ಬುಧವಾರ, ಮೇ 18, 2022
24 °C

ಮಳೆಗಾಗಿ 101ಕುಂಭಾಭಿಷೇಕ, ವಿಶೇಷ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ಜೂನ್ ತಿಂಗಳು ಕಳೆಯುತ್ತ ಬಂದಿದ್ದರೂ, ಮಳೆಯ ಲಕ್ಷಣಗಳು ಗೋಚರಿಸದಿರುವ ಹಿನ್ನೆಲೆಯಲ್ಲಿ ಪಟ್ಟಣದ ಮೇಗಳಪೇಟೆಯ ಬಸವೇಶ್ವರ ಸೇವಾಸಮಿತಿಯ ಪದಾಧಿಕಾರಿಗಳು ಸೋಮವಾರ 101ಕುಂಭಾಭಿಷೇಕ ಹಾಗೂ ವಿಶೇಷ ಪೂಜೆ ನಡೆಸಿ ಮಳೆಗಾಗಿ ಪ್ರಾರ್ಥಿಸಿದರು.ಮೇಗಳಪೇಟೆಯ ಬಸವೇಶ್ವರ ದೇವಸ್ಥಾನದಿಂದ ಸಮಾಳ, ಶಹನಾಯ್ ವಾದನ ಸೇರಿದಂತೆ ವಿವಿಧ ವಾದ್ಯ ತಂಡಗಳ ಮೂಲಕ ಮುತ್ತೈದೆಯರಿಂದ 101ಕುಂಭಗಳೊಂದಿಗೆ ಭರ್ಜರಿ ಮೆರವಣಿಗೆ ಮುಖಾಂತರ ಕಲ್ಲುಬಾವಿಗೆ ತೆರಳಿದರು. ಬಳಿಕ ಕುಂಭಾಬಿಷೇಕದೊಂದಿಗೆ ಮಹಿಳೆಯರು ವಿಶೇಷ ಗಂಗೆ ಪೂಜೆ ಸಲ್ಲಿಸಿದರು. ನಂತರ, ಮೇಗಳಪೇಟೆಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ, ಪುನಃ ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿತು. ಬಳಿಕ ಬಸವೇಶ್ವರ ಸನ್ನಧಿಯಲ್ಲಿ ವಿಶೇಷ ಹೋಮ-ಹವನ ಹಾಗೂ ಪೂಜಾವಿಧಿಗಳನ್ನು ನೆರವೇರಿಸಿ ವರುಣನಿಗಾಗಿ ಪ್ರಾರ್ಥಿಸಿದರು. ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.ಸಮಿತಿಯ ಅಧ್ಯಕ್ಷ ಎಚ್.ಎಂ. ಶಿವಾನಂದಯ್ಯ, ಪುರಸಭಾ ಮಾಜಿ ಅಧ್ಯಕ್ಷ ಎಂ. ರಾಜಶೇಖರ್, ಮಾಜಿ ಉಪಾಧ್ಯಕ್ಷ ಕೌಟಿ ವೀರಣ್ಣ, ಮುಖಂಡರಾದ ಟಿ.ಎಚ್.ಎಂ. ಮಲ್ಲಿಕಾರ್ಜುನ, ಕೌಟಿ ಶಂಕರಪ್ಪ, ಸಾವಳಗಿ ವಿಶ್ವನಾಥ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.ವಿವಿಧೆಡೆ ಜಡಿಮಳೆ


ಹರಪನಹಳ್ಳಿ: ಮುಂಗಾರು ಮಳೆಯ ಭರವಸೆಯನ್ನೇ ಕಳೆದುಕೊಂಡು ಚಿಂತೆಯ ಮಡಿಲಲ್ಲಿ ಕೊರಗುತ್ತಿದ್ದ ಅನ್ನದಾತ, ಭಾನುವಾರ ಸಂಜೆಯಿಂದ ಜಿಟಿಜಿಟಿ ಹನಿಯೊಂದಿಗೆ ಆರಂಭವಾದ ಮೃಗಶಿರ ಮಳೆಯಿಂದ ಚೇತರಿಸಿಕೊಂಡಿದ್ದಾನೆ.ಮೃಗಶಿರ ಮಳೆ ಪ್ರವೇಶಿಸಿದರೆ ಸಾಕು, ಹಿಂದೆಲ್ಲಾ ಓಣಿಯ ತುಂಬೆಲ್ಲಾ ಜನ ಹಾಗೂ ದನ-ಕರುಗಳು ಓಡಾಡದಷ್ಟು ಕೆಸರು ತುಂಬಿಕೊಂಡು ಕಚಾಪಿಚಿ ಸದ್ದುಕೇಳಿ ಬರುತ್ತಿತ್ತು ಎಂಬದು ಸಾಮಾನ್ಯಸಂಗತಿಯಾಗಿತ್ತು. ಆದರೆ, ಇತ್ತೀಚಿನ ದಿನಮಾನಗಳಲ್ಲಿ ಈ ವಿದ್ಯಾಮಾನಕ್ಕೆ ತೆರೆಬಿದ್ದಿದೆ. ಕೊನೆಗೂ ಗ್ರಾಮೀಣ ನಂಬಿಕೆಯಂತೆ, ಮೃಗಶಿರ ಕೊನೆಯ ಪಾದದ ಕೊನೆ ಗಳಿಗೆಯಲ್ಲಿ ಜಿಟಿಜಿಟಿ ಮಳೆ ಆರಂಭವಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಲು ಪ್ರೇರಣೆ ನೀಡಿದೆ.ಹರಪನಹಳ್ಳಿಯಲ್ಲಿ 8.0ಮಿ.ಮೀ., ಹಿರೇಮೇಗಳಗೇರಿಯಲ್ಲಿ 4.0ಮಿ.ಮೀ., ಉಚ್ಚಂಗಿದುರ್ಗದಲ್ಲಿ 2.2ಮಿ.ಮೀ. ಹಾಗೂ ಅರಸೀಕೆರೆ ಮಳೆಮಾಪನ ಕೇಂದ್ರದಲ್ಲಿ 3.2ಮಿ.ಮೀ.ನಷ್ಟು ಮಳೆಯಾಗಿದ್ದು, ಒಟ್ಟಾರೆ 17.4ಮಿ.ಮೀ. ಮಳೆ ಸುರಿದ ದಾಖಲೆಯಾಗಿದೆ. ಉಳಿದಂತೆ ಚಿಗಟೇರಿ, ತೆಲಿಗಿ ಹಾಗೂ ಹಲುವಾಗಲು ಮಳೆಮಾಪನ ಕೇಂದ್ರದಲ್ಲಿ ಮಳೆಯಾದ ವರದಿಯಾಗಿಲ್ಲ.ಮಳೆ ಸಿಂಚನ: ರೈತರ ಹರ್ಷ


ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿ ತುಂತುರು ಮಳೆ ಸೋಮವಾರ ಆರಂಭವಾಗಿದ್ದು ಮೃಗಶಿರ ಮೂರನೇ ಪಾದದಲ್ಲಿ ಆರಂಭವಾದ ಮಳೆ ರೈತಸಮುದಾಯದ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಮೆಕ್ಕೆಜೋಳ ಬಿತ್ತನೆ ಮಾಡಲು ಸಕಾಲವಾಗಿದೆ. ಮಳೆ ಮಾತ್ರ ಬಂದಿರಲಿಲ್ಲ. ಇನ್ನೂ ಮೂರ‌್ನಾಲ್ಕು ದಿನ ಮಳೆ ಬಂದರೆ ಹೊಲ ಸಿದ್ಧಮಾಡಿಕೊಂಡು ಬಿತ್ತನೆ ಮಾಡಲು ಸಾಧ್ಯ ಎಂದು ಕೊಪ್ಪ, ಕೊಮಾರನಹಳ್ಳಿ ಖುಷ್ಕಿ ಬೆಳೆಗಾರರು ತಿಳಿಸಿದರು.ಭದ್ರಾನಾಲೆಯಲ್ಲಿ ನೀರು ನಿಲುಗಡೆ ಮಾಡಿ 18 ದಿನಗಳಾಗಿತ್ತು. ತೆಂಗು ಹಾಗೂ ಅಡಿಕೆ ತೋಟಗಳಿಗೆ ನೀರಿನ ಅವಶ್ಯಕತೆ ಇತ್ತು, ಒಂದು ವಾರದಿಂದ ವಿದ್ಯುತ್ ಕೈಕೊಡುತ್ತಿದ್ದು ಸರಿಯಾಗಿ ನೀರು ಹಾಯಿಸಲು ಆಗಿರಲಿಲ್ಲ, ತುಂತುರುಮಳೆ ಬರುತ್ತಿರುವುದು ಅನುಕೂಲಕರ ಎಂಬ ಮಾಹಿತಿ ವ್ಯಕ್ತವಾಯಿತು.ಭದ್ರಾನಾಲಾ ಅಚ್ಚುಕಟ್ಟಿನ ಕೊನೆಭಾಗದಲ್ಲಿ ಬತ್ತ ಕಟಾವಿಗೆ ಬಂದಿದ್ದು, ಒಕ್ಕಲಿಗೆ ಸ್ವಲ್ಪ ಹಿನ್ನಡೆಯಾಗಿದೆ ಎಂದು ನಂದೀಶ್ವರ ಕ್ಯಾಂಪ್‌ನ ಬಸವರಾಜ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.