ಮಳಿಗೆ ಹಂಚಿಕೆಯಲ್ಲಿ ಅವ್ಯವಹಾರ: ಗ್ರಾಹಕರ ವೇದಿಕೆ ಆದೇಶ

7

ಮಳಿಗೆ ಹಂಚಿಕೆಯಲ್ಲಿ ಅವ್ಯವಹಾರ: ಗ್ರಾಹಕರ ವೇದಿಕೆ ಆದೇಶ

Published:
Updated:

ಬೆಂಗಳೂರು: ವಾಣಿಜ್ಯ ಮಳಿಗೆ ಮಾರಾಟ ಮಾಡುವ ಭರವಸೆ ನೀಡಿ ವಂಚನೆ ಮಾಡಿರುವ `ಇನ್ನೊವೇಟಿವ್ ಫಿಲ್ಮ್ ಸ್ಟುಡಿಯೊ~ ಅಧಿಕಾರಿಗಳಿಗೆ 10ಸಾವಿರ ರೂಪಾಯಿ ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.ಈ ಹಣವನ್ನು ಪರಿಹಾರದ ರೂಪದಲ್ಲಿ ಬಿಟಿಎಂ ಲೇಔಟ್ ನಿವಾಸಿ ಕೆ.ಅಕ್ಬರ್ ಶರೀಫ್ ಅವರಿಗೆ ನೀಡುವಂತೆ ವೇದಿಕೆ ಅಧ್ಯಕ್ಷ ಚಂದ್ರಶೇಖರಯ್ಯ ನೇತೃತ್ವದ ಪೀಠ ಆದೇಶಿಸಿದೆ.ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯಲ್ಲಿರುವ ಈ ಸ್ಟುಡಿಯೊದ ವ್ಯವಸ್ಥಾಪಕ ನಿರ್ದೇಶಕ ಸರವಣ ಪ್ರಸಾದ್, ನಿರ್ದೇಶಕರಾದ ಶಶಿಕಲಾ ವೇಣುಗೋಪಾಲ್, ಉಪಾಸನಾ ಮಿತ್ತಲ್, ರಾಧಿಕಾ ಅಚ್ಚುತನ್ ಹಾಗೂ ರವಿ ಅವರ ವಿರುದ್ಧ ಅಕ್ಬರ್ ಅವರು ದೂರು ದಾಖಲು ಮಾಡಿದ್ದರು.ಫಿಲ್ಮ್  ಸ್ಟುಡಿಯೊ ಬಳಿ ಇರುವ ವಾಣಿಜ್ಯ ಮಳಿಗೆಯನ್ನು ಖರೀದಿ ಮಾಡುವ ಸಂಬಂಧ ಅರ್ಜಿದಾರರು 2008ರಲ್ಲಿ 3.75 ಲಕ್ಷ ರೂಪಾಯಿ ಪಾವತಿ ಮಾಡಿದ್ದರು. ಆದರೆ ಅರ್ಜಿದಾರರು ಬುಕ್ ಮಾಡಿದ್ದ ಮಳಿಗೆಯನ್ನು ಬೇರೆಯವರಿಗೆ ನೀಡಲಾಯಿತು.ಈ ಸಂಬಂಧ ತಮ್ಮ ಹಣ ವಾಪಸು ನೀಡುವಂತೆ ಅರ್ಜಿದಾರರು ಅಧಿಕಾರಿಗಳಿಗೆ ಕೋರಿಕೊಂಡರು. ಅಧಿಕಾರಿಗಳು ನೀಡಿದ ಚೆಕ್ ನಗದಾಗದೇ ವಾಪಸು ಬಂದ ಹಿನ್ನೆಲೆಯಲ್ಲಿ (ಚೆಕ್‌ಬೌನ್ಸ್) ಅವರು ವೇದಿಕೆ ಮೊರೆ ಹೋದರು.ಇವರೆಲ್ಲ ಕರ್ತವ್ಯಲೋಪ ಎಸಗಿದ್ದಾರೆ ಎಂದು ವೇದಿಕೆ ಅಭಿಪ್ರಾಯ ಪಟ್ಟಿತು. ಮಳಿಗೆ ಮಾರಾಟಕ್ಕೆ ಸಂಬಂಧಿಸಿದಂತೆ ಹಣದ ವ್ಯವಹಾರ ಹಾಗೂ ಇತರ ವಿಷಯಗಳ ಕುರಿತಾಗಿ ಇಬ್ಬರ ನಡುವೆ ನಡೆದಿರುವ ಒಪ್ಪಂದದ ಅನ್ವಯ 30 ದಿನಗಳ ಒಳಗೆ ಸಮಸ್ಯೆ ಬಗೆಹರಿಸುವಂತೆ ಪ್ರತಿವಾದಿಗಳಿಗೆ ಪೀಠ ನಿರ್ದೇಶಿಸಿದೆ.