ಮಲ್ಲಿಕಾರ್ಜುನ ಜಾತ್ರೆ ನೋಡ ಬನ್ನಿ..

7

ಮಲ್ಲಿಕಾರ್ಜುನ ಜಾತ್ರೆ ನೋಡ ಬನ್ನಿ..

Published:
Updated:

(ಮಸ್ಕಿ) ಲಿಂಗಸುಗೂರ: ಬೀದರ ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಲಿಂಗಸುಗೂರ ತಾಲ್ಲೂಕಿನ ಮಸ್ಕಿ ಗ್ರಾಮಕ್ಕೆ ಶಿಲಾಯುಗದ ನಂಟು ಎಣೆದುಕೊಂಡಿದೆ. ಅಲ್ಲದೆ, ಅಶೋಕ ಚಕ್ರವರ್ತಿ ಧರ್ಮ ಪ್ರಚಾರದ ಸಂದರ್ಭದಲ್ಲಿ ಮಾಸಂಗಿಪುರಕ್ಕೆ ಬಂದು ನೆಲೆಸಿದ್ದರು ಎಂಬುದಕ್ಕೆ ಅಶೋಕ ಶಿಲಾಶಾಸನ ಸಾಕ್ಷಿಕರಿಸುತ್ತದೆ. ಅಷ್ಟೆ ಅಲ್ಲದೆ ಬೆಟ್ಟದ ತುತ್ತ ತುದಿಯಲ್ಲಿರುವ ಮಲ್ಲಿಕಾರ್ಜುನ ದೇವರ ಪವಾಡಗಳ ಮೂಲಕ ಮಸ್ಕಿ ತನ್ನದೆ ಆದ ಐತಿಹ್ಯ ಹೊಂದಿದೆ.ಮಸ್ಕಿ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳಲ್ಲಿ ಮಲ್ಲಯ್ಯ, ಮಲ್ಲಪ್ಪ, ಮಲ್ಲೇಶಪ್ಪ, ಮಲ್ಲಮ್ಮ ಎಂಬಿತ್ಯಾದಿ ಹೆಸರುಗಳೆ ಪ್ರತಿಯೊಂದು ಕುಟುಂಬದಲ್ಲಿ ಕೇಳಿಬರುತ್ತವೆ. ಗ್ರಾಮದ ಪಶ್ಚಿಮ ಭಾಗದಲ್ಲಿ ಬೆಟ್ಟ ಗುಡ್ಡಗಳ ಸಾಲು ಕಾಣಸಿಗುತ್ತದೆ. ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನ ಆಕಾಶದೆತ್ತರದ ಬೆಟ್ಟದ ತುದಿಯ ಕಲ್ಲಿನಲ್ಲಿ ಒಡಮೂಡಿರುವ ಮಲ್ಲಿಕಾರ್ಜುನ ದೇವರಿಗೆ ಶ್ರೀಶೈಲದ ಮಲ್ಲಿಕಾರ್ಜುನ ಎಂದೆ ಬಿಂಬಿಸಲಾಗುತ್ತಿದೆ.ಶತಮಾನಗಳಷ್ಟು ಹಿಂದೆಯೆ ಬೆಟ್ಟದ ತುದಿಯಲ್ಲಿ ದೇವಾಲಯ ನಿರ್ಮಿಸಲಾಗಿದೆ. ಶ್ರೀಶೈಲ ಮಾದರಿ ದೇವಸ್ಥಾನ ನಿರ್ಮಿಸುವ ಪ್ರಯತ್ನಗಳು ಕಾಣಸಿಗುತ್ತವೆ. ಕೆಲ ಐತಿಹಾಸಿಕ ಹಿನ್ನಲೆಯ ಚಿತ್ರಕಲೆಗಳನ್ನು ಗೋಡೆಗಳಲ್ಲಿ ಕೆತ್ತನೆ ಮಾಡಿರುವುದು ಕಾಣಸಿಗುತ್ತದೆ. ಕಲ್ಲುಗುಂಡುಗಳ ಮಧ್ಯೆಯೆ ಲಕ್ಷಾಂತರ ಭಕ್ತರು ದರ್ಶನಾಶೀರ್ವಾದ ಪಡೆದು ಪುನಿತರಾಗಿದ್ದಾರೆ.ಪ್ರತಿ ವರ್ಷದ ಸಾಂಪ್ರದಾಯದಂತೆ ಭರತ ಹಿಣ್ಣಿಮೆಯ ದಿನದಂದು ರಥೋತ್ಸವ ವಿಜೃಂಭಣೆಯಿಂದ ಜರಗುತ್ತದೆ. ಅಂತೆಯೆ ಈ ವರ್ಷವೂ ಕೂಡ ಫೆಬ್ರುವರಿ 7ರಂದು ಸಂಜೆ ಮಹಾರಥೋತ್ಸವ ಜರುಗಲಿದೆ. ಅಲ್ಲದೆ, ಶ್ರಾವಣ ಮಾಸದ ಕೊನೆಯ ಸೋಮವಾರ ಕೂಡ ಈ ಬೆಟ್ಟದ ಮಲ್ಲಿಕಾರ್ಜುನನ ವಿಶೇಷ ಸೇವಾ ಕಾರ್ಯಗಳು ಸಾಂಗವಾಗಿ ನಡೆಯುತ್ತ ಬಂದಿವೆ. ಜಾತ್ರಾ ಮಹೋತ್ಸವ ಅಂಗವಾಗಿ ಸಕಲ ಸಿದ್ಧತೆಗಳು ನಡೆದಿದ್ದು ಬೀಗರು-ಬಿಜ್ಜರು ತಂಡೋಪ ತಂಡವಾಗಿ ಗ್ರಾಮದತ್ತ ಆಗಮಿಸುತ್ತಿದ್ದಾರೆ.ನಿರ್ಲಕ್ಷ್ಯ: ಕಳೆದ 40 ವರ್ಷಗಳ ಹಿಂದೆ ಬೆಟ್ಟದ ಕೆಳಭಾಗದಲ್ಲಿ ಭ್ರಮರಾಂಭ ದೇವಸ್ಥಾನ ನಿರ್ಮಿಸಿಕೊಂಡ ಬಹುತೇಕ ಭಕ್ತರು ಭ್ರಮರಾಂಭ ಮಲ್ಲಿಕಾರ್ಜುನ ಸೇವಾ ಸಮಿತಿ ಎಂದು ಸಂಘ ಸ್ಥಾಪಿಸಿಕೊಂಡಿದ್ದಾರೆ.ಭ್ರಮರಾಂಭ ದೇವಿಯ ಜಾತ್ರೆ, ಅದರ ಸುತ್ತಮುತ್ತಲ ಪ್ರದೇಶದಲ್ಲಿ ಅಭಿವೃದ್ಧಿಗೆ ಮುಂದಾಗುವಷ್ಟು ಮಲ್ಲಿಕಾರ್ಜುನ ದೇವಸ್ಥಾನದ ಅಭಿವೃದ್ಧಿಗೆ ಮುಂದಾಗುತ್ತಿಲ್ಲ ಎಂಬುದು ದೇವಸ್ಥಾನ ಸಮಿತಿ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂಬುದು ಯುವಕರ ಆರೋಪವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry