ಭಾನುವಾರ, ಜೂನ್ 7, 2020
24 °C

ಮಲೆನಾಡ ಹುಡುಗನ ಐಸಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲೆನಾಡ ಹುಡುಗನ ಐಸಿರಿ

ಹುಟ್ಟಿನಿಂದಲೇ ಅಂಧತ್ವ. ಜತೆಗೆ ಕುಟುಂಬದ ಬಹುತೇಕರೂ ಹುಟ್ಟು ಕುರುಡರು. ಇದು ತಾಯಿಯಿಂದಲೇ ಬಂದ ಬಳುವಳಿ. ಆದರೂ, ಸಾಧನೆ ಮಾಡಬೇಕೆನ್ನುವ ಮಹದಾಸೆ. ಸಾಧನೆಗಾಗಿ ಪಟ್ಟು ಬಿಡದ ಛಲ. ಕೇವಲ ಕಲ್ಪನೆಯೇ ಬದುಕಾಗುತ್ತದೆಯಾ ಎನ್ನುವ ಆತಂಕ. ಈ ದೌರ್ಬಲ್ಯಗಳನ್ನೆಲ್ಲಾ ಮೀರಿ ಪ್ರಯತ್ನ. ಇದಕ್ಕೆಲ್ಲಾ ಗರಿ ಎಂಬಂತೆ ಭಾರತ ಅಂಧರ ಕ್ರಿಕೆಟ್ ತಂಡದ ನಾಯಕ ಪಟ್ಟ...!ಪಾಕಿಸ್ತಾನದಲ್ಲಿ ನವೆಂಬರ್‌ನಲ್ಲಿ  ನಡೆಯಲಿರುವ ಅಂಧರ ಕ್ರಿಕೆಟ್ ಟೂರ್ನಿಗೆ ಭಾರತ ತಂಡದ ನಾಯಕರಾಗಿರುವ ಮಲೆನಾಡು ಜಿಲ್ಲೆ ಶಿವಮೊಗ್ಗದ ಹರಕೆರೆ ನಿವಾಸಿ ಶೇಖರ್ ನಾಯಕ ಲಚ್ಮಾ ಸಾಧನೆಯ ಕಿರು ಪರಿಚಯವಿದು.ಬದುಕಿನ ಯಶೋಗಾಥೆ: ತಂದೆ ಕೂಲಿ ಕಾರ್ಮಿಕನಾಗಿ ಇಡೀ ಕುಟುಂಬದ ಜವಾಬ್ದಾರಿ ಹೊತ್ತಿದ್ದರು. ತಂದೆಯ ಅಕಾಲಿಕ ಮರಣದಿಂದ ಕುಟುಂಬ ಬಡತನದ ಸುಳಿಗೆ ಸಿಕ್ಕಿತು. ಎಂಟು ವರ್ಷದ ಬಾಲಕನಾಗಿದ್ದಾಗ ಚಿಕಿತ್ಸೆಯಿಂದ ಸ್ವಲ್ಪ ದೃಷ್ಟಿ ಬಂತು.

 

ಆದರೆ ತಂದೆಯನ್ನು ನೋಡುವ ಭಾಗ್ಯ ಕೂಡ ಸಿಗಲಿಲ್ಲ. ಶೇಖರ್ 11ನೇ ವಯಸ್ಸಿನಲ್ಲಿ ಶಿವಮೊಗ್ಗದ ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿಗೆ ವಿದ್ಯಾಭ್ಯಾಸ ಪ್ರಾರಂಭಿಸಿದ. ಅಂದಿನಿಂದ ಕ್ರಿಕೆಟ್ ಆಟದಲ್ಲಿ ಆಸಕ್ತಿ ಹೊಂದಿದ ಇವರ ಸಾಧನೆಗೆ ಮೆಟ್ಟಿಲಾಗಿದ್ದು ದೈಹಿಕ ಶಿಕ್ಷಕ ಸುರೇಶ್ ಶರ್ಮ.ಸಾಧನೆಯ ಹಾದಿಯಲ್ಲಿ: 1997ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಅಂಧರ ಕ್ರಿಕೆಟ್‌ನಲ್ಲಿ ವಿಕೆಟ್ ಕೀಪರ್ ಆಗಿ ಶೇಖರ್ ಪದಾರ್ಪಣೆ ಮಾಡಿದರು. ಇದಾದ ಮೂರು ವರ್ಷಗಳ ನಂತರ ಬೆಳಗಾವಿಯಲ್ಲಿ ನಡೆದ ದಕ್ಷಿಣ ವಲಯ ವಿಭಾಗದ ಕ್ರಿಕೆಟ್ ಟೂರ್ನಿಯಲ್ಲಿ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳ ವಿರುದ್ಧ ಮೂರು ಪಂದ್ಯಗಳನ್ನಾಡಿದರು.ಕೇರಳ ವಿರುದ್ಧದ ಫೈನಲ್ ಪಂದ್ಯ ಸೇರಿದಂತೆ ಟೂರ್ನಿಯಲ್ಲಿ ಒಟ್ಟು 249 ರನ್ ಗಳಿಸಿದರು. ಆಗಲೇ ಶೇಖರ್‌ಗೆ ಕಣ್ಣಿನ ಕತ್ತಲೆ ನಡುವೆಯೂ ಬೆಳಕು ಮೂಡಿದ್ದು.ಮುಂದಿನ ಪ್ರೌಢಶಾಲಾ ವಿದ್ಯಾಭ್ಯಾಸ ಮೈಸೂರಿನಲ್ಲಿ ಆರಂಭ. ಅಲ್ಲಿಯೂ ಬಿಡದ ಕ್ರಿಕೆಟ್ ಪ್ರೀತಿ. ಅಲ್ಲಿನ ತಿಲಕ್‌ನಗರದಲ್ಲಿರುವ ಅಂಧರ ಶಾಲೆಯಲ್ಲಿ ಶಿಕ್ಷಣ ಮುಗಿಸಿದರು. ಬಳಿಕ ಸಮರ್ಥನಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಶಿಕ್ಷಣ. ನಂತರ ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿಲ್ಲ.ಆ ಬಳಿಕ ಶೇಖರ್ ಪ್ರೀತಿ ಹುಚ್ಚು ಹೊಳೆಯಾಗಿ ಹರಿದಿದ್ದು ಕ್ರಿಕೆಟ್‌ನತ್ತ. ಚೆನ್ನೈನಲ್ಲಿ 2002ರಲ್ಲಿ ನಡೆದ ಟೂರ್ನಿಯಲ್ಲಿ `ಸರಣಿ ಶ್ರೇಷ್ಠ~ ಪ್ರಶಸ್ತಿ ಪಡೆದು ಅಂಧರ ವಿಶ್ವಕಪ್‌ನಲ್ಲಿ ಆಡಲು ಸ್ಥಾನ ಗಿಟ್ಟಿಸಿಕೊಂಡರು. ಇದು ಶೇಖರ್ ಅವರ ಕ್ರಿಕೆಟ್ ಆಸಕ್ತಿಗೆ ಇನ್ನಷ್ಟು ಇಂಬು ನೀಡಿತು.2005ರಲ್ಲಿ ನವದೆಹಲಿಯಲ್ಲಿ ನಡೆದ ಪೆಟ್ರೊಕಪ್ ಸರಣಿಯಲ್ಲಿ ಭಾರತ ತಂಡದ ಉಪನಾಯಕನ ಜವಾಬ್ದಾರಿ ನಿಭಾಯಿಸಿದರು. ಇದರಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಭಾರತ ಜಯ ಸಾಧಿಸಿತು.ಶೇಖರ್‌ಗೆ ತನ್ನ ಪ್ರತಿಭೆ ಪ್ರದರ್ಶಿಸಲು ಅವಕಾಶ ಸಿಕ್ಕಿದ್ದು 2006ರಲ್ಲಿ. ಪಾಕಿಸ್ತಾನದಲ್ಲಿ ನಡೆದ ಅಂಧರ ವಿಶ್ವಕಪ್‌ನಲ್ಲಿ. ಇದರಲ್ಲಿ ಎಂಟು ಪಂದ್ಯಗಳನ್ನಾಡಿ 592ರನ್ ಹಾಗೂ 27ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇದರ ಜೊತೆಗೆ `ಸರಣಿ ಶ್ರೇಷ್ಠ~ ಮತ್ತು `ಉತ್ತಮ ಬ್ಯಾಟ್ಸ್‌ಮನ್~ ಪ್ರಶಸ್ತಿ ಬಾಚಿಕೊಂಡರು.ಸಾಧನೆಯ ಬಲಕ್ಕೆ ಬೆಂಬಲ ನೀಡುವಂತೆ ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆಯವರು 2010ರಲ್ಲಿ ಭಾರತ ತಂಡದ ನಾಯಕ ಸ್ಥಾನದ ಹೊಣೆ ನೀಡಿದರು. ಅದು ಇಂಗ್ಲೆಂಡ್ ಪ್ರವಾಸದ ವೇಳೆ. ಈ ಪ್ರವಾಸದಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಅವರ ನೆಲದಲ್ಲಿಯೇ ಬಗ್ಗು ಬಡಿಯಿತು. ಆಗ ಶೇಖರ್ ಭಾರತದ ಪಾಲಿನ `ಹೀರೋ~ ಆದರು.ಈಚೆಗೆ ಮೈಸೂರಿನಲ್ಲಿ ನಡೆದ 18ನೇ ರಾಷ್ಟ್ರ ಮಟ್ಟದ ಅಂಧರ ಟೂರ್ನಿಯಲ್ಲಿ ದಕ್ಷಿಣ ವಲಯಕ್ಕೆ ಶೇಖರ್ ನಾಯಕರಾಗಿದ್ದರು. ದೆಹಲಿಯಲ್ಲಿ ನಡೆಯುವ ತರಬೇತಿ ಶಿಬಿರದ ಬಳಿಕ ನವೆಂಬರ್ 14ರಂದು ಭಾರತ ಪಾಕಿಸ್ತಾನಕ್ಕೆ  ಪ್ರಯಾಣಿಸಲಿದೆ.ಉದ್ಯೋಗದ ಹಾದಿ: ಶೇಖರ್ ಸದ್ಯ ಸಮರ್ಥನಂ ಅಂಗವಿಕಲರ ಸಂಸ್ಥೆಯ `ಸುನಾಧಾ~ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಯ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವಾಹಿತರಾದ ಇವರಿಗೆ ಈ ಉದ್ಯೋಗವೇ ಜೀವನಾಧಾರ.ಭಾರತ- ಪಾಕಿಸ್ತಾನ ನಡುವಿನ ಪಂದ್ಯಗಳೆಂದರೆ ಕ್ರಿಕೆಟ್ ಅಭಿಮಾನಿಗಳಿಗೆ ರೋಚಕ. ನನಗೂ ಕೂಡ ಪಾಕಿಸ್ತಾನ ವಿರುದ್ಧ ಆಡುವುದೆಂದರೆ ಇಷ್ಟ. ಪಾಕ್ ನೆಲದಲ್ಲಿ ನಡೆಯುವ ಮೂರು ಏಕದಿನ ಹಾಗೂ ಟ್ವೆಂಟಿ- 20 ಪಂದ್ಯಗಳಲ್ಲಿ ಗೆಲುವು ಪಡೆಯುವ ವಿಶ್ವಾಸ ನಮ್ಮ ತಂಡದ್ದು ಎನ್ನುತ್ತಾರೆ ಶೇಖರ್.ಭರವಸೆ ನಡುವೆಯೂ ನಿರಾಸೆ: ಭಾರತ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಮಾನ್ಯತೆ ಇದೆ. 2006ರಲ್ಲಿ ಮಹಿಳಾ ತಂಡಕ್ಕೂ ಈ ಮಾನ್ಯತೆ ಸಿಕ್ಕಿದೆ. ಸಾಕಷ್ಟು ದೌರ್ಬಲ್ಯ, ಕಷ್ಟದ ನಡುವೆಯೂ ನಾವು ಈ ಸಾಧನೆ ಮಾಡಿದರೂ, ಅಂಧರ ಕ್ರಿಕೆಟ್ ಜಗತ್ತನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತಷ್ಟು ಕತ್ತಲ ಕೂಪಕ್ಕೆ ದೂಡುತ್ತಿದೆ. ಇದಕ್ಕೆಲ್ಲಾ ಕಾರಣ ಬಿಸಿಸಿಐ ಅಂಧರ ಕ್ರಿಕೆಟ್‌ಗೆ ಮಾನ್ಯತೆ ನೀಡದಿರುವುದು.ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಂಧರ ಕ್ರಿಕೆಟ್‌ಗೆ ಅಂತರರಾಷ್ಟ್ರೀಯ ಮಾನ್ಯತೆ ನೀಡಿದೆ. ಈ ಹಿಂದೆ ಸಂಸ್ಥೆ ಮಾನ್ಯತೆಗಾಗಿ ಬಿಸಿಸಿಐಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.ಅಂತರರಾಷ್ಟ್ರೀಯ ಮಾನ್ಯತೆ ಸಿಗದಿದ್ದರೆ ಯಾವ ಕಂಪೆನಿಗಳು ಪ್ರಾಯೋಜಕತ್ವ ನೀಡಲು ಮುಂದೆ ಬರುವುದಿಲ್ಲ ಎನ್ನುತ್ತಾರೆ ಸಂಸ್ಥೆಯ ಕಾರ್ಯದರ್ಶಿ ಜಿ.ಕೆ.ಮಹಾಂತೇಶ್.ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಂಧರ ಕ್ರಿಕೆಟ್ ಸಂಸ್ಥೆಗೆ ಮಾನ್ಯತೆ ನೀಡಬೇಕು. ನಮ್ಮನ್ನು ಪ್ರೋತ್ಸಾಹಿಸಬೇಕು. ವಿದೇಶಗಳಿಗೆ ಪ್ರವಾಸ ಕೈಗೊಂಡರೆ ಸಾಕಷ್ಟು ಹಣದ ಅವಶ್ಯಕತೆ ಎದುರಾಗುತ್ತದೆ. ಯಾವ ಸಂಸ್ಥೆಗಳು ಪ್ರಾಯೋಜಕತ್ವ ನೀಡಲು ಮುಂದೆ ಬರುವುದಿಲ್ಲ. ನಮಗೂ ಪ್ರೋತ್ಸಾಹ ನೀಡುವವರು ಬೇಕಾಗಿದ್ದಾರೆ.ನಾವು ಕೂಡ ಇತರ ಆಟಗಾರರಂತೆ ದೇಶಕ್ಕೆ ಕೀರ್ತಿ ತರುತ್ತೇವೆ ಎಂಬುದು ಆಟಗಾರನ ನೋವಿನ ನುಡಿ. ಈ ನಿಟ್ಟಿನಲ್ಲಿ ಬಿಸಿಸಿಐ ಯೋಚಿಸುವುದು ಅಗತ್ಯವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.