ಮಲೆನಾಡ ಸೆರಗಿನ ಚಿಕ್ಕಾಸಂಧಿ ಬಲು ಚೊಕ್ಕ

7

ಮಲೆನಾಡ ಸೆರಗಿನ ಚಿಕ್ಕಾಸಂಧಿ ಬಲು ಚೊಕ್ಕ

Published:
Updated:

ಸುತ್ತಲು ಮಲೆಗಳಿಂದ ಆವೃತವಾಗಿ, ಎತ್ತರದ ಸ್ಥಳದಲ್ಲಿದೆ. ಕೇವಲ ಆರು ದಶಕಗಳ ಹಿಂದೆಯಷ್ಟೇ ಮಳೆಗಾಲದಲ್ಲಿ ಮನೆಯಿಂದ ಹೊರಬರಲಾರದಷ್ಟು ಜಡಿಮಳೆ ಕಂಡ ನಾಡು. ಇಂದು ಅರೆ ಮಲೆನಾಡಿನ ಸ್ಥಿತಿ ತಲುಪಿ; ಅಡಿಕೆ, ತೆಂಗಿನ ತೋಟ ಹೊರತುಪಡಿಸಿ ಮಳೆಯಾಶ್ರಯದಲ್ಲಿ ಮಾವು ಬೆಳೆಯುವ ಮೂಲಕ ಬದುಕು ಕಂಡುಕೊಂಡ ಗ್ರಾಮ.- ಇದು ಚನ್ನಗಿರಿ ತಾಲ್ಲೂಕಿನ ಚಿಕ್ಕಾಸಂಧಿ ಗ್ರಾಮದ ಚಿತ್ರಣ. ಚಿಕ್ಕಾಸಂಧಿ ಜಿಲ್ಲಾ ಕೇಂದ್ರ ದಾವಣಗೆರೆಯಿಂದ 62 ಕಿ.ಮೀ., ತಾಲ್ಲೂಕು ಕೇಂದ್ರ ಚನ್ನಗಿರಿಯಿಂದ 22 ಕಿ.ಮೀ. ದೂರವಿದೆ. ಹಿಂದೆ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೆ ಒಳಪಟ್ಟಿತ್ತು. ನೂತನ ಜಿಲ್ಲೆಗಳ ರಚನೆ ವೇಳೆ ದಾವಣಗೆರೆ ಜಿಲ್ಲೆಗೆ ಸೇರ್ಪಡೆಯಾಯಿತು. ಮಲೆನಾಡು ಖ್ಯಾತಿಯ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿ ಪ್ರದೇಶಕ್ಕೆ ಕೆಲವೇ ಕಿ.ಮೀ. ಅಂತರದಲ್ಲಿದೆ.ಚನ್ನಗಿರಿ-ಬೀರೂರು ರಸ್ತೆಯಲ್ಲಿ ಕ್ರಮಿಸಿದರೆ ಮುಖ್ಯರಸ್ತೆಯಿಂದ ಒಂದು ಕಿ.ಮೀ. ಕಾಲುನಡಿಗೆಯಲ್ಲಿ ಸಾಗಿ ಗ್ರಾಮ ತಲುಪಬೇಕು. ಇದೇ ರಸ್ತೆಯಲ್ಲಿ ಮತ್ತೆ ಎರಡು ಕಿ.ಮೀ. ಕ್ರಮಿಸಿದರೆ ಚಿಕ್ಕಮಳಲಿ ಗ್ರಾಮ ಸಿಗುತ್ತದೆ. ಗ್ರಾಮದವರೆಗೆ ಉತ್ತಮ ಡಾಂಬರ್ ರಸ್ತೆ ಇದೆ. ಈವರೆಗೆ ಗ್ರಾಮಕ್ಕೆ ಬಸ್ ಸಂಪರ್ಕ ಇಲ್ಲ. ಆಟೋರಿಕ್ಷಾ, ಇಲ್ಲವೇ ಖಾಸಗಿ ವಾಹನ, ಬೈಕ್‌ಗಳಲ್ಲೇ ಪ್ರಯಾಣಿಸಬೇಕಾದ ಸ್ಥಿತಿ ಇದೆ. ಆಸ್ಪತ್ರೆ, ಇತ್ಯಾದಿಗಳಿಗೆ ಅಲೆದಾಡುವುದು ತಪ್ಪಿಲ್ಲ.`ಮಲೆನಾಡಿನ ವ್ಯಾಪ್ತಿಯಲ್ಲಿರುವುದರಿಂದ ಮಳೆಗಾಲದಲ್ಲಿ ಬಿಡುವಿಲ್ಲದೆ ಜಡಿ ಮಳೆ ಸುರಿಯುತ್ತಿತ್ತು. ಮನೆಯಿಂದ ಹೊರಬರಲು ಸಾಧ್ಯವೇ ಆಗುತ್ತಿರಲಿಲ್ಲ. ಮಳೆಗೆ ನೆನೆದ ಗೊಂಗಡಿ(ಕಂಬಳಿ) ಒಣಗಲು 15-20 ದಿನಗಳೇ ಆಗುತ್ತಿತ್ತು. ಇನ್ನು ಅಡುಗೆ ಮಾಡಿ ಊಟ ಮಾಡುವುದೂ ತತ್ವಾರ~ ಎನ್ನುವಂತಹ ಸ್ಥಿತಿಯನ್ನು ಕಂಡ ಜನರು ಹಿಂದೆ ಇದ್ದ ಗ್ರಾಮ (ಈಗ ಹಾಳೂರು) ತೊರೆದು ಅರ್ಧ ಕಿ.ಮೀ. ದೂರದ ಈಗಿನ ಸ್ಥಳಕ್ಕೆ ಬಂದು ನೆಲೆಸಿದ್ದಾರೆ.ಇತಿಹಾಸ: `ಹಿಂದೆ ಗ್ರಾಮ ಈಗಿರುವ ಸ್ಥಳದಿಂದ ಅರ್ಧ ಕಿ.ಮೀ. ಉತ್ತರಕ್ಕೆ (ಹಾಳೂರು) ಇತ್ತು. ಸಮೃದ್ಧ ಸಂಪತ್ತಿನಿಂದ ಕೂಡಿತ್ತು ಎಂದು, ಗ್ರಾಮದಲ್ಲಿ ಬೆಳ್ಳಿಯ ರಥವೂ ಇತ್ತು ಎಂದು. ರಥೋತ್ಸವದ ವೇಳೆ ಅದಾವುದೋ ಕಾರಣಕ್ಕೆ ರಥ ಗ್ರಾಮದ ದೊಡ್ಡ ಬಾವಿಯಲ್ಲಿ ಮುಳುಗಿದೆ ಎಂದು, ಅಲ್ಲಿ ಈಗಲೂ ರಥ ಆ ಮುಚ್ಚಿದ ಬಾವಿಯಲ್ಲಿ ಇದೆ ಎಂದು ಹಿರಿಯರು ಹೇಳುತ್ತಿದ್ದರು. ಗ್ರಾಮದ ಸರ್ವರೂ ಅಪಾರ ಸಂಪತ್ತಿನಿಂದ ಕೂಡಿದವರಾಗಿದ್ದು, ಅಪಾರ ಬೆಳ್ಳಿ, ಬಂಗಾರ ಹೊಂದಿದ್ದರಂತೆ. ರಥ ಮುಚ್ಚಿದ ನಂತರ ಅಲ್ಲಿದ್ದ ಜನರು ಗ್ರಾಮ ತೊರೆದರಂತೆ.

 

ಮುಂದೆ ಅದು ಹಾಳೂರಾಗಿ ಉಳಿಯಿತು.~ ಎಂದು ಹಿರಿಕರು ಗ್ರಾಮದ ಕುರಿತು ಕಥೆ ಹೇಳುತ್ತಾರೆ~ ಎನ್ನುತ್ತಾರೆ ಗ್ರಾಮಸ್ಥರು.ಉಬ್ರಾಣಿ ಹೋಬಳಿ ವ್ಯಾಪ್ತಿಯಲ್ಲಿರುವ ಗ್ರಾಮ 60ರಿಂದ 70 ಮನೆ ಹೊಂದಿದೆ. ತಮಿಳು ಜನಾಂಗದ ಒಂದು ಮನೆ, ಪರಿಶಿಷ್ಟ ಸಮುದಾಯದ 5 ಮನೆ, ಲಂಬಾಣಿ ಸಮುದಾಯದ 15 ಮನೆಗಳು ಇದ್ದು, ಉಳಿದಂತೆ ಬಹುಸಂಖ್ಯಾತರು ಲಿಂಗಾಯತ ಸಮಾಜದ ಜನರು ವಾಸವಿದ್ದಾರೆ.`ಬಿಡುವಿಲ್ಲದ ಮಳೆಯ ಕಾರಣಕ್ಕೆ ಜೀವನ ಕಷ್ಟ ಎಂದು ಅರಿತ ಅಂದಿನ ತಾಲ್ಲೂಕು ಅಧಿಕಾರಿಗಳು ಚಿಕ್ಕಾಸಂಧಿ, ಚಿಕ್ಕಮಳಲಿ, ನೆಲ್ಲಿ ಅಂಕಲು -ಈ ಮೂರು ಗ್ರಾಮಗಳ ಸ್ಥಳಾಂತರಕ್ಕೆ ಯೋಜನೆ ರೂಪಿಸಿದರು. ಗ್ರಾಮ ಯೋಜನಾ ಬದ್ಧವಾಗಿರುವುದರಿಂದ ಅಚ್ಚುಕಟ್ಟಾದ ರಸ್ತೆ, ಗ್ರಾಮದ ಮದ್ಯೆ ದೇವಸ್ಥಾನ, ಕುಡಿಯುವ ನೀರಿನ ವ್ಯವಸ್ಥೆ, ಪ್ರಾಥಮಿಕ ಶಾಲೆ, ಅಂಗನವಾಡಿ ಎಲ್ಲದಕ್ಕೂ ಇಂತಿಷ್ಟು ಎಂದು ಸ್ಥಳ ಮೀಸಲಿರಿಸಿ ರೂಪಿಸಿದ್ದಾರೆ.

 

ಈ ಹೊಸ ಗ್ರಾಮದಲ್ಲಿ ನೆಲೆ ನಿಂತಮೇಲೂ  ಮನೆಯಿಂದ ಹೊರ ಬರುವುದಿರಲಿ ಊಟಕ್ಕೆ ಅಡುಗೆ ಸಿದ್ಧಮಾಡಲೂ ಪರದಾಡಿದ ಪ್ರಸಂಗಗಳು ಇನ್ನೂ ನೆನಪಿನಲ್ಲಿವೆ. ಆ ಪ್ರಮಾಣದ ಮಳೆ ಈ ಭಾಗದಲ್ಲಿ ಬೀಳುತ್ತಿತ್ತು. ಇಂದು ಅರೆಬರೆ ಮಳೆಗೆ, ಅಡಿಕೆ, ತೆಂಗು ಬೆಳೆಯುತ್ತಿದ್ದೇವೆ.  ಬಯಲುಭೂಮಿಯಲ್ಲಿ  ಮಾವು ಬೆಳೆಯುತ್ತಿದ್ದೇವೆ~ ಎನ್ನುತ್ತಾರೆ  ಗ್ರಾಮಸ್ಥರಾದ  ಲೋಕೇಶ್, ನಿರಂಜನ್, ಉಮೇಶ್ ನಾಯ್ಕ. ಗ್ರಾಮ ಯೋಜನಾಬದ್ಧವಾಗಿದ್ದು, ಬಹುತೇಕ ಮನೆಳಿಗೆ ಹೊಂದಿಕೊಂಡು `ಒಕ್ಕಲು ಕಣ~ಗಳಿವೆ. ಕಣಗಳಿಗೆ ಅಚ್ಚುಕಟ್ಟಾದ ಬೇಲಿಗಳಿವೆ. ರಾಸುಗಳಿಗೆ ಅಗತ್ಯವಾದ ಬತ್ತದ ಹುಲ್ಲನ್ನು ಅಚ್ಚುಕಟ್ಟಾಗಿ ಬಣವೆ ಹಾಕಿ ಸಂಗ್ರಹಿಸಿದ್ದಾರೆ. ಕಣಗಳಿಗೆ ತಂತಿಬೇಲಿಗಳಿವೆ; ಮುಳ್ಳಿನ ಬೇಲಿ ಕಂಡದ್ದೇ ಅಪರೂಪ. ರಸ್ತೆ ಅಚ್ಚುಕಟ್ಟಾಗಿವೆ, ಚರಂಡಿಗಳ ಕೊಳಕು ಕಂಡದ್ದೇ ಅಪರೂಪ. ಹೀಗಾಗಿ, ಚಿಕ್ಕಾಸಂಧಿ `ಬಲು ಚೊಕ್ಕ~ ಎನ್ನಬಹುದು.ದೇವಸ್ಥಾನ; ಹಬ್ಬ

ಗ್ರಾಮದಲ್ಲಿ  ಆಂಜನೇಯ ಸ್ವಾಮಿ ದೇವಸ್ಥಾನ, ಬಸವೇಶ್ವರ ಮತ್ತು ಸೇವಾಲಾಲ್ ದೇವಸ್ಥಾನಗಳಿವೆ. ಪ್ರತಿ ವರ್ಷ ಹಬ್ಬಗಳನ್ನು ಎಲ್ಲರೂ ಸಂಭ್ರಮದಿಂದ ಆಚರಿಸುತ್ತಾರೆ.ರಾಜಕೀಯ ಪೈಪೋಟಿಗಿಳಿಯದ ಮಂದಿ

ಗ್ರಾಮ ಪಂಚಾಯ್ತಿಗೆ ಒಂದು ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಲು ಇಲ್ಲಿ ಅವಕಾಶ ಇದ್ದು, ಆ ಒಂದು ಸ್ಥಾನಕ್ಕೆ ಪಕ್ಕದ ಚಿಕ್ಕಮಳಲಿ ಗ್ರಾಮದ ಅಭ್ಯರ್ಥಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಈ ಬಗ್ಗೆ ಗ್ರಾಮಸ್ಥರನ್ನು ಪ್ರಶ್ನಿಸಿದರೆ, ಅವರೂ ನಮ್ಮವರೇ ಬಿಡಿ; ಯಾರಾದರೇನಂತೆ. ಉತ್ತಮ ಕೆಲಸ ಮಾಡಿದರೆ ಸಾಕು ಎಂದು ರಾಜಕೀಯದ ಪೈಪೋಟಿಯನ್ನು ಅಲ್ಲಗಳೆಯುತ್ತಾರೆ.ತೆಂಗು, ಅಡಿಕೆ ತೋಟಗಾರಿಕೆ ಬೆಳೆ ಬೆಳೆಯುತ್ತೇವೆ. ಮಳೆಗಾಲದಲ್ಲಿ ಮಳೆಯಾಶ್ರಯಿಸಿ ಬತ್ತ ಬೆಳೆಯುತ್ತೇವೆ. ಇದೇ ಮೇವನ್ನು ಒಂದು ವರ್ಷಕ್ಕಾಗುವಷ್ಟು ಸಂಗ್ರಹಿಸಿಡುತ್ತೇವೆ. ಬಹುತೇಕ ರೈತರು ಮಾವಿನತೋಟ ಹೊಂದಿದ್ದಾರೆ. ಪ್ರಸಕ್ತ ವರ್ಷ ಮಾವು ಇಳುವರಿ ಕಡಿಮೆ ಇದೆ. ಮುಂದಿನ ವರ್ಷ ಉತ್ತಮ ಇಳುವರಿ ಬಂದೇ ಬರುತ್ತದೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಲೋಕೇಶ್ ಮತ್ತು ನಿರಂಜನ್.ಉಬ್ರಾಣಿಯಿಂದ ದೂರ!


ಉಬ್ರಾಣಿ ಏತ ನೀರಾವರಿ ಯೋಜನೆಯಿಂದ ತಾಲ್ಲೂಕಿನ ಹಲವು ಕೆರೆಗಳು ನೀರನ್ನು ಕಾಣುವ ಮೂಲಕ ನೀರಾವರಿ ಸೌಲಭ್ಯ ಪಡೆದ ಸಂತಸದಲ್ಲಿ ಆ ಭಾಗದ ಜನರಿದ್ದಾರೆ. ಆದರೆ, ಈ ಗ್ರಾಮದಿಂದ ಕೇವಲ 5 ಕಿ.ಮೀ. ಅಂತರದಲ್ಲಷ್ಟೇ ಉಬ್ರಾಣಿ ಇದೆ. ಏತ ನೀರಾವರಿ ಯೋಜನೆಯ ಕೊಳವೆ ಮಾರ್ಗ ಎರಡರಿಂದ ಎರಡೂವರೆ ಕಿ.ಮೀ. ದೂರದಲ್ಲಿ ಹಾದುಹೋಗಿದೆ. ನಮ್ಮ ದುರದೃಷ್ಟವೋ ಏನೋ ಗೊತ್ತಿಲ್ಲ. ಪಕ್ಕದಲ್ಲೇ ಇದ್ದು ಈ ನೀರಾವರಿ ಯೋಜನೆಯಿಂದ ದೂರವೇ ಉಳಿದಿದ್ದೇವೆ. ಇದರಿಂದ ನಮ್ಮ ಗ್ರಾಮ ಮತ್ತು ಸುತ್ತಲಿನ ಗ್ರಾಮಗಳ ಕೆರೆಗಳು ನೀರು ಕಾಣುವುದು ದೂರದ ಮಾತು ಎನ್ನುವಂತಾಗಿದೆ ಎಂದು ಅಲವತ್ತುಕೊಳ್ಳುತ್ತಾರೆ ಗ್ರಾಮಸ್ಥರು.ಜಮೀನಿನ ಪಹಣಿ ನೀಡಿ

ಗ್ರಾಮದಲ್ಲಿ ವಾಸವಿರುವ ಲಂಬಾಣಿ ಸಮುದಾಯದ ಕುಟುಂಬಗಳು ಹಿಂದಿನಿಂದಲೂ ಸರ್ಕಾರಿ ಗೋಮಾಳ ಭೂಮಿ ಉಳುಮೆ ಮಾಡಿಕೊಂಡಿದ್ದು, ಸಾಗುವಳಿ ಪತ್ರ ನೀಡಲಾಗಿದೆ. ಆದರೆ, ಪಹಣಿ ಮಾತ್ರ ದೊರೆತಿಲ್ಲ. ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲಾಗಿದ್ದರೂ ಪ್ರಯೋಜನವಾಗಿಲ್ಲ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬುದು ಈ ಸಮಾಜದ ಜನರ ಒತ್ತಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry