ಸೋಮವಾರ, ಸೆಪ್ಟೆಂಬರ್ 21, 2020
26 °C

ಮಲ್ಲಿನಾಥನ ಶಿಷ್ಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ಕಥೆ ತಮಾಷೆಯಾಗಿ ಕಂಡರೂ ಅದು ನೀಡುವ ಅರ್ಥ ಸುಂದರವಾದದ್ದು. ಒಂದು ಸಂಸ್ಥಾನ. ಅಲ್ಲೊಬ್ಬ ರಾಜ. ಪುಟ್ಟ ರಾಜ್ಯವಾದರೂ ಸುಸಂಪನ್ನವಾದದ್ದು, ವ್ಯವಸ್ಥಿತವಾದದ್ದು. ರಾಜನ ಆಸ್ಥಾನದಲ್ಲಿ ಮಲ್ಲಿನಾಥನೆಂಬ ಮಂತ್ರಿ ಇದ್ದ. ಆತ ಬಲು ಬುದ್ಧಿವಂತ. ಎಂಥ ಸಮಸ್ಯೆ ಬಂದರೂ ಅದನ್ನು ಕುಶಲತೆಯಿಂದ ಪರಿಹರಿಸಿಬಿಡುತ್ತಿದ್ದ. ಇದರಿಂದಾಗಿ ಅವನ ಹೆಸರು ಎಲ್ಲೆಲ್ಲಿಯೂ ಮನೆಮಾತಾಗಿತ್ತು. ರಾಜನ ಯಶಸ್ಸಿನ ಹಿಂದೆ ಮಲ್ಲಿನಾಥನದೇ ಬುದ್ಧಿವಂತಿಕೆ ಕೆಲಸಮಾಡುತ್ತದೆಂದು ಜನರೆಲ್ಲ ಮಾತನಾಡುತ್ತಿದ್ದರು.ಒಂದು ವ್ಯವಸ್ಥೆಯಲ್ಲಿ ಒಬ್ಬ ಮನುಷ್ಯ ತುಂಬ ಹೆಸರು ಮಾಡಿದರೆ ಅನೇಕರಿಗೆ ಅಸೂಯೆಯಾಗುವುದು ಸಹಜವಲ್ಲವೇ? ಇಲ್ಲಿಯೂ ಹಾಗೆಯೇ ಆಯಿತು. ಈತನ ಏಳಿಗೆಯನ್ನು ಕಂಡು ಕರುಬುವವರ ಸಂಖ್ಯೆ ಹೆಚ್ಚಾಗುತ್ತಿತ್ತು. ಅವರು ಹೇಗಾದರೂ ಮಾಡಿ ಆತನಿಗೆ ಮುಖಭಂಗವನ್ನುಂಟು ಮಾಡಲು ಪ್ರಯತ್ನಿಸುತ್ತಿದ್ದರು. ಅವಕಾಶಕ್ಕಾಗಿ ಕಾಯುತ್ತಿದ್ದರು.ಒಂದು ಬಾರಿ ಆ ಸಂದರ್ಭವೂ ಒದಗಿತು. ರಾಜನ ದರ್ಬಾರಿನಲ್ಲಿ ಬಲದೇವ ಇನ್ನೊಬ್ಬ ಮಂತ್ರಿ. ಆತ ದಿನನಿತ್ಯ ಮಲ್ಲಿನಾಥನ ಮರ್ಯಾದೆಯನ್ನು ಕಂಡು ಸಂಕಟಪಡುತ್ತಿದ್ದ. ರಾಜನೊಬ್ಬನೇ ಇದ್ದಾಗ ಮಲ್ಲಿನಾಥನಲ್ಲಿ ಅಂತಹ ವಿಶೇಷತೆಯೇನು ಎಂದು ಕೇಳಿದ. ತಾನು ಕೂಡ ಅವಕಾಶ ಸಿಕ್ಕರೆ ಬೇಕಾದಂತಹ ಕೆಲಸವನ್ನು ಮಾಡಬಲ್ಲೆ ಎಂದು ಹೇಳಿಕೊಂಡ. ಆಗಲಿ ನೋಡೋಣ ಎಂದ ರಾಜ ಮರುದಿನ ದರ್ಬಾರಿನಲ್ಲಿ ಬಲದೇವನನ್ನು ಕರೆದು ‘ಬಲದೇವ ನಿಮಗೆ ಒಂದು ಇನ್ನೂರು ಅಡಿ ಉದ್ದದ ಹಗ್ಗವನ್ನು ಕೊಡುತ್ತೇನೆ. ಅದನ್ನು ಬಳಸಿಕೊಂಡು ಕನಿಷ್ಠ ಎರಡು ಸಾವಿರ ಹೊನ್ನಿನ ವರಹಗಳನ್ನು ಗಳಿಸಿಕೊಂಡು ಬರಬೇಕು. ಏನು ಯೋಜನೆ ಹಾಕುತ್ತೀರೋ ಅದು ನಿಮಗೇ ಬಿಟ್ಟಿದ್ದು. ನಾಳೆ ಸಾಯಂಕಾಲದ ಒಳಗೆ ವರಹಗಳನ್ನು ತಂದು ನೀಡಬೇಕು’ ಎಂದ. ‘ಆಗಲಿ’ ಎಂದು ಉದ್ದವಾದ ಹಗ್ಗವನ್ನು ಹಿಡಿದುಕೊಂಡು ಬಲದೇವ ಹೊರಟ.ಮರುದಿನ ಬಲದೇವನ ಪರಿಸ್ಥಿತಿ ಕಷ್ಟಕರವಾಗಿತ್ತು. ಊರೆಲ್ಲ ಅಲೆದ. ಸ್ನೇಹಿತರು, ಬಂಧುಗಳು ಎಲ್ಲರನ್ನೂ ಕೇಳಿದ. ಆದರೆ ಒಂದು ಹಗ್ಗಕ್ಕೆ ಯಾರು ತಾನೇ ಎರಡು ಸಾವಿರ ವರಹಗಳನ್ನು ಕೊಟ್ಟಾರು? ದಿನವೆಲ್ಲ ತಿರುಗಿ ಸಂಜೆಗೆ ದರ್ಬಾರಿಗೆ ಬಂದು ಹಗ್ಗವನ್ನು ಅಲ್ಲಿಟ್ಟು ತನ್ನ ಸೋಲನ್ನು ಒಪ್ಪಿಕೊಂಡ. ತಕ್ಷಣ, ರಾಜ ಅದೇ ಹಗ್ಗವನ್ನು ಮಲ್ಲಿನಾಥನಿಗೆ ಕೊಟ್ಟು ಮರುದಿನ ಸಂಜೆಯೊಳಗೆ ಕನಿಷ್ಠ ಎರಡು ಸಾವಿರ ಹೊನ್ನಿನ ವರಹಗಳನ್ನು ತರುವಂತೆ ಆಜ್ಞೆ ಮಾಡಿದ.ಬೆಳಗಾಗುತ್ತಲೇ ಮಲ್ಲಿನಾಥ ಈ ಹಗ್ಗವನ್ನು ತೆಗೆದುಕೊಂಡು ಹೋಗಿ ಅತ್ಯಂತ ಶ್ರೀಮಂತರಿರುವ ಬಡಾವಣೆಯಲ್ಲಿ ಎರಡು ಕಂಬಗಳನ್ನು ಹೂಳಿಸಿ ಅಡ್ಡಡ್ಡಲಾಗಿ ಈ ಹಗ್ಗವನ್ನು ಕಟ್ಟಿಸಿಬಿಟ್ಟ. ಕುತೂಹಲದಿಂದ ಯಾರೋ, ‘ಏಕೆ ಹಗ್ಗ ಕಟ್ಟಿದ್ದೀರಾ’ ಎಂದು ಕೇಳಿದಾಗ, ‘ನಗರದಲ್ಲಿ ಜನಸಂಖ್ಯೆ ಹೆಚ್ಚಳವಾಗಿರುವುದರಿಂದ ರಸ್ತೆಗಳು ಸಾಕಾಗುತ್ತಿಲ್ಲ. ಅದಕ್ಕಾಗಿ ರಸ್ತೆಗಳನ್ನು ಅಗಲ ಮಾಡಲು ಎರಡೂ ಬದಿಗೂ ಇರುವ ಕಟ್ಟಡಗಳನ್ನು ಒಡೆಯಲಾಗುತ್ತದೆ. ರಸ್ತೆಯ ಮಿತಿಯನ್ನು ತೋರಿಸುವುದಕ್ಕೆ ಈ ಹಗ್ಗ. ಮುಂದಿನ ಸೋಮವಾರದಿಂದ ಕಟ್ಟಡಗಳನ್ನು ಒಡೆಯಲು ಪ್ರಾರಂಭಿಸಲಾಗುತ್ತದೆ’ ಎಂದು ಗಂಭೀರವಾಗಿ ನುಡಿದ. ಸುದ್ದಿ ಬೆಂಕಿಯಂತೆ ಹಬ್ಬಿತು. ಶ್ರೀಮಂತರಿಗೆಲ್ಲ ಗಾಬರಿ. ತಮ್ಮ ಅರಮನೆಯಂಥ ಮನೆಗಳನ್ನು ಒಡೆದು ಹಾಕಿದರೆ ಗತಿ ಏನು? ಎಂದುಕೊಂಡು ಒಬ್ಬೊಬ್ಬರಾಗಿ ಅವನ ಬಳಿಗೆ ಬಂದು ಇದಕ್ಕೆ ಪರಿಹಾರವೇನು ಎಂದು ಕೇಳಿದರು. ಅದಕ್ಕೆ ಆತ ಯಾರ ಮನೆಯಲ್ಲಿ ಈ ಹಗ್ಗದ ತುಂಡು ಇದೆಯೋ ಅವರ ಮನೆಯನ್ನು ಒಡೆಯುವುದಿಲ್ಲ. ಆದರೆ ಆ ಹಗ್ಗದ ಒಂದು ಅಡಿಗೆ ಕನಿಷ್ಠ ಇನ್ನೂರು ಸುವರ್ಣ ವರಹಗಳು ಎಂದು ಹೇಳಿದ. ಜನ ಸೇರಿದರು. ಒಂದರ್ಧ ಅಡಿ ಹಗ್ಗಕ್ಕೆ ಹೊಡೆದಾಡಿದರು. ಅರ್ಧ ಗಂಟೆಯಲ್ಲಿ ಹಗ್ಗದ ಮಾರಾಟವಾಗಿ ಐದು ಸಾವಿರ ವರಹಗಳ ಸಂಪಾದನೆಯಾಯಿತು. ಅವುಗಳನ್ನು ರಾಜನಿಗೆ ಒಪ್ಪಿಸಿದ. ಈಗ ಮಲ್ಲಿನಾಥನ ಬುದ್ಧಿವಂತಿಕೆಯ ಬಗ್ಗೆ ಯಾರಿಗೂ ಯಾವುದೇ ಸಂಶಯ ಉಳಿಯಲಿಲ್ಲ.ಇಂದು ಕೂಡ ನಗರದ ಬೆಳವಣಿಗೆಯಾಗುವ ಸಂದರ್ಭದಲ್ಲಿ ರಸ್ತೆಗಳನ್ನು ಅಗಲ ಮಾಡುವಾಗ, ಕೆಳ ಸೇತುವೆ, ಮೇಲುಸೇತುವೆ ನಿರ್ಮಿಸುವಾಗ ಕೆಲವು ಬುದ್ಧಿವಂತ ಅಧಿಕಾರಿಗಳು ಆಡುವ ಆಟಗಳನ್ನು ನೋಡಿದಾಗ ಅವರು ಮಲ್ಲಿನಾಥನ ಶಿಷ್ಯರೇ ಇರಬೇಕೆಂದು ಎನ್ನಿಸುವುದಿಲ್ಲವೇ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.