ಶನಿವಾರ, ಅಕ್ಟೋಬರ್ 19, 2019
28 °C

ಮಲ್ಲೇಶ್ವರಂನಲ್ಲಿ ಮರ ಮ್ಯೂಸಿಯಂ

Published:
Updated:
ಮಲ್ಲೇಶ್ವರಂನಲ್ಲಿ ಮರ ಮ್ಯೂಸಿಯಂ

ಬೆಂಗಳೂರು: ಒಂದು ತೇಗದ ಮರದ ಆಯಸ್ಸು ಎಷ್ಟಿರಬಹುದು? ನೂರು-ಇನ್ನೂರು-ಮುನ್ನೂರು..! ನಿಮ್ಮ ಊಹೆ ಇಷ್ಟಕ್ಕೇ ಸೀಮಿತವಾಗಿದ್ದರೆ ಅದು ತಪ್ಪು.ಸುಮಾರು 780 ವರ್ಷಗಳಷ್ಟು ಹಳೆಯ ತೇಗದ ಮರದ ಬುಡವೊಂದು ಇದೀಗ `ಮರ ಮ್ಯೂಸಿಯಂ~ನಲ್ಲಿ ಎಲ್ಲರ ಗಮನಸೆಳೆಯುತ್ತಿದೆ.ಮರ ಮುಟ್ಟುಗಳ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಜನರಿಗೆ ಅಗತ್ಯ ಮಾಹಿತಿ ನೀಡುವ ಉದ್ದೇಶದಿಂದ ನಗರದ ಮಲ್ಲೇಶ್ವರ 18ನೇ ಅಡ್ಡರಸ್ತೆಯಲ್ಲಿರುವ ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯಲ್ಲಿ ಬುಧವಾರ `ಮರ ಮ್ಯೂಸಿಯಂ~ ಉದ್ಘಾಟನೆಗೊಂಡಿತು.ದೇಶದಲ್ಲಿಯೇ ಪ್ರಥಮ ಎನ್ನಲಾದ ಮರ ಮ್ಯೂಸಿಯಂ ಅನ್ನು ಭಾರತೀಯ ಅರಣ್ಯ ಸಂಶೋಧನಾ ಹಾಗೂ ಶಿಕ್ಷಣ ಮಂಡಳಿಯ ಮಹಾನಿರ್ದೇಶಕ ಡಾ.ವಿ.ಕೆ. ಬಹುಗುಣ ಉದ್ಘಾಟಿಸಿದರು.ತೇಗ ಮರದ ಕಾಂಡದಲ್ಲಿನ ಒಳ ಭಾಗದ ಪದರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ವೃತ್ತಾಕಾರದಲ್ಲಿ 780 ಗೆರೆಗಳು ಇರುವುದನ್ನು ಕಾಣಬಹುದು. ಮರ ವರ್ಷಕ್ಕೆ ಒಂದು ಸುತ್ತು ಮಾತ್ರ ಬೆಳೆಯುವುದರಿಂದ ಮರದ ಆಯಸ್ಸನ್ನು ನಿರ್ಧರಿಸಬಹುದು ಎನ್ನುತ್ತಾರೆ ಮರ ವಿಜ್ಞಾನಿಯೊಬ್ಬರು.ಇದಲ್ಲದೆ, 362 ವರ್ಷ ವಯಸ್ಸಿನ ಮತ್ತೊಂದು ತೇಗದ ಮರದ ಬುಡ ಕೂಡ ಮ್ಯೂಸಿಯಂನಲ್ಲಿ ಗಮನಸೆಳೆಯುತ್ತಿದೆ. ಇದು 16ರಿಂದ 19ನೇ ಶತಮಾನಗಳ ನಡುವೆ ಬದುಕುಳಿದಿತ್ತು ಎನ್ನಲಾಗಿದೆ. ಈ ಮರ ಬದುಕುಳಿದ ಶತಮಾನಗಳಲ್ಲಿ ನಡೆದ ಪ್ರಮುಖ ಚಾರಿತ್ರಾರ್ಹ ಘಟನಾವಳಿಗಳನ್ನು ಅದರ ಮೇಲೆ ದಾಖಲಿಸಲಾಗಿದೆ.ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ ವಿಜ್ಞಾನಿಗಳ ತಂಡದ ಬಹುದಿನಗಳ ಪ್ರಯತ್ನದ ಫಲವಾಗಿ ಈ `ಮರ ಮ್ಯೂಸಿಯಂ~ ಸ್ಥಾಪನೆಗೊಂಡಿದೆ.ಮೆಚ್ಚುಗೆ: ಅತ್ಯಂತ ಆಕರ್ಷಕ ಹಾಗೂ ವಿಶಿಷ್ಟ ರೀತಿಯಲ್ಲಿ ಮರ ಮ್ಯೂಸಿಯಂ ಸ್ಥಾಪಿಸಿರುವ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿದ ಭಾರತೀಯ ಅರಣ್ಯ ಸಂಶೋಧನಾ ಹಾಗೂ ಶಿಕ್ಷಣ ಮಂಡಳಿಯ ಮಹಾನಿರ್ದೇಶಕ ಡಾ.ವಿ.ಕೆ. ಬಹುಗುಣ, ಈ ಪ್ರಯತ್ನ ಶ್ಲಾಘಿಸಿದರು.ಸಾರ್ವಜನಿಕರು ಮ್ಯೂಸಿಯಂಗೆ ಭೇಟಿ ನೀಡುವ ಮೂಲಕ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.`ಸುಸ್ಥಿರ ಜೀವನ ಶೈಲಿಗಾಗಿ ಮರಗಳನ್ನು ಬೆಳೆಸಿ, ಪರಿಸರವನ್ನೂ ಸಂರಕ್ಷಿಸಿ, ಮರಗಳನ್ನೂ ಬಳಸಿ~ ಎಂಬುದು ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಘೋಷ ವಾಕ್ಯ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಮಹಾ ನಿರ್ದೇಶಕ ಡಾ.ಪಿ.ಜೆ. ದಿಲೀಪ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Post Comments (+)