ಮಲ್ಲಿಗೆ ನಗರಿಯಲ್ಲಿ ಅರಳುತಿದೆ ಕ್ರಿಕೆಟ್ ಅಂಗಳ!

7

ಮಲ್ಲಿಗೆ ನಗರಿಯಲ್ಲಿ ಅರಳುತಿದೆ ಕ್ರಿಕೆಟ್ ಅಂಗಳ!

Published:
Updated:
ಮಲ್ಲಿಗೆ ನಗರಿಯಲ್ಲಿ ಅರಳುತಿದೆ ಕ್ರಿಕೆಟ್ ಅಂಗಳ!

ಮಲ್ಲಿಗೆ ನಗರಿ ಮೈಸೂರಿನ ಗಂಗೋತ್ರಿ   ಗ್ಲೇಡ್ಸ್ ಮೈದಾನ ಅಂತರರಾಷ್ಟ್ರೀಯ ಮಟ್ಟಕ್ಕೆ `ಬಡ್ತಿ~ ಹೊಂದುತ್ತಿರುವ ಬೆನ್ನಹಿಂದೆಯೇ ಮತ್ತೊಂದು ಖುಷಿ ಸುದ್ದಿ ಇದೆ!ನಗರದ ಪ್ರತಿಷ್ಠಿತ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜು (ಜೆಸಿಐಟಿ) ಆವರಣದಲ್ಲಿ ಈ ಮೈದಾನ ಸಿದ್ಧವಾಗುತ್ತಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು (ಕೆಎಸ್‌ಸಿಎ) ಕಾಲೇಜಿನ ಆಡಳಿತ ಮಂಡಳಿಯ ಜೊತೆಗೆ ಒಪ್ಪಂದ ಮಾಡಿಕೊಂಡು  ಕ್ರೀಡಾಂಗಣದ ಕಾರ್ಯ ಕೈಗೆತ್ತಿಕೊಂಡಿದೆ.ಈಗಾಗಲೇ ಶೇಕಡಾ 60ರಷ್ಟು ಕಾಮಗಾರಿ ಮುಗಿದಿದ್ದು, ಹಸಿರು ಹುಲ್ಲಿನ ಅಂಕಣ ಮೆಲ್ಲಗೆ ಕಣ್ಣು ಬಿಡುತ್ತಿದೆ. `ಮೈಸೂರು ಎಕ್ಸ್‌ಪ್ರೆಸ್~ ಜಾವಗಲ್ ಶ್ರೀನಾಥ್ ಎಂಜಿನಿಯರಿಂಗ್ ಓದಿದ ವಿದ್ಯಾಸಂಸ್ಥೆ ಇದು. ಗಂಗೋತ್ರಿ ಗ್ಲೇಡ್ಸ್ ಸೇರಿದಂತೆ ಒಟ್ಟು ಮೂರು ಟರ್ಫ್ ವಿಕೆಟ್‌ಗಳು ಇಲ್ಲಿ ಸಿದ್ಧವಾಗುತ್ತಿವೆ.  ಜೆಸಿಇಟಿಯಲ್ಲಿ ಒಂದು ಮತ್ತು ಭಾರತೀಯ ನೋಟು ಮುದ್ರಣ ಸಂಸ್ಥೆಯು ಮತ್ತೊಂದು ಟರ್ಫ್ ವಿಕೆಟ್ ಮೈದಾನವನ್ನು ಸಿದ್ಧಪಡಿಸುತ್ತಿವೆ.ಸುತ್ತೂರು ಶ್ರೀಗಳ ವಿಶೇಷ ಆಸಕ್ತಿಯ ಫಲವಾಗಿ ಜೆಸಿಇಟಿಯ ಮೈದಾನ ಕಣ್ತೆರೆಯುತ್ತಿದೆ. ಅವರ ಕ್ರಿಕೆಟ್ ಪ್ರೀತಿಯಿಂದಾಗಿ ಸುಂದರವಾದ ಮೈದಾನ ನಿರ್ಮಾಣ ಕಾರ್ಯ ಶೀಘ್ರಗತಿಯಲ್ಲಿ ನಡೆಯುತ್ತಿದೆ. ಕಾಲೇಜು ಆವರಣದಲ್ಲಿಯೇ ಇರುವ ಈ ಕ್ರೀಡಾಂಗಣವನ್ನು ಹಚ್ಚಹಸಿರು ಮರಗಳು ಸುತ್ತುವರಿದಿವೆ. ಒಟ್ಟು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಪ್ರತಿದಿನವೂ ಸುಮಾರು 100 ಮಂದಿ ಈ ಕಾಮಗಾರಿಯಲ್ಲಿ ನಿರತರಾಗಿದ್ದಾರೆ. ಪಿಚ್‌ಗಳಿಗೆ ಹಸಿರು ಹೊದಿಸುವ ಕೆಲಸ ಮುಗಿಯುವ ಹಂತದಲ್ಲಿದೆ.`ಡಿಸೆಂಬರ್ ಅಂತ್ಯದ ವೇಳೆಗೆ ಜೆಸಿಇ ಮೈದಾನದ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಜನವರಿಯಲ್ಲಿ ಪಂದ್ಯಗಳನ್ನು ಆಡಿಸುವ ಬಗ್ಗೆಯೂ ಚಿಂತಿಸಲಾಗುತ್ತಿದೆ. ಪೆವಿಲಿಯನ್ ನಿರ್ಮಾಣಕ್ಕಾಗಿ ಶೀಘ್ರದಲ್ಲಿಯೇ ಟೆಂಡರ್ ಕರೆಯಲಾಗುವುದು~ ಎಂದು ಕೆಎಸ್‌ಸಿಎ ಮೈದಾನ ಸಮಿತಿ ಅಧ್ಯಕ್ಷ ವಿಜಯ ಭಾರದ್ವಾಜ್ ಹೇಳುತ್ತಾರೆ.ನವೀ ಮುಂಬೈನ ಡಿ.ವೈ. ಪಾಟೀಲ ಮಹಾವಿದ್ಯಾಲಯದ ಆವರಣದಲ್ಲಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಂತೆ ಸಿದ್ಧವಾಗುವ ಎಲ್ಲ ಸಾಧ್ಯತೆಗಳೂ ಜೆಸಿಇ ಮೈದಾನಕ್ಕೆ ಇದೆ. ಅದೇ ನಿಟ್ಟಿನಲ್ಲಿ ಕಾಮಗಾರಿಯೂ ನಡೆಯುತ್ತಿದೆ.ಭಾರತೀಯ ನೋಟು ಮುದ್ರಣ ಸಂಸ್ಥೆಯ ಟರ್ಫ್ ವಿಕೆಟ್ ಕೂಡ ಬಹುತೇಕ ಸಿದ್ಧವಾಗಿದೆ. ಕಳೆದ ವಾರ ವಿನೂ ಮಂಕಡ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿದ ತಂಡಗಳು ಇಲ್ಲಿ ಅಭ್ಯಾಸವನ್ನೂ ನಡೆಸಿದ್ದವು.ಮೈಸೂರು ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಗಂಗೋತ್ರಿ ಗ್ಲೇಡ್ಸ್ ಈಗಾಗಲೇ ರಾಜ್ಯದ ಕ್ರಿಕೆಟ್ ಪ್ರೇಮಿಗಳ ಕಣ್ಮಣಿಯಾಗಿದೆ. 2010ರ ರಣಜಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯವನ್ನು ಯಶಸ್ವಿಯಾಗಿ ಆಯೋಜಿಸಿ ರಾಷ್ಟ್ರದ ಗಮನ ಸೆಳೆದಿತ್ತು.

ಕಳೆದ ವಾರ  ವಿನೂ ಮಂಕಡ್ ಟ್ರೋಫಿ  19 ವರ್ಷದೊಳಗಿನವರ ಅಖಿಲಭಾರತ ಕ್ರಿಕೆಟ್ ಟೂರ್ನಿಯ ಪಂದ್ಯಗಳನ್ನೂ ಇಲ್ಲಿ ಆಯೋಜಿಸಲಾಗಿತ್ತು. ಈ ಮೈದಾನವನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯವೂ ನಡೆದಿದೆ.ಬಿಸಿಸಿಐ ಕೂಡ ಇಲ್ಲಿಯ ಸೌಲಭ್ಯಗಳನ್ನು ನೋಡಿ ಪ್ರತಿಷ್ಠಿತ ಟೂರ್ನಿಗಳ ಆಯೋಜನೆಗೆ ಅವಕಾಶ ನೀಡುತ್ತಿದೆ. ಮೈಸೂರಿನ ಕ್ರಿಕೆಟ್ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಅಭಿವೃದ್ಧಿಯಾಗುತ್ತಿರುವ ಸೌಲಭ್ಯಗಳು ಮಹತ್ವದ ಪಾತ್ರ ವಹಿಸುವುದು ಖಚಿತ. ಭವಿಷ್ಯದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವ ಅವಕಾಶ ಸಿಗಲೂ ಈ ಸೌಲಭ್ಯಗಳು ಕಾರಣವಾಗುವುದು ಖಚಿತ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry