ಮಂಗಳವಾರ, ನವೆಂಬರ್ 19, 2019
28 °C

ಮಲ್ಲೇಶ್ವರದ ಸೆಮಿನರಿಯಲ್ಲಿ ರೆಕ್ಟರ್ ಕೊಲೆ

Published:
Updated:

ಬೆಂಗಳೂರು: ನಗರದ ಮಲ್ಲೇಶ್ವರ ಎಂಟನೇ ಮುಖ್ಯರಸ್ತೆಯಲ್ಲಿರುವ ಸೇಂಟ್ ಪೀಟರ್ಸ್‌ ಪೊಂಟಿಫಿಕಲ್ ಸೆಮಿನರಿಯಲ್ಲಿ ದುಷ್ಕರ್ಮಿಗಳು ಭಾನುವಾರ ರಾತ್ರಿ ಸೆಮಿನರಿಯ ರೆಕ್ಟರ್ (ಮುಖ್ಯಸ್ಥ) ಕೆ.ಜೆ.ಥಾಮಸ್ (62) ಅವರನ್ನು ಕೊಲೆ ಮಾಡಿ ಹಣ ಮತ್ತಿತರ ವಸ್ತುಗಳನ್ನು ದೋಚಿದ್ದಾರೆ.ರಾತ್ರಿ ಸೆಮಿನರಿಗೆ ನುಗ್ಗಿರುವ ದುಷ್ಕರ್ಮಿಗಳು, ಅದೇ ಆವರಣದಲ್ಲಿರುವ ಶಾಲಾ ಕೊಠಡಿಗೆ ನುಗ್ಗಿ ಹಣ ಹಾಗೂ ಕೆಲ ದಾಖಲೆಪತ್ರಗಳನ್ನು ಕಳವು ಮಾಡಿದ್ದಾರೆ. ಬಳಿಕ ಥಾಮಸ್‌ರ ಕೊಠಡಿಯ ಬಳಿ ಬಂದು ವರಾಂಡದಲ್ಲಿನ ವಸ್ತುಗಳನ್ನು ಕಳವು ಮಾಡಲು ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಅದೇ ವೇಳೆಗೆ ಎಚ್ಚರಗೊಂಡ ಥಾಮಸ್ ಅವರು ಕೊಠಡಿಯ ಬಾಗಿಲು ತೆರೆದು ಹೊರ ಬಂದಿರುವ ಸಾಧ್ಯತೆಯಿದೆ. ಇದರಿಂದ ಗಾಬರಿಬಿದ್ದ ದುಷ್ಕರ್ಮಿಗಳು, ಅವರನ್ನು ಸೆಮಿನರಿ ಆವರಣದಲ್ಲಿನ `ಡಿ ಹೌಸ್' ಸಭಾಂಗಣಕ್ಕೆ ಎಳೆದೊಯ್ದು ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಶವವನ್ನು ಥಾಮಸ್ ಅವರ ಕೊಠಡಿ ಪಕ್ಕದ ಮತ್ತೊಂದು ಕೊಠಡಿಯಲ್ಲಿ ಎಸೆದು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.`ಸೆಮಿನರಿಯಲ್ಲೇ ಇರುವ ಸಹಾಯಕ ಪಾದ್ರಿ ಪ್ಯಾಟ್ರಿಕ್ ಅವರು ಸೋಮವಾರ ಬೆಳಗಿನ ಜಾವ ಡಿ ಹೌಸ್ ಸಭಾಂಗಣದ ಬಳಿ ಹೋದಾಗ ನೆಲದ ಮೇಲೆ ರಕ್ತದ ಕಲೆಗಳು ಇರುವುದನ್ನು ನೋಡಿ ಗಾಬರಿಯಾಗಿದ್ದಾರೆ. ನಂತರ ಅವರು ಇತರೆ ಸಿಬ್ಬಂದಿಯೊಂದಿಗೆ ಸೆಮಿನರಿಯ ಆವರಣ ಮತ್ತು ಕೊಠಡಿಗಳಲ್ಲಿ ಪರಿಶೀಲಿಸುತ್ತಿದ್ದಾಗ ಥಾಮಸ್‌ರ ಶವ ಪತ್ತೆಯಾಗಿದೆ.ರಾತ್ರಿ ಎರಡು ಗಂಟೆ ಸುಮಾರಿಗೆ ಕೆಲ ವ್ಯಕ್ತಿಗಳು ತನ್ನ ಕೊಠಡಿಯ ಬಳಿ ಬಂದು ಬಾಗಿಲು ಬಡಿದಂತೆ ಶಬ್ದವಾಯಿತು. ಆದರೆ, ಹೊರಗೆ ಮಳೆ ಸುರಿಯುತ್ತಿದ್ದರಿಂದ ಬಾಗಿಲು ಬಡಿದ ಸದ್ದು ಸ್ಪಷ್ಟವಾಗಿ ಕೇಳಿಸಲಿಲ್ಲ ಎಂದು ಪ್ಯಾಟ್ರಿಕ್ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾರೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಸೆಮಿನರಿಯ ಸೆಕ್ಯುರಿಟಿ ಗಾರ್ಡ್ ಮಾನ್‌ಸಿಂಗ್ ಸಾಮಾನ್ಯವಾಗಿ ಪ್ರವೇಶ ದ್ವಾರದಲ್ಲಿ ಕಾವಲು ಕಾಯುತ್ತಾನೆ. ರಾತ್ರಿ ಮಳೆ ಸುರಿಯುತ್ತಿದ್ದರಿಂದ ಆತ ಕೊಠಡಿಯಲ್ಲಿ ಮಲಗಿದ್ದ. ಸೆಮಿನರಿಯಲ್ಲಿನ ಇತರೆ ಪಾದ್ರಿಗಳು ಹಾಗೂ ಸಿಬ್ಬಂದಿ ಸಹ ನಿದ್ರೆ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಕೊಲೆ ಘಟನೆ ನಡೆದಿದೆ.ದುಷ್ಕರ್ಮಿಗಳು ಸೆಮಿನರಿಯ ಕಾಂಪೌಂಡ್ ಹಾರಿ ಒಳ ನುಗ್ಗಿದ್ದಾರೆಯೇ ಅಥವಾ ಪ್ರವೇಶ ದ್ವಾರದ ಮೂಲಕವೇ ಒಳಗೆ ಬಂದಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆರೋಪಿಗಳು ಕೃತ್ಯ ಎಸಗಿದ ನಂತರ ಥಾಮಸ್‌ರ ನಿಲುವಂಗಿಯನ್ನು (ಗೌನ್) ಕಳಚಿ, ಅದರಿಂದ ಘಟನಾ ಸ್ಥಳದ ನೆಲದ ಮೇಲೆ ಚೆಲ್ಲಿದ್ದ ರಕ್ತವನ್ನು ಒರೆಸಿದ್ದಾರೆ. ಬಳಿಕ ನಿಲುವಂಗಿಯನ್ನು ಸೆಮಿನರಿಯ ಕಾಂಪೌಂಡ್‌ನ ಬಳಿ ಎಸೆದು ಹೋಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

`ರಾತ್ರಿ ಮಳೆ ಬರುತ್ತಿದ್ದರಿಂದ ಕೊಠಡಿಗೆ ಹೋಗಿ ಮಲಗಿದ್ದೆ. ಇದರಿಂದಾಗಿ ಸೆಮಿನರಿಗೆ ಯಾರು ಬಂದಿದ್ದರು ಎಂಬುದು ಗೊತ್ತಾಗಲಿಲ್ಲ ಮತ್ತು ವ್ಯಕ್ತಿಗಳ ಚೀರಾಟದ ಶಬ್ದವೂ ಕೇಳಿಸಲಿಲ್ಲ' ಎಂದು ಮಾನ್‌ಸಿಂಗ್ ಹೇಳಿದರು.`ಕೆಲ ತಿಂಗಳ ಹಿಂದೆ ನಮ್ಮ ಚರ್ಚ್‌ಗೆ ನುಗ್ಗಿದ್ದ ಕಿಡಿಗೇಡಿಗಳು, ಸೆಕ್ಯುರಿಟಿ ಗಾರ್ಡ್ ಅರಳಯ್ಯನ ಮೇಲೆ ಹಲ್ಲೆ ನಡೆಸಿ ಕಳವು ಮಾಡಲೆತ್ನಿಸಿದ್ದರು. ಆ ಸಂದರ್ಭದಲ್ಲಿ ಅರಳಯ್ಯನ ಚೀರಾಟ ಕೇಳಿ ಚರ್ಚ್‌ನ ಸಿಬ್ಬಂದಿ ಎಚ್ಚರಗೊಂಡಿದ್ದರಿಂದ ಕಳ್ಳರು ಪರಾರಿಯಾಗಿದ್ದರು' ಎಂದು ಸೇಂಟ್ ಪೀಟರ್ಸ್‌ ಪೊಂಟಿಫಿಕಲ್ ಸೆಮಿನರಿ ಪಕ್ಕದಲ್ಲೇ ಇರುವ ಕ್ರೈಸ್ಟ್ ದಿ ಕಿಂಗ್ ಚರ್ಚ್‌ನ ರೆವರೆಂಡ್ ಫಾದರ್ ಸತೀಶ್‌ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.ಸೇಂಟ್ ಪೀಟರ್ಸ್‌ ಪೊಂಟಿಫಿಕಲ್ ಸೆಮಿನರಿಯು ಧರ್ಮ ಗುರುಗಳಾಗುವವರಿಗೆ (ಫಾದರ್) ತರಬೇತಿ ನೀಡುವ ಕೇಂದ್ರವಾಗಿದೆ. ಮೂಲತಃ ಕೇರಳದ ಕೊಟ್ಟಾಯಂ ಜಿಲ್ಲೆಯ ಏಟ್ಟುಮಾನೂರು ಪಟ್ಟಣದವರಾದ ಥಾಮಸ್ ಅವರು ಸುಮಾರು 20 ವರ್ಷಗಳಿಂದ ಸೆಮಿನರಿಯಲ್ಲಿ ರೆಕ್ಟರ್ ಆಗಿದ್ದರು. ಅವರು ಈ ಹಿಂದೆ ಊಟಿ ಧರ್ಮಕ್ಷೇತ್ರದಲ್ಲಿ ಧಾರ್ಮಿಕ ಗುರುಗಳಾಗಿದ್ದರು. ಘಟನೆ ಸಂಬಂಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆಡಳಿತಾತ್ಮಕ ಕಾರಣಕ್ಕೆ ಕೊಲೆ?

`ಆರೋಪಿಗಳು, ಸೆಮಿನರಿ ಆವರಣದ ಕೊಠಡಿಯೊಂದರಲ್ಲಿ ಇಟ್ಟಿದ್ದ ಸೆಮಿನರಿಯ ದೈನಂದಿನ ವ್ಯವಹಾರ ಹಾಗೂ ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಪಟ್ಟ ದಾಖಲೆಪತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಅಲ್ಲದೇ, ಕೆಲ ದಾಖಲೆಪತ್ರಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಅಂಶವನ್ನು ಗಮನಿಸಿದರೆ ಸೆಮಿನರಿಯ ಆಡಳಿತಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ ಥಾಮಸ್‌ರ ಕೊಲೆ ನಡೆದಿರುವ ಸಾಧ್ಯತೆ ಇದೆ' ಎಂದು ಹಿರಿಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.ತನಿಖೆಗೆ ವಿಶೇಷ ತಂಡ

`ಕೊಲೆಗೆ ಕಾರಣ ಏನೆಂದು ಗೊತ್ತಾಗಿಲ್ಲ. ಆರೋಪಿಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಪ್ರಕರಣದ ತನಿಖೆಗೆ ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ' ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ `ಪ್ರಜಾವಾಣಿ'ಗೆ ತಿಳಿಸಿದರು.

`ಕಳ್ಳತನದ ಉದ್ದೇಶಕ್ಕಾಗಿ ಈ ಕೊಲೆ ಮಾಡಲಾಗಿದೆಯೇ ಅಥವಾ ಬೇರೆ ಕಾರಣಕ್ಕಾಗಿ ಈ ಕೊಲೆ ನಡೆದಿದೆಯೇ ಎಂಬ ಬಗ್ಗೆ ಈಗಲೇ ಏನೂ ಹೇಳಲಾಗುವುದಿಲ್ಲ. ಪ್ರಕರಣ ಸಂಬಂಧ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ' ಎಂದು ಅವರು ಮಾಹಿತಿ ನೀಡಿದ್ದಾರೆ.ಸಿಐಡಿ ತನಿಖೆಗೆ ಆಗ್ರಹ

ರೆಕ್ಟರ್ ಕೆ.ಜೆ.ಥಾಮಸ್ ಅವರ ಕೊಲೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸಿಐಡಿ ತನಿಖೆಗೆ ಆದೇಶಿಸಬೇಕು ಎಂದು ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘವು ಆಗ್ರಹಿಸಿದೆ.`ಥಾಮಸ್ ಅವರು ಮಲಯಾಳಂ ಮಾತೃ ಭಾಷಿಕರಾಗಿದ್ದರೂ ಕನ್ನಡ ಭಾಷೆಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ಅವರ ಕೊಲೆಯ ಹಿಂದಿರುವ ದುರುದ್ದೇಶ ಬೆಳಕಿಗೆ ಬರಬೇಕು. ಸೇಂಟ್ ಪೀಟರ್ಸ್‌ ಪೊಂಟಿಫಿಕಲ್ ಸೆಮಿನರಿಯ ಎಲ್ಲ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರನ್ನು ವಿಚಾರಣೆಗೆ ಒಳಪಡಿಸಬೇಕು' ಎಂದು ಸಂಘದ ಅಧ್ಯಕ್ಷ ರಫಾಯಲ್ ರಾಜ್ ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)