ಶನಿವಾರ, ಮೇ 15, 2021
23 °C

ಮಲೆನಾಡಿನ ಗರಿ ಕಾಫಿ ನರ್ಸರಿ

ಸಂಪತ್ ಬೆಟ್ಟಗೆರೆ Updated:

ಅಕ್ಷರ ಗಾತ್ರ : | |

ಜೂನ್ ತಿಂಗಳು ಬಂತೆಂದರೆ ಸಾಕು. ಮಲೆನಾಡಿನ ತುಂಬೆಲ್ಲ ಕಾಫಿ ನರ್ಸರಿಯದ್ದೇ ಮಾತು. `ಈ ವರ್ಷ ಕಾಫಿ ಸಸಿ ಯಾರು ಚೆನ್ನಾಗಿ ಬೆಳೆದಿದ್ದಾರೆ' ಎಂದು ಸುತ್ತಮುತ್ತಲಿನ ಕಾಫಿ ತೋಟದ ಮಾಲೀಕರು ಉಭಯ ಕುಶಲೋಪರಿ ನಡೆಸುತ್ತಾರೆ.ಮೂಡಿಗೆರೆ ತಾಲ್ಲೂಕಿನಾದ್ಯಂತ ಈ ವರ್ಷ ಸಣ್ಣ ಪುಟ್ಟ ರೈತರು ತಮ್ಮ ತೋಟಗಳಿಗಲ್ಲದೆ ಮಾರಾಟ ಮಾಡುವ ಉದ್ದೇಶದಿಂದಲೂ ಕಾಫಿ ನರ್ಸರಿ ಮಾಡುತ್ತಿದ್ದಾರೆ. ಜುಲೈ ಮತ್ತು ಆಗಸ್ಟ್ ತಿಂಗಳು ಕಾಫಿ ಸಸಿ ನಾಟಿಗೆ ಸಕಾಲ. ಹೀಗಾಗಿ ಗುಣಮಟ್ಟದ ಗಿಡಗಳಿಗೆ ಆದ್ಯತೆ ನೀಡುವ ಸ್ಥಳೀಯ ರೈತರು ಸ್ವತಃ ಕೃಷಿಕರೇ ಬೆಳೆದ ಉತ್ತಮ ತಳಿಯ ಕಾಫಿ ಬುಟ್ಟಿಗಳನ್ನು ಖರೀದಿಸುವತ್ತ ಚಿಂತಿಸುತ್ತಿದ್ದಾರೆ.ಇತ್ತೀಚಿನ ದಿನಗಳಲ್ಲಿ ಕೆಲವರು ಕಾಫಿ ನರ್ಸರಿಯನ್ನು ಉದ್ಯಮವಾಗಿ ಮಾರ್ಪಡಿಸಿಕೊಂಡಿದ್ದಾರೆ. ಕೇವಲ ಲಾಭ ಗಳಿಸುವ ಉದ್ದೇಶದಿಂದ ಕೆಂಪು ಮಣ್ಣು, ತರಗೆಲೆಯ ಗಸಿಗೊಬ್ಬರ, ರಾಸಾಯನಿಕಗಳನ್ನು ಬಳಸಿ ಬೆಳೆಸುತ್ತಾರೆ. ಇದರ ಪರಿಣಾಮ ನರ್ಸರಿ ಪಾತಿಗಳಲ್ಲಿ ಸಮೃದ್ಧವಾಗಿ ಕಾಣುವ ಗಿಡಗಳು ತೋಟಕ್ಕೆ ನಾಟಿ ಮಾಡಿದ ನಂತರದಲ್ಲಿ ಕ್ರಮೇಣ ಕುಂಠಿತ ಬೆಳವಣಿಗೆಗೆ ತುತ್ತಾಗುವ ಸಾಧ್ಯತೆಯೇ ಹೆಚ್ಚು. ಮಾತ್ರವಲ್ಲ ಎಲೆಚುಕ್ಕೆ ರೋಗ, ಕಡ್ಡಿಹುಳು ಕಾಯಿಲೆ, ಕಾಂಡಕೊರಕ ನುಸಿರೋಗ, ಬೋರರ್ ಇತ್ಯಾದಿ ಸಮಸ್ಯೆಗಳಿಗೆ ತುತ್ತಾಗುವ ಅಪಾಯವಿರುತ್ತದೆ. ಆದ್ದರಿಂದ ಉತ್ತಮ ತಳಿಯ ರೋಗಮುಕ್ತ ತೋಟದ ಗಿಡಗಳಿಂದ ಸಂಗ್ರಹಿಸಿದ ಬೀಜಗಳನ್ನು ಉಪಯೋಗಿಸಿ ಬೆಳೆಸಿದ ಗಿಡಗಳನ್ನು ನಾಟಿ ಮಾಡಬೇಕೆಂದು ಕೆಲವು ರೈತರು ಅಭಿಪ್ರಾಯಿಸುತ್ತಾರೆ.