ಮಂಗಳವಾರ, ಮೇ 18, 2021
28 °C
ಚಂದಪದ್ಯ

ಮಳೆಗಾಲದ ಗುನುಗುಗಳು

- ಕೃಷ್ಣಮೂರ್ತಿ ಬಿಳಿಗೆರೆ Updated:

ಅಕ್ಷರ ಗಾತ್ರ : | |

1

ಓಡುವ ನೀರಿನ ಕಾಲಿಗೆ ಬಿದ್ದು

ನೀರಿನ ಕಾಲನು ಹಿಡಿಯೋಣ

ಸುರಿವ ಮಳೆಯಲಿ ನೆನೆಯುತ ಎಲ್ಲ

ನೀರ ದಾರಿಯ ಹಿಡಿಯೋಣ

ಮಳೆಯ  ಹಬ್ಬಕೆ ನೀರೆ ಔತಣ

ಮಿಂಚಿನ ಹೂವ ಮುಡಿಯೋಣ

2

ಕಪ್ಪು ಕತ್ತಲಲಿ ಕಪ್ಪು ಕಪ್ಪಗೆ

ಸುರಿಯುತ್ತಿದೆ ಇದು ರಾತ್ರಿ ಮಳೆ

ಚುಕ್ಕಿಗಳೆಲ್ಲ ಕೊಚ್ಚಿ ಹೋದವು

ಹರಿಯುತ್ತಿದೆ ಇದು ರಾತ್ರಿಯ ಮಗಳೆ

ಗೊಂಚಲು  ಗೊಂಚಲು ಮಿಂಚಿನ ಹೂವು

ಭೂಮಿಯ  ವರ ಈ ಚಂದ್ರನ ಸಾವು

3

ಚಿಕ್ಕ ಚಿಕ್ಕ ಚಿಕ್ಕ ಹನಿ

ಮಳೆಯ  ಹನಿ ಚಿಕ್ಕವು

ಬಯಲಿಗೆಲ್ಲ ಹಸಿರು ತೊಡಿಸಿ

ಹೂಮುಡಿಸಿ ನಕ್ಕವು

4

ಕಪ್ಪು ಮೋಡವೆ ಕಪ್ಪು ದೀಪವೆ

ಸುರಿಸು ಮಳೆಯ ಬೆಳಕ

ಇಳಿ ಇಳಿ ನೆಲಕೆ ಜೀವದ ನಾವೆ

ಬೆತ್ತಲೆಯಾಗಿ ಕಾದಿದೆ ಒಣಹವೆ

ಸುರಿವ ಮಳೆಯಲಿ ಲೀನವಾಗಲಿ

ಕೆಂಪಿನ ನೀಲಾಕಾಶದ ಅಂಚು

ಗುಡುಗಿನ ಅಬ್ಬರ ಹಬ್ಬವಾಗಲಿ

ಸಮಸಮವಾಗಿ ಮಿಂಚನು ಹಂಚು

5

ಏನು ಚಂದ ಏನು ಚಂದ

ಬರೀ ಮಿಂಚು  ಏನು ಚಂದ

ಏನು ಚೆಂದ ಏನು ಚೆಂದ

ಬರೀ ಗುಡುಗು ಏನು ಚಂದ

ಕಪ್ಪು ಮೋಡ ಮಳೆಯ  ತರದೆ

ಚದುರಿ ಹೋದರೇನು ಚಂದ

6

ಮಳೆಯ ನೀರ ದಾರಿಯಲ್ಲಿ

ಮರದ ಊರ ಕಟ್ಟೋಣ

ಮೋಡ ಗೂಡ ನಿಗೂಢವನು

ಕಾಡ ಕಟ್ಟಿ ಕರಗಿಸೋಣ

ಮಳೆಯ  ಜೇನು ಬಿಚ್ಚೋಣ

ತುಪ್ಪದಂತೆ ಬಳಸೋಣ

ಮಳೆಯ ನೀರ ಹಿಡಿಯೋಣ

ಹೊಟ್ಟೆ ತುಂಬ ಕುಡಿಯೋಣ

7

ತಲೆಕೆಳಗಾಗಿ ಗಿಡವ ನೆಟ್ಟರೆ

ಮಳೆ ಬಂದೀತೆ ಮಳೆ ಬಂದೀತೆ

ನಿಟ್ಟುಸಿರಿಟ್ಟರೆ ಕಣ್ಣೀರಿಟ್ಟರೆ

ಮಳೆ ಬಂದೀತೆ ಮಳೆ ಬಂದೀತೆ

ಬಿಳೀ ಮೋಡಗಳ ಹಕ್ಕಿ ಕುಕ್ಕಿದರೆ

ಮಳೆ ಬಂದೀತೆ ಮಳೆ ಬಂದೀತೆ

8

ಬಾನ ತುಂಬಾ ಹರವಿಕೊಂಡು

ಭೂಮಿ ತುಂಬಾ ಚೆಲ್ಲಿಕೊಂಡು

`ಹುಯ್ಯ್ ಹುಯ್ಯ್ ಮಳೆರಾಯ

ಹೂವಿನ ತೋಟಕೆ ನೀರಿಲ್ಲ'

ಹಾಡುಗಳಿಗೆ ಕೊನೆಯಿಲ್ಲ

ಹಾಡುತಾಡುತಿದ್ದರೆ

ಕನಸುಗಳಿಗೆ ಕೊನೆಯಿಲ್ಲ

ಮಳೆಯು ಸುರಿಯುತ್ತಿದ್ದರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.