ಬುಧವಾರ, ಮೇ 18, 2022
25 °C

ಮಳೆಗಾಗಿ ಮಣ್ಣಿನ ಮಕ್ಕಳಾಟ

ಪ್ರಜಾವಾಣಿ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ”ಗುರ್ಜಿ ಗುರ್ಜಿ ಎಲ್ಯ್‌ಡಿ ಬಂದೆ ಹಳ್ಳಾಕೊಳ್ಳಾ ತಿರಗ್ಯಾಡಿ ಬಂದೆ. ಕಡಪಟ್ಟಿ ಅಡವ್ಯಾಗ ಬಡಿದಾಡಿ ಬಂದೆ, ಬಾ ಮಳೆಯೇ ಮಳೆಯೇ, ಕಾಡ ಮಳೆಯೋ... ಕಪ್ಪತ್ತ ಮಳೆಯೋ... ಸುರಿಯೋ ಸುರಿಯೋ ಸುರಿ ಮಳೆಯೋ....”ಇದು ತಾಲ್ಲೂಕಿನಾದ್ಯಂತ ಮಳೆರಾಯನ ದರ್ಶನಕ್ಕಾಗಿ ಮಣ್ಣಿನ ಮಕ್ಕಳು ಪ್ರಾರ್ಥಿಸುವ ಪರಿ.

ಈಗಾಗಲೇ ಮುಂಗಾರು ಹಂಗಾಮಿ ನ ಬಿತ್ತನೆಗೆ ಸಮಯ ಮೀರುತ್ತಿದ್ದರೂ ಮಳೆರಾಯನ ದರ್ಶನವಾಗುತ್ತಿಲ್ಲ.ಬಿತ್ತನೆ ತತಿ (ಅವಧಿ) ಮುಗಿಯುತ್ತದೆ ಎಂಬ ಆತಂಕದಲ್ಲಿ ಕೆಲ ರೈತರು ಮುಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆಯಾದ ಹೆಸರನ್ನು ಒಣ ಮಣ್ಣಿನಲ್ಲಿ ಬಿತ್ತಿ ವರುಣನ ಕೃಪೆಗೆ ಕಾದು ಕುಳಿತಿದ್ದಾರೆ. ಈ ಹಿನ್ನೆಲೆಯಲ್ಲಿ ಮಣ್ಣಿನ ಮಕ್ಕಳು ಮಳೆಗಾಗಿ ವಿವಿಧ ಧಾರ್ಮಿಕ ಆಚರಣೆಗಳಿಂದ ಪ್ರಾರ್ಥಿಸುತ್ತಿದ್ದಾರೆ.ವಿವಿಧ ಪೂಜೆ, ಪುನಸ್ಕಾರ, ಆಟ: ಉತ್ತರ ಕರ್ನಾಟಕದಲ್ಲಿ ಮಳೆ, ಕೃಷಿ ಆಧಾರಿತ ಆಚರಣೆಗಳು ಪ್ರತಿ 50 ಕಿ.ಮೀ ಅಂತರದಲ್ಲಿ ವಿವಿಧ ರೀತಿಯಲ್ಲಿ ನಡೆಯುತ್ತವೆ. ಮಳೆಗೆ ಪ್ರಾರ್ಥಿಸುವ ಪರಿ ಈ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಒಂದೇ ತೆರನಾಗಿರುತ್ತದೆ. ಅದರಲ್ಲಿ ಮುಖ್ಯವಾಗಿ ಗುರ್ಜಿ ಪೂಜೆ, ಗಂಗವ್ವನ ಪೂಜೆ, ಕತ್ತೆಗಳ ಮದುವೆ, ಕಪ್ಪೆಗಳ ಮದುವೆ, ಕಿಳ್ಳಿಕ್ಯಾತರ ಆಟ, ತಿಳ್ಳಿಯಾಟದಂಥ ಪೂಜೆ, ಪುನಸ್ಕಾರ, ಆಟಗಳಿಂದ ಮಳೆರಾಯನ ಕೃಪೆಗಾಗಿ ಪ್ರಾರ್ಥಿಸುವುದು ಸಂಪ್ರದಾಯ.