ಮಲ್ಲಿಗೆ ಆಸ್ಪತ್ರೆ ಪರವಾನಗಿ ರದ್ದು

7
ರಸ್ತೆ ಪಕ್ಕದಲ್ಲಿಯೇ ಜೈವಿಕ ತ್ಯಾಜ್ಯ

ಮಲ್ಲಿಗೆ ಆಸ್ಪತ್ರೆ ಪರವಾನಗಿ ರದ್ದು

Published:
Updated:

ಬೆಂಗಳೂರು: `ನಗರದ ಬಳ್ಳಾರಿ ರಸ್ತೆಯ ಹೆಬ್ಬಾಳ ಮೇಲ್ಸೇತುವೆ ಬಳಿ ಸುಮಾರು ಎರಡು ಲಾರಿಗಳಷ್ಟು ಜೈವಿಕ ತ್ಯಾಜ್ಯ ಎಸೆದ ಕ್ರೆಸೆಂಟ್ ರಸ್ತೆಯ ಮಲ್ಲಿಗೆ ಆಸ್ಪತ್ರೆಗೆ ಹತ್ತು ಲಕ್ಷ ರೂಪಾಯಿ ದಂಡ ವಿಧಿಸಲಾಗಿದ್ದು, ಆಸ್ಪತ್ರೆಗೆ ನೀಡಿದ್ದ ಪರವಾನಗಿ ಪತ್ರವನ್ನು ಹಿಂದಕ್ಕೆ ಪಡೆಯಲಾಗಿದೆ' ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. 


`ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಸಾರ್ವಜನಿಕರಿಂದ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಸ್ಥಳ ಪರಿಶೀಲಿಸಿದಾಗ ಬಹಳಷ್ಟು ಜೈವಿಕ ತ್ಯಾಜ್ಯ ಕಂಡು ಬಂತು. ಆ ತ್ಯಾಜ್ಯವನ್ನು ತಪಾಸಣೆಗೆ ಒಳಪಡಿಸಿದಾಗ ಅದು ಮಲ್ಲಿಗೆ ಆಸ್ಪತ್ರೆಗೆ ಸಂಬಂಧಪಟ್ಟಿದ್ದು ಎಂಬುದು ದೃಢಪಟ್ಟಿದೆ' ಎಂದು ಹೇಳಿದ್ದಾರೆ.

 


`ಭಾರತ ಸರ್ಕಾರದ ಜೈವಿಕ ತ್ಯಾಜ್ಯ (ನಿರ್ವಹಣೆ) ನಿಯಮಗಳು-1998ರ ಪ್ರಕಾರ ಎಲ್ಲ ಆಸ್ಪತ್ರೆಗಳು ತಮ್ಮಲ್ಲಿ ಉತ್ಪತ್ತಿಯಾಗುವ ಜೈವಿಕ ತ್ಯಾಜ್ಯ ಬೇರ್ಪಡಿಸಿ, ಅದನ್ನು ಸೂಕ್ತವಾಗಿ ನಿರ್ವಹಣೆ ಮಾಡುವ ಅಧಿಕೃತ ಸಂಸ್ಥೆಗಳಿಗೆ ನೀಡುವುದು ಕಡ್ಡಾಯವಾಗಿದೆ' ಎಂದು ತಿಳಿಸಿದ್ದಾರೆ. 

 


`ಬೆಂಗಳೂರಿನಲ್ಲಿ ಇರುವ ಆಸ್ಪತ್ರೆಗಳು ರಾಮ್ಕಿ ಮತ್ತು ಮರಡಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಜೈವಿಕ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು. ಆದರೆ, ಮಲ್ಲಿಗೆ ಆಸ್ಪತ್ರೆ ನಿಯಮ ಉಲ್ಲಂಘಿಸಿ, ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಸುರಿದು ಅಪರಾಧ ಎಸಗಿದೆ. ಪರವಾನಗಿ ಪತ್ರವನ್ನು ಹಿಂದಕ್ಕೆ ಪಡೆದಿದ್ದರಿಂದ ಎಲ್ಲ ಚಟುವಟಿಕೆ ನಿಲ್ಲಿಸುವಂತೆ ಆಸ್ಪತ್ರೆ ಆಡಳಿತ ಮಂಡಳಿಗೆ ಆದೇಶಿಸಲಾಗಿದೆ' ಎಂದು ವಿವರಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry