ಭಾನುವಾರ, ಮೇ 9, 2021
18 °C

ಮಲೆನಾಡಿನಲ್ಲಿ ಜರ್ಬೆರಾ ಬೆಳೆದ ಸಾಹಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದುವೆ, ಆರತಕ್ಷತೆ, ಗೃಹಪ್ರವೇಶ ಮತ್ತಿತರ ಸಮಾರಂಭಗಳ ವೇದಿಕೆ ಅಲಂಕಾರಕ್ಕೆ ಪ್ರಮುಖವಾಗಿ ಬಳಕೆಯಾಗುವ `ಜರ್ಬೆರಾ~ ಹೂವಿಗೆ ಈಗ ಎಲ್ಲೆಡೆ ಭಾರಿ ಬೇಡಿಕೆ ಇದೆ.ಈ ಹೂಗಳನ್ನು ರೈತರು ಹಸಿರು ಮನೆಯಲ್ಲಿ  ಮಾತ್ರವೇ ಬೆಳೆಯಬಹುದು. ಮಲೆನಾಡಿನಲ್ಲೂ ಜರ್ಬೆರಾ ಬೇಸಾಯ ಜನಪ್ರಿಯವಾಗುತ್ತಿದೆ. ಕಾಫಿ, ಅಡಿಕೆ, ಭತ್ತ, ಬಾಳೆ, ತೆಂಗು ಮತ್ತಿತರ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದ ಮಲೆನಾಡಿನ ಕೆಲ ರೈತರು ಈಗ ಜರ್ಬೆರಾ ಬೇಸಾಯಕ್ಕೆ ಮನಸೋತಿದ್ದಾರೆ.ತೀರ್ಥಹಳ್ಳಿ ತಾಲ್ಲೂಕಿನ ಹಾದಿಗಲ್ಲು ಗ್ರಾಮದ ರೈತ ಸುರೇಶ್ ತಮ್ಮ ತೋಟದ ನಡುವೆ ಕಾಲು ಎಕರೆ ಜಮೀನಿನಲ್ಲಿ ಹಸಿರು ಮನೆ ನಿರ್ಮಿಸಿಕೊಂಡು ಜರ್ಬೆರಾ ಹೂ ಬೆಳೆದು ಯಶಸ್ವಿಯಾಗಿದ್ದಾರೆ.ಸುರೇಶ್ ಪದವೀಧರರು. ಜರ್ಬೆರಾ ಬೆಳೆಯುವ ಮೊದಲು ಪುಣೆಯ ಕೇಂದ್ರವೊಂದರಲ್ಲಿ ಜರ್ಬೆರಾ ಬೇಸಾಯ ಕುರಿತು ತರಬೇತಿ ಪಡೆದುಕೊಂಡರು. ಸಸಿಗಳನ್ನು ನಾಟಿ ಮಾಡಿದ ನಂತರದ 70 ದಿನಗಳಲ್ಲಿ ಗಿಡಗಳಲ್ಲಿ ಹೂ ಬಿಡಲು ಪ್ರಾರಂಭವಾಗುತ್ತದೆ. ಒಮ್ಮೆ ನಾಟಿ ಮಾಡಿದ ಗಿಡಗಳಿಂದ ಸತತವಾಗಿ ಐದು ವರ್ಷಗಳವರೆಗೂ ಹೂ ಪಡೆಯಬಹುದು.ಮದುವೆ, ಹಬ್ಬಗಳ ಸೀಸನ್‌ಗಳಲ್ಲಿ ಒಂದು ಹೂವಿಗೆ 7ರಿಂದ 8 ರೂವರೆಗೆ ಬೆಲೆ ಸಿಗುತ್ತದೆ. ಸುರೇಶ್ ನಿತ್ಯ 800ರಿಂದ 1000 ಹೂಗಳನ್ನು ಕೊಯ್ದು ವಿಶೇಷ ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡಿ ಬೆಂಗಳೂರಿನ ಹೂವಿನ ವ್ಯಾಪಾರಿಗಳಿಗೆ ಕಳುಹಿಸುತ್ತಾರೆ.

ಜರ್ಬೆರಾ ಬೇಸಾಯಕ್ಕೆ ಅವರು ಬ್ಯಾಂಕ್‌ನಿಂದ ಸಾಲ ಪಡೆದಿದ್ದಾರೆ. ಸರ್ಕಾರದಿಂದ ಸಹಾಯಧನ ಪಡೆದಿದ್ದಾರೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳ ಉತ್ತೇಜನವೂ ಅವರಿಗೆ ಸಿಕ್ಕಿದೆ.ಜರ್ಬೆರಾ ಹೂವಿನ ಬೆಲೆಯಲ್ಲಿ ಆಗಾಗ ಏರುಪೇರು ಆಗುತ್ತದೆ. ಕೆಲವು ಸಲ ಒಂದು ಹೂವಿಗೆ ಒಂದು ರೂಪಾಯಿ ಬೆಲೆ ನಿಗದಿ ಮಾಡುವ ದಳ್ಳಾಳಿಗಳ ವರ್ತನೆಯಿಂದ ಬೇಸತ್ತಿದ್ದಾರೆ. ಜರ್ಬೆರಾ ಮತ್ತಿತರ ಹೂಗಳನ್ನು ಬೆಳೆಯುವ ರೈತರು ಸಂಘಟಿತರಾಗಬೇಕು. ಹೂವಿನ ಬೆಳೆಗಾರರಿಗೆ ಸರ್ಕಾರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಸುರೇಶ್ ಅವರ ಬೇಡಿಕೆ.ಜರ್ಬೆರಾ ಹೂಗಳಲ್ಲಿ ಸುಮಾರು ಹತ್ತಕ್ಕೂ ಹೆಚ್ಚಿನ ಬಣ್ಣದ ಹೂಗಳ ತಳಿಗಳಿವೆ. ಬಿಳಿ ಮತ್ತು ಹಳದಿ ಹೂವುಗಳಿಗೆ ಹೆಚ್ಚು ಬೇಡಿಕೆ ಇದೆ. ಕೊಯ್ದ ಹೂಗಳನ್ನು ಸಕ್ಕರೆ ಬೆರೆಸಿದ ನೀರಿನಲ್ಲಿ ಇರಿಸಿದರೆ ಅವು ಹದಿನೈದು ದಿನಗಳವರೆಗೂ ತಾಜಾ ಆಗಿ ಉಳಿಯುತ್ತವೆ. ಭತ್ತ, ಕಬ್ಬು, ರಬ್ಬರ್, ಕಾಫಿ ಮತ್ತಿತರ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುವುದರ ಜತೆಗೆ ಹೂವಿನ ಬೆಳೆಗಳನ್ನು ಬೆಳೆದು ಮಾರುಕಟ್ಟೆ ಕಂಡುಕೊಳ್ಳುವುದು ಶ್ರಮದ ಕೆಲಸ. ಸುರೇಶ್ ಅವರಂತಹ ಕೆಲವೇ ಸಾಹಸಿ ರೈತರು ಹೂ ಬೆಳೆದು ಅನೇಕರಿಗೆ ಮಾದರಿ ಆಗಿದ್ದಾರೆ.ಮಲೆನಾಡಿನಲ್ಲಿ ಹೂವಿನ ಬೇಸಾಯ ಸಾಧ್ಯವೇ ಇಲ್ಲ ಎನ್ನುವವರಿಗೆ ಸುರೇಶ್ ಅವರ ಹೂವಿನ ಬೇಸಾಯವೇ ಉತ್ತರ. ಮನಸ್ಸಿದ್ದರೆ ಮಾರ್ಗವಿದೆ ಎನ್ನುವುದು ಇದಕ್ಕೇ ಅಲ್ಲವೇ? ಸುರೇಶ್ ಅವರ ಮೊಬೈಲ್ ನಂಬರ್ : 9632905629.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.