ಗುರ್ಜಿ ಪೂಜೆ: ಗ್ರಾಮೀಣ ಪ್ರದೇಶಗಳಲ್ಲಿ ಶತಮಾನಗಳಿಂದಲ್ಲೂ ಆಚರಣೆಯಲ್ಲಿರುವ ಈ ಪದ್ದತಿ ವಿಶಿಷ್ಟವಾಗಿದೆ. ವ್ಯಕ್ತಿ ಅಥವಾ ಬಾಲಕನ ತಲೆ ಮೇಲೆ ತೆವಿ (ರೊಟ್ಟಿ ಬೇಯಿಸುವ ಹಂಚು) ಇಟ್ಟು ಅದರ ಮೇಲೆ ಆಕಳ ಸಗಣಿಯಿಂದ ತಯಾರಿಸಿದ ಗುರ್ಜಿ ಹೊರಿಸಲಾಗುತ್ತದೆ. ಅನಂತರ ಗುರ್ಜಿ ಹೊತ್ತವನ ಹಿಂದೆ ಹಿಂಬಾಲಕರು ಗುರ್ಜಿ ಗುರ್ಜಿ... ಎಂಬ ಹಾಡು ಹೇಳುತ್ತಾ ಗ್ರಾಮದ ಪ್ರತಿಯೊಬ್ಬರ ಮನೆ ಮುಂದೆ ಹೋಗಿ ನಿಲ್ಲಬೇಕು. ಆಗ ಮನೆಯವರು ಯಾರಾದರೂ ಬಂದು ಗುರ್ಜಿ ಹೊತ್ತವನ ತಲೆ ಮೇಲೆ ನೀರು ಸುರಿದು ಗುರ್ಜಿ ಪೂಜೆ ಮಾಡಿ, ಮನೆಯಲ್ಲಿದ್ದ ಜೋಳ, ರೊಟ್ಟಿ-ಪಲ್ಲೆ, ಪುಡಿಗಾಸು, ಮಾಸಿದ ಭಟ್ಟೆಗಳನ್ನು ನೀಡುತ್ತಾರೆ.ಹೀಗೆ ಸಂಗ್ರಹವಾದ ಧಾನ್ಯ, ಹಣವನ್ನು 5ನೇ ದಿನ ಅನ್ನ ಸಂತರ್ಪಣೆ ನಡೆಸಿ ಮಳೆರಾಯನಿಗೆ ಪೂಜೆ ಸಲ್ಲಿಸುವ ಪದ್ದತಿಯೇ ಗುರ್ಜಿ ಪೂಜೆ.ನೇಗಿಲ ಯೋಗಿಯ ನೋವಿನಾಟ: ಮಳೆ ಬಾರದಿದ್ದಾಗ ಇಂಥ ಆರಣೆಗಳನ್ನು ಮಾಡುವುದರ ಹಿಂದೆ ನೇಗಿಲ ಯೋಗಿಯ ನೋವಿರುತ್ತದೆ. ಮಳೆಯಿಲ್ಲದೆ ತುತ್ತಿನ ಚೀಲ ತುಂಬಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಆತಂ–ಕದಲ್ಲಿ ರೈತ ಸಮೂಹ ವರುಣನನ್ನು ಒಲಿಸಿಕೊ–ಳ್ಳಲು ಮನರಂಜನೆ ಮೂಲಕ ಪ್ರಾರ್ಥಿ–ಸಲಾಗುತ್ತದೆ ಎನ್ನುತ್ತಾರೆ ಹಿರಿಕರು. ರೋಣ ತಾಲ್ಲೂಕಿನ ರೈತರು ಮಳೆ ಆಶ್ರಿತ ಕೃಷಿಯನ್ನೇ ಆಶ್ರಯಿಸಿಕೊಂಡಿದ್ದಾರೆ.