ಸೋಮವಾರ, ನವೆಂಬರ್ 18, 2019
27 °C

ಮಲ್ಲೇಶ್ವರ ಸ್ಫೋಟ: ಎಸ್‌ಎಂಎಸ್ ಸುಳಿವು

Published:
Updated:

ಬೆಂಗಳೂರು: ಮಲ್ಲೇಶ್ವರದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಹಿಂದಿನ ದಿನ (ಏ.16) ಸ್ಫೋಟ ಸಂಬಂಧ ತಮಿಳುನಾಡು ಮೂಲದ ವ್ಯಕ್ತಿಗಳಿಬ್ಬರ ನಡುವೆ ಮೊಬೈಲ್‌ಗಳಲ್ಲಿ ಎಸ್‌ಎಂಎಸ್ ರವಾನೆಯಾಗಿರುವ ಬಗ್ಗೆ ಪ್ರಕರಣದ ತನಿಖಾಧಿಕಾರಿಗಳಿಗೆ ಸುಳಿವು ಸಿಕ್ಕಿದೆ.ಸುಳಿವು ಆಧರಿಸಿ ತಮಿಳುನಾಡಿಗೆ ಹೋಗಿರುವ ನಗರದ ಜಂಟಿ ಪೊಲೀಸ್ ಕಮಿಷನರ್ (ಪೂರ್ವ ವಿಭಾಗ) ಎಸ್. ಮುರುಗನ್ ನೇತೃತ್ವದ ತನಿಖಾಧಿಕಾರಿಗಳ ತಂಡ ಚೆನ್ನೈನಲ್ಲಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ.`ಸ್ಫೋಟದ ಹಿಂದಿನ ದಿನ ಚೆನ್ನೈ ಮೂಲದ ವ್ಯಕ್ತಿಯೊಬ್ಬ ಮತ್ತೊಬ್ಬ ವ್ಯಕ್ತಿಯ ಮೊಬೈಲ್‌ಗೆ `ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ಮಾಡಬೇಕಿದೆ. ಶಿವಾಜಿನಗರಕ್ಕೆ ಬಾ' ಎಂದು ಎಸ್‌ಎಂಎಸ್‌ಕಳುಹಿಸಿದ್ದಾನೆ. ಈ ಮಾಹಿತಿ ಆಧರಿಸಿ ಅವರಿಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ' ಎಂದು ಹಿರಿಯ ಅಧಿಕಾರಿಗಳು `ಪ್ರಜಾವಾಣಿ'ಗೆ ತಿಳಿಸಿದ್ದಾರೆ.`ಆ ವ್ಯಕ್ತಿಗಳಿಂದ ಮೊಬೈಲ್ ಮತ್ತು ಸಿಮ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಒಂದು ಸಿಮ್ ಪ್ರಕಾಶ್ ಎಂಬುವರ ಹೆಸರಿನಲ್ಲಿದೆ. ಆ ಇಬ್ಬರು ಸುಳ್ಳು ವೈಯಕ್ತಿಕ ವಿವರ ಹಾಗೂ ದಾಖಲೆ ಪತ್ರಗಳನ್ನು ನೀಡಿ ಸಿಮ್ ಖರೀದಿಸಿರುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ' ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಮಯ್ಯ ಆಸ್ಪತ್ರೆಗೆ ಗಾಯಾಳು ಸ್ಥಳಾಂತರ

ಬೆಂಗಳೂರು: ಮಲ್ಲೇಶ್ವರ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಲಿಷಾ (17) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೆ.ಸಿ.ಜನರಲ್ ಆಸ್ಪತ್ರೆಯಿಂದ ಶನಿವಾರ ರಾತ್ರಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.ಸ್ಫೋಟದ ಸಂದರ್ಭದಲ್ಲಿ ಲಿಷಾ ಅವರ ಎಡಗಾಲಿಗೆ ಗಾಯವಾಗಿತ್ತು. ಈ ಕಾರಣಕ್ಕಾಗಿ ಕೆ.ಸಿ.ಜನರಲ್ ಆಸ್ಪತ್ರೆ ವೈದ್ಯರು ಅವರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದರು.`ಶಸ್ತ್ರಚಿಕಿತ್ಸೆಯ ನಂತರ ಮಗಳಿಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತು. ಈ ಹಿನ್ನೆಲೆಯಲ್ಲಿ ವೈದ್ಯರು ಮಗಳನ್ನು ರಾಮಯ್ಯ ಆಸ್ಪತ್ರೆಗೆ ಸ್ಥಳಾಂತರಿಸಿದರು. ಇದೀಗ ಮಗಳು ಚೇತರಿಸಿಕೊಳ್ಳುತ್ತಿದ್ದಾಳೆ' ಎಂದು ಲಿಷಾ ತಂದೆ ದೊರೆಸ್ವಾಮಿ ಹೇಳಿದ್ದಾರೆ.

 

ಪ್ರತಿಕ್ರಿಯಿಸಿ (+)