ಮಳಿಗೆ ಮಾರಾಟಕ್ಕೆ ಸಂಬಂಧಿಸಿದಂತೆ ಸರವಣ ಪ್ರಸಾದ್ ಅವರ ವಿರುದ್ಧ ದಾಖಲಾಗಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ರದ್ದತಿಗೆ ಹೈಕೋರ್ಟ್ ಇದೇ 16ರಂದು ನಿರಾಕರಿಸಿ, ತನಿಖೆ ಮುಂದುವರಿಯಲು ಅನುಮತಿ ನೀಡಿದ್ದು ಇಲ್ಲಿ ಉಲ್ಲೇಖಾರ್ಹ.ಚಿನ್ನ ಹಿಂದಿರುಗಿಸಲು ಆದೇಶ: ತುರ್ತು ಹಣಕ್ಕೋಸ್ಕರ ಒತ್ತೆ ಇಟ್ಟ ಚಿನ್ನವನ್ನು ವಾಪಸು ಪಡೆಯಲಾಗದೆ ಸಮಸ್ಯೆಗೆ ಸಿಲುಕಿದ್ದ ಮಹಿಳೆಯೊಬ್ಬರ ನೆರವಿಗೆ 3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಧಾವಿಸಿದೆ.ಬಿನ್ನಿಮಿಲ್ ಲೇಔಟ್ ನಿವಾಸಿ ಕೆ.ಜಯಲಕ್ಷ್ಮಿ  ಅವರು ಮುತ್ತೂಟ್ ಫೈನ್ಸಾನ್ಸ್‌ನ ಆರ್.ಟಿ.ನಗರ ಶಾಖೆಯ ವಿರುದ್ಧ ಸಲ್ಲಿಸಿದ್ದ ದೂರು ಇದಾಗಿದೆ. ಜಯಲಕ್ಷ್ಮಿ ಅವರು 2010ರ ಆಗಸ್ಟ್ ತಿಂಗಳಿನಲ್ಲಿ ಈ ಫೈನಾನ್ಸ್‌ನಲ್ಲಿ 75 ಗ್ರಾಂ ಚಿನ್ನ ಒತ್ತೆ ಇಟ್ಟು 1.17ಲಕ್ಷ ರೂಪಾಯಿ ಸಾಲ ಪಡೆದಿದ್ದರು. ವರ್ಷಕ್ಕೆ ಶೇ 26ರ ಬಡ್ಡಿದರದಂತೆ ಈ ಸಾಲ ಪಡೆಯಲಾಗಿತ್ತು.ಅವಧಿ ಮುಗಿದ ಮೇಲೆ ಅವರು ಬಡ್ಡಿ ಸಹಿತ ಸಾಲದ ಮೊತ್ತವನ್ನು ಹಿಂದಿರುಗಿಸಿ ಚಿನ್ನ ತೆಗೆದುಕೊಂಡು ಹೋಗಲು ಮಳಿಗೆಗೆ ಹೋಗಿದ್ದರು. ಆದರೆ ಯಾವ್ಯಾವುದೋ ಕಾರಣವೊಡ್ಡಿ ಅವರ ಚಿನ್ನವನ್ನು ಸಿಬ್ಬಂದಿ ವಾಪಸು ನೀಡಲಿಲ್ಲ. ಹಣ ನೀಡಿರುವ ಬಗ್ಗೆಯೂ ಜಯಲಕ್ಷ್ಮಿ ಅವರಿಗೆ ಯಾವುದೇ ದಾಖಲೆ ನೀಡಲಿಲ್ಲ.ಈ ಹಿನ್ನೆಲೆಯಲ್ಲಿ ಅವರು ವೇದಿಕೆ ಮೊರೆ ಹೋಗಿದ್ದರು. `ಮುತ್ತೂಟ್ ಫೈನಾನ್ಸ್~ ಕರ್ತವ್ಯಲೋಪ ಎಸಗಿದೆ ಎಂದು ವೇದಿಕೆ ಅಧ್ಯಕ್ಷ ಟಿ. ಚಂದ್ರಶೇಖರಯ್ಯ ನೇತೃತ್ವದ ಪೀಠ ಅಭಿಪ್ರಾಯ ಪಟ್ಟಿದೆ. ಇಲ್ಲಸಲ್ಲದ ಕಾರಣ ನೀಡದೆ ಕೂಡಲೆ ಚಿನ್ನವನ್ನು ಮಹಿಳೆಗೆ ನೀಡುವಂತೆ ವೇದಿಕೆ ಆದೇಶಿಸಿದೆ.25ಸಾವಿರ ಪರಿಹಾರ ನೀಡಲು ಆದೇಶಮಾಸಿಕ ಋತುಸ್ರಾವದ ಸಂದರ್ಭದಲ್ಲಿ ವಿಪರೀತ ತೊಂದರೆ ಅನುಭವಿಸುತ್ತಿದ್ದ ಮಹಿಳೆಯೊಬ್ಬರ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದೆ ಅವರು ಇನ್ನಷ್ಟು ತೊಂದರೆ ಪಡುವ ಹಾಗೆ ಮಾಡಿದ `ಮರಿಡಿಯನ್ ಮೆಡಿಕಲ್ ಸೆಂಟರ್~ಗೆ 25ಸಾವಿರ ರೂಪಾಯಿ ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.ಈ ದಂಡದ ಹಣವನ್ನು ಪರಿಹಾರದ ರೂಪದಲ್ಲಿ ಫ್ರೇಜರ್‌ಟೌನ್ ನಿವಾಸಿ ಪಿ.ಸುಮತಿ ಅವರಿಗೆ ನೀಡುವಂತೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮೊಹಸಿನ್ ಪಾಷಾ, ಸ್ತ್ರೀರೋಗ ತಜ್ಞ ಡಾ.ರಿಜ್ವಾಲ ಇಕ್ಬಾಲ್, ಸರ್ಜನ್ ಡಾ.ನೂರುಲ್ ಹಸನ್ ಅವರಿಗೆ ಆದೇಶಿಸಲಾಗಿದೆ.ಸುಮತಿ ಅವರು ಚಿಕಿತ್ಸೆಗೆಂದು 2010ರ ಆಗಸ್ಟ್ ತಿಂಗಳಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕೆಲವೊಂದು ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಆದರೆ ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರ ಅವರು ಇನ್ನಷ್ಟು ಸಮಸ್ಯೆಗಳಿಗೆ ಒಳಗಾಗಬೇಕಾಯಿತು.ಈ ಹಿನ್ನೆಲೆಯಲ್ಲಿ ಪುನಃ ಅವರು  ತಮಗೆ ಚಿಕಿತ್ಸೆ ನೀಡಿದ ವೈದ್ಯರನ್ನು ಸಂಪರ್ಕಿಸಿದರು. ಆದರೆ ವೈದ್ಯರು ಸುಮತಿ ಅವರ ಸಮಸ್ಯೆಗೆ ಸ್ಪಂದಿಸಲಿಲ್ಲ. ಸರಿಯಾಗಿ ಚಿಕಿತ್ಸೆ ನೀಡದೆ ಕರ್ತವ್ಯಲೋಪ ಎಸಗಿದರು.ಇದರಿಂದಾಗಿ ಸುಮತಿ ಅವರು ಬೇರೊಂದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಯಿತು. ಈ ಹಿನ್ನೆಲೆಯಲ್ಲಿ ಅವರು ಗ್ರಾಹಕರ ವೇದಿಕೆ ಮೊರೆ ಹೋದರು. ವೈದ್ಯರು ಕರ್ತವ್ಯಲೋಪ ಎಸಗಿದ್ದಾರೆ ಎಂದು ಅಭಿಪ್ರಾಯ ಪಟ್ಟ ವೇದಿಕೆ, ಪರಿಹಾರ ನೀಡುವಂತೆ ಆದೇಶಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry