ಸೋಮವಾರ, ಆಗಸ್ಟ್ 26, 2019
20 °C

ಮಲ್ಲಿಗೆ ಕಾಯುವೆ ನಿನಗೆ

Published:
Updated:

ಅಂದೇನೋ ವಿಶೇಷ ಎನಿಸಿತು. ನಮ್ಮ ಮನೆಗೆಲಸದ `ಉಸ್ತುವಾರಿ ಸಚಿವೆ' ವನಜಾ ನನ್ನ ಪಾಲಿನ ಆಕ್ಸಿಜನ್ ಸಿಲಿಂಡರ್. ಮೊಗದಲ್ಲಿ ನಗು ತುಳುಕಿಸುತ್ತಾ ಒಳ ಬಂದಳು. ಮುಡಿದಿದ್ದ ಮಲ್ಲಿಗೆಯ ಮೊಗ್ಗಿನ ಮಾಲೆ ಎರಡು ಭುಜಗಳ ಮೇಲೂ ಓಡಾಡುತ್ತಾ `ಇದು ನಾನು ಪರಿಮಳ ಬೀರುವ ಕಾಲ. ಹೂಗಳ ಸ್ಪರ್ಧೆಯಲ್ಲಿ ನನ್ನ ಸಮ ಯಾರಿಲ್ಲ' ಎಂದು ಅವಳ ಮೂಲಕ ಹೇಳುವಂತೆ ಕಂಡಿತು.ವನಜಾ ಕೆಲಸ ಪೂರೈಸುತ್ತಿದ್ದಂತೆ ನಾನು `ಡಬ್ಬಿ ತಗೋ, ಮಕ್ಕಳಿಗೆ ಮೊಸರನ್ನ ಪಾರ್ಸಲ್ ಕೊಡ್ತೀನಿ' ಎಂದೆ. ಉದ್ದನೆಯ ಸ್ಟೀಲ್ ಡಬ್ಬಿ ತೆರೆದು ಒಮ್ಮೆ ತೊಳೆದಂತೆ ಮಾಡಿ, ತನ್ನ ಮೂಗಿಗೆ ಹಿಡಿದು `ವಾಸನೆ ಇಲ್ಲ, ಕೊಡಿ ಆಂಟಿ ಇದರಲ್ಲೇ' ಎಂದವಳನ್ನು `ಏನು ಹಾಕಿದ್ದೆ ಅದರಲ್ಲಿ?' ಎಂದು ಪ್ರಶ್ನಿಸಿದೆ. ಅವಳು ನಾಚುತ್ತಾ `ಮಲ್ಲಿಗೆ ಹೂ...' ಎಂದು ಉಲಿದಳು. `ಅದೆಲ್ಲಿ ಹೋಯ್ತು ಈಗ?' ಎನ್ನಲು ವನಜಾ `ಇಲ್ಲಿದೆ ನೋಡಿ' ಎಂದು ತನ್ನ ಜಡೆಯ ಕಡೆ ನನ್ನ ದೃಷ್ಟಿ ತಿರುಗಿಸಿದಳು.ಎರಡು ದಿನಗಳ ಹಿಂದೆ ಅವಳಿಗೂ ಅವಳ ಗಂಡನಿಗೂ ಮನಸ್ತಾಪ ಏರ್ಪಟ್ಟು, ಕಣ್ಣೆಲ್ಲ ಬಾತು, ಮೊಗವೆಲ್ಲ ಊದಿತ್ತು. ನಾನೇ ಅವಳನ್ನು ಸಮಾಧಾನಪಡಿಸಿದ್ದೆ ಕೂಡಾ. ಅದು ನೆನಪಾಗಿ, ಇಬ್ಬರ ನಡುವೆ ರಾಜಿ ಏರ್ಪಟ್ಟಿರಬೇಕು ಎಂದುಕೊಂಡೆ. ಹಿಂದೆಯೇ ತಮಿಳುನಾಡಿನ ದಂಪತಿಯ ರಸಿಕ ಪ್ರೇಮ ನೆನಪಿಗೆ ನಗು ಬಂತು. ಅವರಲ್ಲಿ ಯಾವಾಗಲೂ ಮಡದಿಯನ್ನು ಓಲೈಸಲು ಒಂದು ಮೊಳ ಮಲ್ಲಿಗೆ ಹೂ ಮತ್ತು ಹಲ್ವಾ ಸಾಧನವಾಗಿ ಒದಗಿ ಬಂದು ಇಬ್ಬರನ್ನೂ ಒಂದುಗೂಡಿಸಿ, ಬಿರುಕು ಮುಚ್ಚುವುದಂತೆ!ಮೊಸರನ್ನದ ಪಾತ್ರೆ ಹಿಡಿದಿದ್ದ ನಾನು ಕೂಡಲೇ ವಾಸ್ತವಕ್ಕೆ ಬಂದು `ವನಜಾ, ಎಲ್ಲಿ ಆ ಡಬ್ಬಿ ಕೊಡಿಲ್ಲಿ' ಎಂದು ತೆಗೆದುಕೊಂಡು ಮೂಸಿ ನೋಡಿದೆ. `ಛೀ, ಬೇರೆ ಡಬ್ಬೀಲೀ ಹಾಕ್ಕೊಡ್ತೀನಿ. ಇದರಲ್ಲಿ ಯಾರಾದರೂ ಮಲ್ಲಿಗೆ ಹೂ ಹಾಕ್ತಾರಾ? ನಿನಗೆ ಬುದ್ಧಿ ಇದೆಯಾ?' ಎಂದೆ.`ಇಲ್ಲ ಆಂಟಿ ಈ ಹೂ ಪಕ್ಕದ ಮನೆ ನರಸಮ್ಮ ಕೊಟ್ಟಿದ್ಲು. ನಾನು ಕೆಲಸಕ್ಕೆ ಹೊರಡೋವಾಗ ನನ್ನ ಗಂಡ ಇನ್ನೂ ಮನೇಲೇ ಇದ್ರು.

ಅವರ ಮುಂದೆ ಹೂ ಮುಡಿದು ಬಂದರೆ ನಾನು ಮಾಮೂಲು ಮನುಷ್ಯೆ ಆಗಿಬಿಟ್ಟೆ ಅಂದುಕೋತಾರೆ. ಅದಕ್ಕೆ ಈ ಡಬ್ಬೀಲಿ ಮುಚ್ಚಿಟ್ಟು, ಅರ್ಧ ದಾರಿ ಬಂದ ಮೇಲೆ ಮುಡಕೊಂಡೆ' ಎಂದಳು. ಇದು ನಿಜದ ಕಾರಣ. `ಹಾಗಾದ್ರೆ ಇಲ್ಲಿಂದ ಅರ್ಧ ದಾರಿ ಹೋದ ಮೇಲೆ ತೆಗೆದಿಟ್ಟು ಬಿಡ್ತಿಯಾ' ಎಂಬ ನನ್ನ ಪ್ರಶ್ನೆಗೆ ಅವಳು ನಸುನಕ್ಕಳು. ತನ್ನ ಮುನಿಸು ಇನ್ನೂ ಇಳಿದಿಲ್ಲ ಎಂದು ತೋರುವ ಪ್ರಯತ್ನವನ್ನು ಅವಳು ಎಡೆಬಿಡದೆ ಮಾಡುತ್ತಿದ್ದಳು. ಹಾಗಾಗಿಯೇ ಮಲ್ಲಿಗೆ ಮಾಲೆ ಡಬ್ಬಿಯಲ್ಲಿ ಅಡಗಿ ಕೂತಿದ್ದು.ಇನ್ನು ಪೂಜಾ ಹೇಳಿದ ಕತೆ ಬಲು ಸ್ವಾರಸ್ಯಮಯ. `ಆಂಟಿ, ನಮ್ಮನೆ ಕೆಲಸದ ಕಮಲಮ್ಮ ಬೆಳಿಗ್ಗೆ ಬೆಳಿಗ್ಗೆನೇ ಒಂದು ಪೇಪರ್ ಕವರಲ್ಲಿ ಬಿಡಿ ಮಲ್ಲಿಗೆ ತರ‌್ತಾಳೆ. ಬರ‌್ತಿದ್ದ ಹಾಗೇ ಅಮ್ಮನ ಹತ್ತಿರ ದಾರ ಕೇಳಿ, ಹೂ ಕಟ್ಟೋಕೆ ಶುರು ಮಾಡಿ ಬಿಡ್ತಾಳೆ. ಒಂದು ಕೆಲಸ ಇಲ್ಲ ಬೊಗಸೆ ಇಲ್ಲ ಅಮ್ಮನಿಗೆ ಟೆನ್ಶನ್. ಅಪ್ಪ ಡ್ಯೂಟಿಗೆ, ನಾನು ಕಾಲೇಜಿಗೆ ಹೊರಡಬೇಕು. ಬಾಗಿಲಿಗೆ ನೀರು ಹಾಕಿರೋಲ್ಲ. ಅಮ್ಮ ನೋಡಿ ನೋಡಿ ಸಾಕಾಗಿ, ಕಡೆಗೆ ಪೊರಕೆ ಹಿಡಿದು ಬಂದರೂನು, ಇಲ್ಲಿ ನೋಡಿ ಎರಡೇ ಹೂ ಅಂತ ಕಟ್ತಾನೇ ಇರ‌್ತಾಳೆ. ಮಲ್ಲಿಗೆ ಕಾಲ ಅಂದರೆ ಅಮ್ಮನಿಗೆ ಕಮಲಮ್ಮನಿಂದ ಒಳ್ಳೆ ತಲೆನೋವು'.ಪೂಜಾ ಕತೆ ಮುಗಿಸಿ ಒಂದು ದೊಡ್ಡ ಉಸಿರು ತೆಗೆದಳು. ಕಮಲಮ್ಮನ ಹೂ ಕಟ್ಟುವ ಛಲ, ಕಾಯಕ ಇತರರಿಗೆ ಮೆಚ್ಚುವಂತಿದ್ದರೂ ಪೂಜಾಳ ಅಮ್ಮ ಮಮತಾ ಮಾತ್ರ ಬೆಚ್ಚುತ್ತಿರುವುದು ಅಷ್ಟೇ ಸತ್ಯ.ಮಲ್ಲಿಗೆ ಎಂದೊಡನೆ ಯಾರಿಗೆ ತಾನೇ ಮನಸ್ಸು ಅರಳುವುದಿಲ್ಲ ಹೇಳಿ. ಮಲ್ಲಿಗೆಯ ಮಹಿಮೆಯೇ ಹಾಗೆ. ಇನ್ನು ಮೈಸೂರಂತೂ ಮಲ್ಲಿಗೆಯ ತವರೂರು. ಅಲ್ಲಿ ಹಿಂದೆ ಕಟ್ಟುತ್ತಿದ್ದ ಮಲ್ಲಿಗೆ ಮಾಲೆಯಲ್ಲಿ ಕೆಂಡ ಸಂಪಿಗೆಯ ದಳ, ಮಣಗದ ರೇಕು, ಕನಕಾಂಬರದ ಹೂ ಎಲ್ಲವೂ ಸೇರಿ ಅದರ ಸೊಬಗು ಇಮ್ಮಡಿಗೊಳ್ಳುತ್ತಿತ್ತು. ಇನ್ನು ಮಂಗಳೂರಿನ ಮಲ್ಲಿಗೆ ದಂಡೆ ಮುಡಿಯಲು ಹಣವಂತರಿಗೆ ಮಾತ್ರ ಸಾಧ್ಯ. ಅದರ ಬೆಲೆಯಂತೂ ಗಗನಕುಸುಮ. ಸಣ್ಣ ಆಕಾರದ ಆಂಬೂರು ಮಲ್ಲಿಗೆ ಕಟ್ಟಲು ಶ್ರಮವೇ ಶ್ರಮ. ಅದನ್ನು ಕಟ್ಟಿ ಕಟ್ಟಿ ಸೊಂಟ ನೋವು ಬಂದದ್ದೇ ಭಾಗ್ಯ. ಮುಡಿಯಲ್ಲಿ ಅದು ಅರ್ಧ ಗಂಟೆ ತಾಜಾ ಇದ್ದರೆ ಹೆಚ್ಚು. ಬಾಡಿ ಕಳೆಗುಂದುವುದೇ ಅದರ ವಿಧಿ ಬರಹ. ಮದರಾಸು ಮಲ್ಲಿಗೆಯಂತೂ ಧಂಡಿಯಾಗಿ ಮೋರಿ ಅಂಚಲ್ಲಿ ಬೆಳೆದು ಹೂ ಚೆಲ್ಲಿದ್ದರೂ ಅದನ್ನು ದಂಡೆ ಮಾಡಿ ಆನಂದ ಪಡುವವರೇ ಇಲ್ಲ, ಪಾಪ!ನನ್ನ ಜೀವಿತ ಕಾಲದಲ್ಲಿ ನನಗೊಂದಾಸೆ. ಪತಿರಾಯರ ಬಳಿ ತೋಡಿಕೊಂಡಿದ್ದೆ ಸಹ. `ರೀ ನಾನು ಜೀವನದಲ್ಲಿ ಒಂದು ಸಲವಾದರೂ ಸರಿ, ನೀವು ಒಂದು ಮೊಳ ಮಲ್ಲಿಗೆ ಹೂ ತಂದುಕೊಡೋದನ್ನ ಮುಡೀಬೇಕು ಅಂತ'. ಆಗ ನಾನು ನನ್ನ ಹಿರಿಯ ಪುತ್ರಿಯ ತಾಯಿಯಾಗುವ ಕನಸಲ್ಲಿದ್ದೆ. ನನ್ನ ಬಾಳ ಸಂಗಾತಿ ನನ್ನ ಬಯಕೆಗೆ ನಿರ್ವಿಕಾರವಾಗಿ ಸ್ಪಂದಿಸಿದ್ದರು. `ನಾನು ತುಂಬಾ ವರ್ಷ ಬದುಕ್ತೀನಿ. ನೀನೂ ಬಹಳ ಕಾಲ ಬಾಳ್ತೀಯಾ. ಎಂದಾದರೂ ತಂದು ಕೊಟ್ಟರೆ ಆಯಿತು'. ಅದು ಅಂದಿನಿಂದ ಇಂದಿನವರೆಗೂ ಮಾತಾಗೇ ಉಳಿದಿದೆ ಹೊರತು ಕಾರ್ಯಗತವಾಗಿಲ್ಲ.  ಅವರ ಬಾಯಿಂದ ಜಾರಿದ ದೀರ್ಘಾಯುಷ್ಯದ ಭವಿಷ್ಯ ನೆನೆದು, ಮಲ್ಲಿಗೆಯ ಹೊಂಗನಸಲ್ಲಿ ಜೀವ ಹಿಡಿದುಕೊಂಡಿದ್ದೇನೆ. ಮಲ್ಲಿಗೆ ಎಂದರೆ ಸಾಮಾನ್ಯವೇ? ಆದರೆ ಅದಕ್ಕೂ ಒಂದು ಕಾಲ ಇದೆ, ಅದಕ್ಕಾಗಿ ಕಾಯುತ್ತಿರಬೇಕಷ್ಟೇ !

Post Comments (+)