ಮಳೀನ ಹೋತು ಏನ್ ಮಾಡೋಣ್ರಿ...

7

ಮಳೀನ ಹೋತು ಏನ್ ಮಾಡೋಣ್ರಿ...

Published:
Updated:
ಮಳೀನ ಹೋತು ಏನ್ ಮಾಡೋಣ್ರಿ...

ಯಾದಗಿರಿ: ಮಳೀನ ಹೋತು ಏನ್ ಮಾಡೋದ್ರಿ. ಹೊಟ್ಟಿ ಕೇಳಬೇಕಲ್ರಿ. ಹೊಲದಾಗಂತೂ ಕೆಲಸ ಇಲ್ಲದ್ಹಂಗ ಆತು. ಮತ್ತೆ ಎಲ್ಲಿ ಕೆಲಸ ಸಿಗತೈತಿ ಅಂತ ಹೊಂಟೇವ ನೋಡಿ....ನಗರದ ರೈಲು ನಿಲ್ದಾಣದಲ್ಲಿ ಕೆಲಸ ಅರಸಿ, ಕುಟುಂಬದ ಸದಸ್ಯರೊಂದಿಗೆ ಗುಳೆ ಹೊರಟಿದ್ದ ಅಜ್ಜಿ ಶಾರದಮ್ಮ ಹೇಳಿದ ಮಾತುಗಳಿವು.“ಮಳಿ ಆಗಿದ್ರ ಹೆಸರರೇ ಕೈಗೆ ಬರ‌್ತಿತ್ತು. ಅಷ್ಟಿಷ್ಟ ಖರ್ಚು ದಾಟತಿತ್ತು. ಈಗ ನೋಡಿದ್ರ, ಅದೂ ಬರೋಹಂಗ ಕಾಣುದುಲ್ಲ. ಮಳೀನ ನಂಬಿಕೊಂಡ ಕುಂತರ ಜೀವನ ನಡಿದುಲ್ಲ. ಹಿಂಗಾಗಿ ಮಕ್ಳು, ಮರಿ ಕಟಿಗೊಂಡ ಶಾರದ ಊರಿಗೆ ಹೊಂಟೇವ ನೋಡ್ರಿ” ಎನ್ನುವ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದರು.“ಜೂನ್ ಮುಗ್ಯಾಕ ಬಂತು. ಇನ್ನ ಮಳಿ ಬಂದಿಲ್ಲ. ಕುಂಟಿ, ಎಡಿ ಹೊಡದ ಇಟ್ಟೇವಿ. ಆದ್ರ ಏನೂ ಲಾಭ ಇಲ್ಲದ್ಹಂಗ ಆಗೈತಿ. ಹಿಂಗಾಗಿ ಗುಳೆ ಹೊಂಟೇವ ನೋಡ್ರಿ” ಎಂದು ಕುರಕುಂದಾ ಗ್ರಾಮದ ಬಸವರಾಜ ತಿಳಿಸಿದರು.ಮಳೆ ಕೈಕೊಟ್ಟಿರುವುದರಿಂದ ಜಿಲ್ಲೆಯಲ್ಲಿ ಕೃಷಿ ಕೂಲಿಕಾರರಿಗೆ ಕೆಲಸ ಇಲ್ಲದಂತಾಗಿದೆ. ಕುಟಂಬ ಸಮೇತರಾಗಿ ಮುಂಬೈ, ಬೆಂಗಳೂರು, ಪುಣೆ, ಅಹ್ಮದಾಬಾದ್, ಗೋವಾ, ಮುಂತಾದ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. 2-3 ದಿನಗಳಿಂದ ಇಲ್ಲಿಯ ರೈಲು ನಿಲ್ದಾಣದಲ್ಲಿ ಜನದಟ್ಟಣೆ ಹೆಚ್ಚಿದೆ. ಇವರಲ್ಲಿ ಕೃಷಿ ಕೂಲಿ ಕಾರ್ಮಿಕರೇ ಚ್ಚು ಇದ್ದಾರೆ.

ವಾಡಿಕೆಗಿಂತ ಕಡಿಮೆ ಮಳೆ: ಮೃಗಶಿರಾ ಮಳೆಯಿಂದ ಆರಂಭವಾಗಬೇಕಿದ್ದ ಮುಂಗಾರು ಮಳೆ, ಇದುವರೆಗೆ ಜಿಲ್ಲೆಯನ್ನು ಪ್ರವೇಶಿಸಿಲ್ಲ. ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದೆ. ರೈತರ ಮುಖದಲ್ಲಿ ಆತಂಕದ ಗೆರೆಗಳು ಕಾಣಿಸಿಕೊಂಡಿವೆ.

ಜಿಲ್ಲೆಯಲ್ಲಿ ಈ ಸಲ  ವಾಡಿಕೆಗಿಂತ ಸುಮಾರು 84.5 ಮಿ.ಮೀ. ಮಳೆ ಕಡಿಮೆ ದಾಖಲಾಗಿದೆ. ವಾಡಿಕೆಯಂತೆ ಜೂನ್‌ವರೆಗೆ 183.5 ಮಿ.ಮೀ. ಮಳೆಯಾಗಬೇಕು. ಆದರೆ ಈ ವರ್ಷ ಇದುವರೆಗೆ ಕೇವಲ 99 ಮಿ.ಮೀ. ಮಾತ್ರ ಮಳೆಯಾಗಿದೆ. ಶಹಾಪುರ ತಾಲ್ಲೂಕಿನಲ್ಲಿ 76, ಸುರಪುರ ತಾಲ್ಲೂಕಿನಲ್ಲಿ 83.5 ಹಾಗೂ ಯಾದಗಿರಿ ತಾಲ್ಲೂಕಿನಲ್ಲಿ 137.5 ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದರಿಂದ ರೈತರು ಬಿತ್ತನೆಗೆ ಮುಂದಾಗಿಲ್ಲ. ಕೊಳವೆ ಬಾವಿ ಆಧಾರಿತ ನೀರಾವರಿ ಸೌಲಭ್ಯ ಹೊಂದಿರುವ ರೈತರು ಮಾತ್ರ ಹೆಸರು ಬಿತ್ತನೆ ಮಾಡುತ್ತಿದ್ದಾರೆ. ಅದನ್ನು ಹೊರತುಪಡಿಸಿ ಯಾವುದೇ ಬೀಜಗಳ ಬಿತ್ತನೆ ಕಾರ್ಯ ಇದುವರೆಗೆ ಆರಂಭವಾಗಿಲ್ಲ.ಕೃಷಿ ಇಲಾಖೆಯ ಮೂಲಗಳ ಪ್ರಕಾರ ಮುಂಗಾರು ಹಂಗಾಮಿನಲ್ಲಿ 2.68 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದೆ. ಜೂನ್ 17 ರವರೆಗೆ ಕೇವಲ 1975 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ.

ಬತ್ತದ ಬೆಲೆ ಕುಸಿದಿರುವುದರಿಂದ ಕಂಗಾಲಾಗಿರುವ ರೈತರು ಇದೀಗ ಸಾಲ ಮಾಡಿ ಬೀಜ ಗೊಬ್ಬರ ಖರೀದಿಸಿದ್ದು, ಆಗಸದತ್ತ ಮುಖ ಮಾಡಿ ಕುಳಿತುಕೊಂಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry