ಮಲೆನಾಡಿನಲ್ಲಿ ಮುಂದುವರಿದ ಮಳೆ ಆರ್ಭಟ

ಗುರುವಾರ , ಜೂಲೈ 18, 2019
22 °C
ಬಸರಿಕಟ್ಟೆ ರಸ್ತೆಯಲ್ಲಿ ಭೂಕುಸಿತ: ಸಂಪರ್ಕ ಕಡಿತ

ಮಲೆನಾಡಿನಲ್ಲಿ ಮುಂದುವರಿದ ಮಳೆ ಆರ್ಭಟ

Published:
Updated:

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಮುಂಗಾರು ಮಳೆಯ ಅಬ್ಬರ ಮುಂದುವರಿದಿದೆ. ಪ್ರಮುಖ ಹಳ್ಳ, ನದಿಗಳೆಲ್ಲವೂ ತುಂಬಿ ಹರಿಯುತ್ತಿವೆ. ಮಲೆನಾಡಿನ ಬಹುತೇಕ ಕೆರೆಕಟ್ಟೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ.ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ ಕೊಪ್ಪ ತಾಲ್ಲೂಕಿನ ಅತ್ತಿಕೊಡಿಗೆ ಸಮೀಪದ ಚನ್ನೆಕಲ್ಲು ಎಂಬಲ್ಲಿ ರಸ್ತೆ ಕುಸಿದಿದೆ. ಇದರಿಂದಾಗಿ ಜಯಪುರ -ಬಸರಿಕಟ್ಟೆ ಮಾರ್ಗವಾಗಿ ಹೊರನಾಡು ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬಸ್ ಸೇರಿದಂತೆ ಎಲ್ಲಾ ವಾಹನ ಸಂಚಾರ ಸ್ಥಗಿತಗೊಂಡಿದೆ.ಚೆನ್ನೆಕಲ್ಲು ಪ್ರದೇಶದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಭೂ ಕುಸಿತವಾಗಿದ್ದು, ಸುಮಾರು 58 ಲಕ್ಷ ರೂಪಾಯಿ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು. ಈ ಬಾರಿ ಸುರಿದ ಭಾರಿ ಮಳೆಯಿಂದಾಗಿ ರಸ್ತೆ ಭಾಗ ಕುಸಿದಿದ್ದು, ಹೊರನಾಡಿಗೆ ಹೋಗುವ ವಾಹನಗಳಿಗೆ ಜಯಪುರ ಮಾರ್ಗ ಅವಕಾಶ ಕಲ್ಪಿಸಲಾಗಿದೆ.

ಅಬ್ಬರದ ಮಳೆ ಪರಿಣಾಮ ಬಾಳೆಹೊನ್ನೂರಿನ ಅಕ್ಷರ ನಗರದ ಗಿರಿಜಾಸೋಮಯ್ಯ ಅವರ ಮನೆ ಸಂಪೂರ್ಣ ಕುಸಿದಿದೆ. ಮೆನೆ ಕುಸಿದಾಗ ಅದೃಷ್ಟವಶಾತ್ ಯಾರೂ ಒಳಗೆ ಇರಲಿಲ್ಲ. ಹಾಗಾಗಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ.    

 

ಶೃಂಗೇರಿ ತಾಲ್ಲೂಕಿನ ಕೆರೆಕಟ್ಟೆ ಮತ್ತು ನೆಮ್ಮಾರು ನಡುವೆ ಕಾರ್ಕಳ-ಮಂಗಳೂರು ರಸ್ತೆಯಲ್ಲಿ ಮೂರು ಕಡೆ ಮರಗಳು ಧರೆಗುರುಳಿದ್ದು, ಮಧ್ಯಾಹ್ನದವರೆಗೂ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಶೃಂಗೇರಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಕಳೆದ ಎರಡು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.ಎನ್.ಆರ್.ಪುರ ಪಟ್ಟಣ ಸಮೀಪದ ಹಳೆಮಂಡಗದ್ದೆ ವೃತ್ತದ ತೋಟದಲ್ಲಿ ಮನೆಯೊಂದು ಭಾಗಶಃ ಕುಸಿದಿದೆ.ಮಲೆನಾಡಿನ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಲೈನ್ ಮೇಲೆ ಮರಗಳು ಬಿದ್ದಿರುವ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಹಳ್ಳಿಗಳ ಜನರು ಕಗ್ಗತ್ತಲಲ್ಲಿ ಕಾಲ ದೂಡುವಂತಾಗಿದೆ. ಕೆಲವು ಕಡೆ ರಸ್ತೆ ಸಂಚಾರಕ್ಕೂ ತೊಂದರೆಯಾಗಿದೆ. ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಕೊಂಚ ಬಿಡುವು ನೀಡಿದ್ದ ಮಳೆ ಮತ್ತೆ ಮಧ್ಯಾಹ್ನದಿಂದ ಜಿಟಿಜಿಟಿ ಸುರಿಯಲಾರಂಭಿಸಿದೆ.ಜಿಲ್ಲೆಯಲ್ಲಿ ಹುಟ್ಟಿ ಹರಿಯುವ ಹೇಮಾವತಿ, ನೇತ್ರಾವತಿ, ತುಂಗಾ, ಭದ್ರಾ, ವೇದಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಹೆಬ್ಬೆ, ಮಾಣಿಕ್ಯಧಾರಾ, ಸಿರಿಮನೆ, ಹನುಮಗುಂಡಿ, ಬರ್ಕಣ ಸೇರಿದಂತೆ ಪ್ರಮುಖ ಜಲಪಾತಗಳು ಭೋರ್ಗರೆದು ದುಮ್ಮಿಕ್ಕುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry