ಮಂಗಳವಾರ, ಮೇ 24, 2022
30 °C

ಮಳೆಗಾಲಕ್ಕೆ ಮುನ್ನ ದುರಸ್ತಿಗೊಳಿಸಲು ರೈತರ ಒತ್ತಾಯ.ಕಳಪೆ ಚೆಕ್‌ಡ್ಯಾಂ ಗೋಳು; ಹಸನಾಗದ ಬಾಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: ತಾಲ್ಲೂಕಿನಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಸರ್ಕಾರಿ ಗೋಮಾಳ ಹಾಗೂ ರೈತರ ಜಮೀನುಗಳಲ್ಲಿ ನಿರ್ಮಾಣ ಮಾಡಲಾಗಿರುವ ಕಾಮಗಾರಿಗಳು ಕಳಪೆ ಎಂಬುದಕ್ಕೆ ಕಳೆದ ಮಳೆಗಾಲದಲ್ಲಿ ಒಡೆದ ಚೆಕ್‌ಡ್ಯಾಂಗಳು ಸಾಕ್ಷಿಯಾಗಿವೆ.ಕೆಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವಾರು ಯೋಜನೆಗಳು ಅಂತರ್ಜಲ ಹೆಚ್ಚಳಕ್ಕೆ ನೂರಾರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಚೆಕ್‌ಡ್ಯಾಂಗಳು ಕಳಪೆಯಿಂದ ಕೂಡಿ, ಸರ್ಕಾರದ ಯೋಜನೆಗಳ ಆಶಯಕ್ಕೆ ತೀಲಾಂಜಲಿ ಇಡುವ ಕಾರ್ಯ ನಡೆಯುತ್ತಿರುವುದನ್ನು ಕಾಣಬಹುದಾಗಿದೆ.ಯೋಜನೆಗಳನ್ನು ಅನುಷ್ಠಾನ ಮಾಡುತ್ತಿರುವ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಹಣ ಮಾಡುವ ಘನ ಉದ್ದೇಶದಿಂದ ಕೈಗೊಂಡ ಕಾಮಗಾರಿಗಳನ್ನು ಕಳಪೆ ಮಾಡಿ ಬಿಲ್ ಮಾಡಿಕೊಳ್ಳುವ ಗುತ್ತಿಗೆದಾರರು, ಮಾಡಿದ ಕಾಮಗಾರಿಯ ಗುಣಮಟ್ಟ ಪರಿಶೀಲಿಸದೇ ಬಿಲ್‌ಗೆ ಸಹಿ ಹಾಕುವ ಅಧಿಕಾರಿಗಳು ಸರ್ಕಾರದ ಯೋಜನೆಗಳ ದುರುಪಯೋಗ ಆಗುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.ಚಳ್ಳಕೆರೆ ಸಮೀಪದ ಕುರುಡಿಹಳ್ಳಿ ಲಂಬಾಣಿ ತಾಂಡಾದಿಂದ ಗ್ರಾಮದ ರಸ್ತೆ ಬದಿಯಿಂದ ಒಂದಿಷ್ಟು ದೂರ ಸಾಗಿದರೆ ಜಿಲ್ಲಾ ಪಂಚಾಯ್ತಿಯವರು ಕಳೆದ ಮೂರು ವರ್ಷಗಳ ಹಿಂದೆ ನಿರ್ಮಿಸಿರುವ ಚೆಕ್‌ಡ್ಯಾಂನ ತಡೆಗೋಡೆ ಕಿತ್ತು ಹೋಗಿರುವುದನ್ನು ಕಾಣಬಹುದಾಗಿದೆ. ಇದರಿಂದಾಗಿ ಸುತ್ತಲಿನ ರೈತರ ಜಮೀನುಗಳಿಗೆ ನಯಾಪೈಸೆಯ ಉಪಯೋಗವಾಗಿಲ್ಲ ಎಂಬುದು ರೈತರ ಅಳಲಾಗಿದೆ. ಅಚ್ಚರಿ ಎಂದರೆ ‘ಜಲ್’ ಚಂಡಮಾರುತದಿಂದ ಸಾಕಷ್ಟು ಮಳೆಯಾಗಿದ್ದರೂ ಕುರುಡಿಹಳ್ಳಿ ಲಂಬಾಣಿ ತಾಂಡದ ಸಮೀಪ ನಿರ್ಮಿಸಲಾಗಿರುವ ಚೆಕ್‌ಡ್ಯಾಂನಲ್ಲಿ ಒಂದು ಹನಿನೀರು ಸಹ ಸಂಗ್ರಹವಾಗದೇ ಭೂಮಿಗೆ ಬಿದ್ದ ನೀರು ತಡೆಗೋಡೆ ಕಿತ್ತು ಹೋದ ಪರಿಣಾಮ ಬರಡಾಗಿದೆ.ಸುಮಾರು ಐದಾರು ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಿರುವ ಇಲ್ಲಿನ ಚೆಕ್‌ಡ್ಯಾಂನ ತಡೆಗೋಡೆ ಈಗಾಗಲೇ ಒಂದು ಬಾರಿ ಕಿತ್ತು ಹೋಗಿತ್ತು. ನಂತರ ದುರಸ್ತಿ ಮಾಡಲಾಯಿತಾದರೂ, ಮಳೆಗೆ ಪುನಃ ಒಡೆದು ದುರಸ್ತಿಯೂ ಕಳಪೆ ಎಂಬುದಕ್ಕೆ ಸಾಕ್ಷಿಯಾಯಿತು.ಒಂದು ಸಾರಿ ಈ ಚೆಕ್ ಡ್ಯಾಂನಲ್ಲಿ ನೀರು ಸಂಗ್ರಹವಾದರೆ, ಅಂತರ್ಜಲ ಹೆಚ್ಚಳದಿಂದ ಸುತ್ತಲಿನ ಹತ್ತಾರು ನೀರಾವರಿ ಪಂಪ್‌ಸೆಟ್‌ಗಳಿಗೆ ಎರಡು ವರ್ಷ ಯಾವುದೇ ಬರ ಇಲ್ಲದಂತೆ ನೀರು ಪೂರೈಕೆ ಆಗಲಿದೆ. ಆದರೆ, ಇಲ್ಲಿ ನೀರು ಸಂಗ್ರಹವಾಗದೇ ಇರುವುದರಿಂದ ಸರ್ಕಾರದ ಯೋಜನೆಗಳ ಸದುಪಯೋಗ ಜನರಿಗೆ ಆಗುತ್ತಿಲ್ಲ ಎಂದು ಸ್ಥಳೀಯರು ಬೇಸರಿಸುತ್ತಾರೆ.ತಾಲ್ಲೂಕಿನ ಹಲವು ಕಡೆ ನಿರ್ಮಿಸಿರುವ ಚೆಕ್‌ಡ್ಯಾಂ ಇದೇ ರೀತಿಯ ಕಳಪೆಯಿಂದ ಕೂಡಿರುವುದು ಬೆಳಕಿಗೆ ಬಂದಿದೆ. ಒಡೆದ ಚೆಕ್‌ಡ್ಯಾಂಗಳನ್ನು ದುರಸ್ತಿಗೊಳಿಸಿದರೆ ಮುಂಬರುವ ಮಳೆಗಾಲದಲ್ಲಿ ನೀರಿನ ಸಂಗ್ರಹವಾಗಿ ರೈತರ ಬದುಕು ಒಂದಿಷ್ಟು ಹಸನಾದೀತು ಎಂಬುದು ರೈತರ ಒತ್ತಾಸೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.