ಮಳೆಗಾಗಿ ಮೇಘ ಮಲ್ಹಾರ ಗಾಯನ

ಶನಿವಾರ, ಜೂಲೈ 20, 2019
28 °C

ಮಳೆಗಾಗಿ ಮೇಘ ಮಲ್ಹಾರ ಗಾಯನ

Published:
Updated:

ಮಳೆ ಬರಲಿ ಎಂದು ಶಾಸ್ತ್ರೀಯ ಸಂಗೀತದ ಮೇಘ ಮಲ್ಹಾರ ರಾಗವನ್ನು ಹಾಡಿ, ರೈತರಿಗೆ ಕಾರ್ಮಿಕರಿಗೆ ಸಂಗೀತದ ರಸದೌತಣ ಬಡಿಸಿದ ಸಂಗೀತ ವಿದ್ವಾನ್ ರವೀಂದ್ರ ಸೋರಗಾಂವಿ, ಶಾಸ್ತ್ರೀಯ ಸಂಗೀತದ ವಿವಿಧ ಆಲಾಪಗಳನ್ನು ಹಾಡಿ ಮೈಮರೆಸಿದರು.ಶುಕ್ರವಾರ ತಾಲ್ಲೂಕಿನ ಉತ್ತೂರದ ಐ.ಸಿ.ಪಿ.ಎಲ್ ಸಕ್ಕರೆ ಕಾರ್ಖಾನೆಯವರು ಮಳೆಗಾಗಿ ಹಮ್ಮಿಕೊಂಡ ಸಂಗೀತ ಕಾರ್ಯಕ್ರಮ ಸಂಗೀತದ ಗಂಧ ಗಾಳಿ ಇಲ್ಲದವರನ್ನೂ ತಲೆದೂಗುವಂತೆ ಮಾಡಿತು. ಮಲ್ಹಾರ, ಕೋಮಲ, ಕೋಮಲ ಗಂಧಾರ, ಗಂಧಾರ, ಮೇಘ ರಾಗಗಳಲ್ಲಿನ ಹಲವು ಪ್ರಕಾರಗಳನ್ನು ಹಾಡಿ, ಸಂಗೀತದ ಏರಿಳಿತಗಳನ್ನು ಪರಿಚಯಿಸಿದರು.ಈ ಬಾರಿ ಮಳೆ ಕೈಕೊಟ್ಟು ರೈತ ಕಂಗಾಲಾಗಿದ್ದಾನೆ. ಮಳೆಗಾಗಿ ಈ ಭಾಗದಲ್ಲಿ ಏನೆಲ್ಲ ಕಸರತ್ತು ಮಾಡಲಾಗು ತ್ತದೆ. ಕೆಲವರು ಕಪ್ಪೆ ಮದುವೆ ಮಾಡಿದರೆ, ಇನ್ನು ಕೆಲವರು ಕತ್ತೆ ಮದುವೆ ಮಾಡುವುದು, ಗುರ್ಕಿ ಆಡುವುದು ಸೇರಿದಂತೆ ಎಲ್ಲ ಪ್ರಯತ್ನಗಳನ್ನು ರೈತರು ಮಾಡುತ್ತಿದ್ದಾರೆ. ಆದರೆ ಮಳೆಗಾಗಿ ಸಂಗೀತ ಸೇವೆ ಮಾಡಿ, ಮಧ್ಯರಾತ್ರಿಯಲ್ಲಿ ಮೇಘ ಮಲ್ಹಾರ ರಾಗ ಹಾಡಿ, ರೈತರ ಬಗ್ಗೆ ತನ್ನ ಕಳಕಳಿಯನ್ನು ಇಲ್ಲಿನ ಐ.ಸಿ. ಪಿ.ಎಲ್ ಸಕ್ಕರೆ ಕಾರ್ಖಾನೆಯವರು ಹಮ್ಮಿಕೊಂಡಿದ್ದು ವಿಶೇಷವಾಗಿತ್ತು.