ಈ ನಿಟ್ಟಿನಲ್ಲಿ ಕಾಫಿ ಬೋರ್ಡ್ ಕೂಡ ರಿಯಾಯಿತಿ ದರದಲ್ಲಿ ಸಂಸ್ಕರಿಸಿದ ಬಿತ್ತನೆ ಬೀಜಗಳನ್ನು ರೈತರಿಗೆ ಒದಗಿಸುತ್ತಿದೆ. ಕಾಡಿನಲ್ಲಿ ಸಿಗುವ ಕಪ್ಪು ಮಣ್ಣು, ಕೊಟ್ಟಿಗೆ ಗೊಬ್ಬರವನ್ನು ಮಿಶ್ರಣ ಮಾಡಿ ಕನಿಷ್ಠ ಐದಾರು ತಿಂಗಳು ರಾಶಿ ಹಾಕಬೇಕು. ಮಣ್ಣು-ಗೊಬ್ಬರ ಒಂದು ಹದಕ್ಕೆ ಬಂದ ನಂತರ ಸೇರಿನಾಕಾರದ ಪ್ಲಾಸ್ಟಿಕ್ ಚೀಲಗಳಲ್ಲಿ ಬುಟ್ಟಿ ತುಂಬಿಸಿ ಒಗ್ಗಿನಲ್ಲಿ ಮೊಳಕೆ ಹೊಡೆದ ಸಸಿಗಳ ಬೇರುಗಳನ್ನು ದನದ ಸಗಣಿಯ ಮಿಶ್ರಣದಲ್ಲಿ ನೆನೆಸಿ ನೆಡಬೇಕು. ಮೇ ತಿಂಗಳಲ್ಲಿ  ನೆಟ್ಟ ಸಸಿಗಳು ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ತೋಟಕ್ಕೆ ನಾಟಿ ಮಾಡಲು ತಯಾರಾಗುತ್ತವೆ.ರೈತರಿಂದ ರೈತರಿಗಾಗಿ ಎಂಬ ಮನೋಭಾವದಲ್ಲಿ ಕಾಫಿ ಸಸಿಗಳನ್ನು ಬೆಳೆಯುತ್ತಿರುವ ಮೂಡಿಗೆರೆ ತಾಲ್ಲೂಕಿನ ಸದಾನಂದಗೌಡರು ತಮ್ಮ ವೈವಿಧ್ಯಮಯ ನರ್ಸರಿಯಿಂದ ಗಮನ ಸೆಳೆಯುತ್ತಾರೆ. ರೋಬಸ್ಟಾ ಕಾಫಿ ತಳಿಗಳಾದ ಓಲ್ಡ್, ಸೆಲೆಕ್ಷನ್, ಸಿ.ಆರ್, ಅರೇಬಿಕಾ ತಳಿಗಳಾದ ಹೇಮಾವತಿ, ಚಂದ್ರಗಿರಿ, ಕಾಟಿಮಾರ್ ಎಂಬ ಗಿಡಗಳನ್ನು ಕೂಲಿಯಾಳುಗಳ ನೆರವಿಲ್ಲದೆ ಸ್ವಸಾಮರ್ಥ್ಯದಿಂದ ಬೆಳೆದಿದ್ದಾರೆ. ಅಂಗವಿಕಲನಾದರೂ ಮಗ ಭರತ್‌ಕುಮಾರ್ ಅಪ್ಪನ ಪ್ರೀತಿಯ ಕಾಯಕದಲ್ಲಿ ಕೈಜೋಡಿಸಿ ಹರ್ಷಚಿತ್ತನಾಗಿ ತೋರುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.