ಮಲೆಮಹದೇಶ್ವರ ಬೆಟ್ಟದಲ್ಲಿ ಮಳೆ:ನೀರು ನೇರ ಮೆಟ್ಟೂರು ಪಾಲು

7

ಮಲೆಮಹದೇಶ್ವರ ಬೆಟ್ಟದಲ್ಲಿ ಮಳೆ:ನೀರು ನೇರ ಮೆಟ್ಟೂರು ಪಾಲು

Published:
Updated:

ಚಾಮರಾಜನಗರ: ಕಾವೇರಿ ಜಲಾನಯನ ಪ್ರದೇಶಕ್ಕೆ ಒಳಪಟ್ಟಿರುವ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದ ಸುತ್ತಮುತ್ತ ಶುಕ್ರವಾರ ರಾತ್ರಿ ಧಾರಾಕಾರ ಮಳೆಯಾಗಿದೆ.ಮಲೆಮಹದೇಶ್ವರ ಬೆಟ್ಟದಲ್ಲಿ 67.5 ಮಿ.ಮೀ. ಹಾಗೂ ಕುರಟ್ಟಿಹೊಸೂರು ಗ್ರಾಮದಲ್ಲಿ 20.5 ಮಿ.ಮೀ. ಮಳೆ ದಾಖಲಾಗಿದೆ. ಶನಿವಾರ ಬೆಳಿಗ್ಗೆಯೂ ಮಳೆ ಸುರಿಯಿತು. ಆದರೆ, ಯಾವುದೇ ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ ಎಂದು ಕೊಳ್ಳೇಗಾಲದ ತಹಶೀಲ್ದಾರ್ ಸುರೇಶ್‌ಕುಮಾರ್ ತಿಳಿಸಿದ್ದಾರೆ.ಶಾಗ್ಯ, ದಂಟಳ್ಳಿ, ಪೊನ್ನಾಚಿ, ಹೂಗ್ಯಂ, ಜಲ್ಲಿಪಾಳ್ಯ, ನಾಗಮಲೆ, ಇಂಡಿಗನತ್ತ, ಕೊಂಬುಡಿಕ್ಕಿ, ಕೊಕ್ಕೆಬೋರೆ ಗ್ರಾಮದಲ್ಲೂ ಉತ್ತಮ ಮಳೆಯಾಗಿದೆ. ಈ ಹಳ್ಳಿಗಳು ಕಾವೇರಿ ಜಲಾನಯನ ಪ್ರದೇಶಕ್ಕೆ ಸೇರಿವೆ. ಇಲ್ಲಿ ಬೀಳುವ ಮಳೆ ನೀರು ನೇರವಾಗಿ ಕಾವೇರಿ ನದಿಗೆ ಹರಿದು ಹೋಗುತ್ತದೆ. ಅಲ್ಲಿಂದ ಬಿಳಿಗುಂಡ್ಲು ಜಲಮಾಪನ ಕೇಂದ್ರದ ಮೂಲಕ ಹರಿಯುವ ಮಳೆ ನೀರು ಹೊಗೇನಕಲ್ ಜಲಪಾತದಲ್ಲಿ ಧುಮ್ಮಿಕ್ಕಿ ತಮಿಳುನಾಡಿನ ಮೆಟ್ಟೂರು ಜಲಾಶಯ ಸೇರುತ್ತದೆ.ಮಲೆಮಹದೇಶ್ವರ ಬೆಟ್ಟದಿಂದ ಮೆಟ್ಟೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಣಿವೆ ಪ್ರದೇಶದಲ್ಲಿಯೂ ಧಾರಾಕಾರವಾಗಿ ಮಳೆ ಸುರಿದಿದೆ. ಆದರೆ, ಇಲ್ಲಿ ಸುರಿಯುವ ಮಳೆ ನೀರು ನೇರವಾಗಿ ಮೆಟ್ಟೂರು ಜಲಾಶಯ ಸೇರುತ್ತದೆ.ಜಿಲ್ಲೆಯ ಗಡಿ ಅಂಚಿನಲ್ಲಿರುವ ಮೆದುಗನೆ, ತುಳಸಿಗೆರೆ, ಮಾರಿಕೊಟ್ಟಾಯಂ ಹಾಗೂ ಪಾಲಾರ್ ಸುತ್ತಮುತ್ತಲೂ ಉತ್ತಮ ಮಳೆ ಸುರಿದಿದೆ. ಆದರೆ, ಈ ಮಳೆ ನೀರು ಬಿಳಿಗುಂಡ್ಲು ಜಲ ಮಾಪನ ಕೇಂದ್ರದ ಮೂಲಕ ಹರಿಯುವುದಿಲ್ಲ. ಹೊಗೇನಕಲ್‌ನಲ್ಲಿ ಧುಮ್ಮಿಕ್ಕುವ ಜಲಪಾತದ ನೀರಿನೊಂದಿಗೆ ಪಾಲಾರ್ ಸೇರಿ ಮೆಟ್ಟೂರು ಜಲಾಶಯದಲ್ಲಿ ಸಂಗ್ರಹವಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry