ಬುಧವಾರ, ಮೇ 12, 2021
19 °C

ಮಲೆನಾಡಿನಲ್ಲಿ ಮಳೆ ಚುರುಕು, ಮೈದುಂಬಿದ ನದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲೆನಾಡಿನಲ್ಲಿ ಮಳೆ ಚುರುಕು, ಮೈದುಂಬಿದ ನದಿ

ಮೂಡಿಗೆರೆ: ಕಳೆದ ಎರಡು ವಾರಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನಾದ್ಯಂತ ಮಲೆನಾಡಿನ ಸೊಬಗು ಕಂಗೊಳಿಸುತ್ತಿದೆ.ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಮಳೆ ಕೈಕೊಟ್ಟಿದ್ದರಿಂದ, ಕೃಷಿ ಚಟುವಟಿಕೆಯನ್ನು ತಡವಾಗಿ ಪ್ರಾರಂಭಿಸಲಾಗಿತ್ತು. ಆದರೆ ಪ್ರಸ್ತುತ ತಾಲ್ಲೂಕಿನೆಲ್ಲೆಡೆ ವಾಡಿಕೆಯ ಮಳೆ ಸಮರ್ಪಕವಾಗಿ ಸುರಿದಿರುವುದರಿಂದ ಜೂನ್ ತಿಂಗಳಿನಲ್ಲಿಯೇ ಅನ್ನದಾತ ತನ್ನ ಕಾಯಕಕ್ಕೆ ಅಣಿಯಾಗಿದ್ದಾನೆ.ತಾಲ್ಲೂಕಿನ ಬೆಟ್ಟದಮನೆ, ದೇವರುಂದ, ಗುತ್ತಿ, ಭೈರಾಪುರಗಳಲ್ಲಿ, ಕೊಟ್ಟಿಗೆಹಾರಗಳಲ್ಲಿ ಕಳೆದ ಸಾಲಿಗಿಂತಲೂ ಹೆಚ್ಚಿನ ಮಳೆಯಾಗಿದೆ. ಮುಂಗಾರು ಸಮರ್ಪಕವಾಗಿ ಸುರಿದ ಹಿನ್ನೆಲೆಯಲ್ಲಿ ಈಗಾಗಲೇ ತಾಲ್ಲೂಕಿನಾದ್ಯಂತ ಭತ್ತದ ಸಸಿಮಡಿಗಳಿಗೆ ತಯಾರಿ ನಡೆಸಲಾಗಿದೆ.ಎರಡು ವಾರಗಳಿಂದ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ಹೇಮಾವತಿ, ಜಪಾತಿ, ಚಿಕ್ಕಳ್ಳ, ದೊಡ್ಡಳ್ಳ, ಕುಂದೂರು ನದಿಗಳು ಮೈದುಂಬಿ ಹರಿಯುತ್ತಿವೆ. ಬತ್ತಿ ಹೋಗಿದ್ದ ತಾಲ್ಲೂಕಿನ ಹಲವು ಸಣ್ಣಪುಟ್ಟ ಝರಿಗಳಿಗೆ ಸುರಿಯುತ್ತಿರುವ ಮಳೆ ಮರು ಜೀವ ತಂದು ಸೊಬಗನ್ನು ಹೆಚ್ಚಿಸಿದೆ. ಇನ್ನು ತಾಲ್ಲೂಕಿನ ವಾಣಿಜ್ಯ ಬೆಳೆಗಳಾದ ಕಾಫಿ, ಕಾಳು ಮೆಣಸು, ಏಲಕ್ಕಿ ಬೆಳೆಗಾರರಿಗೆ ಮಳೆ ಹರ್ಷ ತಂದಿದೆ. ನಿತ್ಯ ಮಳೆ ಸುರಿಯುತ್ತಿರುವುದರಿಂದ ಕಾಳು ಮೆಣಸಿನ ಗಿಡಗಳಲ್ಲಿ ಮೆಣಸಿನ ಗರಿ ಮೂಡಲಾರಂಭಿಸಿದೆ.ಕಳೆದ ಸಾಲಿನಲ್ಲಿ ಮಳೆ ಪ್ರಮಾಣ ಕುಸಿತ ಕಂಡಿದ್ದರಿಂದ ಈ ಬಾರಿಯ ಮಳೆಗಾಲ ಅರೇಬಿಕಾ ಕಾಫಿ ಬೆಳೆಗಾರರಿಗೆ ಕಹಿಯಾಗತೊಡಗಿದೆ. ಕಳೆದ ಸಾಲಿನಲ್ಲಿ ಮಳೆ ಕಡಿಮೆಯಾಗಿ ತಾಪಮಾನ ಹೆಚ್ಚಾದ ಕಾರಣವಾಗಿ ಅರೇಬಿಕಾ ಕಾಫಿ ತೋಟಗಳಲ್ಲಿ ಬೋರಾರ್ ರೋಗ ಕಾಣಿಸಿಕೊಳ್ಳ ತೊಡಗಿದ್ದು ಅರೇಬಿಕಾ ಬೆಳೆಗಾರರಿಗೆ ತಲೆನೋವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.