ಗುರುವಾರ , ಮೇ 26, 2022
28 °C

ಮಳೆಗಾಲದಲ್ಲಿ ಬರ ಪರಿಸ್ಥಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಬಿದ್ದ ಮಳೆಯಿಂದ ಜಲಾಶಯಗಳು ಹೆಚ್ಚುಕಡಿಮೆ ತುಂಬಿರುವುದನ್ನು ಬಿಟ್ಟರೆ, ಉಳಿದ ಭಾಗಗಳಲ್ಲಿ ತೃಪ್ತಿಕರವಾಗಿ ಮಳೆ ಆಗಿಲ್ಲ.

ಮಳೆಗಾಲದ ನಾಲ್ಕು ತಿಂಗಳು ಈಗಾಗಲೇ ಕಳೆದು ಹೋಗಿವೆ. ಬಹುತೇಕ ಕಡೆಗಳಲ್ಲಿ ಚದುರಿದಂತೆ ಮಾತ್ರ ಮಳೆ ಆಗಿದೆ. ಕೆರೆಕಟ್ಟೆಗಳು ತುಂಬಲಿಲ್ಲ. ಹೊಲ ಗದ್ದೆಗಳಿಗೆ ನೀರು ಹರಿಯಲಿಲ್ಲ. ಅಂತರ್ಜಲ ಮಟ್ಟವಂತೂ ದಿನೇ ದಿನೇ ಕುಸಿದು ಕುಡಿಯುವ ನೀರಿಗೂ ಹಾಹಾಕಾರ ಕಾಣಿಸಿಕೊಂಡಿದೆ.

 

ಅಭಾವ ಪೀಡಿತ ಪ್ರದೇಶವೆಂದು ಘೋಷಿಸಲು ಸರ್ಕಾರ ರೂಪಿಸಿರುವ 2004ರ ಮಾರ್ಗಸೂಚಿಯಂತೆ 21 ಜಿಲ್ಲೆಗಳ 70 ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಿರುವುದೆ ಆಧಾರವಾಗಿದೆ.ಈ ಪ್ರದೇಶಗಳ ಅನೇಕ ಕಡೆ ಬಿತ್ತನೆ ಆಗಿದ್ದರೂ, ಮಳೆಯಿಲ್ಲದೆ ಬೆಳೆ ಒಣಗಿದೆ. ಮತ್ತೆ ಕೆಲವು ಕಡೆಗಳಲ್ಲಿ ಬಿತ್ತನೆಯೂ ಆಗಿಲ್ಲ. ಇಂತಹ ಕಡೆಗಳಲ್ಲಿ ನಿರೀಕ್ಷೆಯಂತೆ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಕೊರತೆ ಕಾಣಿಸಿಕೊಂಡಿದೆ.ಈ ಬಾರಿ ಮಲೆನಾಡಿನ ಅನೇಕ ಕಡೆಗಳಲ್ಲಿಯೂ ತೃಪ್ತಿಕರವಾಗಿ ಮಳೆ ಆಗಿಲ್ಲದಿರುವುದನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಭೀಕರವಾಗುವ ಸೂಚನೆಗಳಿವೆ.ಮಳೆಗಾಲದ ಅವಧಿಯಲ್ಲಿಯೇ ಅನೇಕ ಕಡೆ ನೀರಿನ ಸಮಸ್ಯೆ ಉಂಟಾಗಿದೆ ಎಂದರೆ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲಗೊಂಡಿದೆ. ಇದಕ್ಕೆ ದೂರದೃಷ್ಟಿಯ ಕೊರತೆಯೇ ಕಾರಣ.  ಬರಪೀಡಿತ ತಾಲ್ಲೂಕುಗಳಲ್ಲಿ ಈಗಾಗಲೇ ಅಭಾವ ಪರಿಹಾರ ಕಾಮಗಾರಿಗಳನ್ನು ಕೈಗೊಂಡಿರುವುದಾಗಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಪ್ರಕಟಿಸಿದ್ದಾರೆ. `ಈ ಕಾಮಗಾರಿಗಳಿಗಾಗಿ 40 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದ್ದು, ಪರಿಸ್ಥಿತಿ ಎದುರಿಸಲು ಸರ್ಕಾರ ಸಮರ್ಥವಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ 126 ಕೋಟಿ ರೂಪಾಯಿ ಇದ್ದು ಬರ ಪರಿಸ್ಥಿತಿ ಎದುರಿಸಲು ಸಾಕಷ್ಟು ಹಣವಿದೆ~ ಎಂದಿದ್ದಾರೆ.ಕೇವಲ ಹಣವೊಂದಿದ್ದರೆ ಸಾಲದು, ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವನ್ನು ಪೂರೈಸಬೇಕು. ಎಂಎನ್‌ಆರ್‌ಇಜಿಪಿ ಅಡಿಯಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡು ದುಡಿಯುವ ಕೈಗಳಿಗೆ ಕೆಲಸ ನೀಡುವ ಮೂಲಕ ಬಡವರು ಹಸಿವಿನಿಂದ ಸಾವಿನ ದವಡೆಗೆ ಜಾರದಂತೆ ಎಚ್ಚರವಹಿಸಬೇಕು.ಕೆರೆಗಳ ಹೂಳೆತ್ತುವುದು, ಚೆಕ್ ಡ್ಯಾಂಗಳ ನಿರ್ವಹಣೆ ಮತ್ತು ನಿರ್ಮಾಣ, ನೀರಾವರಿ ನಾಲೆಗಳ ದುರಸ್ತಿ ಕಾಮಗಾರಿಗಳನ್ನು ಕೈಗೊಂಡರೆ ಸ್ಥಳೀಯ ಜನರಿಗೆ ಉದ್ಯೋಗಾವಕಾಶ ನೀಡಿದಂತಾಗುತ್ತದೆ. ಬರಪೀಡಿತ ಪ್ರದೇಶಗಳಲ್ಲಿ ಕಾಮಗಾರಿಗಳಿಗೆ ಯಂತ್ರಗಳನ್ನು ಬಳಸದೆ ಜನರಿಗೆ ಕೆಲಸ ಸಿಗುವಂತೆ ನೋಡಿಕೊಳ್ಳುವುದು ಮುಖ್ಯ. ಬರ ಬಂದಿತೆಂದರೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಹಬ್ಬ. ಬರ ಬರಲೆಂದೇ ಅವರು ನಿರೀಕ್ಷಿಸುತ್ತಾರೆ.ಸ್ಥಳೀಯ ಜನಪ್ರತಿನಿಧಿಗಳೊಡನೆ ಸೇರಿ ಬರ ಪರಿಹಾರದ ಹೆಸರಿನ ಕಾಮಗಾರಿಗಳ ಹಣದಿಂದ ಜೇಬು ತುಂಬಿಸಿಕೊಳ್ಳುತ್ತಾರೆ. ವಿಧಾನ ಸೌಧದಲ್ಲಿ ಕುಳಿತು ಆಡಳಿತ ನಡೆಸುವವರಿಗೆ ಇದೆಲ್ಲ ತಿಳಿಯದ ಸಂಗತಿಯೇನಲ್ಲ. ಬರ ಪರಿಹಾರದ ಹಣ ದುರುಪಯೋಗ ಆಗದಂತೆ ಸರ್ಕಾರ ಗಮನ ನೀಡಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.