1982ರಲ್ಲಿ ಮೊದಲ ಬಾರಿಗೆ ರಾಷ್ಟ್ರ ಮಟ್ಟದ ಕಾರು ರ್‍ಯಾಲಿ ಆಯೋಜಿಸಲು ಅನುಮತಿ ಪಡೆದುಕೊಂಡಿತು. ಮೊದಲ ರ್‍ಯಾಲಿ ಯಲ್ಲಿ ನಾನೇ ಚಾಂಪಿಯನ್ನಾಗಿ ಹೊರ ಹೊಮ್ಮಿದ್ದೆ. ಮೂರು ದಶಕಗಳ ಹಿಂದೆ ನಾವೆಲ್ಲ ಕಂಡ ಕನಸು, ಪಟ್ಟ ಪರಿಶ್ರಮ ಈಗ ಫಲ ಕೊಡಲು ಕಾಲ ಸನ್ನಿಹಿತವಾಗಿದೆ.ಮುಂದಿನ ವರ್ಷದ ಏಪ್ರಿಲ್‌ ಅಂತ್ಯದೊಳಗೆ ಅಂತರ ರಾಷ್ಟ್ರೀಯ ಮಟ್ಟದ ರ್‍ಯಾಲಿ ಆಯೋಜಿ ಸುವ ಅವ ಕಾಶ ಒದಗಿಬರುವ ಹೆಚ್ಚಿನ ಅವಕಾಶಗಳು ಇದ್ದು, ನಮ್ಮೆಲ್ಲರ ನಿರೀಕ್ಷೆಗಳು ಕೈಗೂಡಿದರೆ, ಚಿಕ್ಕಮಗಳೂರಿಗೆ ತರೇಹವಾರಿ ವಿದೇಶಿ ಕಾರುಗಳ ಜತೆಗೆ, ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧಿಗಳು ಕಾಲಿಡಲಿದ್ದಾರೆ. ಚಿಕ್ಕಮಗಳೂರು ಕೂಡ ‘ರ್‍ಯಾಲಿ ಹಬ್‌’ ಎನಿಸಿಕೊಳ್ಳಲಿದ್ದು, ಪ್ರವಾಸೋದ್ಯಮ, ಹೋಟೆಲ್‌ ಉದ್ಯಮ, ಆಟೋ ಮೊಬೈಲ್‌ .... ಹೀಗೆ ಒಂದನ್ನೊಂದು ಪರಸ್ಪರ ಅವಲಂಬಿಸಿರುವ ಕ್ಷೇತ್ರಗಳು ಕ್ಷಿಪ್ರ ಬೆಳವಣಿಗೆ ಕಾಣಲಿವೆ‘ ಎಂದರು.ಚೆನ್ನೈನ ಗೋಪಿನಾಥ್‌ ಶಿವ ಎಂಬುವ ವರಿಗೆ ಮೊದಲ ಬಾರಿ ಚಿಕ್ಕಮಗಳೂರು ಜಿಲ್ಲೆಗೆ ರ್‍ಯಾಲಿ ಪರಿಚಯಿಸಿದ ಕೀರ್ತಿ ಸಲ್ಲುತ್ತದೆ. ಈವರೆಗೆ ಮಲೆನಾಡಿನ ನೆಲದಲ್ಲಿ 22 ಬಾರಿ ರಾಷ್ಟ್ರಮಟ್ಟದ ಕಾರು ರ್‍ಯಾಲಿಗಳು ನಡೆದಿವೆ. ಬಾಬು ಶಂಕರ, ಬಿ.ಎಂ.ಶ್ರೀನಿವಾಸ, ಎಸ್‌.ಎಂ. ರಘುನಾಥ್‌, ಈರೇಗೌಡ, ಪ್ರಸನ್ನ, ಫಾರೂಕ್‌ ಅಹಮದ್‌, ಜಯಂತ್‌ ಪೈ ಸೇರಿದಂತೆ ಜಿಲ್ಲೆಯ ಚಾಂಪಿಯನ್‌ ಚಾಲಕರು ಹಂತಹಂತ ವಾಗಿ ಇಂಡಿಯನ್‌ ನ್ಯಾಷನಲ್‌ ರ್‍ಯಾಲಿ ಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಈ ಮೂರು ದಶಕಗಳಲ್ಲಿ ಜಿಲ್ಲೆಯಲ್ಲಿ ಅನೇಕ ಉತ್ಸಾಹಿ ಚಾಲಕರು ಕಾರ್‌ ರ್‍ಯಾಲಿಯನ್ನು ವೃತ್ತಿಪರವಾಗಿ ಸ್ವೀಕರಿಸಿ ರಾಷ್ಟ್ರಮಟ್ಟದಲ್ಲಿ ಮಿನುಗುತ್ತಿದ್ದಾರೆ.ಚಿಕ್ಕಮಗಳೂರು ಮೋಟಾರ್‌ ಕ್ಲಬ್‌ ರಾಷ್ಟ್ರಮಟ್ಟದ ರ್‍ಯಾಲಿ ಅಷ್ಟೇ ಅಲ್ಲದೆ, ಬೈಕ್‌ ಮತ್ತು ಜೀಪು ರ್‍ಯಾಲಿ ಸಂಘಟಿಸಿ ಯುವಕರು ರ್‍ಯಾಲಿಯತ್ತ ಚಿತ್ತ ಹರಿಸುವಂತೆ ಮಾಡುತ್ತಿದೆ. ಜತೆಗೆ ಸುರಕ್ಷಿತಾ ಚಾಲನೆ, ಚಾಲನೆಯಲ್ಲಿ ಕೌಶಲ್ಯ ಮತ್ತು ತಾಂತ್ರಿಕತೆ ಅಳವಡಿ ಸಿಕೊಳ್ಳಲು ಮಾರ್ಗದರ್ಶನ ಮಾಡು ತ್ತಿದೆ. ಇದಕ್ಕೆ ಬೆನ್ನೆಲುಬಾಗಿ ಬೆಂಗಳೂರಿನ ವಾಸಾ ಆಟೋ ಸ್ಪೋರ್ಟ್ಸ್‌ ಕ್ಲಬ್‌ (ವಾಸಾ) ಪ್ರತಿ ವರ್ಷ ಜಿಲ್ಲೆಯಲ್ಲಿ ರ್‍ಯಾಲಿ ಆಯೋಜಿಸುವ ಮೂಲಕ ಸ್ಥಳೀಯ ಪ್ರತಿಭಾನ್ವಿತರನ್ನು ವೃತ್ತಿಪರ ಸ್ಪರ್ಧೆಗೆ ಅಣಿಗೊಳಿಸುತ್ತಿದೆ.ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು, ಹೊಸಕೋಟೆ, ಧಾರಾವಾಡ, ಮಂಗಳೂರು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ರ್‍ಯಾಲಿ ಸಂಘಟಿಸಿ, ಯುವಕರಿಗೆ ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯ ಪ್ರದರ್ಶಿಸಲು ವೇದಿಕೆ ಒದಗಿಸುತ್ತಿದ್ದೇವೆ ಎನ್ನುತ್ತಾರೆ ವಾಸಾ ಸ್ಪೋರ್ಟ್ಸ್ ಕ್ಲಬ್‌ ಅಧ್ಯಕ್ಷ ಅಶೋಕ್‌ ತಿವಾರಿ.ಕಾಫಿ ನಾಡಿನ ಮೇಲಿನ ಪ್ರೀತಿ

ಪ್ರತಿ ವರ್ಷ ಚಳಿಗಾಲ ಕಾಲಿಡು ತ್ತಿದ್ದಂತೆ ಮಲೆನಾಡಿನಲ್ಲಿ ರ್‍ಯಾಲಿ ಪ್ರಿಯರನ್ನು ರೋಮಾಂಚನಗೊಳಿಸಲು ಮೋಟಾರ್‌ ಕಾರು ರ್‍ಯಾಲಿಯೂ ಶುರುವಾಗುತ್ತದೆ. ದೇಶದ ಮೂಲೆ ಮೂಲೆಯಿಂದ ಬರುವ ಪ್ರತಿಭಾನ್ವಿತ ಚಾಲಕರು ಮತ್ತು ತಾರಾ ಚಾಲಕರು ಚಿಕ್ಕಮಗಳೂರಿನ ಸ್ವಾಧಿಷ್ಟ ಕಾಫಿಯ ಪರಿಮಳ ಮತ್ತು ಸುಂದರ ಪ್ರಕೃತಿ ಸೊಬಗು ಆಸ್ಪಾದಿಸುತ್ತಾ ಕಾರು ಚಲಾಯಿಸಲು ಹೆಚ್ಚು ಇಷ್ಟಪಡುತ್ತಾರೆ.ಈ ಮಾತನ್ನು ‘ಸ್ಟಾರ್‌’ ಚಾಲಕ ರೆನಿಸಿರುವ ಗೌರವ್‌ ಗಿಲ್‌ ಮತ್ತು ಲೋಹಿತ್‌ ಅರಸ್‌ ಕೂಡ ಮುಕ್ತ ಮನಸಿನಿಂದ ಒಪ್ಪಿಕೊಳ್ಳುತ್ತಾರೆ. ಚಿಕ್ಕಮಗಳೂರಿನ ಕಾಫಿ ಕಣಿವೆಯ ದುರ್ಗಮ ಮತ್ತು ಕಿರಿದಾದ ಮಾರ್ಗಗಳು ಮಲೇಷಿಯಾದ ಟ್ರ್ಯಾಕ್‌ ಗಿಂತವೇನೂ ಭಿನ್ನವಾಗಿಲ್ಲ. ಇಲ್ಲಿ ಕಾರು ಚಾಲನೆ ಮಾಡುವುದು ಒಂದು ದೊಡ್ಡ ಸವಾಲು ಎನಿಸಿದರೂ ರೋಚಕ ಅನುಭವಕಟ್ಟಿಕೊಡುತ್ತದೆ. ಕಾಫಿ ರ್‍ಯಾಲಿ ತಪ್ಪಿಸಿಕೊಳ್ಳಲು ಇಷ್ಟಪಡುವುದಿಲ್ಲ ಎನ್ನುತ್ತಾರೆ.ದೊಡ್ಡ ಪ್ರೇಕ್ಷಕ ಸಮೂಹ

ಹೋ.... ಅಬ್ಬಾ..... ಎಂದು ಕೂಗುವ, ಪ್ರೋತ್ಸಾಹಿಸುವ ಪ್ರೇಕ್ಷಕರ ನಡುವೆ ಕಾರು ಚಲಾಯಿಸುವಾಗ ನಮ್ಮ ಹುಮ್ಮಸ್ಸು ಹೆಚ್ಚಿಸುತ್ತದೆ. ನಾಸಿಕ್‌, ಕೊಯಮತ್ತೂರು, ಪುಣೆ ಹೀಗೆ ದೇಶದ ನಾನಾ ಕಡೆ ನಡೆಯುವ ರ್‍ಯಾಲಿಯಲ್ಲೂ ಇಷ್ಟೊಂದು ಸಂಖ್ಯೆಯ ಪ್ರೇಕ್ಷಕರು ಸೇರುವುದಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಜನರ ರ್‍ಯಾಲಿ ಪ್ರೀತಿ ಬೆರಗು ಮೂಡಿಸುತ್ತದೆ. ಇಲ್ಲಿ ರ್‍ಯಾಲಿ ನೋಡಲು ನಿರೀಕ್ಷೆಗೂ ಮೀರಿ ಜನ ಸೇರುತ್ತಾರೆ. ಜತೆಗೆ ಚಿಕ್ಕಮಗಳೂರಿನ ಆದರದ ಆತಿಥ್ಯ, ಪ್ರೇಕ್ಷಕರು ತೋರುವ ಅಭಿಮಾನ ಪ್ರತಿಯೊಬ್ಬ ಚಾಲಕನನ್ನು ಚುಂಬಕ ಶಕ್ತಿಯಂತೆ ಸೆಳೆಯುತ್ತದೆ ಎನ್ನುತ್ತಾರೆ ತಾರಾ ಚಾಲಕ ಮೈಸೂರಿನ ಲೋಹಿತ್‌ ವಿ.ಅರಸ್‌. 

ಪ್ರತಿಕ್ರಿಯಿಸಿ (+)