ಗುರುವಾರ , ಜೂನ್ 24, 2021
28 °C

ಮಲ ಹೊರುವ ಪದ್ಧತಿ ಇನ್ನೂ ಜೀವಂತ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ (ಚಿತ್ರದುರ್ಗ ಜಿಲ್ಲೆ): ಪಟ್ಟಣದ ಗಾಂಧಿನಗರದಲ್ಲಿರುವ ಮಾರಮ್ಮನ ಗುಡಿ ರಸ್ತೆಯ ಸಂಜೀವಪ್ಪ ಎಂಬುವರ ಮನೆಯಲ್ಲಿ ಬುಧವಾರ ತಡರಾತ್ರಿ ಕಾರ್ಮಿಕರು ಗುಂಡಿಯಲ್ಲಿದ್ದ ಮಲವನ್ನು ಸ್ವಚ್ಛತೆಗೊಳಿಸುವ, ತಲೆ ಮೇಲೆ ಹೊತ್ತ ಘಟನೆ ಬೆಳಕಿಗೆ ಬಂದಿದೆ.



ಮಲ ತೆಗೆಯುವ ಕೆಲಸವನ್ನು ಮಾಡುತ್ತಿದ್ದ ಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಪುರಸಭೆಯಲ್ಲಿ ಪೌರ ಕಾರ್ಮಿಕರಾಗಿ ದುಡಿಯುತ್ತಿದ್ದರು. ರಾತ್ರಿ ಸಮಯದಲ್ಲಿ ಈ ಕಾರ್ಮಿಕರಿಂದ ಸಂಜೀವಪ್ಪ ಎಂಬುವರು ಮನೆಯ ಕಕ್ಕಸ್ಸು ಗುಂಡಿಯಲ್ಲಿದ್ದ ಮಲ ತೆಗೆಸುತ್ತಿದ್ದರು. ಈ ದೃಶ್ಯವನ್ನು ಪ್ರತ್ಯಕ್ಷವಾಗಿ ವೀಕ್ಷಿಸಿದ ಯುವಕರಿಬ್ಬರು ಮಲ ತೆಗೆಯುವ ಮತ್ತು ಹೊರುತ್ತಿರುವ ದೃಶ್ಯದ ಛಾಯಾ ಚಿತ್ರಗಳನ್ನು ತೆಗೆಸಿದ್ದಾರೆ.



ಕಾರ್ಯನಿಮಿತ್ತ ಗುರುವಾರ ಮಧ್ಯಾಹ್ನ ಪಟ್ಟಣಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಅವರಿಗೆ ಛಾಯಾಚಿತ್ರ ಸಮೇತ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಯುವಕರಿಬ್ಬರು ಮನವಿ ಮಾಡಿದರು.



ಮಲ ಹೊರುವ ದೃಶ್ಯದ ಛಾಯಾಚಿತ್ರಗಳು `ಪ್ರಜಾವಾಣಿ~ಗೆ ಲಭ್ಯವಾಗಿವೆ. ಸ್ಥಳದಲ್ಲಿದ್ದ ಪುರಸಭೆ ಮುಖ್ಯಾಧಿಕಾರಿಗೆ ಈ ಕುರಿತು ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ವಿಪುಲ್ ಬನ್ಸಾಲ್ ಸೂಚಿಸಿದ್ದಾರೆ.



ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಬಿ. ರಾಮಪ್ಪ ಅವರನ್ನು `ಪ್ರಜಾವಾಣಿ~ ಸಂಪರ್ಕಿಸಿದಾಗ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಮಲ ತೆಗೆಸುತ್ತಿದ್ದ ಮನೆಯ ಮಾಲೀಕ ಸಂಜೀವಪ್ಪ ಎಂಬುವರ ಮೇಲೆ ಚಳ್ಳಕೆರೆ ಪೊಲೀಸ್ ಠಾಣೆಗೆ ಗುರುವಾರ ರಾತ್ರಿ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.