ಮಳವಳ್ಳಿ: ಬೃಹತ್ ಆರೋಗ್ಯ ಶಿಬಿರ

7

ಮಳವಳ್ಳಿ: ಬೃಹತ್ ಆರೋಗ್ಯ ಶಿಬಿರ

Published:
Updated:

ಮಳವಳ್ಳಿ: ಗ್ರಾಮೀಣ ಪ್ರದೇಶದ ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸುವ ಕ್ರಮವಾಗಿ ಪಟ್ಟಣದ ಅಧ್ಯಯನ ವಿದ್ಯಾಟ್ರಸ್ಟ್ ಹೋಬಳಿ ಮಟ್ಟದಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸುವ ಮೂಲಕ ಆಯಾ ವ್ಯಾಪ್ತಿಯ ಜನರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲು ಉದ್ದೇಶಿಸಿದೆ.ಭಾನುವಾರ ತಾಲ್ಲೂಕಿನ ಕಿರುಗಾವಲು ಹೋಬಳಿ ವ್ಯಾಪ್ತಿಯ 68 ಗ್ರಾಮಗಳ ಜನರಿಗಾಗಿ ಕಿರುಗಾವಲಿನ ಸರ್ಕಾರಿ ಪ್ರೌಢಶಾಲೆ ಮತ್ತು ಕಿರಿಯ ಕಾಲೇಜು ಆವರಣದಲ್ಲಿ ನಡೆದ ಬೃಹತ್ ಆರೋಗ್ಯ ಶಿಬಿರ ಸಂದರ್ಭದಲ್ಲಿ ಟ್ರಸ್ಟ್‌ನ ಸ್ಥಾಪಕ ಡಾ. ಮೂರ್ತಿ ಈ ವಿಷಯ ತಿಳಿಸಿದರು.ಆರೋಗ್ಯ ತಪಾಸಣೆ, ಶಿಬಿರದ ನಿರ್ವಹಣೆಯ ನಡುವೆ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಈ ಶಿಬಿರದಲ್ಲಿ ಬಹುತೇಕ ಎಲ್ಲ ರೀತಿಯ ಆರೋಗ್ಯ ಸಮಸ್ಯೆಗೂ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರು, ಮಂಡ್ಯ, ಮೈಸೂರಿನಿಂದ ತಜ್ಞ ವೈದ್ಯರು ಭಾಗವಹಿಸಿದ್ದಾರೆ ಎಂದರು.ಸುಮಾರು ಏಳು ಲಕ್ಷ ಮೌಲ್ಯದ ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಆರೋಗ್ಯ ತಪಾಸಣೆಗೆ ಜೊತೆಗೆ ಇಸಿಜಿ, ರಕ್ತ ಪರೀಕ್ಷೆಯನ್ನು ಮಾಡುತ್ತಿದ್ದು, ಹೆಚ್ಚಿನ ಚಿಕಿತ್ಸೆ ಇದ್ದರೆ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುವುದು ಎಂದರು.ಅಂಥ ಸಂದರ್ಭದಲ್ಲಿ ರೋಗಿಗಳಿಗೆ ಯಶಸ್ವಿನಿ ಸೇರಿದಂತೆ ಲಭ್ಯ ಯೋಜನೆಗಳ ಮೂಲಕ ಸೇವೆ ಒದಗಿಸಲು ಟ್ರಸ್ಟ್ ಯತ್ನಿಸಲಿದೆ. ಶಿಬಿರ ಅಂತ್ಯವಾದ ಬಳಿಕ ಅಂಥ ರೋಗಿಗಳು ಟ್ರಸ್ಟ್ ಸ್ವಯಂ ಸೇವಕರನ್ನು ಸಂಪರ್ಕಿಸಬಹುದು. ಬರುವ ವಾರಗಳಲ್ಲಿ ಇತರ ಹೋಬಳಿಯಲ್ಲಿ ಶಿಬಿರ ನಡೆಯಲಿದೆ ಎಂದರು.ದೊಡ್ಡ ಮಟ್ಟದಲ್ಲಿ ಶಿಬಿರ ನಡೆಸುವಾಗ ಕೆಲ ನ್ಯೂನತೆಗಳು ಇರಬಹುದು. ಆದರೆ, ಸಾರ್ವಜನಿಕರು ಆದಷ್ಟು ಇಂಥ ಶಿಬಿರದ ಸೌಲಭ್ಯ ಪಡೆದುಕೊಳ್ಳಲು ಯತ್ನಿಸಬೇಕು ಎಂದರು. ಶಿಬಿರದಲ್ಲಿ ಸುಮಾರು 3,400 ಮಂದಿ ಆರೋಗ್ಯ ತಪಾಸಣೆ ಸೌಲಭ್ಯವನ್ನು ಪಡೆದರು.ಮಕ್ಕಳು, ಸ್ತ್ರೀರೋಗ, ಚರ್ಮರೋಗ ತಜ್ಞರು, ದಂತ ಸಮಸ್ಯೆ, ಕ್ಷಯ, ಕ್ಯಾನ್ಸರ್ ತಜ್ಞರು ಸೇರಿ  48 ಮಂದಿ ವೈದ್ಯರು ಶಿಬಿರದಲ್ಲಿ ಭಾಗವಹಿಸಿದ್ದರು. ವಿವಿಧ ಗ್ರಾಮಗಳ ಜನ ಪಾಲ್ಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲಾ ಆರೋಗ್ಯಾಧಿಕಾರಿ ಅರವಿಂದಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry