ಶನಿವಾರ, ಮೇ 8, 2021
18 °C

ಮಳಿಗೆಗೆ ವರ್ಗವಾಗದ ಸಂತೆ; ಗ್ರಾಹಕರಿಗೆ ಚಿಂತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಳಂದೂರು: `ಭಾನುವಾರ ಬಂತೆಂದರೆ ರಸ್ತೆಯ ಬದಿಯಲ್ಲಿ ಬಿಚ್ಚಿಕೊಳ್ಳುವ ಸಂತೆ, ಗ್ರಾಹಕರಿಗೆ ನಡೆಯಲೂ ಆಗದ ದುಃಸ್ಥಿತಿ, ವಾಹನ ಮಾಲೀಕರಿಗೆ ಪರಮ ಸಂಕಟ, ವಿಶಾಲ ಇಲ್ಲದ ಹಾದಿ ಬದಿಯ ಬೀದಿ. ಆಗಾಗ ಬದಲಾಗುವ ಸಂತೆ ಸ್ಥಳ, ನವೀನ ಮಳಿಗೆಗಳಿಗೆ ವರ್ಗವಾಗದ ಸಂತೇ ವ್ಯಾಪಾರ. ಒಟ್ಟಾರೆ ಕೊಂಡು-ಕೊಳ್ಳುವವರ ಸ್ಥಿತಿ ಇಲ್ಲಿಗೆ ಬರುವವರಿಗೆ ಗೊತ್ತು~.ಹೌದು, ಇದು ಪಟ್ಟಣದ ಪ್ರಸಿದ್ಧ `ಭಾನು ವಾರ ಸಂತೇ~ ಎಂದೇ ಹೆಸರಾದ ಯಳಂದೂರು ಪಟ್ಟಣದ ಹೃದಯಭಾಗದಲ್ಲಿ ನಡೆಯುವಾಗ ಕಾಣಬರುವ ಗೌಜುಗದ್ದಲಗಳ ಸ್ಥಿತಿಗತಿ. ಜಿಲ್ಲೆಯಲ್ಲೇ ತರಕಾರಿ ವ್ಯಾಪಾರಕ್ಕೆ ಪ್ರಸಿದ್ಧವಾದ ಏಕೈಕ ಸಂತೇ ಇದು. ರೈತರು ನೇರವಾಗಿ ತಾವು ಬೆಳೆದ ತರಕಾರಿ ಉತ್ಪನ್ನಗಳನ್ನು ಇಲ್ಲಿ ಮಾರಾಟಕ್ಕೆ ಇಡುತ್ತಾರೆ. ಹೆಚ್ಚಾಗಿ ಮಧ್ಯವರ್ತಿಗಳ ಕಾಟವೂ ಇಲ್ಲಿಲ್ಲ.ಇಲ್ಲಿ ನಡೆಯುವ ವಹಿವಾಟಿಗೆ ಚರಿತ್ರೆಯೇ ಇದೆ. ಆದರೆ ಸುಗಮ ಮಾರುಕಟ್ಟೆಗೆ ಬೇಕಾದ ನಿರ್ದಿಷ್ಟ ಸ್ಥಳ, ನೀರು-ನೆರಳು ಇಲ್ಲದ ಕಾರಣ ರಸ್ತೆಯನ್ನೇ ವ್ಯಾಪಾರ ಕೇಂದ್ರವನ್ನಾಗಿ ರೂಪಿಸಿಕೊಳ್ಳಬೇಕಾದ ಸ್ಥಿತಿ ಇಲ್ಲಿನ ವ್ಯಾಪಾರಿಗಳದ್ದು. ಆದರೆ ಇದರಿಂದ ಪರಿತಪಿಸುವವರು ಮಾತ್ರ ಕೊಳ್ಳುವ, ಮಾರುವ ಹಾಗೂ ರಸ್ತೆ ಬದಿಯ ಸಾರ್ವಜನಿಕರು.ಆರಂಭದ ದಿನಗಳಲ್ಲಿ ಪಟ್ಟಣದ ಪದವಿ ಕಾಲೇಜಿನ ಆವರಣದಲ್ಲಿ ಸಂತೆ ನಡೆಯುತ್ತಿತ್ತು, ನಂತರ ಜಹಗೀರ‌್ದಾರ್ ಬಂಗಲೆ ಮುಂಭಾಗಕ್ಕೆ ಸ್ಥಳಾಂತರವಾಯಿತು, ಈಗ ಹಳೇ ಅಂಚೆ ಕಚೇರಿ, ಸೊಸೈಟಿ ಬೀದಿಯಲ್ಲಿ ಸಂತೆ ಕಟ್ಟುತ್ತದೆ.ಮಾರುವವರು ಹಾಗೂ ಕೊಳ್ಳುವವರು ಮಳೆ, ಬಿಸಿಲ ಝಳ ಲೆಕ್ಕಿಸದೇ ವ್ಯಾಪಾರ ಮಾಡುವ ಸ್ಥಿತಿ ಇದೆ. ಕೆಲವು ವೇಳೆ ಇಲ್ಲಿ ಟ್ರಾಫಿಕ್ ಜಾಮ್ ಆಗುತ್ತದೆ. ಬಿಳಿಗಿರಿರಂಗನಬೆಟ್ಟಕ್ಕೆ ಚಲಿಸುವ ವಾಹನಗಳೂ ಹರಸಾಹಸ ಪಡುವ ಸ್ಥಿತಿ ಹಾಗೂ ದ್ವಿಚಕ್ರ ವಾಹನಗಳ ಸಂಖ್ಯೆಯೂ ನಿಲ್ಲಿಸಲು ಪ್ರಯಾಸ ಪಡಬೇಕಿದೆ. ರಾಷ್ಟ್ರೀಯ ಹೆದ್ದಾರಿ 209ರ ಪಕ್ಕದಲ್ಲೇ ವಾಹನಗಳು ತಾತ್ಕಾಲಿಕ ನಿಲುಗಡೆ ಯಿಂದಾಗಿ ಇಲ್ಲಿ ಸಂಚರಿಸುವುದು ಕಷ್ಟವಾಗು ತ್ತದೆ ಎಂಬುದು ಸಗಟುದಾರರ ದೂರು.ಕಲ್ಯಾಣಿ ಕೊಳದ ಬಳಿ ಮಳಿಗೆ ನಿರ್ಮಾಣ:

ಸುವರ್ಣಾವತಿ ನದಿ ದಡದ ಬಳಿಯಲ್ಲಿ ಪಟ್ಟಣ ಪಂಚಾಯಿತಿಯೂ 25 ಲಕ್ಷ ರೂಪಾಯಿ ವೆಚ್ಚದಲ್ಲಿ 15 ಅಂಗಡಿ ಮಳಿಗೆಗಳ ನಿರ್ಮಾಣವೂ ಆಗಿದೆ. 10 ಲಕ್ಷ ರೂಪಾಯಿ ವೆಚ್ಚದಲ್ಲಿ ಇದರ ಸುತ್ತುಗೋಡೆಯನ್ನೂ ಹಾಕಲಾಗಿದೆ. ಆದರೆ ಇದಕ್ಕೆ ತಯಾರಿಸಿರುವ ಅಂದಾಜು ಪಟ್ಟಿಯಲ್ಲಿ ವಿದ್ಯುತ್ ಸಂಪರ್ಕವನ್ನೇ ನಮೂದಿಸಿಲ್ಲ...!`ಮುಖ್ಯಮಂತ್ರಿಗಳ ಸಮಗ್ರ ಅಭಿವೃದ್ಧಿ ಯೋಜನೆಯಡಿಯಲ್ಲಿ 2 ಲಕ್ಷ ರೂ. ವೆಚ್ಚದಲ್ಲಿ ಯೋಜನೆ ರೂಪಿಸಿದ್ದು, ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳುಹಿಸಲಾಗಿದೆ. ಸ್ಥಳೀಯರ ಶಾಸಕರ ಹಾಗೂ ಪಂಚಾಯಿತಿಯ ಅನುದಾನ ಗಳನ್ನು ಬಳಸಿಕೊಂಡು ಸುತ್ತು ಗೋಡೆ ಎತ್ತರೀಕರಣ ಮಾಡುವುದರ ಜೊತೆಗೆ ಸಣ್ಣ ವ್ಯಾಪಾರಿಗಳಿಗೆ ಪ್ಲಾಟ್‌ಫಾರಂಗಳನ್ನು ನಿರ್ಮಿಸಲೂ ಯೋಜನೆ ರೂಪಿಸಲಾಗಿದೆ~ ಎಂದು ಶಾಸಕ ಜಿ.ಎನ್. ನಂಜುಂಡಸ್ವಾಮಿ `ಪ್ರಜಾವಾಣಿ~ಗೆ ತಿಳಿಸಿದರು.`ಹೊಸದಾಗಿ ನಿರ್ಮಿಸಲಾಗಿರುವ ಅಂಗಡಿ ಮಳಿಗೆಗಳನ್ನು ಮಾ. 17 ರಂದು ಪಟ್ಟಣ ಪಂಚಾಯಿತಿ ತನ್ನ ಸುಪರ್ದಿಗೆ ವಹಿಸಿಕೊಂಡಿದೆ. ಸುತ್ತುಗೋಡೆಯ ಅವರಣದಲ್ಲಿರುವ ಗಿಡಗಂಟಿ ಗಳನ್ನು ತೆಗೆಸಿ, ಜಾಗವನ್ನು ಸಮತಟ್ಟು ಮಾಡಿಸಿ, ಉಳಿಕೆ ಕಾಮಗಾರಿಗಳನ್ನೂ ಶೀಘ್ರದಲ್ಲೇ ಮುಗಿಸಲಾಗುತ್ತದೆ. ಆದಷ್ಟು ಬೇಗ ಸಂತೆಯನ್ನು ಇಲ್ಲಿಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗುವುದು~ ಎನ್ನುತ್ತಾರೆ ಪ.ಪಂ. ಅಧ್ಯಕ್ಷ ರಂಗಸ್ವಾಮಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.