ಭಾನುವಾರ, ಆಗಸ್ಟ್ 18, 2019
22 °C
ತರಕಾರಿ ವ್ಯಾಪಾರಸ್ಥರು, ಮಾಂಸ ಮಾರಾಟಗಾರರಿಂದ ಪ್ರತಿಭಟನೆ

ಮಳಿಗೆ ಬಹಿರಂಗ ಹರಾಜು ಪ್ರಕ್ರಿಯೆ ಸ್ಥಗಿತ

Published:
Updated:

ಚಿಕ್ಕಬಳ್ಳಾಪುರ: ನಗರದ ಸಂತೆ ಮಾರುಕಟ್ಟೆ ಬೀದಿ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮಾರುಕಟ್ಟೆ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಕೈಗೊಳ್ಳಲು ಮುಂದಾದ ನಗರಸಭೆ ಅಧಿಕಾರಿಗಳನ್ನು ಅಡ್ಡಿಪಡಿಸಿ ತರಕಾರಿ ವ್ಯಾಪರಸ್ಥರು, ಮಾಂಸ ಮಾರಾಟಗಾರರು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು.ಪ್ರತಿಭಟನೆಯಲ್ಲಿ ಪಾಲ್ಗೊಂಡ ತರಕಾರಿ ವ್ಯಾಪರಸ್ಥರು ಮತ್ತು ಮಾಂಸ ಮಾರಾಟಗಾರರು, `ಮಳಿಗೆಗಳನ್ನು ಯಾವುದೇ ಕಾರಣಕ್ಕೂ ಬಹಿರಂಗ ಹರಾಜು ಮಾಡಬಾರದು. ಹಲ ವರ್ಷಗಳಿಂದ ಬೀದಿಯಲ್ಲೇ ಕೂತು ವ್ಯಾಪಾರ ಮಾಡುತ್ತಿರುವ ನಮಗೆ ಮಳಿಗೆಗಳನ್ನು ನೀಡಬೇಕು' ಎಂದು ಒತ್ತಾಯಿಸಿದರು.ಪ್ರತಿಭಟನೆ ನಡುವೆಯೂ ನಗರಸಭೆ ಆಯುಕ್ತ ಬಿ.ಕೆ.ರುದ್ರಮುನಿ, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ನಾಗೇಶ್ ಬಹಿರಂಗ ಪ್ರಕ್ರಿಯೆ ನಡೆಸಲು ಮುಂದಾದಾಗ, ಪ್ರತಿಭಟನಾಕಾರರು ಹರಾಜು ಪ್ರಕ್ರಿಯೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಘೋಷಣೆ ಕೂಗಿದರು. ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಲು ಆಗ್ರಹಿಸಿದರು.ಹಲ ವರ್ಷಗಳಿಂದ ಒಂದೇ ಸ್ಥಳದಲ್ಲಿ ತರಕಾರಿ ವ್ಯಾಪಾರಸ್ಥರು, ಮಾಂಸ ಮಾರಾಟಗಾರರು ವಹಿವಾಟು ನಡೆಸುತ್ತಿದ್ದರೂ ಅವರಿಗೆ ನೇರವಾಗಿ ಮತ್ತು ಉಚಿತವಾಗಿ ನೂತನ ಮಳಿಗೆಗಳನ್ನು ನೀಡಲು ಆಗುವುದಿಲ್ಲ ಎಂದು ನಗರಸಭೆ ಅಧಿಕಾರಿಗಳು ವಿವರಣೆ ನೀಡುತ್ತಿದ್ದರೂ; ಪ್ರತಿಭಟನಾಕಾರರು ತಮ್ಮ ಬೇಡಿಕೆ ಈಡೇರಿಸಲೇಬೇಕು ಎಂದು ಪಟ್ಟು ಹಿಡಿದರು.`ಇದು ಬಹಿರಂಗ ಹರಾಜು ಸಭೆಯಾಗಿದ್ದು, ಸಾರ್ವಜನಿಕರು ಸೇರಿದಂತೆ ಎಲ್ಲರೂ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು' ಎಂದು ನಗರಸಭೆ ಆಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದರೆ, ಇತ್ತ ತರಕಾರಿ ವ್ಯಾಪರಸ್ಥರು, ಮಾಂಸ ಮಾರಾಟಗಾರರು, `ನಾವಂತೂ ಹರಾಜು ಪ್ರಕ್ರಿಯೆ ನಡೆಸಲು ಬಿಡುವುದಿಲ್ಲ. ಯಾರಿಗೂ ಪಾಲ್ಗೊಳ್ಳಲು ಅವಕಾಶ ನೀಡುವುದಿಲ್ಲ' ಎಂದರು.ಪ್ರತಿಭಟನಾಕಾರರ ಮನವೊಲಿಸುವಲ್ಲಿ ವಿಫಲರಾದ ನಗರಸಭೆ ಅಧಿಕಾರಿಗಳು ಕಚೇರಿಗೆ ಮರಳಿದರು.

Post Comments (+)