ಆದರೆ, 2011-12ನೇ ಸಾಲಿನ ಕೃಷಿ ವರ್ಷ ಆರಂಭದಿಂದ ಈ ವರೆಗೆ ಮಳೆರಾಯನ ಮುನಿಸಿನಿಂದಾಗಿ  ಜನತೆ ಭೀಕರ ಬರ ಎದುರಿಸಬೇಕಾಯಿತು. ಆದರೆ, ಕಳೆದ ವರ್ಷದ ಬರದ ಸಂಕಷ್ಟವನ್ನು ನೀಗಿಸಲು ಮಳೆರಾಯ ಸಕಾಲಕ್ಕೆ ಧರೆಗಿಳಿಯುತ್ತಾನೆ ಎಂಬ ರೈತ ಸಮೂಹದ ಲೆಕ್ಕಾಚಾರ ಕೆಳಗಾಗಿದೆ.2012-13 ನೇ ಸಾಲಿನ ಕೃಷಿ ವರ್ಷ ಆರಂಭವಾಗಿ ತಿಂಗಳು ಗತಿಸಿದರೂ ಮಳೆಯಾಗುವ ಮುನ್ಸೂಚನೆಗಳು ತಾಲ್ಲೂಕಿನಲ್ಲಿ ಕಾಣಸಿಗುತ್ತಿಲ್ಲ. ಪರಿಣಾಮ ಪ್ರಸಕ್ತ ವರ್ಷದ ಮುಂಗಾರು ಬಿತ್ತನೆ ಅವಧಿಯೂ ಮುಗಿ ದಿದ್ದು, ಹಿಂಗಾರಿಗಾದರೂ ವರುಣ ಮುನಿಸಿನಿಂದ ಹೊರ ಬಂದು ರೈತರ ಬಾಳು ಬೆಳಗಲಿ ಎಂಬ ಮಹದಾಸೆಯಿಂದ ಜನತೆ ವಿಶೇಷ ಪೂಜೆ, ಪುನಸ್ಕಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.ಅನ್ನದಾತನ ಪ್ರಾರ್ಥನೆ ಫಲಿಸಲಿ: ಒಕ್ಕಲಿಗ ಒಕ್ಕಿದರೆ ಜಗಕ್ಕೆಲ್ಲ ಅನ್ನ. ಇಲ್ಲದಿದ್ದರೆ ಎಲ್ಲರೂ ಬಿಕ್ಕುವ ಸ್ಥಿತಿ ಬರಲಿದೆ. ಎನ್ನುವ ಕಾರ–ಣಕ್ಕಾಗಿ ತಾಲ್ಲೂಕಿನ ಇಟಗಿ, ಸೂಡಿ, ರಾಜೂರ, ಮುಶಿಗೇರಿ, ಲಕ್ಕಲಕಟ್ಟಿ, ಗೋಗೇರಿ, ಕುಂಟೋಜಿ, ಕೊಡಗಾನೂರ, ರಾಮಾಪೂರ, ಹೊಸ ರಾಮಾಪೂರ, ನೆಲ್ಲೂರ, ಪ್ಯಾಟಿ, ಕಾಲಕಾಲೇಶ್ವರ, ಜಿಗೇರಿ, ಮ್ಯಾಕಲ್‌ಝರಿ, ಉಣಚಗೇರಿ, ಗಜೇಂದ್ರಗಡ ಮುಂತಾದ ಗ್ರಾಮಗಳ ರೈತರು ಮಳೆರಾಯನ ಆಹ್ವಾನಕ್ಕೆ ವಿಶೇಷ ಆಚರಣೆ, ಪೂಜೆ, ಪ್ರಾರ್ಥನೆ, ಆಟಗಳ ಮೂಲಕ ಮೊರೆಯಿಡುತ್ತಿದ್ದಾರೆ. ಆದರೆ, ವರುಣ ಮಾತ್ರ ಮುನಿಸಿನಿಂದ ಹೊರ ಬಂದಂತೆ ಕಾಣುತ್ತಿಲ್ಲ. ಇನ್ನಾದರೂ ವರುಣ ಮುನಿಸು ಬಿಟ್ಟು ರೈತರ ಬದುಕು ಹಸನಗೊಳಿಸಲಿ ಎಂದು ಹಾರೈಸೋಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.