ಬುಧವಾರ, ಅಕ್ಟೋಬರ್ 23, 2019
27 °C

ಮಲೆನಾಡು ಗಿಡ್ಡ ತಳಿಗೆ ಕುತ್ತು, ಪಶು ಸಂಪತ್ತಿಗೆ ಆಪತ್ತು

Published:
Updated:

ತೀರ್ಥಹಳ್ಳಿ: ಹುಲಿ ಹಾಗೂ ಚಿರತೆ ಕಾಟದಿಂದಾಗಿ ಮಲೆನಾಡಿನ ವಿಶಿಷ್ಟ ತಳಿಯ ಜಾನುವಾರು `ಮಲೆನಾಡು ಗಿಡ್ಡ~ ಸಂತತಿ ನಶಿಸುವ ಭೀತಿ ಎದುರಾಗಿದೆ. ಹುಲಿ ಹಾಗೂ ಚಿರತೆಗಳು ಆಗಾಗ್ಗೆ ಜಾನುವಾರುಗಳನ್ನು ಹಿಡಿದು ಸಾಯಿಸುವುದರಿಂದಾಗಿ ಮಲೆನಾಡು ಗಿಡ್ಡ ತಳಿ ಕ್ಷೀಣಿಸುವಂತಾಗಿದೆ.ತಾಲ್ಲೂಕಿನ ಕುಡುಮಲ್ಲಿಗೆ ಗ್ರಾ.ಪಂ. ವ್ಯಾಪ್ತಿಯ ನೆಲ್ಲಿಸರ, ಬಿಳುವೆ, ಕಲ್ಲತ್ತಿ, ಕರ್ಕಿ, ಮಕ್ಕಿಕೊಪ್ಪ, ಭಾರತೀಪುರ ಹಾಗೂ ಹೊದಲ ಅರಳಾಪುರ ಗ್ರಾ.ಪಂ. ಯ ಎಡಗುಡ್ಡೆ, ತುಪ್ಪದ ಮನೆ, ಒಡ್ಡಿನಬೈಲು, ಹೊದಲ ಗ್ರಾಮದ ಗ್ರಾಮಸ್ಥರು ಹುಲಿ ಹಾಗೂ ಚಿರತೆ ಕಾಟದಿಂದಾಗಿ ಜಾನುವಾರುಗಳನ್ನು ಕಳೆದು ಕೊಂಡಿದ್ದು, ಜಾನುವಾರು ಸಾಕದಿರುವ ಸ್ಥಿತಿಗೆ ತಲುಪಿದ್ದಾರೆ.ಮೂರು ದಿನಗಳ ಹಿಂದೆ ಮಕ್ಕಿಕೊಪ್ಪದ ಗೋಪಾಲನಾಯ್ಕ ಅವರಿಗೆ ಸೇರಿದ ಹಸುವನ್ನು ಅಡಿಕೆ ತೋಟದಲ್ಲಿ ಹುಲಿ ಹಿಡಿದು ತಿಂದಿದೆ. ಪ್ರತಿ ತಿಂಗಳಲ್ಲಿ ಈ ಭಾಗದ ರೈತರ ಕನಿಷ್ಠ ಎರಡು ಅಥವಾ ಮೂರು ಜಾನುವಾರು  ಕಾಣೆಯಾಗುತ್ತಲೇ ಇವೆ. ಜಾನುವಾರು  ಸರಿಯಾದ ಸಮಯಕ್ಕೆ ಮನೆಗೆ ಬಂದಿಲ್ಲ ಎಂದಾದರೆ ಅವುಗಳು ಹುಲಿ ಅಥವಾ ಚಿರತೆಗೆ ಆಹಾರವಾಯಿತು ಎಂದೇ ಇಲ್ಲಿನ ಜನರು ಭಾವಿಸುತ್ತಾರೆ.ಮಲೆನಾಡಿನಲ್ಲಿ ಜಾನುವಾರುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಸಾಕುವ ಪದ್ಧತಿ ಇಲ್ಲ.  ಕಾಡಿಗೆ ಬಿಡುವ ಪದ್ಧತಿ ಅನಾದಿ ಕಾಲದಿಂದಲೂ ಇದೆ. ಕಾಡಿಗೆ ಮೇಯಲು ಬಿಟ್ಟ ಜಾನುವಾರುಗಳು ಒಂದೊಂದಾಗಿ ಕಣ್ಮರೆಯಾಗುತ್ತಿರುವುದು ಇಲ್ಲಿನ ರೈತರ ನಿದ್ದೆಗೆಡಿಸಿದೆ.  ಜಾನುವಾರುಗಳಿಗೆ ಈಗ ಮೇವಿನ ಸಮಸ್ಯೆ ಎದುರಾಗಿದೆ. ವಿಶಾಲವಾಗಿರುವ ಕಾಡು ಇಂದು ಕಿರಿದಾಗುತ್ತಿದೆ. ಇಲ್ಲಿನ ಗೋಮಾಳ ಹಾಗೂ ಸೊಪ್ಪಿನಬೆಟ್ಟಗಳು ಒತ್ತುವರಿಯಾಗಿವೆ. ದೊಡ್ಡ ದೊಡ್ಡ ಗುಡ್ಡಗಳನ್ನು ಮೈಸೂರು ಪೇಪರ್ ಮಿಲ್ಸ್ ಆಕ್ರಮಿಸಿದೆ. ಇಲ್ಲಿ ಅಕೇಶಿಯಾ ಬೆಳೆಯುತ್ತಿದ್ದು ಜಾನುವಾರುಗಳಿಂದ ರಕ್ಷಣೆ ಪಡೆಯಲು ಟ್ರಂಚ್ ತೋಡಿ ಬೇಲಿಯನ್ನು ನಿರ್ಮಿಸಲಾಗಿದೆ.ಬತ್ತದ ಗದ್ದೆಗಳನ್ನು ಅಡಿಕೆ ತೋಟವಾಗಿ ಪರಿವರ್ತಿಸುತ್ತಿರುವುದರಿಂದಾಗಿ ಜಾನುವಾರುಗಳಿಗೆ ಮೇಯಲು ಜಾಗವೇ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಅನಿವಾರ್ಯವಾಗಿ ಕಾಡು ಅಥವಾ ಅಡಿಕೆ ತೋಟಗಳಲ್ಲಿ ಮೇವನ್ನು ಆಶ್ರಯಿಸಿ  ಹೋದ ಜಾನುವಾರುಗಳು ಹುಲಿ ಹಾಗೂ ಚಿರತೆ ಬಾಯಿಗೆ ಬಲಿಯಾಗುತ್ತಿವೆ ಎನ್ನುತ್ತಾರೆ ಜಾನುವಾರು ಮಾಲೀಕರು.ಜಾನುವಾರು ಕಳೆದುಕೊಂಡ ರೈತರಿಗೆ ಅರಣ್ಯ ಇಲಾಖೆ ನೀಡುತ್ತಿರುವ ಪರಿಹಾರ ಧನ ತೀರಾ ಕಡಿಮೆಯಾಗಿದ್ದು, ಹಣ ಪಡೆಯಲು ಒದಗಿಸಬೇಕಾದ ದಾಖಲೆಗಳನ್ನು ಸಿದ್ಧಪಡಿಸಲು ಅಸಾಧ್ಯ ಎಂದು ರೈತರು ಹೇಳುತ್ತಾರೆ.ಹುಲಿ ಅಥವಾ ಚಿರತೆ ಹಿಡಿದು ತಿಂದ ಜಾನುವಾರುಗಳ ಫೋಟೋ ಒದಗಿಸಬೇಕು. ಸತ್ತ ಜಾನುವಾರಿನ ಮರಣೋತ್ತರ ಪರೀಕ್ಷೆಯನ್ನು ಪಶುವೈದ್ಯರಿಂದ ಮಾಡಿಸಬೇಕು. ಅದರ ಅಂದಾಜು ಮೌಲ್ಯ ಹೇಳಬೇಕು. ಇಂತಹ ಹತ್ತು ಹಲವು ಮಾಹಿತಿಯುಳ್ಳ ಅರ್ಜಿಯನ್ನು ಅರಣ್ಯ ಇಲಾಖೆಗೆ ನೀಡಬೇಕಿದೆ.ಕಾಡಿನಲ್ಲಿ ಹುಲಿ ಅಥವಾ ಚಿರತೆ ಜಾನುವಾರು ಹಿಡಿದು ತಿಂದ ಸ್ಥಳವನ್ನು ಮೊದಲನೆಯದಾಗಿ ಪತ್ತೆ ಹಚ್ಚುವುದು ಕಷ್ಟದ ಕೆಲಸ. ಬಹುತೇಕ ಸಂದರ್ಭಗಳಲ್ಲಿ ಸತ್ತ ಜಾನುವಾರು ಪತ್ತೆಯೇ ಆಗುವುದಿಲ್ಲ. ಜಾನುವಾರುಗಳನ್ನು ಹಿಡಿದು ತಿಂದ ಮೇಲೆ ಅಳಿದುಳಿದ ಕಳೇಬರ ನಮಗೆ ಸಿಗುವುದೇ ಇಲ್ಲ. ಹಾಗಿದ್ದ ಮೇಲೆ ಸರ್ಕಾರ ನಿಗದಿ ಮಾಡಿದ ನಿಯಮಗಳನ್ನು ಪೂರೈಸುವುದು ಹೇಗೆ? ಎಂಬ ಪ್ರಶ್ನೆಯನ್ನು ರೈತರು ಮುಂದಿಡುತ್ತಾರೆ.ಹಾಲಿನ ದರ ಏರುತ್ತಿರುವ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿಯುಳ್ಳ ಹಾಗೂ ಕೃಷಿ ಬದುಕಿಗೆ ಪೂರಕವಾಗಿರುವ ಮಲೆನಾಡಿನ ವಿಶಿಷ್ಟ ತಳಿಯ ಜಾನುವಾರುಗಳು ಕಾಡುಪ್ರಾಣಿಗಳ ಬಾಯಿಗೆ ಬಲಿಯಾಗುತ್ತಿವೆ. ಈ ಸಮಸ್ಯೆಗೆ ಪರಿಹಾರ ಹೇಗೆ ಎಂಬುದೇ ಇಲ್ಲಿನ ರೈತರ ಚಿಂತೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)