ಸಂಗೀತ ಮನುಷ್ಯನ ವ್ಯಕ್ತಿತ್ವದ ಮೇಲೆ, ಪ್ರಕೃತಿಯ ಮೇಲೆ, ಬದುಕಿನ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ. ಮೇಘ ಮಲ್ಹಾರ ರಾಗವನ್ನು ಹಾಡಿ ಮಳೆ ಬರೆಸಿದ ಸಂಗೀತ ವಿದ್ವಾನರು ಭಾರತದಲ್ಲಿ ಆಗಿ ಹೋಗಿದ್ದಾರೆ. ಸ್ವರಗಳು ಹೋದದ್ದರಿಂದ ಮಳೆಗಳು ಹೋಗಿವೆ ಎಂದು ಸಾಹಿತಿ ಪ್ರೊ. ಸಿದ್ಧರಾಜ ಪೂಜಾರಿ ತಿಳಿಸಿದರು.ಸಂಗೀತಕ್ಕೆ ದೊಡ್ಡ ಶಕ್ತಿ ಇದೆ. ಮಲ್ಹಾರ ರಾಗವನ್ನು ಹಾಡಿ ತಾನಸೇನವರು ಮಳೆ ಬರಿಸಿದ್ದನ್ನು ಕಂಡಿದ್ದೇವೆ. ಅದಕ್ಕೆ ಅದನ್ನು ಮೇಘ ಮಲ್ಹಾರ ಎಂದು ಪ್ರಸಿದ್ಧ ವಾಯಿತು. ಕೋಮಲ ಗಂಧಾರ, ಶುದ್ಧಗಂಧಾರ, ಹೀಗೆ ಸಂಗೀತದ ಪ್ರತಿಯೊಂದು ಪ್ರಾಕಾರಗಳು ಒಂದೊಂದು ಫಲವನ್ನು ಕೊಡುತ್ತವೆ. ಇಂದು ಸಂಗೀತಕ್ಕೆ ಅತಿ ಹೆಚ್ಚಿನ ಮಹತ್ವ ಸಿಗುತ್ತದೆ ಎಂದು ಸಂಗೀತದ ಬಗ್ಗೆ ತಿಳಿಸಿ ಕೊಟ್ಟರು. ಖ್ಯಾತ ಸಂಗೀತ ವಿದೂಷಕ ರವೀಂದ್ರ ಸೋರಗಾಂವಿ ಶಾಸ್ತ್ರೀಯ ಸಂಗೀತ ಹಾಡಿ ಪ್ರೇಕ್ಷಕರ ಒತ್ತಾಯದ ಮೇರೆಗೆ ದಾಸರ ಪದಗಳು, ಶಿಶುನಾಳ ಷರೀಫರ ಪದಗಳನ್ನು ಹಾಡಿದರು. ತಬಲಾ ವಾದಕ ನಾರಾಯಣ ಗಣಾಚಾರಿಯವರ ತಬಲಾ ವಾದನ, ನಾರಾಯಣ ಹಿರೇಕೊಳಚಿ ಅವರ ವೈಲಿನ್ ವಾದನ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದವು. ಇನ್ನೊಬ್ಬ ಗಾಯಕ  ದಿಗ್ವಿಜಯ ಹೊಂಗಲ್‌ರ ಶಿವನ ಹಾಡುಗಳು ಪ್ರೇಕ್ಷಕರ ತಲೆದೂಗುವಂತೆ ಮಾಡಿದವು. ವಸಂತ ರಾವ ಕುಲಕರ್ಣಿ ಅಭಂಗಗಳನ್ನು ಹಾಡಿದರು.ಕಾರ್ಖಾನೆಯ ಅಧಿಕಾರಿಗಳಾದ ಬಿ.ಎಂ.ಮೆಟ ಗುಡ್ಡ, ರಮೇಶ ಹಂಪಿಹೊಳಿ, ವೆಂಕನಗೌಡ ಪಾಟೀಲ,  ಜಿ.ಎನ್. ಜೋಶಿ, ಜಿ.ಎ.ಪ್ರಕಾಶವರು ಉಪಸ್ಥಿತರಿದ್ದು, ಸಂಗೀತಗಾರರನ್ನು ಸನ್ಮಾನಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry